ಗುರುವಾರ , ಅಕ್ಟೋಬರ್ 24, 2019
21 °C
ಕೇಂದ್ರ ಹಣಕಾಸು ಸಚಿವೆ ಹೇಳಿಕೆ

ಆರ್ಥಿಕ ಪ್ರಗತಿ ಲೆಕ್ಕಾಚಾರ ಅರ್ಥವಿಲ್ಲ: ನಿರ್ಮಲಾ ಸೀತಾರಾಮನ್

Published:
Updated:
ಧಾರವಾಡದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಕೈಪಿಡಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಿಡುಗಡೆ ಮಾಡಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಘದ ಅಧ್ಯಕ್ಷ ಎಸ್. ನಂಜುಂಡ ಪ್ರಸಾದ್, ಸಚಿವ ಜಗದೀಶ ಶೆಟ್ಟರ್‌, ಸಂಸದ ಶಿವಕುಮಾರ ಉದಾಸಿ ಇದ್ದಾರೆ

ಹುಬ್ಬಳ್ಳಿ/ಧಾರವಾಡ: ಕೆಲ ವರ್ಷಗಳ ಹಿಂದೆ ದೇಶದ ಬ್ಯಾಂಕ್‌ಗಳಲ್ಲಿ ಲೆಕ್ಕಕ್ಕೆ ಸಿಗದ ವ್ಯವಹಾರಗಳ ಪ್ರಮಾಣವೇ ಶೇ 85ರಷ್ಟಿತ್ತು. ಲೆಕ್ಕಕ್ಕೆ ಸಿಗದ ವ್ಯವಹಾರಗಳು ಇಷ್ಟೊಂದು ಪ್ರಮಾಣದಲ್ಲಿ ಇರುವಾಗ ದೇಶದ ಆರ್ಥಿಕ ಪ್ರಗತಿ ಲೆಕ್ಕ ಹಾಕುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘ ಶನಿವಾರ ಆಯೋಜಿಸಿದ್ದ ಸಂಘದ ಸಂಸ್ಥಾಪಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ಪ್ರಧಾನಿ ‌ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ನೋಟುಗಳ ಅಮಾನ್ಯೀಕರಣದಂತಹ ಕ್ರಾಂತಿಕಾರಕ ಕ್ರಮದಿಂದ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿದೆ. ದೇಶದ ತೆರಿಗೆ ಖಜಾನೆ ದೊಡ್ಡದಾದಂತೆ, ತೆರಿಗೆ ಪ್ರಮಾಣ ಕೂಡ ಇಳಿಮಖವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ದೇಶದಲ್ಲಿ ಆರ್ಥಿಕ ಸ್ವಾತಂತ್ರ್ಯ ಚಳವಳಿ ನಡೆಯಬೇಕಿದೆ. ಇದಕ್ಕಾಗಿ ಪ್ರತಿಯೊಬ್ಬರನ್ನೂ ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಅಗತ್ಯವಿದೆ. ಮೂಲಸೌಕರ್ಯ ಕಲ್ಪಿಸಲು ಹಾಗೂ ನೆರೆಪೀಡಿತರಿಗೆ ನೆರವಾಗಲೂ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ತೆರಿಗೆ ಸಲಹೆಗಾರರು ತೆರಿಗೆದಾರರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ದೇಶದ ಬೊಕ್ಕಸ ತುಂಬಿಸುವ ಕೆಲಸ ಮಾಡಬೇಕು’ ಎಂದರು.

ಗೋ ಬ್ಯಾಕ್‌ ನಿರ್ಮಲಾ: ಸಚಿವೆ ನಿರ್ಮಲಾ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ, ನಿಲ್ದಾಣದ ಹೊರಭಾಗದಲ್ಲಿ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿ ‘ಗೋ ಬ್ಯಾಕ್‌ ನಿರ್ಮಲಾ’ ಘೋಷಣೆ ಕೂಗಿದರು. ಪ್ರವಾಹದಿಂದ ಜನರು ಸಂಕಷ್ಟದಲ್ಲಿದ್ದರೂ, ಕೇಂದ್ರ ಕಡಿಮೆ ಪರಿಹಾರಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತೆರಿಗೆ ಪರಿಷ್ಕರಣೆಗೆ ಶೆಟ್ಟರ್ ಮನವಿ

ಧಾರವಾಡ: ‘ಕರಕುಶಲ ವಸ್ತುಗಳ ಉತ್ಪಾದನೆಯಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿಯಲ್ಲಿದ್ದು, ಈ ಕ್ಷೇತ್ರದ ಮೇಲಿರುವ ತೆರಿಗೆ ಕಡಿಮೆ ಮಾಡಬೇಕು ಎಂದು ಸಚಿವ ಜಗದೀಶ ಶೆಟ್ಟರ್‌, ಕೇಂದ್ರ ಹಣಕಾಸು ಸಚಿವರಲ್ಲಿ ಮನವಿ ಮಾಡಿಕೊಂಡರು.

‘ಕರಕುಶಲ ವಸ್ತುಗಳ ಮೇಲೆ ಶೇ 12ರಷ್ಟು ತೆರಿಗೆ ವಿಧಿಸುತ್ತಿರುವ ಕಾರಣ ಈ ಉದ್ಯಮದಲ್ಲಿ ತೊಡಗಿರುವವರು ಸಂಕಷ್ಟದಲ್ಲಿದ್ದಾರೆ. ಕೃಷಿ ಮತ್ತು ಸಾಗರೋತ್ಪನ್ನಗಳಿಗೂ ಒಂದಷ್ಟು ತೆರಿಗೆ ವಿನಾಯ್ತಿ ನೀಡಿದರೆ ಕರ್ನಾಟಕಕ್ಕೆ ಅನುಕೂಲವಾಗುತ್ತದೆ. ಆದ್ದರಿಂದ ಈ ಕುರಿತು ಕ್ರಮ ಕೈಗೊಳ್ಳಬೇಕು’ ಎಂದು ಶೆಟ್ಟರ್‌ ಮನವಿ ಸಲ್ಲಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)