ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ಮಾರ್ಗದರ್ಶಿ ಸೂತ್ರ:ದಂಡ ಪಾವತಿಸಿ ವಿಚಾರಣೆ ತಪ್ಪಿಸಿಕೊಳ್ಳುವ ವಿನಾಯ್ತಿ ರದ್ದು

Last Updated 17 ಜೂನ್ 2019, 16:21 IST
ಅಕ್ಷರ ಗಾತ್ರ

ನವದೆಹಲಿ: ಆದಾಯ ತೆರಿಗೆ ತಪ್ಪಿಸಿದವರು ದೊಡ್ಡ ಮೊತ್ತದ ದಂಡ ಪಾವತಿಸಿ ಕಾನೂನು ಕ್ರಮಗಳಿಂದ ಪಾರಾಗುವುದನ್ನು ನಿರ್ಬಂಧಿಸುವ ಹೊಸ ಮಾರ್ಗದರ್ಶಿ ಸೂತ್ರಗಳನ್ನು
ಪ್ರಕಟಿಸಲಾಗಿದೆ.

ವಿದೇಶಗಳಲ್ಲಿ ಕಪ್ಪು ಹಣ ಹೊಂದಿರುವುದೂ ಸೇರಿದಂತೆ ವಿವಿಧ ಬಗೆಯಲ್ಲಿ ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ವಿಚಾರಣೆ ನಡೆಸುವುದು ಇನ್ನು ಮುಂದೆ ಕಠಿಣಗೊಳ್ಳಲಿದೆ. ನೇರ ತೆರಿಗೆ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ಹೊರಡಿಸಿರುವ ಹೊಸ ಅಧಿಸೂಚನೆ ತಕ್ಷಣದಿಂದಲೇ ಜಾರಿಗೆ ಬಂದಿದೆ.

ಅಕ್ರಮ ಹಣ ವರ್ಗಾವಣೆ, ಭಯೋತ್ಪಾದನೆಗೆ ಹಣಕಾಸು ನೆರವು, ಭ್ರಷ್ಟಾಚಾರ, ಬೇನಾಮಿ ಆಸ್ತಿ ಹೊಂದಿರುವ ಪ್ರಕರಣಗಳಲ್ಲಿ ದಂಡ ಮತ್ತು ಬಾಕಿ ಇರುವ ತೆರಿಗೆ ಪಾವತಿಸುವ ತಪ್ಪಿತಸ್ಥರು ಅಥವಾ ತೆರಿಗೆ ತಪ್ಪಿಸಿದವರ ವಿರುದ್ಧ ತೆರಿಗೆ ಅಧಿಕಾರಿಗಳು ಕಾನೂನು ಕ್ರಮ ದಾಖಲಿಸುತ್ತಿರಲಿಲ್ಲ.

ವಿನಾಯ್ತಿ ರದ್ದು: ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಅನೇಕ ಕೃತ್ಯಗಳಲ್ಲಿ ಇಂತಹ ವಿನಾಯ್ತಿಯು ಇನ್ನು ಮುಂದೆ ದೊರೆಯುವುದಿಲ್ಲ. ವಿದೇಶಿ ಬ್ಯಾಂಕ್‌ ಖಾತೆ ವಿವರ ನೀಡದವರು, ಕಪ್ಪು ಹಣ ಹೊಂದಿದವರು, ಬೇನಾಮಿ ಆಸ್ತಿ ಹೊಂದಿದವರೂ ಇಂತಹ ವಿನಾಯ್ತಿಗೆ ಅರ್ಹರಾಗಿರುವುದಿಲ್ಲ.

ಕಪ್ಪು ಹಣ ಮತ್ತು ಕ್ರಿಮಿನಲ್‌ ಸ್ವರೂಪದ ತೆರಿಗೆ ತಪ್ಪಿಸುವ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಇನ್ನು ಮುಂದೆ ಸರಳಗೊಳ್ಳಲಿದೆ. ದಂಡ ಪಾವತಿಸಿ ಕೋರ್ಟ್‌ ವಿಚಾರಣೆ ತಪ್ಪಿಸಿಕೊಳ್ಳುವುದು ವಂಚಕರ ಹಕ್ಕು ಆಗಿರಲಾರದು ಎನ್ನುವುದನ್ನು ಹೊಸ ಮಾರ್ಗದರ್ಶಿ ಸೂತ್ರಗಳು ಸ್ಪಷ್ಟಪಡಿಸಿವೆ.

ರಾಷ್ಟ್ರ ವಿರೋಧಿ ಅಥವಾ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿದ, ಜಾರಿ ನಿರ್ದೇಶನಾಲಯ, ಲೋಕಾಯುಕ್ತ ತನಿಖೆಗೆ ಒಳಪಟ್ಟವರಿಗೂ ಈ ವಿನಾಯ್ತಿ ದೊರೆಯುವುದಿಲ್ಲ. ವ್ಯಕ್ತಿಯ ನಡವಳಿಕೆ, ಅಪರಾಧದ ಸ್ವರೂಪ ಮತ್ತು ತೀಕ್ಷಣೆ ಪರಿಗಣಿಸಿ ವಿನಾಯ್ತಿ ನೀಡಬಹುದಾಗಿದೆ.

ನೇರ ತೆರಿಗೆ ಕಾಯ್ದೆಯಡಿ ಕೋರ್ಟ್‌ನಿಂದ ಶಿಕ್ಷೆಗೆ ಒಳಗಾದ, ಇತರರು ತೆರಿಗೆ ತಪ್ಪಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವರು, ನಕಲಿ ಇನ್‌ವಾಯ್ಸ್‌ ಸೃಷ್ಟಿಸಿ ವಂಚನೆ ಎಸಗಿದವರಿಗೂ ವಿನಾಯ್ತಿ ದೊರೆಯಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT