ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದುಬ್ಬರ ದರ ಏರಿಕೆ ಅತಿಯಾಗಿಲ್ಲ: ನಿರ್ಮಲಾ ಸೀತಾರಾಮನ್

Last Updated 20 ಏಪ್ರಿಲ್ 2022, 21:12 IST
ಅಕ್ಷರ ಗಾತ್ರ

ನವದೆಹಲಿ/ಬೆಂಗಳೂರು: ಚಿಲ್ಲರೆ ಹಣದುಬ್ಬರ ದರವು ಗರಿಷ್ಠ ಮಿತಿಯನ್ನು ಮೀರಿದ್ದರೂ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಣದುಬ್ಬರ ದರ ‘ಅತಿಯಾಗಿಲ್ಲ’ ಎಂದು ಹೇಳಿದ್ದಾರೆ.

ವಾಷಿಂಗ್ಟನ್‌ನಲ್ಲಿ ಒಂದು ಕಾರ್ಯಕ್ರಮದಲ್ಲಿ ಅವರು ಈ ಮಾತು ಹೇಳಿದ್ದಾರೆ. ‘ಜಾಗತಿಕ ಮಟ್ಟದಲ್ಲಿ ಸವಾಲುಗಳಿವೆ. ಭಾರತದ‍ಲ್ಲಿ ಹಣದುಬ್ಬರ ದರವು ಮಾರ್ಚ್‌ನಲ್ಲಿ ಶೇ 6.9ರಷ್ಟಿದೆ. ಹಣದುಬ್ಬರವು ಗರಿಷ್ಠ ಶೇ 6ರವರೆಗೆ ತಲುಪಲು ಅವಕಾಶವಿದೆ. ಆ ಗಡಿಯನ್ನು ನಾವು ದಾಟಿದ್ದೇವೆ. ಆದರೆ ಹಣದುಬ್ಬರದ ಈ ಏರಿಕೆ ಅತಿಯಲ್ಲ’ ಎಂದು ನಿರ್ಮಲಾ ಅಭಿಪ್ರಾಯಪಟ್ಟಿದ್ದಾರೆ.

ಮಾರ್ಚ್‌ನಲ್ಲಿ ದೇಶದ ಚಿಲ್ಲರೆ ಹಣದುಬ್ಬರ ದರ 17 ತಿಂಗಳ ಗರಿಷ್ಠ ಮಟ್ಟ ತಲುಪಿದೆ (ಶೇ 6.95). ಮುಂದಿನ ತಿಂಗಳುಗಳಲ್ಲಿ ಚಿಲ್ಲರೆ ಹಣದುಬ್ಬರವು ಇನ್ನಷ್ಟು ಜಾಸ್ತಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜನಸಾಮಾನ್ಯರ ಮೇಲೆ ಇರುವ ಬೆಲೆ ಏರಿಕೆಯ ಹೊರೆಯು ಸರ್ಕಾರದ ಗಮನದಲ್ಲಿ ಇದೆ, ಹೊರೆಯನ್ನು ತಗ್ಗಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ನಿರ್ಮಲಾ ಹೇಳಿದ್ದಾರೆ. ‘ಆದರೆ, ಈಗ ಸವಾಲುಗಳು ಏನೇ ಇದ್ದರೂ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಮುಂದಕ್ಕೆ ಸಾಗಲು ನಮಗೆ ಸಾಧ್ಯವಾಗಿದೆ’ ಎಂದು ಅವರು ಹೇಳಿದ್ದಾರೆ.

ಚಿಲ್ಲರೆ ಹಣದುಬ್ಬರ ದರವು ತೀವ್ರವಾಗಿ ಹೆಚ್ಚಾಗುತ್ತಿರುವ ಕಾರಣದಿಂದಾಗಿ, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ತಮ್ಮ ಮುಂದಿನ ಗುರಿಯು ಹಣದುಬ್ಬರವನ್ನು ನಿಯಂತ್ರಿಸುವುದಾಗಿರಲಿದೆ ಎಂದು ಈಚೆಗೆ ಹೇಳಿದ್ದಾರೆ.

ದೇಶದಲ್ಲಿ ಸಗಟು ಹಣದುಬ್ಬರ ದರವು ನಾಲ್ಕು ತಿಂಗಳ ಗರಿಷ್ಠ ಮಟ್ಟವಾದ ಶೇ 14.55ಕ್ಕೆ ತಲುಪಿದೆ. ಸಗಟು ಹಣದುಬ್ಬರ ದರದಲ್ಲಿನ ಹೆಚ್ಚಳವು ಮುಂದಿನ ತಿಂಗಳುಗಳಲ್ಲಿ ಚಿಲ್ಲರೆ ಹಣದುಬ್ಬರ ದರದ ಏರಿಕೆಯ ರೂಪದಲ್ಲಿ ಕಾಣಿಸಿಕೊಳ್ಳಬಹುದು ಎಂದೂ ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT