ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಮುಚ್ಚುವುದಕ್ಕೆ ಸಮರ್ಥನೆಗಳೇ ಇಲ್ಲ: ವಿಶ್ವ ಬ್ಯಾಂಕ್‌ ಶಿಕ್ಷಣ ನಿರ್ದೇಶಕ

Last Updated 16 ಜನವರಿ 2022, 16:26 IST
ಅಕ್ಷರ ಗಾತ್ರ

ನವದೆಹಲಿ: ಸಾಂಕ್ರಾಮಿಕದ ನೆಪ ಹೇಳಿ ಶಾಲೆಗಳ ಬಾಗಿಲು ಮುಚ್ಚುವುದಕ್ಕೆ ಈಗ ಸಮರ್ಥನೆಗಳೇ ಇಲ್ಲ ಎಂದು ವಿಶ್ವ ಬ್ಯಾಂಕ್‌ನ ಜಾಗತಿಕ ಶಿಕ್ಷಣ ನಿರ್ದೇಶಕ ಜೈಮಿ ಸಾವೆಡ್ರಾ ಹೇಳಿದ್ದಾರೆ. ಸಾಂಕ್ರಾಮಿಕದ ಹೊಸ ಅಲೆಗಳು ಎದುರಾದರೂ ಶಾಲೆಗಳನ್ನು ಮುಚ್ಚುವುದು ಅಂತಿಮ ಆಯ್ಕೆಯಾಗಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೋವಿಡ್‌–19ರಿಂದ ಶಿಕ್ಷಣದ ಮೇಲೆ ಆಗಿರುವ ಪರಿಣಾಮಗಳನ್ನು ಗಮನಿಸುತ್ತ ಬಂದಿರುವ ಸಾವೆಡ್ರಾ ಅವರು, ‘ಶಾಲೆಗಳ ಬಾಗಿಲು ತೆರೆದ ಕಾರಣದಿಂದಾಗಿ ಕೋವಿಡ್ ಪ್ರಕರಣಗಳು ಹೆಚ್ಚಾದವು ಎನ್ನಲು ಆಧಾರಗಳು ಇಲ್ಲ. ಶಾಲೆಗಳು ಸುರಕ್ಷಿತ ಅಲ್ಲ ಎನ್ನುವುದಕ್ಕೂ ಆಧಾರಗಳು ಇಲ್ಲ’ ಎಂದು ಹೇಳಿದ್ದಾರೆ.

‘ರೆಸ್ಟಾರೆಂಟ್, ಬಾರ್, ಶಾಪಿಂಗ್ ಮಾಲ್‌ಗಳನ್ನು ತೆರೆದು ಶಾಲೆಗಳನ್ನು ಮುಚ್ಚಿ ಇರಿಸುವುದು ವಿವೇಕದ ಕೆಲಸವಲ್ಲ’ ಎಂದು ಅವರು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ವಿಶ್ವ ಬ್ಯಾಂಕ್‌ ನಡೆಸಿರುವ ಹಲವು ಅಧ್ಯಯನಗಳ ಪ್ರಕಾರ, ಶಾಲೆಗಳನ್ನು ತೆರೆದಾಗ ಮಕ್ಕಳಿಗೆ ಎದುರಾಗಬಹುದಾದ ಆರೋಗ್ಯ ಸಮಸ್ಯೆಗಳು ಅತ್ಯಂತ ಕಡಿಮೆ. ಆದರೆ, ಶಾಲೆಗಳನ್ನು ಮುಚ್ಚುವುದರಿಂದ ತೆರಬೇಕಾಗಿರುವ ಬೆಲೆ ತೀರಾ ದೊಡ್ಡದು.

‘2020ರಲ್ಲಿ ನಾವು ಅಜ್ಞಾನದಲ್ಲಿ ಮುಳುಗಿದ್ದೆವು. ಸಾಂಕ್ರಾಮಿಕವನ್ನು ಎದುರಿಸುವ ಸೂಕ್ತ ಮಾರ್ಗ ಯಾವುದೆಂಬುದು ನಮಗೆ ಗೊತ್ತಿರಲಿಲ್ಲ. ವಿಶ್ವದ ಬಹುತೇಕ ದೇಶಗಳು ಶಾಲೆಗಳನ್ನು ಮುಚ್ಚಿದವು. 2020ರ ಕೊನೆಯ ಭಾಗ ಮತ್ತು 2021ರಲ್ಲಿ ಹಲವು ಅಲೆಗಳು ಬಂದಿವೆ, ಹಲವು ದೇಶಗಳು ಶಾಲೆಗಳನ್ನು ತೆರೆದಿವೆ. ಶಾಲೆಗಳನ್ನು ತೆರೆಯುವುದು ವೈರಾಣು ಹರಡುವಲ್ಲಿ ನೆರವಾಗುವುದಿಲ್ಲ ಎಂಬುದನ್ನು ಹೊಸ ದತ್ತಾಂಶಗಳು ಹೇಳಿವೆ. ಶಾಲೆಗಳನ್ನು ಮುಚ್ಚಿದ್ದಾಗಲೂ ಕೋವಿಡ್‌ ಅಲೆಗಳು ಬಂದಿದ್ದವು’ ಎಂದು ಅವರು ಹೇಳಿದ್ದಾರೆ.

‘ಮಕ್ಕಳಿಗೆ ಸೋಂಕು ತಗುಲಿದರೂ, ಅವರಲ್ಲಿ ಗಂಭೀರ ಸಮಸ್ಯೆಗಳಾಗುವುದು ತೀರಾ ಅಪರೂಪ. ಮಕ್ಕಳಿಗೆ ಲಸಿಕೆ ಆದ ನಂತರವೇ ಶಾಲೆಗಳನ್ನು ತೆರೆಯಬಹುದು ಎಂಬ ಷರತ್ತು ವಿಧಿಸಿರುವ ಯಾವ ದೇಶವೂ ಇಲ್ಲ. ಈ ರೀತಿ ತೀರ್ಮಾನ ಕೈಗೊಳ್ಳಲು ವೈಜ್ಞಾನಿಕ ಆಧಾರ ಇಲ್ಲ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT