ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘರ್ಷಣೆಗೆ ಕಾರಣವಾದ ಗೋಡೆ ಮೇಲಿನ ಚಿಹ್ನೆ: ಬಿಜೆಪಿ– ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ

Last Updated 8 ಫೆಬ್ರುವರಿ 2018, 9:03 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್‌.ಪುರದ ದೇವಸಂದ್ರ ವಾರ್ಡ್‍ನಲ್ಲಿ ಗೋಡೆಗೆ ಕಮಲದ ಚಿಹ್ನೆ ಬಿಡಿಸಿದ ವಿಚಾರವಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಸೋಮವಾರ ಮಾರಾಮಾರಿ ನಡೆದಿದೆ. ಈ ಸಂಬಂಧ ಕೆ.ಆರ್‌.ಪುರ ಠಾಣೆಯಲ್ಲಿ ದೂರು– ಪ್ರತಿದೂರು ದಾಖಲಾಗಿದೆ.

ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಸ್ಥಳೀಯ ಬಿಜೆಪಿ ಮುಖಂಡರು, ‘ಬಿಜೆಪಿ ಗೆಲುವು, ವೋಟ್ ಫಾರ್ ಬಿಜೆಪಿ, ಬದಲಾವಣೆಗಾಗಿ ಬಿಜೆಪಿ’ ಹೆಸರಿನಡಿ ಆಂದೋಲನ ಹಮ್ಮಿಕೊಂಡಿದ್ದಾರೆ. ಅದರಡಿ ಮನೆಗಳು ಹಾಗೂ ಸಾರ್ವಜನಿಕ ಸ್ಥಳಗಳ ಗೋಡೆಗಳಿಗೆ ಪಕ್ಷದ ಕಮಲದ ಚಿಹ್ನೆಯನ್ನು ಬಿಡಿಸುತ್ತಿದ್ದಾರೆ.

ದೇವಸಂದ್ರ ವಾರ್ಡ್‌ನ ನೇತ್ರಾವತಿ ಬಡಾವಣೆಯಲ್ಲಿ ಸೋಮವಾರ ಅಂಥದ್ದೇ ಚಿತ್ರ ಬಿಡಿಸಲಾಗುತ್ತಿತ್ತು. ಅದನ್ನು ನೋಡಿದ್ದ ಕಾಂಗ್ರೆಸ್‌ ಕಾರ್ಯಕರ್ತ ಸುನೀಲ್, ‘ಗೋಡೆಯ ಅಂದ ಹಾಳಾಗುತ್ತದೆ’ ಎಂದು ಬಿಜೆಪಿಯವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅವರ ವಿರುದ್ಧ ಬಿಜೆಪಿಯ ಕಾರ್ಯಕರ್ತರಾದ ಮುರುಗೇಶ್, ಲಿಂಗಪ್ಪ, ಕೃಷ್ಣಮೂರ್ತಿ ಹರಿಹಾಯ್ದಿದ್ದರು.

ಸ್ಥಳಕ್ಕೆ ಬಂದ ಕಾರ್ಪೊರೇಟರ್‌ ಶ್ರೀಕಾಂತ್ ಹಾಗೂ ಬೆಂಬಲಿಗರು, ಗೋಡೆಯ ಮೇಲಿದ್ದ ಕಮಲದ ಚಿಹ್ನೆಯನ್ನು ವಿರೂಪಗೊಳಿಸಿ ಕಾಂಗ್ರೆಸ್‌ ಎಂದು ಬರೆದರು. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಎರಡೂ ಪಕ್ಷದ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿ ಹೊಡೆ
ದಾಡಿದರು. ಘಟನೆಯಲ್ಲಿ ಹಲವರು ಗಾಯಗೊಂಡರು. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಠಾಣೆ ಎದುರು ಜಮಾವಣೆ: ಎರಡೂ ಪಕ್ಷದ ಕಾರ್ಯಕರ್ತರು ಕೆ.ಆರ್‌.ಪುರ ಠಾಣೆ ಎದುರು ಜಮಾವಣೆಗೊಂಡು ಪರಸ್ಪರ ಘೋಷಣೆ ಕೂಗಿದರು. ಈ ವೇಳೆಯೂ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಕೈ ಕೈ ಮಿಲಾಯಿಸುವ ಪರಿಸ್ಥಿತಿ ಬಂದಾಗ ಪೊಲೀಸರು ನಿಯಂತ್ರಿಸಿದರು.

‘ನಮ್ಮ ಬಿಜೆಪಿಯ ಚಿಹ್ನೆಯನ್ನು ಪಕ್ಷದ ಕಾರ್ಯಕರ್ತರ ಮನೆಗಳ ಮೇಲೆ ಚಿತ್ರಿಸುತ್ತಿದ್ದೆವು. ದೇವಸಂದ್ರ ವಾರ್ಡ್‍ನ ಕಾರ್ಪೊರೇಟರ್‌ ಶ್ರೀಕಾಂತ್‌ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಸ್ಥಳಕ್ಕೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ತೆಂಗಿನ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ಕಮಲದ ಚಿಹ್ನೆ ಅಳಿಸಿ ಕಾಂಗ್ರೆಸ್‌ನ ಹಸ್ತದ ಚಿಹ್ನೆ ಬಿಡಿಸಿದ್ದಾರೆ’ ಎಂದು ಬಿಜೆಪಿ ಕಾರ್ಯಕರ್ತರು ದೂರಿದರು.

ಕಾರ್ಪೊರೇಟರ್‌ ಶ್ರೀಕಾಂತ್‌, ‘ಸ್ವಚ್ಛ ಭಾರತ ಎಂದು ಬಿಜೆಪಿಯು ಹೇಳಿಕೊಳ್ಳುತ್ತಿದೆ. ಆದರೆ, ಆ ಪಕ್ಷದ ಕಾರ್ಯಕರ್ತರು ರುದ್ರಭೂಮಿಯ ಕಾಂಪೌಂಡ್‌ಗೆ ಬಣ್ಣ ಬಳಿದು ಅನೈರ್ಮಲ್ಯ ಸೃಷ್ಟಿಸುತ್ತಿದ್ದರು. ಸರ್ಕಾರದ ಸ್ವತ್ತಾದ ರುದ್ರಭೂಮಿಯಲ್ಲಿ ಕಮಲದ ಚಿಹ್ನೆ ಬಿಡಿಸದಂತೆ ಪ್ರತಿರೋಧ ವ್ಯಕ್ತಪಡಿಸಿದ್ದೆ. ಕೋಪಗೊಂಡ ಬಿಜೆಪಿಯವರು, ನಮ್ಮ ಕಾರ್ಯಕರ್ತನ ಬಟ್ಟೆ ಹರಿದು ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿದರು.

ಕೆ.ಆರ್‌.ಪುರ ಪೊಲೀಸರು, ‘ಎರಡೂ ಕಡೆಯಿಂದಲೂ ದೂರು ಪಡೆದಿದ್ದೇವೆ. ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT