ಆರ್‌ಇಐಟಿನಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆ ಆರು ಪಟ್ಟು ಹೆಚ್ಚಳ

ನವದೆಹಲಿ: ರಿಯಲ್ ಎಸ್ಟೇಟ್ ಇನ್‌ವೆಸ್ಟ್‌ಮೆಂಟ್ ಟ್ರಸ್ಟ್‌ಗಳು (ಆರ್‌ಇಐಟಿ) ಹೂಡಿಕೆದಾರರ ನಡುವೆ ಜನಪ್ರಿಯತೆ ಗಳಿಸಿಕೊಳ್ಳಲು ಆರಂಭಿಸಿವೆ.
2020ರಲ್ಲಿ ಮ್ಯೂಚುವಲ್ ಫಂಡ್ ಸಂಸ್ಥೆಗಳು ಆರ್‌ಇಐಟಿಗಳಲ್ಲಿ ₹ 3,972 ಕೋಟಿ ಹೂಡಿಕೆ ಮಾಡಿವೆ. 2019ರಲ್ಲಿ ಆಗಿದ್ದ ಹೂಡಿಕೆಗೆ ಹೋಲಿಸಿದರೆ ಸರಿಸುಮಾರು ಆರು ಪಟ್ಟು ಏರಿಕೆ ಕಂಡುಬಂದಿದೆ. 2019ರಲ್ಲಿ ₹ 670 ಕೋಟಿ ಹೂಡಿಕೆ ಆಗಿತ್ತು ಎಂಬ ಮಾಹಿತಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯಲ್ಲಿ (ಸೆಬಿ) ಇದೆ.
‘ಡಿಎಲ್‌ಎಫ್, ಬ್ರೂಕ್‌ಫೀಲ್ಡ್ ಮತ್ತು ಗೊದ್ರೇಜ್‌ನಂತಹ ಕಂಪನಿಗಳು ಆರ್‌ಇಐಟಿ ಬಿಡುಗಡೆ ಮಾಡುವ ಪ್ರಕ್ರಿಯೆ ನಡೆಸಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಮ್ಯೂಚುವಲ್ ಫಂಡ್‌ಗಳು ಆರ್‌ಇಐಟಿಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸಲಿವೆ’ ಎಂದು ಗ್ರೀನ್ ಪೋರ್ಟ್‌ಫೋಲಿಯೊದ ಸಹ ಸ್ಥಾಪಕ ದಿವಂ ಶರ್ಮಾ ಹೇಳಿದ್ದಾರೆ.
ಓದಿ: ಮಿಡ್, ಸ್ಮಾಲ್ ಕ್ಯಾಪ್ನಲ್ಲಿ ಗಳಿಕೆ ಇದ್ದರೂ ಅಪಾಯವಿದೆ!
‘ಆರ್‌ಇಐಟಿ ಮತ್ತು ಇನ್‌ಫ್ರಾಸ್ಟ್ರಕ್ಷರ್ ಇನ್‌ವೆಸ್ಟ್‌ಮೆಂಟ್ ಟ್ರಸ್ಟ್‌ಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಜನಪ್ರಿಯವಾಗಿದ್ದರೂ ಭಾರತದ ಪಾಲಿಗೆ ಇವು ಹೊಸ ಹೂಡಿಕೆ ಮಾರ್ಗಗಳಾಗಿವೆ.
‘ಮ್ಯೂಚುವಲ್ ಫಂಡ್‌ಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಬಂಡವಾಳ ಒಳಹರಿವು ಇರುವುದು, ಕಡಿಮೆ ಬಡ್ಡಿದರ, ಬಾಡಿಗೆ ಗಳಿಕೆಯು ಸಕಾರಾತ್ಮಕವಾಗಿರುವ ಕಾರಣಗಳಿಂದಾಗಿ ಆರ್‌ಇಐಟಿಗಳಲ್ಲಿ ಹೂಡಿಕೆ ಆಗುತ್ತಿದೆ’ ಎಂದೂ ಶರ್ಮಾ ತಿಳಿಸಿದ್ದಾರೆ.
‘ಮನೆಯಿಂದ ಕೆಲಸ ಮಾಡುವ ಹೊಸ ಪ್ರವೃತ್ತಿ ಹಾಗೂ ಕೋವಿಡ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಬಿಕ್ಕಟ್ಟುಗಳಿಂದಾಗಿ ವಾಣಿಜ್ಯ ಉದ್ದೇಶದ ರಿಯಲ್ ಎಸ್ಟೇಟ್ ಬೇಡಿಕೆ ಮಂದಗತಿಯಲ್ಲಿ ಇದ್ದಿದ್ದು ಆತಂಕ ಮೂಡಿಸಿತ್ತು. ಆದರೆ, ಜಗತ್ತಿನಾದ್ಯಂತ ಆರ್ಥಿಕತೆಗಳು ಸಹಜ ಸ್ಥಿತಿಯತ್ತ ಮರಳುತ್ತಿರುವುದರಿಂದ ವಾಣಿಜ್ಯ ರಿಯಲ್ ಎಸ್ಟೇಟ್ ವಲಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ’ ಎಂದು ಗ್ರೋವ್ ಸಂಸ್ಥೆಯ ಸಹ ಸ್ಥಾಪಕ ಹರ್ಷ್ ಜೈನ್ ಹೇಳಿದ್ದಾರೆ.
ಓದಿ: ಆರ್ಬಿಐ: ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ
ಮ್ಯೂಚುವಲ್ ಫಂಡ್‌ಗಳು 2020ರಲ್ಲಿ ಇನ್‌ಫ್ರಾಸ್ಟ್ರಕ್ಚರ್ ಇನ್‌ವೆಸ್ಟ್‌ಮೆಂಟ್ ಟ್ರಸ್ಟ್‌ಗಳಲ್ಲಿ ₹ 9,138 ಕೋಟಿ ಹೂಡಿಕೆ ಮಾಡಿವೆ. 2019ರಲ್ಲಿ ₹ 11,348 ಕೋಟಿ ಹೂಡಿಕೆ ಮಾಡಿದ್ದವು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.