ಸೋಮವಾರ, ಡಿಸೆಂಬರ್ 9, 2019
17 °C
ಲೆಕ್ಕಪತ್ರಗಳಲ್ಲಿ ಅಕ್ರಮ; ಅನಾಮಧೇಯರ ಆರೋಪ

ಮೇಲ್ನೋಟಕ್ಕೆ ಸಾಕ್ಷ್ಯಾಧಾರಗಳಿಲ್ಲ; ಇನ್ಫಿ

Published:
Updated:
Prajavani

ನವದೆಹಲಿ  : ಕಂಪನಿಯ ಉನ್ನತ ಅಧಿಕಾರಿಗಳು ಲೆಕ್ಕಪತ್ರಗಳಲ್ಲಿ ಅಕ್ರಮ ಎಸಗಿರುವ ಬಗ್ಗೆ ಕೇಳಿ ಬಂದಿರುವ ದೂರುಗಳನ್ನು ದೃಢೀಕರಿಸುವ ಸಾಕ್ಷ್ಯಾಧಾರಗಳು ಇದುವರೆಗೂ ತನ್ನ ಕೈಸೇರಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಇನ್ಫೊಸಿಸ್‌ ತಿಳಿಸಿದೆ.

ಅಕ್ರಮಗಳನ್ನು ಬಯಲಿಗೆ ಎಳೆದಿರುವ ಅನಾಮಧೇಯರು ಮಾಡಿರುವ ಆರೋಪಗಳನ್ನು ದೃಢಪಡಿಸುವ ಯಾವುದೇ ಬಲವಾದ ಸಾಕ್ಷ್ಯಾಧಾರಗಳು ತನಗೆ ಸಲ್ಲಿಕೆಯಾಗಿಲ್ಲ ಎಂದು ಕಂಪನಿಯು ರಾಷ್ಟ್ರೀಯ ಷೇರುಪೇಟೆಗೆ (ಎನ್‌ಎಸ್‌ಇ) ಸೋಮವಾರ ಮಾಹಿತಿ ನೀಡಿದೆ.

ಹೆಚ್ಚು ವರಮಾನ ಮತ್ತು ಲಾಭ ತೋರಿಸಲು ಉನ್ನತ ಅಧಿಕಾರಿಗಳು ನ್ಯಾಯಬಾಹಿರ ವಿಧಾನ ಅನುಸರಿಸಿದ್ದಾರೆ ಎಂದು ಅನಾಮಧೇಯರು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ‘ಎನ್‌ಎಸ್‌ಇ’ಯು ಅಕ್ಟೋಬರ್‌ 24ರಂದು ಕಂಪನಿಯಿಂದ ಸ್ಪಷ್ಟನೆ ಬಯಸಿತ್ತು.

ದೂರುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಕಂಪನಿಯ ಲೆಕ್ಕಪತ್ರ ಸಮಿತಿಯು ಶಾರ್ದುಲ್‌ ಅಮರ್‌ಚಂದ್‌ ಮಂಗಲದಾಸ್‌ ಆ್ಯಂಡ್‌ ಕಂಪನಿಯ ಸೇವೆ ಪಡೆದುಕೊಂಡಿದೆ. ಜತೆಗೆ, ಸ್ವತಂತ್ರ ಆಂತರಿಕ ಲೆಕ್ಕಪತ್ರ ತಪಾಸಣಾ ಸಂಸ್ಥೆಯಾಗಿರುವ ಅರ್ನಸ್ಟ್‌ ಆ್ಯಂಡ್‌ ಯಂಗ್‌ ಜತೆ ಸಮಾಲೋಚನೆಗೂ ಚಾಲನೆ ನೀಡಲಾಗಿರುವುದನ್ನು ‘ಎನ್‌ಎಸ್‌ಇ’ ಗಮನಕ್ಕೆ ತಂದಿದೆ.

ಬಲವಾದ ಸಾಕ್ಷ್ಯಾಧಾರಗಳ ಅಲಭ್ಯತೆ, ಕೇಳಿ ಬಂದಿರುವ ಆರೋಪಗಳು ಇನ್ನೂ ವಿಚಾರಣೆ ಹಂತದಲ್ಲಿ ಇರುವಾಗ ಅನಾಮಧೇಯರ ದೂರುಗಳ ಖಚಿತತೆ, ವಿಶ್ವಾಸಾರ್ಹತೆ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದೂ ಇನ್ಫೊಸಿಸ್‌ ತಿಳಿಸಿದೆ.

ಷೇರು ಬೆಲೆ ಶೇ 3ರಷ್ಟು ಚೇತರಿಕೆ
ಷೇರುಪೇಟೆಯ ಸೋಮವಾರದ ವಹಿವಾಟಿನಲ್ಲಿ ಕಂಪನಿಯ ಷೇರು ಬೆಲೆಯು ಗರಿಷ್ಠ ಚೇತರಿಕೆ ದಾಖಲಿಸಿದೆ. ಪ್ರತಿ ಷೇರಿನ ಬೆಲೆಯು ‘ಎನ್‌ಎಸ್‌ಇ’ಯಲ್ಲಿ ಶೇ 3.22ರಷ್ಟು ಹೆಚ್ಚಳಗೊಂಡು ₹ 710.10ರಂತೆ ಮತ್ತು ‘ಬಿಎಸ್‌ಇ’ಯಲ್ಲಿ ಶೇ 3.05ರಷ್ಟು ಏರಿಕೆ ಕಂಡು ₹ 709ರಂತೆ ಮಾರಾಟವಾಗಿದೆ. ವಹಿವಾಟಿನ ಒಂದು ಹಂತದಲ್ಲಿ ಶೇ 6.46ರಷ್ಟು ಏರಿಕೆಯಾಗಿ ₹ 732.50ಕ್ಕೆ ತಲುಪಿತ್ತು.

ಪ್ರತಿಕ್ರಿಯಿಸಿ (+)