ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಸ್‌ಎಂಇ ಉದ್ಯಮ ಸಲಹೆ

Last Updated 20 ಮೇ 2020, 6:13 IST
ಅಕ್ಷರ ಗಾತ್ರ

‘ಕೋವಿಡ್-19’ ಪಿಡುಗಿನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳು ‌ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿವೆ. ಗ್ಲೋಬಲ್‌ ಅಲಯನ್ಸ್‌ ಫಾರ್‌ ಮಾಸ್‌ ಎಂಟರ್‌ಪ್ರಿನ್ಯೂಅರ್‌ಶಿಪ್‌ (ಜಿಎಎಂಇ) ಸಹ ಸ್ಥಾಪಕ ಮದನ್‌ ಪದಕಿ ಅವರು ಉದ್ಯಮಿಗಳು ಎದುರಿಸುತ್ತಿರುವ ಬಿಕ್ಕಟ್ಟಿಗೆ ಇಲ್ಲಿ ಪರಿಹಾರ ಸೂಚಿಸುತ್ತಾರೆ. ಪ್ರಶ್ನೆ, ಸಲಹೆಗಳಿಗೆ ಸಹಾಯವಾಣಿ (73977 79520) ಮತ್ತು ಇ–ಮೇಲ್‌ gamesupportnetwork@massentrepreneurship.org ಸಂಪರ್ಕಿಸಬಹುದು.

***

ಎಂ. ಖಾನ್‌. ಬೆಂಗಳೂರು

ಪ್ರಶ್ನೆ: ಎಲೆಕ್ಟ್ರಾನಿಕ್ ಸರ್ವೆಲನ್ಸ್ ಮತ್ತು ಸೆಕ್ಯುರಿಟಿ ಸಿಸ್ಟಂಗಳ ಸೇವೆಗಳನ್ನು ಒದಗಿಸುವ ಉದ್ಯಮವನ್ನು ನಾನು ನಡೆಸುತ್ತೇನೆ. ನನ್ನ ಸಂಸ್ಥೆಯಲ್ಲಿ 25 ಉದ್ಯೋಗಿಗಳಿದ್ದಾರೆ. ಲಾಕ್‌ಡೌನ್ ಕಾರಣದಿಂದಾಗಿ ನಾನು ತೀವ್ರ ಸ್ವರೂಪದ ಹಣದ ಕೊರತೆ ಎದುರಿಸುತ್ತಿದ್ದೇನೆ. ದುಡಿಮೆ ಬಂಡವಾಳ ಪಡೆಯುವಲ್ಲಿ ನನಗೆ ನೆರವಿನ ಅವಶ್ಯಕತೆ ಇದೆ ಮತ್ತು ಉದ್ಯೋಗ್ ಆಧಾರ್ ನಲ್ಲಿ ನೋಂದಣಿ ಮಾಡಲು ನನಗೆ ಮಾರ್ಗದರ್ಶನ ನೀಡಿರಿ.

ಉತ್ತರ: ಉದ್ಯೋಗ್ ಆಧಾರ್ ವ್ಯವಸ್ಥೆಯನ್ನು ‘ವಾಣಿಜ್ಯಕ್ಕಾಗಿ ಆಧಾರ್’ ಎಂದೂ ಕರೆಯಲಾಗುತ್ತದೆ. ಇದರಡಿಯಲ್ಲಿ ಕೇಂದ್ರ ಸರ್ಕಾರದ ಕಿರು, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವಾಲಯವು 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆ ನೀಡುತ್ತದೆ. ಪ್ಯಾನ್, ಆಧಾರ್ ಕಾರ್ಡ್ ಮತ್ತು ವಿಳಾಸ ದೃಢೀಕರಣದ ದಾಖಲೆಗಳನ್ನು ನೀವು ಹೊಂದಿದ್ದಲ್ಲಿ, 24 ಗಂಟೆಗಳಲ್ಲಿ ನಿಮಗೆ ಈ ಸಂಖ್ಯೆ ನೀಡಲಾಗುತ್ತದೆ. ಈ ಸೇವೆಯು ಉಚಿತವಾಗಿದ್ದು, ಮಾಹಿತಿಗಾಗಿ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ. https://udyogaadhaar.gov.in/UA/UAM_Registration.aspx

ಉದ್ಯೋಗ್ ಆಧಾರ್ ಮೂಲಕ ನಿಮ್ಮ ಉದ್ದಿಮೆಗೆ ನೀವು ಸುಲಭವಾಗಿ ಬಂಡವಾಳವನ್ನು ಬ್ಯಾಂಕುಗಳಿಂದ, ಪಡೆಯಬಹುದಾಗಿದೆ. ನೀವು ಈಗಾಗಲೇ ಸುಗಮವಾದ ಹಣ ವಿನಿಮಯ ಹೊಂದಿರುವ ಮತ್ತು ಭದ್ರವಾಗಿ ಸ್ಥಾಪಿತವಾಗಿರುವ ಉದ್ದಿಮೆ ಹೊಂದಿರುವುದರಿಂದ ಬ್ಯಾಂಕುಗಳು ನಿಮಗೆ ಸುಲಭವಾಗಿ ಸಾಲ ನೀಡುತ್ತವೆ.

ಎಸ್. ಭಟ್‌. ಧಾರವಾಡ.

ಪ್ರಶ್ನೆ: ಪ್ರಸ್ತುತ ನಾನು ಫಾರ್ಮಾ ವ್ಯವಹಾರ ನಡೆಸುತ್ತಿದ್ದೇನೆ. ನನ್ನ ಬಳಿ ಭೂಮಿ ಲಭ್ಯವಿದ್ದು ನಾನು ಅದರಲ್ಲಿ ಮತ್ತೊಂದು ಹೆಚ್ಚುವರಿ ವ್ಯವಹಾರ ಸ್ಥಾಪಿಸುವ ಉದ್ದೇಶ ಹೊಂದಿದ್ದೇನೆ. ಈ ದಿಸೆಯಲ್ಲಿ ಸೂಕ್ತವಾಗಿ ಮುಂದುವರೆಯಲು ನನಗೆ ಮಾರ್ಗದರ್ಶನ ನೀಡಿ.

ಉತ್ತರ: ನೀವು ಹೊಸ ಉದ್ದಿಮ ಸ್ಥಾಪಿಸುವ ಉದ್ದೇಶ ಹೊಂದಿದ್ದರೆ, (1) ನಿಮ್ಮ ಹಿನ್ನೆಲೆ ಮತ್ತು ಅನುಭವದ ಆಧಾರದ ಮೇಲೆ ಸೂಕ್ತ ಉತ್ಪನ್ನ ಅಥವಾ ಸೇವೆ ಒದಗಿಸುವ ಉದ್ದಿಮೆ ಆಯ್ಕೆ ಮಾಡಿಕೊಳ್ಳಿ (2) ವ್ಯವಹಾರದ ರೂಪುರೇಷೆಗಳನ್ನು ನಿರ್ಧರಿಸಿ (3) ನಿಮ್ಮ ಉದ್ದೇಶಿತ ಯೋಜನೆ ಕುರಿತು ಕೊಂಚ ಸಂಶೋಧನೆ ಮಾಡಿ (4) ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿರುವ ಉದ್ದಿಮೆದಾರರನ್ನು ಭೇಟಿ ಮಾಡಿ ಅವರ ಉದ್ದಿಮೆಯ ಕುರಿತು ಮಾಹಿತಿ ಸಂಗ್ರಹಿಸಿ (5) ಯೋಜನೆಯ ವೆಚ್ಚ ಮತ್ತು ಅದನ್ನು ಭರಿಸುವ ರೀತಿ ಕುರಿತು ಅಂದಾಜು ತಯಾರಿಸಿ (ಬಾಹ್ಯ ಸಂಗತಿಗಳಾದ ವೆಚ್ಚ, ಬೆಲೆ, ಬೇಡಿಕೆ ಮತ್ತು ಸರಬರಾಜು, ಸ್ಪರ್ಧೆ, ಉದ್ದಿಮೆಯಲ್ಲಿ ಅಡಗಿರುವ ಅಪಾಯಗಳ ಕುರಿತು ಎಚ್ಚರ ವಹಿಸಿರಿ) (6) ಉದ್ದಿಮೆ ಸ್ಥಾಪಿಸಲು ಅವಶ್ಯವಾದ ಮಂಜೂರಾತಿಗಳನ್ನು ಪಡೆದುಕೊಳ್ಳಿರಿ.

ನಿಮ್ಮ ವ್ಯವಹಾರದ ರೂಪುರೇಷೆಯು ಯೋಜನೆಯ ಬಲಾಬಲ ತೀರ್ಮಾನಿಸುವಲ್ಲಿ ಮತ್ತು ಸಾಲ ನೀಡುವವರ ಜೊತೆ ಮಾತುಕತೆಯಾಡುವಲ್ಲಿ ಸಹಾಯ ಮಾಡುತ್ತದೆ. ಹಣಕಾಸು ವ್ಯವಸ್ಥೆಗಾಗಿ ನಿಮ್ಮ ಹಾಲಿ ಬ್ಯಾಂಕನ್ನೇ ಅವಲಂಬಿಸುವುದು ಸೂಕ್ತ. ನಿಮ್ಮ ಬ್ಯಾಂಕ್ ಖಾತೆ ವ್ಯವಹಾರ ಮತ್ತು ಹಣ ವಿನಿಮಯ ಕುರಿತು ನಿಮ್ಮ ಬ್ಯಾಂಕಿಗೆ ವಸ್ತುಸ್ಥಿತಿ ತಿಳಿದಿರುತ್ತದೆ. ಅವರು ನಿಮಗೆ ಸುಧಾರಿತ ದರದಲ್ಲಿ ಸಾಲ ಸೌಲಭ್ಯ ನೀಡಬಹುದು. ಯೋಜನೆಗಾಗಿ ಬಳಸಲಾಗುವ ಭೂಮಿಯನ್ನು ಸಾಲಸೌಲಭ್ಯಕ್ಕೆ ಆಧಾರವಾಗಿ ಬ್ಯಾಂಕ್‌ಗೆ ನೀಡಬಹುದು.

ರಾಮ್‌. ಶಿವಮೊಗ್ಗ

ಪ್ರಶ್ನೆ: ನಾನು ಎಂಜಿನಿಯರಿಂಗ್ ಮತ್ತು ಫ್ಯಾಬ್ರಿಕೇಷನ್ ಯುನಿಟ್ ನಡೆಸುತ್ತೇನೆ. ನನ್ನ ಬಳಿ ಐವರು ಉದ್ಯೋಗಿಗಳಿದ್ದಾರೆ. ಲಾಕ್‌ಡೌನ್ ಕಾರಣದಿಂದಾಗಿ ವ್ಯವಹಾರದಲ್ಲಿ ನಾನು ಮಾಡಿಕೊಂಡ ಒಪ್ಪಂದಗಳನ್ನು ನಿಭಾಯಿಸಲಾಗುತ್ತಿಲ್ಲ. ನಾನು ಪರಿಣತರೊಬ್ಬರೊಡನೆ ಮಾತನಾಡಲು ಮತ್ತು ಮಾರ್ಗದರ್ಶನ ಪಡೆಯಲು ಅಪೇಕ್ಷಿಸುತ್ತೇನೆ.

ಉತ್ತರ: ಖಂಡಿತವಾಗಿ. ನಿಮಗೆ ಸೂಕ್ತ ಮಾರ್ಗದರ್ಶನ ನೀಡುವ ಮತ್ತು ಪರಿಣತ ಸಲಹೆ ನೀಡುವ ವೃತ್ತಿಪರರ ವಿಶಾಲವಾದ ನೆಟ್‌ವರ್ಕನ್ನು ‘ಗೇಮ್’ ಹೊಂದಿದೆ. ನಿಮಗೆ ಸೂಕ್ತವೆನಿಸುವ ಪರಿಣತರಿಗೆ ನಿಮ್ಮನ್ನು ಪರಿಚಯಿಸುತ್ತೇವೆ. ಆದರೆ ಮೊದಲು ನೀವು ನಿಮ್ಮ ನಿರ್ದಿಷ್ಟವಾದ ಪ್ರಶ್ನೆಗಳನ್ನು ಮತ್ತು ನಿಮಗೆ ಅವಶ್ಯವಿರುವ ಮಾಹಿತಿಯ ಪಟ್ಟಿಯನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT