ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐ ಮಾರ್ಗದರ್ಶಿ ಸೂತ್ರ

ಬ್ಯಾಂಕೇತರ ಹಣಕಾಸು ಸಂಸ್ಥೆಗಳ ನಗದು ಬಿಕ್ಕಟ್ಟಿಗೆ ಪರಿಹಾರ
Last Updated 25 ಮೇ 2019, 17:09 IST
ಅಕ್ಷರ ಗಾತ್ರ

ಮುಂಬೈ: ತೀವ್ರ ಸ್ವರೂಪದ ನಗದು ಕೊರತೆ ಸಮಸ್ಯೆ ಎದುರಿಸುತ್ತಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಈ ಬಿಕ್ಕಟ್ಟಿನಿಂದ ಪಾರಾಗಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಕರಡು ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ.

ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುವ ‘ಎನ್‌ಬಿಎಫ್‌ಸಿ’ಗಳಲ್ಲಿ ನಗದು ರಕ್ಷಣೆ ಅನುಪಾತ (ಎಲ್‌ಸಿಆರ್‌) ವ್ಯವಸ್ಥೆಯನ್ನು ಜಾರಿಗೆ ತರಬೇಕು. ₹ 5 ಸಾವಿರ ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಸಂಪತ್ತು ಹೊಂದಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಈ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೆ ತರಬೇಕು ಎನ್ನುವುದು ಆರ್‌ಬಿಐನ ಉದ್ದೇಶವಾಗಿದೆ. ಎನ್‌ಬಿಎಫ್‌ಸಿ ಮತ್ತು ಪ್ರಮುಖ ಹೂಡಿಕೆ ಕಂಪನಿಗಳಿಗಾಗಿ ಆರ್‌ಬಿಐ, ನಗದು ನಷ್ಟ ನಿರ್ವಹಣಾ ವ್ಯವಸ್ಥೆ (ಎಲ್‌ಆರ್‌ಎಂಎಫ್‌) ಸಂಬಂಧ ಕರಡು ಸುತ್ತೋಲೆ ಹೊರಡಿಸಿದೆ.

ನಗದು ಅನುಪಾತ ರಕ್ಷಣೆ ವ್ಯವಸ್ಥೆಯನ್ನು ಸುಸೂತ್ರವಾಗಿ ಜಾರಿಗೆ ತರಲು ಸಾಕಷ್ಟು ಸಮಯಾವಕಾಶ ನೀಡಲಾಗಿದೆ. 2020ರ ಏಪ್ರಿಲ್‌ನಿಂದ 2024ರ ಏಪ್ರಿಲ್‌ವರೆಗೆ ಈ ಸೌಲಭ್ಯ ಅಳವಡಿಕೆಗೆ ಕಾಲಮಿತಿ ನಿಗದಿಪಡಿಸಲಾಗುವುದು.

‘ಎನ್‌ಬಿಎಫ್‌ಸಿ’ಗಳು, ಹೊರೆಯಾಗಿ ಪರಿಣಮಿಸದ ಮತ್ತು ತಕ್ಷಣ ನಗದಾಗಿ ಪರಿವರ್ತಿಸಬಹುದಾದ ಠೇವಣಿ, ಬಾಂಡ್‌, ಸಾಲಪತ್ರ, ಚಿನ್ನ ಮತ್ತು ಬೆಳ್ಳಿ ರೂಪದಲ್ಲಿ ಪ್ರತ್ಯೇಕ ಸಂಪತ್ತು ಹೊಂದಿರಬೇಕು. ಹಣಕಾಸಿನ ಅಗತ್ಯಗಳನ್ನು ತುರ್ತಾಗಿ ಈಡೇರಿಸಿಕೊಳ್ಳಲು, ಈ ಬಗೆಯ ಸಂಪತ್ತನ್ನು 30 ದಿನಗಳಲ್ಲಿ ನಗದಾಗಿ ಪರಿವರ್ತಿಸುವಂತಿರಬೇಕು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ನಗದು ರಕ್ಷಣೆ ಅನುಪಾತ (ಎಲ್‌ಸಿಆರ್‌) ವ್ಯವಸ್ಥೆಯು ‘ಎನ್‌ಬಿಎಫ್‌ಸಿ’ಗಳಿಗೆ 2020 ಏಪ್ರಿಲ್‌ 1ರಿಂದ ಕಡ್ಡಾಯವಾಗಿ ಅನ್ವಯವಾಗಬೇಕು. ಆರಂಭದಲ್ಲಿ ಇದು ಶೇ 60ರಷ್ಟು ಇರಬೇಕು. ಹಂತ ಹಂತವಾಗಿ ಇದು ಶೇ 100 ಮಟ್ಟಕ್ಕೆ ತಲುಪಬೇಕು.

‘ಎನ್‌ಬಿಎಫ್‌ಸಿ’ ವಲಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕಾರಣಕ್ಕೆ ಉದ್ದೇಶಿತ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಲಾಗಿದೆ ಎಂದು ಆರ್‌ಬಿಐ ಯಾವುದೇ ಸಂಸ್ಥೆಯ ಹೆಸರು ಉಲ್ಲೇಖಿಸದೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT