ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ‘ನೆಲೆ’ ಇಲ್ಲದ ತೊಗರಿ ಮಂಡಳಿ

Last Updated 31 ಜನವರಿ 2019, 20:15 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ’ಯನ್ನು ‘ಕರ್ನಾಟಕ ದ್ವಿದಳಧಾನ್ಯ ಅಭಿವೃದ್ಧಿ ಮಹಾಮಂಡಳಿ’ಯನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಸ್ಥಾಪನೆಯಾಗಿ 16 ವರ್ಷ ಕಳೆದರೂ ತೊಗರಿ ಮಂಡಳಿಗೆ ಸ್ವಂತ ‘ನೆಲೆ’ಯೇ ಇಲ್ಲ.

ಇಲ್ಲಿಯ ಎಪಿಎಂಸಿಯ ಬಾಡಿಗೆ ಗೋದಾಮಿನಲ್ಲಿ ಮಂಡಳಿಯ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಪ್ರತ್ಯೇಕ ಸಿಬ್ಬಂದಿ ನೇಮಕವಾಗಿಲ್ಲ. ಆದ್ದರಿಂದ ಎರವಲು ಸೇವೆಯ ಸಿಬ್ಬಂದಿ ಇದ್ದಾರೆ. ಕೆಲಸವೇ ಇಲ್ಲದ ಕಾರಣ ವ್ಯವಸ್ಥಾಪಕ ನಿರ್ದೇಶಕರು ಹೆಚ್ಚು ದಿನ ಇಲ್ಲಿ ಕಾರ್ಯನಿರ್ವಹಿಸುವುದಿಲ್ಲ.

ಇದು ಸ್ಥಾಪನೆಯಾಗಿದ್ದು 2002ರಲ್ಲಿ. ಕಂಪನಿ ಕಾಯ್ದೆ ಅನ್ವಯ ಇದನ್ನು ಸ್ಥಾಪಿಸಿದ ರಾಜ್ಯ ಸರ್ಕಾರ ₹5 ಕೋಟಿ ಷೇರು ಬಂಡವಾಳ ನೀಡಿತ್ತು.ರೈತರಿಂದ ಷೇರು ಸಂಗ್ರಹಿಸುವ ಕೆಲಸವಾಗಲಿಲ್ಲ. ಬದಲಿಗೆ ಸರ್ಕಾರ ನೀಡಿರುವ ಷೇರು ಬಂಡವಾಳವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದು, ಅದರಿಂದ ಬರುವ ಬಡ್ಡಿಯಲ್ಲಿಯೇ ಸಿಬ್ಬಂದಿ ವೇತನ, ಕಚೇರಿ ಬಾಡಿಗೆಯನ್ನು ಪಾವತಿಸಲಾಗುತ್ತಿದೆ.

ತೊಗರಿ ಖರೀದಿ ಬಿಟ್ಟರೆ ಬೇರೆ ಯೋಜನೆಗಳು ಮಂಡಳಿಯಲ್ಲಿ ಇಲ್ಲ. ದರ ಕುಸಿದಾಗ ಮಾತ್ರ ಮಂಡಳಿಗೆ ಕೆಲಸ. ಸರ್ಕಾರ ಬೆಂಬಲ ಬೆಲೆಯಡಿ ಖರೀದಿ ಆರಂಭಿಸಿದರೆ ಈ ಮಂಡಳಿಗೂ ಖರೀದಿಸುವ ಹೊಣೆ ವಹಿಸುತ್ತದೆ. ಅದರಿಂದ ದೊರೆಯುವ ಕಮಿಷನ್‌ ಮಾತ್ರ ಮಂಡಳಿಯ ಆದಾಯದ ಮೂಲ.

ಪ್ರಸ್ತಾವಗಳಿಗೇ ಸೀಮಿತ: ಕಲಬುರ್ಗಿ ಹೊರವಲಯದ ಕೋಟನೂರ (ಡಿ)ಯಲ್ಲಿರುವ ಕೃಷಿ ಇಲಾಖೆಯ ಬೀಜೋತ್ಪಾದನಾ ಕೇಂದ್ರದಲ್ಲಿ ಆರು ಎಕರೆ ಜಮೀನನ್ನು ಸರ್ಕಾರ ಮಂಡಳಿಗೆ ನೀಡಿದೆ. ಇಲ್ಲಿ ಮಂಡಳಿಯ ಆಡಳಿತ ಮತ್ತುತರಬೇತಿ ಭವನ, ಸಂಶೋಧನಾ ಘಟಕ, ಗೋದಾಮು ನಿರ್ಮಾಣಕ್ಕೆ ₹11 ಕೋಟಿ ಮೊತ್ತದ ಪ್ರಸ್ತಾವ ತಯಾರಿಸಿ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಗೆ ಸಲ್ಲಿಸಲಾಗಿತ್ತು.

‘ನಿಮ್ಮ ಆಡಳಿತ ಭವನವನ್ನು ನೀವೇ ನಿರ್ಮಿಸಿಕೊಳ್ಳಿ. ಅಭಿವೃದ್ಧಿ ಚಟುವಟಿಕೆಗೆ ಮಾತ್ರ ಅನುದಾನ ಕೇಳಿ’ ಎಂದು ಈ ಪ್ರಸ್ತಾವವನ್ನು ಎಚ್‌ಕೆಆರ್‌ಡಿಬಿ ತಿರಸ್ಕರಿಸಿತ್ತು. ಸಂಶೋಧನಾ ಕೇಂದ್ರ, ಬೀಜೋತ್ಪಾದನೆಯ ಫಾರ್ಮ್‌ ಮತ್ತಿತರ ಅಭಿವೃದ್ಧಿ ಚಟುವಟಿಕೆಗಾಗಿ ₹7.21 ಕೋಟಿ ಅನುದಾನ ನೀಡುವಂತೆ ತೊಗರಿ ಮಂಡಳಿ ಪರಿಷ್ಕೃತ ಪ್ರಸ್ತಾವ ಸಲ್ಲಿಸಿದೆ. ‘ಇದರಲ್ಲಿ ಮೂರನೇ ಒಂದು ಭಾಗದಷ್ಟು ಅನುದಾನವನ್ನು ನೀವು ಭರಿಸಿದರೆ ಉಳಿದ ಅನುದಾನವನ್ನು ನಾವು ಕೊಡುತ್ತೇವೆ’ ಎಂದು ಎಚ್‌ಕೆಆರ್‌ಡಿಬಿ ಕಾರ್ಯದರ್ಶಿ ಅವರು ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಇನ್ನಷ್ಟೇ ನಿರ್ಧಾರವಾಗಬೇಕಿದೆ.

‘ಮಂಡಳಿಯ ಹಣದಲ್ಲಿಯೇ ಆಡಳಿತ ಕಟ್ಟಡ ನಿರ್ಮಿಸುವ ನಿರ್ಧಾರವನ್ನು ಮಂಡಳಿಯ ಸಭೆಯಲ್ಲಿ ಕೈಗೊಳ್ಳಲಾಗಿತ್ತು’ ಎನ್ನುತ್ತಾರೆ ತೊಗರಿ ಮಂಡಳಿಯ ಮಾಜಿ ಅಧ್ಯಕ್ಷ ಭಾಗನಗೌಡ ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT