ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಚುವಲ್‌ ಫಂಡ್ಸ್‌ ಸಂಪತ್ತು ವೃದ್ಧಿ

Last Updated 30 ಜೂನ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ಮ್ಯೂಚುವಲ್‌ ಫಂಡ್ಸ್‌ಗಳ ಸರಾಸರಿ ಸಂಪತ್ತು ನಿರ್ವಹಣಾ ಮೊತ್ತವು (ಎಯುಎಂ) ಮೇ ತಿಂಗಳಲ್ಲಿ ₹ 25.43 ಲಕ್ಷ ಕೋಟಿಗೆ ತಲುಪಿದೆ.

ಷೇರು ಸಂಬಂಧಿತ ಯೋಜನೆಗಳಲ್ಲಿನ ಹೂಡಿಕೆಯ ಹೆಚ್ಚಳದಿಂದ ಏಪ್ರಿಲ್‌ ತಿಂಗಳಿನಲ್ಲಿದ್ದ ₹ 25.27 ಲಕ್ಷ ಕೋಟಿಗಳಿಂದ ಹೆಚ್ಚಳಗೊಂಡಿದೆ. ಮೇ ತಿಂಗಳಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮೂಲಕ ರಿಟೇಲ್‌ ಹೂಡಿಕೆಯು ಏಪ್ರಿಲ್‌ ತಿಂಗಳ ₹ 8,238 ಕೋಟಿಗಳಿಂದ ₹ 8,183 ಕೋಟಿಗಳಿಗೆ ಇಳಿಕೆಯಾಗಿದೆ.

‘ಎಸ್‌ಐಪಿ’ ಮೂಲಕ ಹಣ ತೊಡಗಿಸುವ ಬಗ್ಗೆ ಸಾಮಾನ್ಯ ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿದ್ದು, ಇತ್ತೀಚಿನ ದಿನಗಳಲ್ಲಿ ತಿಂಗಳ ಹೂಡಿಕೆಯು 8 ಸಾವಿರ ಕೋಟಿಗಿಂತ ಹೆಚ್ಚಿನ ಮಟ್ಟದಲ್ಲಿ ಇದೆ.

ಎಫ್‌ಎಂಪಿ ಹೊರ ಹರಿವು: ಕಾರ್ಪೊರೇಟ್‌ ಬಾಂಡ್ಸ್‌ನಂತಹ ಸಾಲದ ಉತ್ಪನ್ನಗಳಲ್ಲಿ ಹಣ ತೊಡಗಿಸುವ ನಿಶ್ಚಿತ ಅವಧಿಯ ಮ್ಯೂಚುವಲ್‌ ಫಂಡ್‌ (ಎಫ್‌ಎಂಪಿ) ಯೋಜನೆಗಳಿಂದ ಹಣದ ಹೊರ ಹರಿವು ಸತತ ಎರಡನೆ ತಿಂಗಳೂ ಮುಂದುವರೆದಿದೆ.

ಮೇ ತಿಂಗಳಲ್ಲಿ ಹೂಡಿಕೆದಾರರು ₹ 1,797 ಕೋಟಿ ಮೊತ್ತವನ್ನು ಹಿಂದೆ ತೆಗೆದುಕೊಂಡಿದ್ದಾರೆ. ಹಲವಾರು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ನಗದು ಬಿಕ್ಕಟ್ಟು ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿರುವುದೇ ಇದಕ್ಕೆ ಕಾರಣ.

ಐಎಲ್‌ಆ್ಯಂಡ್‌ಎಫ್‌ಎಸ್‌, ಎಸ್ಸೆಲ್‌ ಮತ್ತು ಡಿಎಚ್‌ಎಫ್‌ಎಲ್‌ ಸಂಸ್ಥೆಗಳಲ್ಲಿ ಕಂಡು ಬಂದಿರುವ ನಗದು ಬಿಕ್ಕಟ್ಟಿನಿಂದಾಗಿ ಮ್ಯೂಚುವಲ್‌ ಫಂಡ್ ಉದ್ದಿಮೆಯು ಹಣ ವಾಪಸ್‌ ಪಡೆಯುವ ಬಿಕ್ಕಟ್ಟು ಎದುರಿಸುತ್ತಿದೆ.

‘ಎಫ್‌ಎಂಪಿ’ಯಲ್ಲಿ ಹೂಡಿಕೆದಾರರ ವಿಶ್ವಾಸವು ದಾಖಲೆ ಮಟ್ಟದಲ್ಲಿ ಕುಸಿತ ಕಂಡಿದೆ. ಈ ವಿಭಾಗದಲ್ಲಿನ ಹೂಡಿಕೆಯು ₹ 2 ಸಾವಿರ ಕೋಟಿಗಳಷ್ಟು ಕಡಿಮೆಯಾಗಿದೆ ಎಂದು ಭಾರತದ ಮ್ಯೂಚುವಲ್‌ ಫಂಡ್ಸ್‌ ಸಂಘ (ಎಎಂಎಫ್‌ಐ) ತಿಳಿಸಿದೆ.

ಷೇರು ಸಂಬಂಧಿ ಮ್ಯೂಚುವಲ್‌ ಫಂಡ್ಸ್‌ಗಳಲ್ಲಿನ ಹೂಡಿಕೆಯು ಮೇ ತಿಂಗಳಲ್ಲಿ ಶೇ 17.33ರಷ್ಟು ಏರಿಕೆಯಾಗಿ ₹ 5,407 ಕೋಟಿಗೆ ತಲುಪಿದೆ.

‘ರಾಜಕೀಯ ಸ್ಥಿರತೆ, ಇನ್ನಷ್ಟು ಆರ್ಥಿಕ ಸುಧಾರಣಾ ಕ್ರಮಗಳ ಭರವಸೆ, ಉದ್ದಿಮೆ ಸಂಸ್ಥೆಗಳ ಉತ್ತಮ ಹಣಕಾಸು ಸಾಧನೆಯ ಕಾರಣಕ್ಕೆ ರಿಟೇಲ್‌ ನಿಧಿಗಳಲ್ಲಿನ ಒಳ ಹರಿವು ಹೆಚ್ಚಳಗೊಳ್ಳುತ್ತಿದೆ’ ಎಂದು ‘ಎಎಂಎಫ್‌ಐ’ನ ಸಿಇಒ ಎನ್‌. ಎಸ್‌. ವೆಂಕಟೇಶ್‌ ಹೇಳಿದ್ದಾರೆ.

ತಿಂಗಳು; ಎಯುಎಂ
ಏಪ್ರಿಲ್‌; ₹ 25.27 ಲಕ್ಷ ಕೋಟಿ
ಮೇ;₹ 25.43 ಲಕ್ಷ ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT