ಗುರುವಾರ , ಜನವರಿ 28, 2021
18 °C

ಜಿಎಸ್‌ಟಿ ವಿವರ: ಸಣ್ಣ ಉದ್ದಿಮೆಗೆ ಸ್ಥಗಿತದ ಭೀತಿ

ಮಹೇಶ್ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ 1.75 ಲಕ್ಷಕ್ಕೂ ಹೆಚ್ಚಿನ ಉದ್ದಿಮೆಗಳು ‘ಶೂನ್ಯ ಜಿಎಸ್‌ಟಿ ತೆರಿಗೆ ವಿವರ’ಗಳನ್ನು ಫಾರ್ಮ್‌ ಜಿಎಸ್‌ಟಿಆರ್‌–3ಬಿ ಮೂಲಕ ಸಲ್ಲಿಸಿಲ್ಲ. ಈ ವಿವರ ಸಲ್ಲಿಸುವ ಜೊತೆಯಲ್ಲೇ ಅವರು ತೆರಿಗೆ ವಿವರ ಸಲ್ಲಿಸುವುದನ್ನು ವಿಳಂಬ ಮಾಡಿದ್ದಕ್ಕೆ ಪ್ರತ್ಯೇಕ ಶುಲ್ಕವನ್ನೂ ಪಾವತಿಸಬೇಕು.

ಈಗ ಈ ಉದ್ಯಮಗಳು ತಮ್ಮ ಜಿಎಸ್‌ಟಿ ನೋಂದಣಿ ರದ್ದಾಗುವ ಹಾಗೂ ವಹಿವಾಟು ಸ್ಥಗಿತಗೊಳ್ಳುವ ಅಪಾಯ ಎದುರಿಸುತ್ತಿವೆ. ವಿಳಂಬ ಮಾಡಿದ್ದಕ್ಕೆ ಶುಲ್ಕವನ್ನು ಪಾವತಿಸುವವರಿಗೆ ಅವರಿಗೆ ದೈನಂದಿನ ವಹಿವಾಟು ನಡೆಸಲು ಆಗದಂತಾಗುತ್ತದೆ.

ನೋಂದಣಿ ರದ್ದಾಗಬಾರದು ಎಂದಾದರೆ ನವೆಂಬರ್ 30ರೊಳಗೆ ಜಿಎಸ್‌ಟಿಆರ್‌–3ಬಿ ವಿವರ ಸಲ್ಲಿಸಬೇಕು ಎಂದು ಸರ್ಕಾರ ಗಡುವು ನೀಡಿದೆ. ಜಿಎಸ್‌ಟಿ ನೋಂದಣಿ ರದ್ದಾದರೆ ಇ–ವೇ ಬಿಲ್ ಸಿಗುವುದಿಲ್ಲ. ಆಗ ವಹಿವಾಟು ನಡೆಸಲು ಆಗುವುದಿಲ್ಲ ಎಂದು ಮೂಲಗಳು ಎಚ್ಚರಿಕೆ ನೀಡಿವೆ. ರಾಜ್ಯದಲ್ಲಿ ಒಟ್ಟು 8.88 ಲಕ್ಷ ಉದ್ಯಮಗಳು ಜಿಎಸ್‌ಟಿ ವ್ಯವಸ್ಥೆಯಡಿ ನೋಂದಣಿ ಮಾಡಿಸಿಕೊಂಡಿವೆ. ಈ ಪೈಕಿ ಶೇಕಡ 78ರಷ್ಟು ಉದ್ದಿಮೆಗಳು ಅಕ್ಟೋಬರ್‌ ಅಂತ್ಯದ ವೇಳೆಗೆ ಜಿಎಸ್‌ಟಿ ವಿವರ ಸಲ್ಲಿಸಿವೆ.

ನವೆಂಬರ್ 16ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಕಾರ, ಡಿಸೆಂಬರ್‌ 1ಕ್ಕೂ ಮೊದಲು ಜಿಎಸ್‌ಟಿಆರ್‌–3ಬಿ ಶೂನ್ಯ ತೆರಿಗೆ ವಿವರಗಳನ್ನು ವಿಳಂಬ ಶುಲ್ಕದ ಜೊತೆ ಸಲ್ಲಿಸಬೇಕು. ಈ ಕೆಲಸ ಮಾಡದ ಉದ್ದಿಮೆಗಳಿಗೆ ಇ–ವೇ ಬಿಲ್‌ ಸಿಗುವುದಿಲ್ಲ. ಇ–ವೇ ಬಿಲ್ ಇಲ್ಲದಿದ್ದರೆ ಉತ್ಪನ್ನಗಳನ್ನು ಒಂದೆಡೆಯಿಂದ ಇನ್ನೊಂದೆಡೆ ಸಾಗಿಸಲು ಆಗುವುದಿಲ್ಲ.

‘ಲಾಕ್‌ಡೌನ್‌ ಅವಧಿಯಲ್ಲಿ ಉದ್ದಿಮೆಗಳ ಬಾಗಿಲು ಮುಚ್ಚಿದ್ದ ಕಾರಣ, ಜಿಎಸ್‌ಟಿಆರ್‌–3ಬಿ ಶೂನ್ಯ ತೆರಿಗೆ ವಿವರ ಸಲ್ಲಿಸಲು ದೇಶದ ಲಕ್ಷಾಂತರ ಉದ್ದಿಮೆಗಳಿಗೆ ಸಾಧ್ಯವಾಗಿಲ್ಲ. ಈ ಅವಧಿಯಲ್ಲಿ ಅವುಗಳಿಗೆ ಯಾವ ಆದಾಯವೂ ಇಲ್ಲವಾಗಿದ್ದ ಕಾರಣ, ವಿಳಂಬ ಶುಲ್ಕ ‍ಪಾವತಿ ಕೂಡ ಸಾಧ್ಯವಾಗುತ್ತಿಲ್ಲ. ಅವು ಈಗ ವಿಳಂಬ ಶುಲ್ಕವನ್ನು ಮನ್ನಾ ಮಾಡುವಂತೆ ಸರ್ಕಾರವನ್ನು ಕೋರಿವೆ. ಆಗ ಈ ಉದ್ದಿಮೆಗಳಿಗೆ ಶೂನ್ಯ ತೆರಿಗೆ ವಿವರ ಸಲ್ಲಿಸಲು ಸಾಧ್ಯವಾಗುತ್ತದೆ’ ಎಂದು ಚಾರ್ಟರ್ಡ್ ಅಕೌಂಟೆಂಟ್ ರಾಘವೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ನವೆಂಬರ್‌ 24ರವರೆಗಿನ ಅಂಕಿ–ಅಂಶಗಳ ಪ್ರಕಾರ ಶೇಕಡ 74ರಷ್ಟು ಉದ್ದಿಮೆಗಳು ಅಕ್ಟೋಬರ್‌ ತಿಂಗಳ ಜಿಎಸ್‌ಟಿ ವಿವರ ಸಲ್ಲಿಸಿವೆ. ಇನ್ನುಳಿದ ಉದ್ದಿಮೆಗಳು ಡಿಸೆಂಬರ್‌ಗೆ ಮೊದಲು ವಿವರಗಳನ್ನು ಸಲ್ಲಿಸಬೇಕಿದೆ ಎಂದು ಎಫ್‌ಕೆಸಿಸಿಐನ ತೆರಿಗೆ ತಜ್ಞ ಬಿ.ಟಿ. ಮನೋಹರ್ ತಿಳಿಸಿದರು. ವಿಳಂಬ ಶುಲ್ಕವನ್ನು ಮನ್ನಾ ಮಾಡುವ ತೀರ್ಮಾನವನ್ನು ಜಿಎಸ್‌ಟಿ ಮಂಡಳಿ ಮಾತ್ರವೇ ತೆಗೆದುಕೊಳ್ಳಬಹುದು ಎಂದು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು