ಸೋಮವಾರ, ಆಗಸ್ಟ್ 26, 2019
20 °C

ಆರ್ಥಿಕ ಸ್ವಾತಂತ್ರ್ಯಕ್ಕೆ ಎಂಎಫ್‌

Published:
Updated:

1947ರಲ್ಲಿ ಸ್ವತಂತ್ರ ರಾಷ್ಟ್ರದ ಕನಸು ಸಾಕಾರಗೊಳ್ಳುವುದರ ಜೊತೆಗೆ ಒಂದು ಬಲಿಷ್ಠ ರಾಷ್ಟ್ರವನ್ನು ನಿರ್ಮಿಸುವ ಮತ್ತು ನಮ್ಮ ಭವಿಷ್ಯವನ್ನು ನಾವೇ ನಿರ್ಮಿಸಬೇಕಾದ ಜವಾಬ್ದಾರಿ ಭಾರತೀಯರ ಮೇಲೆ ಬಿತ್ತು. ಕಾಲ ಕಳೆದಂತೆ ದೇಶದ ಅಗತ್ಯಗಳು ಬದಲಾದವು. ಈಗ ನಮ್ಮ ಸಾಮಾಜಿಕ ಸ್ಥಿತಿಯನ್ನು ಮೇಲೆತ್ತುವ ಮತ್ತು ಜೀವನ ಮಟ್ಟವನ್ನು ಉನ್ನತೀಕರಿಸುವುದರ ಸುತ್ತ ನಮ್ಮ ಅಗತ್ಯಗಳು ಸುತ್ತುತ್ತಿವೆ.

ಭಾರತ ಈಗ ಬದಲಾಗಿದೆ. ಹಸಿದ ಹೊಟ್ಟೆಗಳು, ಅಸ್ತವ್ಯಸ್ತಗೊಂಡಿದ್ದ ಅರ್ಥವ್ಯವಸ್ಥೆಯ ದೇಶವಾಗಿದ್ದ ಭಾರತವು ಜಿಡಿಪಿಯಲ್ಲಿ ಇಂದು ಜಗತ್ತಿನ ಏಳನೇ ಅತಿದೊಡ್ಡ ಅರ್ಥವ್ಯವಸ್ಥೆ ಎನಿಸಿಕೊಂಡಿದೆ. ವಿಜ್ಞಾನ, ಶಿಕ್ಷಣ, ಕ್ರೀಡೆ, ವ್ಯಾಪಾರ ಅಷ್ಟೇ ಅಲ್ಲ, ಜಾಗತಿಕ ಭೌಗೋಳಿಕ ರಾಜಕೀಯದಲ್ಲೂ ಭಾರತ ದೃಢ ಹೆಜ್ಜೆಗಳನ್ನಿಟ್ಟಿದೆ. ನೂರಾರು ಅಡೆತಡೆಗಳು ಎದುರಾದರೂ ಸ್ವಂತ ಶ್ರಮದಿಂದ ದೇಶ ಇಂದು ಸಮೃದ್ಧವಾಗಿದೆ. ಆದರೆ, ಜನರ ಜೀವನ ಮಟ್ಟ ಮಾತ್ರ ನಿರೀಕ್ಷಿಸಿದಷ್ಟು ಸಮೃದ್ಧವಾಗಿಲ್ಲ. ಆರ್ಥಿಕ ಸ್ಥಿತಿಯ ಆಧಾರದಲ್ಲಿ ಹೇಳುವುದಾದರೆ ನಾವಿನ್ನೂ ತೃತೀಯ ಜಗತ್ತಿನ ರಾಷ್ಟ್ರವೆನಿಸಿದ್ದೇವೆ.

ದೇಶದ ಮಧ್ಯಮ ವರ್ಗದ ಬಹುದೊಡ್ಡ ಸಮುದಾಯವು ನಿರುದ್ಯೋಗಿಯಾಗಿದೆ ಅಥವಾ ಅರ್ಹತೆಗೆ ತಕ್ಕಂಥ ಉದ್ಯೋಗದಿಂದ ವಂಚಿತವಾಗಿದೆ. ‘ನಾವು ನಮ್ಮದೇ ರೀತಿಯಲ್ಲಿ ಜೀವನ ಮಾಡಬೇಕೇ ವಿನಾ ಇನ್ನೊಬ್ಬರ ತಾಳಕ್ಕೆ ಕುಣಿಯಬಾರದು’ ಎಂಬುದು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ನಮ್ಮ ಹಿರಿಯರ ಕನಸಾಗಿತ್ತು. ಆಗಸ್ಟ್‌ 15 ಇಂಥ ಹೋರಾಟಗಾರರನ್ನು ಸ್ಮರಿಸುವ ದಿನ. ಅಷ್ಟೇ ಅಲ್ಲ, ‘ನಾವು ಎಲ್ಲಾ ದೃಷ್ಟಿಯಿಂದಲೂ ಸ್ವತಂತ್ರರಾಗಿದ್ದೇವೆಯೇ’ ಎಂದು ನಮ್ಮನ್ನು ನಾವು ಪ್ರಶ್ನಿಸಬೇಕಾದ ದಿನವೂ ಆಗಿದೆ.

ಆರ್ಥಿಕವಾಗಿ ನಾವು ಸ್ವತಂತ್ರರಾಗಬೇಕಾದರೆ ಕ್ರಮಬದ್ಧವಾದ ಯೋಜನೆ ಮುಖ್ಯವೇ ವಿನಾ ಸಂಪತ್ತು ಅಲ್ಲ. ಒಳ್ಳೆಯ ಭವಿಷ್ಯಕ್ಕಾಗಿ ಯೋಜನೆ ರೂಪಿಸುವುದರ ಜೊತೆಗೆ ಕೆಟ್ಟ ಸ್ಥಿತಿಯನ್ನು ಎದುರಿಸಲು ಸಿದ್ಧರಾಗುವುದೂ ಅಗತ್ಯ. ರಾತ್ರಿ ಬೆಳಗಾಗುವುದರೊಳಗೆ ಸಂಪತ್ತನ್ನು ಸೃಷ್ಟಿಸಲು ಸಾಧ್ಯವಿಲ್ಲ. ಅದಕ್ಕೆ ತಾಳ್ಮೆ ಮತ್ತು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಯೋಜನಾಬದ್ಧವಾಗಿ ಹೂಡಿಕೆ ಮಾಡಿದರೆ ಸಂಪತ್ತು ಸೃಷ್ಟಿಸುವುದು ಕಷ್ಟವಲ್ಲ.

ದೀರ್ಘಾವಧಿಯ ಕನಸುಗಳನ್ನು ಈಡೇರಿಸಿಕೊಂಡು ಆರ್ಥಿಕವಾಗಿ ಸ್ವತಂತ್ರರಾಗಲು ಪ್ರತಿಯೊಬ್ಬರೂ ಇಂಥ ಯೋಜನೆ ರೂಪಿಸುವುದು ಅಗತ್ಯ. ಹೀಗೆ ಸಂಪತ್ತು ವೃದ್ಧಿಸಲು ಮ್ಯೂಚುವಲ್‌ ಫಂಡ್‌ಗಳು ಅತ್ಯುತ್ತಮ ಮಾಧ್ಯಮಗಳಾಗಬಹುದು. ‌ಹೂಡಿಕೆದಾರರ ಹಣವನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿ ಸಂಪತ್ತನ್ನು ವೃದ್ಧಿಸುವ ಈ ಯೋಜನೆಯು ಹೂಡಿಕೆದಾರರಿಗೆ ಸಂಭವನೀಯ ಅಪಾಯದಿಂದ ರಕ್ಷಣೆಯನ್ನೂ ನೀಡುತ್ತದೆ. ಆದರೆ, ಯಾವ ಕ್ಷೇತ್ರದಲ್ಲಿ 
ಎಷ್ಟು ಹೂಡಿಕೆ ಮಾಡಬೇಕು ಎಂಬ ಆಯ್ಕೆಯನ್ನು ಹೂಡಿಕೆದಾರರು ಎಚ್ಚರಿಕೆಯಿಂದ ಮಾಡಬೇಕು.

ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಜಾರಿಯಾಗಿರುವುದರಿಂದ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸುಲಭವಾಗಿದೆ. ಅಷ್ಟೇ ಅಲ್ಲ ತಿಂಗಳಿಗೆ ಕನಿಷ್ಠ ₹ 500 ಹೂಡಿಕೆಗೂ ಅವಕಾಶ ಕಲ್ಪಿಸುತ್ತದೆ. ಈ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡು ದೀರ್ಘಾವಧಿಗೆ ಹೂಡಿಕೆ ಮಾಡುವುದರಿಂದ ಒಳ್ಳೆಯ ಗಳಿಕೆಯನ್ನು ಮಾಡಬಹುದು.

ಹಿಂದಿನವರಂತೆ 60 ವರ್ಷ ತುಂಬುವವರೆಗೂ ಕೆಲಸ ಮಾಡಲು ಇಂದಿನ ತಲೆಮಾರು ಬಯಸುವುದಿಲ್ಲ. 20–25 ವರ್ಷ ದುಡಿದು ಆನಂತರ ಜೀವನದ ಆನಂದವನ್ನು ಅನುಭವಿಸಲು ಇಚ್ಛಿಸುತ್ತದೆ. ಆದರೆ, ಅದಕ್ಕಾಗಿ ದೊಡ್ಡ ಮೊತ್ತವನ್ನು ಕೂಡಿಡುವುದು ಅಗತ್ಯ. ವೃತ್ತಿ ಜೀವನ ಆರಂಭಿಸುವಾಗಲೇ ಮ್ಯೂಚುವಲ್‌ ಫಂಡ್‌ಗಳಲ್ಲಿ ಕ್ರಮಬದ್ಧವಾಗಿ ಹೂಡಿಕೆ ಮಾಡುತ್ತಾ ಹೋದರೆ ವ್ಯಕ್ತಿಗೆ 40ವರ್ಷ ತುಂಬುವ ವೇಳೆಗೆ ದೊಡ್ಡ ನಿಧಿಯನ್ನು ರೂಪಿಸಲು ಸಾಧ್ಯ. ಹಾಗೆ ಮಾಡಿದರೆ ಕಂಡಿರುವ ಕನಸುಗಳನ್ನು ಸುಲಭವಾಗಿ ನನಸಾಗಿಸಬಹುದು.

(ಲೇಖಕ: ಆ್ಯಕ್ಸಿಸ್‌ ಮ್ಯೂಚುವಲ್‌ ಫಂಡ್‌ನ ಉತ್ಪನ್ನ ಮುಖ್ಯಸ್ಥ)

Post Comments (+)