ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಚುವಲ್‌ ಫಂಡ್‌ ಹೂಡಿಕೆದಾರರಿಗೆ ಬೇಕು ಸಂಯಮ: ಯು.ಪಿ.ಪುರಾಣಿಕ್‌

Last Updated 19 ನವೆಂಬರ್ 2021, 18:53 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ನಾಗರಿಕರು ಐ.ಟಿ. ವಿವರ ಸಲ್ಲಿಸಬೇಕೇ? ಬಂಡವಾಳ ವೃದ್ಧಿ ತೆರಿಗೆಯಿಂದ ವಿನಾಯಿತಿ ಪ‍ಡೆಯುವುದು ಹೇಗೆ? ಟಿಡಿಎಸ್‌ ಕಡಿತ ಆಗದಂತೆ ನೋಡಿಕೊಳ್ಳಲು ಏನು ಮಾಡಬೇಕು?

‘ಪ್ರಜಾವಾಣಿ’ ಶುಕ್ರವಾರ ಆಯೋಜಸಿದ್ದ, ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಬ್ಯಾಂಕಿಂಗ್ ತಜ್ಞ ಯು.ಪಿ.ಪುರಾಣಿಕ್‌ ಅವರಿಗೆ ಜನರು ಕೇಳಿದ ಕೆಲವು ಪ್ರಶ್ನೆಗಳು ಹೀಗಿದ್ದವು.

ಸಾಲ ಮಾಡಿ ನಿವೇಶನ ಖರೀದಿಸುವುದು ಉತ್ತಮವೇ ಅಥವಾ 15ರಿಂದ 20 ವರ್ಷಗಳವರೆಗೆ ಮ್ಯೂಚುವಲ್‌ ಫಂಡ್‌ಗಳಲ್ಲಿ ವ್ಯವಸ್ಥಿತವಾಗಿ ಹೂಡಿಕೆ ಮಾಡಿದ ನಂತರ ಸಿಗುವ ಹಣದಿಂದ ಮನೆ ಕಟ್ಟಿಸುವುದು ಉತ್ತಮವೇ ಎನ್ನುವ ಪ್ರಶ್ನೆಯೊಂದು ಎದುರಾಯಿತು. ‘ಎರಡೂ ಉತ್ತಮ ಆಯ್ಕೆಗಳೇ ಹೌದು. ಆದರೆ, ಮ್ಯೂಚುವಲ್ ಫಂಡ್‌ ಹೂಡಿಕೆಗಳಲ್ಲಿ ದೀರ್ಘ ಅವಧಿಯವರೆಗೆ ಕಾಯುವ ಸಂಯಮ ಇರಬೇಕು. ಬಹಳಷ್ಟು ಜನರಿಗೆ ತಾಳ್ಮೆ ಇರುವುದಿಲ್ಲ. ಷೇರುಪೇಟೆಯಲ್ಲಿ ಕುಸಿತ ಆದಾಗ ಗಾಬರಿಗೆ ಒಳಗಾಗಿ ಹಣ ಹಿಂದಕ್ಕೆ ಪಡೆಯುತ್ತಾರೆ. ಈ ದೃಷ್ಟಿಯಿಂದ ನೋಡುವುದಾದರೆ ಸಾಲ ಮಾಡಿ ನಿವೇಶನ ಖರೀದಿಸುವುದೇ ಉತ್ತಮ’ ಎಂಬ ಉತ್ತರ ನೀಡಿದರು.

‘ಎಲ್‌ಐಸಿ ಜೀವ ವಿಮೆ ಏಜೆಂಟ್‌ ಆಗಿದ್ದೇನೆ. ಐ.ಟಿ ಉದ್ಯೋಗಿಯೊಬ್ಬರು ತಿಂಗಳಿಗೆ ₹ 18 ಲಕ್ಷ ಸಂಬಳ ಪಡೆಯುತ್ತಿದ್ದಾರೆ. ಅವರು ಆದಾಯ ತೆರಿಗೆ ಉಳಿತಾಯ ಮಾಡುವ ಬಗೆ ಹೇಗೆ’ ಎಂದು ಪೀಣ್ಯದ ರಂಗನಾಥ್ ಎನ್ನುವವರು ಪ್ರಶ್ನಿಸಿದರು. ‘ಸೆಕ್ಷನ್‌ 80ಸಿ ಅಡಿ ₹ 1.50 ಲಕ್ಷದವರೆಗೆ ಉಳಿತಾಯ ಮಾಡಿ, ತೆರಿಗೆ ವಿನಾಯಿತಿ ಪಡೆಯಬಹುದು. ಅಲ್ಲದೆ, ಎನ್‌ಪಿಎಸ್‌ ಹೂಡಿಕೆ ಮಾಡಿದರೆ ಸೆಕ್ಷನ್‌ 80ಸಿಸಿಡಿ (1ಬಿ) ಅಡಿ ಹೆಚ್ಚುವರಿಯಾಗಿ ₹ 50 ಸಾವಿರದವರೆಗೆ, ಸೆಕ್ಷನ್‌ 16ಎ ದಲ್ಲಿ ₹ 50 ಸಾವಿರ ಸ್ಟ್ಯಾಂಡರ್ಡ್‌ ಡಿಡಕ್ಷನ್, ಮನೆಯಲ್ಲಿ ಹಿರಿಯ ನಾಗರಿಕರಿದ್ದರೆ ಅವರ ವೈದ್ಯಕೀಯ ವಿಮೆಗೆ ಸೆಕ್ಷನ್‌ 80ಡಿ ಅಡಿ ₹ 50 ಸಾವಿರದವರೆಗಿನ ಮೊತ್ತವನ್ನು ಒಟ್ಟಾರೆ ಆದಾಯದಲ್ಲಿ ಕಳೆದು ತೆರಿಗೆ ಕೊಡಬಹುದು’ ಎಂದು ಉತ್ತರ ನೀಡಿದರು.

‘ನಾನು ಐ.ಟಿ. ವಿವರಗಳನ್ನು ನಾನು ಸಲ್ಲಿಸಬೇಕೇ ಬೇಡವೇ? ಟಿಡಿಎಸ್‌ ಕಡಿತ ಆಗದಂತೆ ಮಾಡಲು ಏನು ಮಾಡಬೇಕು’ ಎಂದು ಹಿರಿಯ ನಾಗರಿಕರೊಬ್ಬರು ತಮ್ಮ ಅನುಮಾನವನ್ನು ತೆರೆದಿಟ್ಟರು. ಟಿಡಿಎಸ್‌ ಮುರಿಯದೇ ಇರಲು ಫಾರಂ 15ಎಚ್‌ ಅನ್ನು ಪ್ರತಿ ವರ್ಷ ಏಪ್ರಿಲ್‌ 15ರ ಒಳಗಾಗಿ ಕೊಡಬೇಕು. ಆದರೆ, ಒಟ್ಟು ಬಡ್ಡಿ ವರಮಾನವು ₹ 50 ಸಾವಿರಕ್ಕಿಂತ ಹೆಚ್ಚು ಬರುತ್ತಿದರೆ 15 ಎಚ್‌
ಕೊಡಬೇಕಿಲ್ಲ ಎಂದು ಪುರಾಣಿಕ್‌ ಉತ್ತರ ನೀಡಿದರು.

ಬಂಡವಾಳ ವೃದ್ಧಿ ತೆರಿಗೆಯ ಹೊರೆ ತಗ್ಗಿಸಿಕೊಳ್ಳಲು ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅಥವಾ ಗ್ರಾಮೀಣ ವಿದ್ಯುದೀಕರಣ ಯೋಜನೆ (ಆರ್‌ಇಸಿ) ಬಾಂಡ್‌ಗಳಲ್ಲಿ ಹಣ ಹೂಡಿಕೆ ಮಾಡಬಹುದು ಎಂದು ಪುರಾಣಿಕ್ ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT