ಗುರುವಾರ , ಜೂನ್ 4, 2020
27 °C
ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಸಂಗ್ರಹ; ಐಒಸಿ

ದೇಶದಲ್ಲಿ ತೈಲೋತ್ಪನ್ನ ಕೊರತೆ ಇಲ್ಲ: ಐಒಸಿ

ಪಿಟಿಐ Updated:

ಅಕ್ಷರ ಗಾತ್ರ : | |

 ನವದೆಹಲಿ: ಮೂರು ವಾರಗಳ ದಿಗ್ಬಂಧನದ ನಂತರದ ದಿನಗಳಿಗೂ ಸಾಲುವಷ್ಟು ಪೆಟ್ರೋಲ್‌, ಡೀಸೆಲ್‌ ಮತ್ತು ಅಡುಗೆ ಅನಿಲ (ಎಲ್‌ಪಿಜಿ) ಸಂಗ್ರಹವು ದೇಶದಲ್ಲಿ ಇದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಯಾಗಿರುವ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ತಿಳಿಸಿದೆ.

‘ಸದ್ಯಕ್ಕೆ ದೇಶದಲ್ಲಿ ಇರುವ ಎಲ್ಲ ತೈಲಾಗಾರಗಳು ಮತ್ತು ಪೂರೈಕೆ ಕೇಂದ್ರಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ. ಯಾವುದೇ ಬಗೆಯ ಇಂಧನದ ಕೊರತೆ ಉಂಟಾಗುವುದಿಲ್ಲ’ ಎಂದು ‘ಐಒಸಿ‘ ಅಧ್ಯಕ್ಷ ಸಂಜೀವ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ. ಗ್ರಾಹಕರು ಆತಂಕಗೊಂಡು ಎಲ್‌ಪಿಜಿ ಸಿಲಿಂಡರ್‌ ಬುಕಿಂಗ್‌ ಮಾಡಲು ಧಾವಂತ ಪಡಬಾರದು ಎಂದೂ ಅವರು ಮನವಿ ಮಾಡಿಕೊಂಡಿದ್ದಾರೆ.

‘ಏಪ್ರಿಲ್‌ನಲ್ಲಿ ಮತ್ತು ನಂತರದ ದಿನಗಳಲ್ಲೂ ದೇಶದಲ್ಲಿ ಕಂಡು ಬರಲಿರುವ ಎಲ್ಲ ಬಗೆಯ ಇಂಧನದ ಬೇಡಿಕೆ ಪೂರೈಸಲು ಸಕಲ ವ್ಯವಸ್ಥೆ ಮಾಡಲಾಗಿದೆ. ಎಲ್‌ಪಿಜಿ ವಿತರಣಾ ಕೇಂದ್ರಗಳು ಮತ್ತು ಪೆಟ್ರೋಲ್‌ ಬಂಕ್‌ಗಳು ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

‘ದಿಗ್ಬಂಧನ ಜಾರಿಯಿಂದಾಗಿ ಎಲ್ಲೆಡೆ ಉದ್ದಿಮೆ – ವಹಿವಾಟು ಸ್ಥಗಿತಗೊಂಡಿವೆ. ಬಸ್‌, ರೈಲು ಮತ್ತು ವಿಮಾನಗಳ ಸಂಚಾರ ನಿಂತಿದೆ. ಹೀಗಾಗಿ ಪೆಟ್ರೋಲ್‌, ಡೀಸೆಲ್‌ ಮತ್ತು ವಿಮಾನ ಇಂಧನದ ಬೇಡಿಕೆ ಗಮನಾರ್ಹವಾಗಿ ತಗ್ಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ಗೆ ಬೇಡಿಕೆ ಕುಸಿದಿರುವುದರಿಂದ  ದೇಶಿ ತೈಲಾಗಾರಗಳು ಶೇ 30ರಷ್ಟು ಕಡಿಮೆ ಪ್ರಮಾಣದಲ್ಲಿ ಇಂಧನ ಉತ್ಪಾದಿಸುತ್ತಿವೆ.

ಎಲ್‌ಪಿಜಿ ಬೇಡಿಕೆ ಹೆಚ್ಚಳ: ‘ಎಲ್‌ಪಿಜಿ ಬೇಡಿಕೆ ಮಾತ್ರ ನಿರಂತರವಾಗಿ ಹೆಚ್ಚುತ್ತಿದೆ. ಬೇಡಿಕೆ ಈಡೇರಿಸಲು ಎಲ್‌ಪಿಜಿ ಆಮದು ಮಾಡಿಕೊಳ್ಳಲಾಗುವುದು. ಕೆಲ ಗ್ರಾಹಕರು ತಮ್ಮ ಬಳಿ ಇರುವ ಒಂದು ಸಿಲಿಂಡರ್‌ ಖಾಲಿಯಾಗಿರದಿದ್ದರೂ ಹೊಸ ರಿಫಿಲ್‌ಗಾಗಿ ಬುಕಿಂಗ್‌ ಮಾಡುತ್ತಿದ್ದಾರೆ.  ಎರಡು ಸಿಲಿಂಡರ್‌ ಹೊಂದಿದವರೂ ರಿಫಿಲ್‌ ಬುಕಿಂಗ್‌ಗೆ ಇದೇ ಬಗೆಯ ಧಾವಂತ ತೋರುತ್ತಿದ್ದಾರೆ.  ಅನೇಕ ಕಡೆಗಳಲ್ಲಿ ರಿಫಿಲ್‌ ಸಿಲಿಂಡರ್‌ ವಿತರಿಸುವವರು ಗ್ರಾಹಕರ ಮನೆ ಬಾಗಿಲಿಗೆ ಹೋಗಿ ಸಿಲಿಂಡರ್‌ ಖಾಲಿಯಾಗಿರದ ಕಾರಣಕ್ಕೆ   ವಾಪಸ್‌ ತೆಗೆದುಕೊಂಡು ಹೋಗುತ್ತಿದ್ದಾರೆ.

’ಎಲ್‌ಪಿಜಿ ಪೂರೈಕೆಯಲ್ಲಿ ಕೊರತೆಯಾಗಿ ಮನೆಗಳಲ್ಲಿ ಅಡುಗೆ ತಯಾರಿಸುವುದಕ್ಕೆ ಅಡ್ಡಿ ಉಂಟಾದರೆ ಜನರು ಊಟ –ತಿಂಡಿ ಉದ್ದೇಶಕ್ಕೆ ಮನೆಯಿಂದ ಹೊರಬರುತ್ತಾರೆ. ಇದರಿಂದ ದಿಗ್ಬಂಧನದ ಉದ್ದೇಶ ಈಡೇರುವುದಿಲ್ಲ. ಹೀಗಾಗಿ  ಗೃಹ ಬಳಕೆಯ ಎಲ್‌ಪಿಜಿ ಲಭ್ಯತೆ, ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ಎಚ್ಚರವಹಿಸಲಾಗಿದೆ‘ ಎಂದು ಸಂಜೀವ್‌ ಸಿಂಗ್‌ ಹೇಳಿದ್ದಾರೆ.

’ದೇಶದಾದ್ಯಂತ 21 ದಿನಗಳ ದಿಗ್ಬಂಧನ ಘೋಷಣೆಯಾದ ದಿನವೇ ತಮ್ಮ ತಂದೆಯನ್ನು ಕಳೆದುಕೊಂಡಿದ್ದರೂ ಸಂಜೀವ್‌ ಸಿಂಗ್ ಅವರು, ದೇಶದ ಮೂಲೆ ಮೂಲೆಗೂ ಇಂಧನ ತಲುಪಿಸುವ ಗುರುತರ ಜವಾಬ್ದಾರಿಯನ್ನು ನಿರಂತರವಾಗಿ ನಿರ್ವಹಿಸುತ್ತಿದ್ದಾರೆ.

ಅಂಕಿ ಅಂಶ

* ಪೆಟ್ರೋಲ್‌ ಉತ್ಪನ್ನಗಳ ಬಳಕೆಯಲ್ಲಿ ಭಾರತಕ್ಕೆ ವಿಶ್ವದಲ್ಲಿ 3ನೇ ಸ್ಥಾನ

* 8%: ಮಾರ್ಚ್‌ನಲ್ಲಿ ಪೆಟ್ರೋಲ್‌ ಬೇಡಿಕೆಯಲ್ಲಿನ ಕುಸಿತ

* 16%: ಡೀಸೆಲ್‌ ಬೇಡಿಕೆ ಇಳಿಕೆ

* 20%: ತಗ್ಗಿರುವ ವಿಮಾನ ಇಂಧನ ಬೇಡಿಕೆ

***

* 27.59 ಕೋಟಿ: ಎಲ್‌ಪಿಜಿ ಗ್ರಾಹಕರ ಒಟ್ಟು ಸಂಖ್ಯೆ

* 25 ಲಕ್ಷ: 10 ದಿನಗಳಲ್ಲಿ ‘ಐಒಸಿ’ಯು ಪ್ರತಿ ದಿನ  ವಿತರಿಸಿರುವ ಸರಾಸರಿ ಸಿಲಿಂಡರ್‌ಗಳ ಸಂಖ್ಯೆ

* 52 ಲಕ್ಷ: ಸರ್ಕಾರಿ ಸ್ವಾಮ್ಯದ 3 ತೈಲ ಮಾರಾಟ ಸಂಸ್ಥೆಗಳು ವಿತರಿಸಿರುವ ಎಲ್‌ಪಿಜಿ ರಿಫಿಲ್‌ ಸಿಲಿಂಡರ್‌ಗಳು

* 200 %: ಎಲ್‌ಪಿಜಿ ರಿಫಿಲ್‌ ಬೇಡಿಕೆಯಲ್ಲಿನ ಹೆಚ್ಚಳ

* 8.50 ಲಕ್ಷ ಟನ್‌: ದೇಶಕ್ಕೆ ಬೇಕಾಗಿರುವ ಹೆಚ್ಚುವರಿ ಎಲ್‌ಪಿಜಿ ಆಮದಿಗೆ ಕ್ರಮ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು