ಮಂಗಳವಾರ, ಆಗಸ್ಟ್ 16, 2022
20 °C

2.35 ಕೋಟಿಗೆ ಬೆಳೆಯಲಿದೆ ಗಿಗ್ ಕೆಲಸ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೇಶದಲ್ಲಿ ಅಲ್ಪ ಅವಧಿಯ ಗುತ್ತಿಗೆ ಆಧಾರದಲ್ಲಿ (ಗಿಗ್) ಕೆಲಸ ಮಾಡುವವರ ಸಂಖ್ಯೆಯು 2029–30ರ ಸುಮಾರಿಗೆ 2.35 ಕೋಟಿಗೆ ಏರಿಕೆ ಆಗಲಿದೆ ಎಂದು ನೀತಿ ಆಯೋಗದ ವರದಿಯೊಂದು ಹೇಳಿದೆ. 2020–21ರಲ್ಲಿ ಇಂತಹ ಕೆಲಸ ಮಾಡುತ್ತಿದ್ದವರ ಸಂಖ್ಯೆ 77 ಲಕ್ಷ ಆಗಿತ್ತು.

ಸಾಮಾಜಿಕ ಭದ್ರತಾ ಸಂಹಿತೆಯಲ್ಲಿ ಹೇಳಿರುವ ರೀತಿಯಲ್ಲಿ ಇಂತಹ ಕೆಲಸಗಾರರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ವರದಿ ಶಿಫಾರಸು ಮಾಡಿದೆ.

2029–30ರೊಳಗೆ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವ ಕೆಲಸಗಾರರ ಪೈಕಿ ಇಂಥವರ ಪ್ರಮಾಣವು ಶೇ 6.7ಕ್ಕೆ ತಲುಪಲಿದೆ ಎಂದೂ ವರದಿಯು ಹೇಳಿದೆ.

ಆನ್‌ಲೈನ್‌ ಆ್ಯಪ್‌ ಆಧಾರಿತ ವೇದಿಕೆಗಳ ಸಾಮರ್ಥ್ಯವನ್ನು ಬಳಸಿಕೊಳ್ಳಲು, ಪ್ರಾದೇಶಿಕ ಹಾಗೂ ಗ್ರಾಮೀಣ ತಿನಿಸುಗಳನ್ನು ಮಾರಾಟ ಮಾಡುವ ವಹಿವಾಟಿನಲ್ಲಿ ತೊಡಗಿಸಿಕೊಂಡವರನ್ನು ಆ್ಯಪ್‌ಗಳ ಜೊತೆ ಬೆಸೆಯಬೇಕು, ಅವರು ನಗರ ಹಾಗೂ ಪಟ್ಟಣಗಳ ಮಾರುಕಟ್ಟೆಗೂ ತಮ್ಮ ತಿನಿಸುಗಳನ್ನು ತಲು‍‍‍ಪಿಸುವುದು ಸಾಧ್ಯವಾಗುವಂತೆ ಮಾಡಬೇಕು ಎಂದು ವರದಿಯು ಶಿಫಾರಸು ಮಾಡಿದೆ.

ಡಿಜಿಟಲ್ ಆ್ಯಪ್ ಆಧಾರಿತ ಗಿಗ್ ಉದ್ಯೋಗಗಳನ್ನು ಮಹಿಳೆಯರು ಶಿಕ್ಷಣ ಪಡೆದ ನಂತರ ಅಥವಾ ಮದುವೆಯ ನಂತರ ಹೆಚ್ಚಿನ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿ ಅಂದಾಜು ಮಾಡಿದೆ. ಮಹಿಳೆಯರ ಮುಂದಾಳತ್ವದಲ್ಲಿ ನಡೆಯುವ ಡಿಜಿಟಲ್ ಆ್ಯಪ್ ಆಧಾರಿತ ಉದ್ಯಮಗಳಿಗೆ ಹಾಗೂ ಮಹಿಳೆಯರಿಗೆ ಉದ್ಯೋಗ ನೀಡಲು ಒತ್ತು ನೀಡುವ ಡಿಜಿಟಲ್ ಆ್ಯಪ್‌ಗಳಿಗೆ ಉತ್ತೇಜನ ನೀಡುವ ಕೆಲಸ ಆಗಬೇಕು ಎಂದು ವರದಿ ಹೇಳಿದೆ.

=

ಗಿಗ್‌ ಉದ್ಯೋಗ: ಯಾವ ವಲಯ? ಎಷ್ಟು ಕೆಲಸ?

ಚಿಲ್ಲರೆ ವ್ಯಾಪಾರ, ಮಾರಾಟ;26.6 ಲಕ್ಷ

ಸಾರಿಗೆ ವಲಯ;13 ಲಕ್ಷ

ತಯಾರಿಕಾ ವಲಯ;6.2 ಲಕ್ಷ

ಹಣಕಾಸು, ವಿಮೆ;6.3 ಲಕ್ಷ

(ವಿವಿಧ ವಲಯಗಳಲ್ಲಿ ತೊಡಗಿಸಿಕೊಂಡಿರುವ ಕೆಲಸಗಾರರ ಸಂಖ್ಯೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.