ಶನಿವಾರ, ಆಗಸ್ಟ್ 17, 2019
24 °C

ಮನೆ ಖರೀದಿಗೆ ಅಗ್ಗದ ಜಿಎಸ್‌ಟಿ ಅನುಕೂಲ

Published:
Updated:
Prajavani

ದೇಶದ ಆರ್ಥಿಕ ವಿಕಾಸದ ಹೆಜ್ಜೆಯಲ್ಲಿ ಜಿಎಸ್‌ಟಿ ಅನುಷ್ಠಾನವು ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಿದೆ. ಈ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಬದಲಾವಣೆಗಳನ್ನೂ ಮಾಡಲಾಗಿದೆ.

ಇತ್ತೀಚೆಗೆ ನಡೆದ ಸರಕು ಮತ್ತು ಸೇವಾ ಮಂಡಳಿಯ ನಿರ್ಣಾಯಕ ಸಭೆಯಲ್ಲಿ ಗೃಹ ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ ಜಿಎಸ್‌ಟಿ ದರ ಕಡಿತಗೊಳಿಸುವ ಬಗ್ಗೆ ಕೈಗೊಂಡ ತೀರ್ಮಾನ ಹೊಸ ಮನೆ ಖರೀದಿಸಬೇಕೆನ್ನುವ ಜನಸಾಮಾನ್ಯರ ಪಾಲಿಗೆ ಅತ್ಯಂತ ಮಹತ್ವದ ನಿರ್ಧಾರವಾಗಿದೆ.

ಇದೇ ಏಪ್ರಿಲ್ ತಿಂಗಳಿನಿಂದ ಈ ಹೊಸ ತೆರಿಗೆ ದರ ಕಾರ್ಯರೂಪಕ್ಕೆ ಬರಲಿದೆ. ಇದು ಗೃಹ ನಿರ್ಮಾಣ ಕ್ಷೇತ್ರಕ್ಕೆ ಬಹಳ ಉತ್ತೇಜನ ನೀಡಲಿದೆ. ರಿಯಲ್‌ ಎಸ್ಟೇಟ್‌ ಉದ್ದಿಮೆಯನ್ನು ಮತ್ತಷ್ಟು ಸ್ಪರ್ಧಾತ್ಮಕ ಸ್ಥಿತಿಯಲ್ಲೂ ನೆಲೆಗೊಳಿಸಲಿದೆ. ಇಂತಹ ಬದಲಾವಣೆ ಮೂಲಕ ಹೊಸ ಕಾನೂನಿನ ವೈಪರೀತ್ಯಗಳನ್ನು ಸರಿಪಡಿಸುವುದು ಮತ್ತು ಅದಕ್ಕೆ ಪುಷ್ಟಿಕೊಡುವುದೂ ಕೇಂದ್ರ ಸರ್ಕಾರದ ಮೊದಲ ಉದ್ದೇಶವಾಗಿದೆ.

ಇದನ್ನೂ ಓದಿ: ಜಿಎಸ್‌ಟಿ ಕಡಿತದಿಂದ ವಸತಿ ಯೋಜನೆಗಳಿಗೆ ಉತ್ತೇಜನ ಸಿಗಲಿದೆ– ಅರುಣ್‌ ಜೇಟ್ಲಿ

ದೇಶದ ಆರ್ಥಿಕತೆ ವಿಷಯದಲ್ಲಿ ಧೃಢತೆ ಸಾಧಿಸುವುದೂ ಇನ್ನೊಂದು ಆದ್ಯತೆಯಾಗಿದೆ. ಇದರಿಂದ ಸರ್ಕಾರ, ಉದ್ದಿಮೆ ಮತ್ತು  ಜನಸಾಮಾನ್ಯನ ಆರ್ಥಿಕ ವಿಕಾಸದಲ್ಲೂ ಸಮತೋಲನ ಸಾಧಿಸುವುದು ಇಂತಹ ಬದಲಾವಣೆಗಳ ಪ್ರಮುಖ ಗುರಿಯಾಗಿದೆ.

ತಮ್ಮ ಬದುಕಿನಲ್ಲಿ ಸ್ವಂತ ಸೂರಿನಡಿ ವಾಸಿಸಬೇಕು ಎನ್ನುವ ಹಂಬಲ ಯಾರಿಗೆ ತಾನೆ ಇರುವುದಿಲ್ಲ. ಈ ವಿಚಾರವನ್ನು ಮನಗಂಡ ಕೇಂದ್ರ ಸರ್ಕಾರ 2015ರಲ್ಲೇ ತನ್ನ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ‘2022 ರೊಳಗೆ ಸರ್ವರಿಗೂ ಸೂರು" ಎಂಬ ಧ್ಯೇಯದಡಿ, ಸಾಮಾನ್ಯ ನಾಗರಿಕನೂ ಹೊಸ ಮನೆಯೊಂದನ್ನು ಕಟ್ಟಲು ಅನುಕೂಲಕರವಾಗಲೆಂದು ಮಹತ್ವದ ಯೋಜನೆಯನ್ನು ಪ್ರಕಟಿಸಿತ್ತು. ಇದಕ್ಕೆ ಪೂರಕವಾಗಿ ಈಗ ಮಾಡಿರುವ ಜಿಎಸ್‌ಟಿ ತೆರಿಗೆ ಕಡಿತವು ವಿವಿಧ ಆದಾಯ ವರ್ಗದ ಜನರಿಗೆ   ಉಪಕಾರಿಯಾಗಲಿದೆ.

ಇದನ್ನೂ ಓದಿ: ಅಗ್ಗದ ಜಿಎಸ್‌ಟಿ: ಖರೀದಿದಾರರಿಗೆ ಅನುಕೂಲ- ಕ್ರೆಡಾಯ್‌

ಸದ್ಯಕ್ಕೆ ತೆರಿಗೆ ನಿರ್ಣಯಕ್ಕೋಸ್ಕರ ಗೃಹ ನಿರ್ಮಾಣ ಕ್ಷೇತ್ರದಲ್ಲಿ ಮನೆಗಳನ್ನು ಎರಡು ವಿಧವಾಗಿ ವಿಂಗಡಿಸಲಾಗಿದೆ - ಕೈಗೆಟಕುವ ಬೆಲೆಯ ಗೃಹಗಳು (ಅಫೊರ್ಡೆಬಲ್ ಹೌಸಿಂಗ್) ಮತ್ತು ಇತರ ಗೃಹಗಳು ಎಂದು. ಈ ಎರಡೂ ವಿಧದ ಕ್ಷೇತ್ರಗಳಿಗಿರುವ ಭಿನ್ನತೆ ಎಂದರೆ, ಕೈಗೆಟುಕುವ ಬೆಲೆಯ ಗೃಹಗಳ ವ್ಯಾಖ್ಯೆಯಡಿ ಬರಬೇಕಾದರೆ ಪ್ರತಿ ಮನೆ ಒಂದು ನಿರ್ದಿಷ್ಟ ಮೌಲ್ಯದೊಳಗೆ ಮತ್ತು ಕಾರ್ಪೆಟ್ ಚದರ್ ಅಳತೆಯೊಳಗೆ ಕಟ್ಟಿರುವಂಥದ್ದಾಗಿರಬೇಕು. ಇದಕ್ಕೆ ಸಂಬಂಧಿಸಿದಂತೆ ಮೆಟ್ರೊ ಹಾಗೂ ಇತರ ನಗರಗಳಿಗೆ ಅನ್ವಯಿಸಿ ಈ ಪರಿಮಾಣವನ್ನು ಕೆಳಗೆ ಉಲ್ಲೇಖಿಸಿದಂತೆ ಜಿ.ಎಸ್.ಟಿ ಮಂಡಳಿ ನಿರ್ಣಯಿಸಿದೆ.

ಮಂಡಳಿ ವಿಧಿಸಿರುವ ಷರತ್ತುಗಳು: ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶವೆಂದರೆ, ಕಡಿತಗೊಳಿಸಲಾದ ಹೊಸ ತೆರಿಗೆ ದರದ ಪ್ರಯೋಜನ ಪಡೆಯಬೇಕೆಂದಿರುವ ವಸತಿ ನಿರ್ಮಾಣ ಸಂಸ್ಥೆಗಳು, ಮಂಡಳಿ ನಿಗದಿಪಡಿಸಿರುವ ಅನುಪಾತದಲ್ಲಷ್ಟೇ ಈ ಹಿಂದೆ ಸಂಚಯಿಸಿರುವ ತೆರಿಗೆ ಜಮಾ (ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್) ವನ್ನು ಮುಂದಿನ ದಿನಗಳಲ್ಲಿ ಬಳಸಬಹುದು. ಅದೇ ರೀತಿ ಮುಂದೆ ವಸ್ತುಗಳ ಖರೀದಿಯ ಮೇಲೆ ಪಾವತಿಸುವ ತೆರಿಗೆಯನ್ನು ಸಂಪೂರ್ಣವಾಗಿ ಬಳಸುವಂತಿಲ್ಲ.

ಇದನ್ನೂ ಓದಿ: ಜಿಎಸ್‌ಟಿ ಕಡಿತ– ಬೇಡಿಕೆ ಹೆಚ್ಚಳದ ನಿರೀಕ್ಷೆಯಲ್ಲಿ ರಿಯಲ್‌ ಎಸ್ಟೇಟ್ ಉದ್ಯಮ

ಶೇಕಡಾ 80 ರಷ್ಟು ಮೊತ್ತದ ವಸ್ತುಗಳನ್ನು ಜಿ.ಎಸ್.ಟಿ ನೋಂದಾಯಿತ ಮಾರಾಟಗಾರರಿಂದಲೇ ಖರೀದಿಸಬೇಕು ಹಾಗೂ ಶೇಕಡಾ 85 ಕ್ಕೂ ಹೆಚ್ಚಿನ ಪ್ರಮಾಣದ ಕಟ್ಟಡ ವಸತಿ ಯೋಗ್ಯವಾಗಿರಬೇಕು. ಹೊಸ ತೆರಿಗೆ ದರಕ್ಕೆ ವರ್ಗಾವಣೆಗೊಳ್ಳಲು ಇಚ್ಚಿಸುವ ಗೃಹ ನಿರ್ಮಾಣ ಸಂಸ್ಥೆಗಳು 15 ರಿಂದ 30 ದಿನಗಳೊಳಗಾಗಿ ತಮ್ಮ ನಿಲುವನ್ನು ಜಿ.ಎಸ್.ಟಿ ಇಲಾಖೆಗೆ ಲಿಖಿತ ರೂಪದಲ್ಲಿ ಕೊಡಬೇಕು

ಒಟ್ಟು ಲಾಭಗಳು: ಈ ಒಂದು ಪ್ರಮುಖ ನಿರ್ಣಯದಿಂದ ಸರ್ಕಾಕ್ಕೂ ಬಹಳಷ್ಟು ಪ್ರಯೋಜನವಾಗಲಿದೆ. ಕಾರಣ, ನಿರ್ಮಾಣ ಕಾಮಗಾರಿಯಲ್ಲಿ ಬಳಕೆ ಮಾಡುವ ಪ್ರಮುಖ ಉತ್ಪನ್ನಗಳಾದ ಸಿಮೆಂಟ್, ಕಬ್ಬಿಣದ ಸಲಾಕೆ, ಪೇಂಟ್, ಪೀಠೋಪಕರಣ ಇತ್ಯಾದಿ ಉತ್ಪನ್ನಗಳು ಶೇ 12 ರಿಂದ 28 ರ ದರದಲ್ಲಿ ತೆರಿಗೆಗೆ ಒಳಪಡುತ್ತಿವೆ. ಇದರ ತೆರಿಗೆ ಜಮೆಯ ಪ್ರಯೋಜನವನ್ನು ಸದ್ಯಕ್ಕೆ ಗೃಹ ನಿರ್ಮಾಣ ಉದ್ದಿಮೆ ಪಡೆಯುತ್ತಿದೆ.

ಹೊಸ ತೆರಿಗೆ ಪದ್ಧತಿಯ ಪ್ರಕಾರ ಮನೆಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಶೇ 1 ಅಥವಾ 5 ರ ದರದಲ್ಲಿ ತೆರಿಗೆ ವಿಧಿಸುವ ಕಾರಣ ಖರೀದಿಸಿದ ಉತ್ಪನ್ನಗಳ ಮೇಲೆ ಸಂಗ್ರಹವಾದ ತೆರಿಗೆ ಜಮಾವನ್ನು ನಿರ್ಬಂಧಿಸಿರುವುದರಿಂದ ಸರ್ಕಾರಕ್ಕೆ ಇದು ಹೆಚ್ಚುವರಿ ತೆರಿಗೆ ಮೊತ್ತವಾಗಿ ಬೊಕ್ಕಸಕ್ಕೆ ಸೇರಲಿದೆ. 

ಇದನ್ನೂ ಓದಿ: ಪ್ರಮಾಣ ಪತ್ರ ಪಡೆದ ಕಟ್ಟಡಕ್ಕೆ ಜಿಎಸ್‌ಟಿ ಇಲ್ಲ

ಪ್ರಧಾನ ಅಂಶಗಳು
ಈ ಹೊಸ ನೀತಿ ಜಾರಿಗೊಳಿಸುವ ಸಂದರ್ಭದಲ್ಲಿ ಜಿಎಸ್‌ಟಿ ಮಂಡಳಿ ಕಂಡುಕೊಂಡ ಕೆಲವು ಪ್ರಮುಖ ಅನುಕೂಲಕರ ಅಂಶಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು.
1. ಸ್ವಂತ ಮನೆ ಖರೀದಿಸಬೇಕೆನ್ನುವವರಿಗೆ ಈಗ ಜಾರಿಯಲ್ಲಿರುವ ಶೇ 8 ಅಥವಾ 12 ರ ಬದಲಾಗಿ ಶೇ 1 ಅಥವಾ 5 ರ ಜಿ.ಎಸ್.ಟಿ ದರ ಅನ್ವಯವಾಗಲಿದೆ.
2. ಗೃಹ ನಿರ್ಮಾಣದಂತಹ ಬಹು ದೊಡ್ಡ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಾರ್ಷಿಕ ತೆರಿಗೆ ತಪಾಸಣೆ ಹಾಗೂ ಸರಕಾರಕ್ಕೆ ಒಪ್ಪಿಸಬೇಕಾದ ಮಾಸಿಕ ಸಲ್ಲಿಕೆ (ರಿಟರ್ನ್ಸ) ಗಳೂ ತುಂಬಾ ಸರಳಗೊಳ್ಳಲಿವೆ.
3. ತೆರಿಗೆ ದರ ಕಡಿಮೆಯಾಗುವುದರಿಂದ ಗೃಹ ನಿರ್ಮಾಣ ಸಂಸ್ಥೆಗಳ ಹಣಕಾಸಿನ ಕೊರತೆಯೂ ಬಹಳಷ್ಟು ಮಟ್ಟಿಗೆ ತಗ್ಗಲಿದೆ.

ಸಮಸ್ಯೆಗಳೇನು?: ತೆರಿಗೆ ಕಡಿತಗೊಳಿಸಿರುವ ಸರ್ಕಾರದ ಯೋಜನೆಯೇನೊ ಸರಿ. ಆದರೆ ಅಷ್ಟೇ ಸಮರ್ಥವಾಗಿ ಅದು ಜನರನ್ನು ತಲುಪಿತೇ ಎನ್ನುವುದು ಇನ್ನೂ ಖಾತರಿ ಇಲ್ಲ.

ಕಾರಣ, ಗೃಹ ನಿರ್ಮಾಣ ಸಂಸ್ಥೆಗಳು ನಿಗದಿಪಡಿಸುವ ಮೌಲ್ಯದಲ್ಲಿ ನಿರ್ಬಂಧಿತ ತೆರಿಗೆ ಜಮೆಯನ್ನು ಇನ್ನು ಮುಂದೆ ವೆಚ್ಚವೆಂದು ಪರಿಗಣಿಸಬೇಕಾಗುತ್ತದೆ. ಇದರಿಂದ ಎಲ್ಲರೂ ತಮ್ಮ ಮಾರಾಟ ಬೆಲೆಯನ್ನು ಹೊಸ ಪದ್ಧತಿಗೆ ಅನ್ವಯಿಸುವಂತೆ ಪರಿಷ್ಕರಿಸುವ ಅನಿವಾರ್ಯತೆ ಎದುರಾಗಿದೆ.

ಹೀಗಾಗಿ ಮುಂದಿನ ಕೆಲವು ತಿಂಗಳು ಹೊಸ ಮನೆಗಳ ಬೆಲೆಯಲ್ಲಾಗುವ ಬದಲಾವಣೆಗಳನ್ನು ಕಾದು ನೋಡಬೇಕು. ಸರ್ಕಾರ ಈಗ ಇರುವ ನಿಯಮದಂತೆ ಯಾವುದೇ ತೆರಿಗೆ ದರ ಕಡಿಮೆಯಾದಾಗ ಪರಿಸ್ಥಿತಿಯ ಪ್ರತಿಕೂಲ ಲಾಭ ಪಡೆಯುವ ಸಂಸ್ಥೆಗಳ ಮೇಲೂ ಸ್ವಲ್ಪ ಸಮಯ ನಿಗಾ ಇರಿಸಬೇಕಾಗಿದೆ.

ಇದನ್ನೂ ಓದಿ: ಸಂಪಾದಕೀಯ– ಜಿಎಸ್‌ಟಿ ತೆರಿಗೆ ವ್ಯವಸ್ಥೆ ಸರಳೀಕರಣದತ್ತ ಹೊಸ ಹೆಜ್ಜೆ

ಕಳೆದ ವರ್ಷ ‘ಕ್ರೆಡಾಯ್‌’ ನಡೆಸಿದ ಸಮೀಕ್ಷೆಯ ಪ್ರಕಾರ, 2020 ರ ಸುಮಾರಿಗೆ ದೇಶದ ಜಿಡಿಪಿಗೆ ’ಗೃಹ ನಿರ್ಮಾಣ ಕ್ಷೇತ್ರ’ ಶೇ 11 ರಷ್ಟು ಬಳುವಳಿ ನೀಡಲಿದೆ. ಇದು ಪ್ರಸ್ತುತ ಇರುವ 5-6 ಶೇಕಡಾದ ದುಪ್ಪಟ್ಟಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ವಿವಿಧ ಸ್ತರದ ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗಾವಕಾಶಗವನ್ನೂ ಸೃಷ್ಟಿಸಿ ಕೊಡುತ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ ಜಡಗೊಂಡಿರುವ ರಿಯಲ್‌ ಎಸ್ಟೇಟ್‌ ಕ್ಷೇತ್ರವನ್ನು ಪುನಶ್ಚೇತನಗೊಳಿಸಲು ಜಿಎಸ್‌ಟಿ ದರವನ್ನು ಒಟ್ಟಾರೆ ಕಡಿಮೆ ಮಾಡಿರುವುದರಿಂದ ಜನಸಾಮಾನ್ಯರ ದೃಷ್ಟಿಯಿಂದಲೂ ಬಹಳ ಪ್ರಯೋಜನಕಾರಿಯಾಗಿದೆ. 

ಇದನ್ನೂ ಓದಿ: ಜಿಎಸ್‌ಟಿ ಸಂಗ್ರಹ ಇಳಿಕೆ

ತೆರಿಗೆ ಬದಲಾವಣೆಗಳು
ಏಪ್ರಿಲ್‌ನಿಂದ ಶೇ 1 ಅಥವಾ ಶೇ 5 ರ ಪರಿಷ್ಕೃತ ತೆರಿಗೆ ದರ ಜಾರಿಗೆ ಬರಲಿದೆ. ಇದು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ಹಾಗೂ ಕಟ್ಟಡದ ಉಪಭೋಗದ ಪರವಾನಿಗೆ ಇನ್ನೂ ಸಿಗದಿರುವ ಕಟ್ಟಡಗಳಿಗೆ ಮಾತ್ರ ಅನ್ವಯವಾಗುತ್ತದೆ.

ನಿರ್ಮಾಣ ಕ್ಷೇತ್ರ ಪ್ರಸ್ತುತ ತೆರಿಗೆ ದರ (ಐಚ್ಚಿಕ) ಹೊಸ ತೆರಿಗೆ ದರ
ಅಗ್ಗದ ಮನೆಗಳು 8% 1%

ಇತರ ಗೃಹಗಳು

12%

5%

ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಬಗ್ಗೆ ವಿಧಿಸಿರುವ ಶರತ್ತು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಬಳಸಬಹುದು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಬಳಸುವಂತಿಲ್ಲ

ಕೈಗೆಟುಕುವ ಬೆಲೆಯ ಗೃಹಗಳ ಪಾರಿಭಾಷಿಕ ಪರಿಮಾಣ

ಮನೆಗಳ ಭೌಗೋಳಿಕ ವ್ಯಾಪ್ತಿ ಮನೆಯ ಗರಿಷ್ಠ ಕಾರ್ಪೆಟ್ ಕ್ಷೇತ್ರ ಗರಿಷ್ಠ ಖರೀದಿ ಮೌಲ್ಯ

ಮಹಾನಗರಗಳು: ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತ, ಮುಂಬೈ ಮೆಟ್ರೋಪಾಲಿಟನ್ ಪ್ರದೇಶ, ದೆಹಲಿ ರಾಷ್ಟ್ರೀಯ ರಾಜಧಾನಿ ವ್ಯಾಪ್ತಿಗೆ ಸೇರಿದ ಪ್ರದೇಶಗಳಾದ ನೊಯಿಡಾ, ಬೃಹತ್ ನೊಯಿಡಾ, ಗಾಜಿಯಾಬಾದ್, ಗುರುಗ್ರಾಂ ಹಾಗೂ ಫರೀದಾಬಾದ್

60 ಚ.ಮೀ  ₹ 45 ಲಕ್ಷ
ಇತರ ಯಾವುದೇ ಪ್ರದೇಶಗಳು 90 ಚ.ಮೀ ₹ 45 ಲಕ್ಷ
Post Comments (+)