ಶನಿವಾರ, ಜೂಲೈ 11, 2020
22 °C
ಸ್ಟೇಟ್‌ಬ್ಯಾಂಕ್‌ ಆಫ್‌ ಇಂಡಿಯಾ ಆರ್ಥಿಕ ತಜ್ಞರ ಪ್ರತಿಪಾದನೆ

ಷೇರುಪೇಟೆ ಚೇತರಿಕೆಗೂ ಆರ್ಥಿಕ ಅಭಿವೃದ್ಧಿಗೂ ಸಂಬಂಧ ಇಲ್ಲ: ಆರ್ಥಿಕ ತಜ್ಞರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶಿ ಷೇರುಪೇಟೆಗಳಲ್ಲಿನ ಚೇತರಿಕೆಯು ತರ್ಕರಹಿತ ಸಮೃದ್ಧಿಯಾಗಿದ್ದು, ಅದಕ್ಕೂ ಆರ್ಥಿಕ ಪುನಶ್ಚೇತನಕ್ಕೂ ಸಂಬಂಧ ಇಲ್ಲ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಆರ್ಥಿಕತಜ್ಞರು ವಿಶ್ಲೇಷಿಸಿದ್ದಾರೆ.

ಕೋವಿಡ್‌ನಿಂದ ತೀವ್ರವಾಗಿ ಬಾಧಿತಗೊಂಡಿರುವ ಆರ್ಥಿಕ ವಲಯಗಳ ಪುನಶ್ಚೇತನಕ್ಕೆ ಬೆಂಬಲ ನೀಡಲು ಸರ್ಕಾರವು ಎರಡನೇ ಸುತ್ತಿನ ಹಣಕಾಸು ಕೊಡುಗೆ ಪ್ರಕಟಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಸಾಲ ಮರುಪಾವತಿಯನ್ನು 6 ತಿಂಗಳ ಕಾಲ ಮುಂದೂಡಿರುವುದು ಆಗಸ್ಟ್‌ನಲ್ಲಿ ಕೊನೆಗೊಳ್ಳುತ್ತಿದ್ದಂತೆ ಸಪ್ಟೆಂಬರ್‌ ನಂತರ ಬ್ಯಾಂಕ್‌ಗಳ ವಸೂಲಾಗದ ಸಾಲವು (ಎನ್‌ಪಿಎ) ಹೆಚ್ಚಲಿದೆ ಎಂದೂ  ಎಚ್ಚರಿಸಿದ್ದಾರೆ.

ಕೋವಿಡ್‌ ಪಿಡುಗಿನ ಆರಂಭಿಕ ದಿನಗಳಲ್ಲಿ ಷೇರುಪೇಟೆಯ ಮೌಲ್ಯವು ಗಮನಾರ್ಹ ಕುಸಿತ ಕಂಡಿತ್ತು. ಪೇಟೆಯು ಇತ್ತೀಚಿನ ವಾರಗಳಲ್ಲಿ ನಷ್ಟದ ಕೆಲ ಭಾಗವನ್ನು ಭರ್ತಿ ಮಾಡಿಕೊಂಡಿದೆ. ದೇಶಿ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ತೀವ್ರ ಕುಸಿತ ಕಾಣಲಿದೆ ಎನ್ನುವ ಕೂಗು ಕೇಳಿ ಬರುತ್ತಿದೆ.  2020–21ನೇ ಹಣಕಾಸು ವರ್ಷದಲ್ಲಿ ಶೇ 5ರಷ್ಟು ನಕಾರಾತ್ಮಕ ಬೆಳವಣಿಗೆ ಕಾಣಲಿದೆ ಎಂದು ಇನ್ನೂ ಕೆಲ ಪರಿಣತರು ಅಂದಾಜಿಸಿದ್ದಾರೆ. ಇಂತಹ ನಿರಾಶಾದಾಯಕ ಪರಿಸ್ಥಿತಿಯಲ್ಲಿ ಷೇರುಪೇಟೆ ವಹಿವಾಟು ಚೇತರಿಕೆ ಕಾಣುತ್ತಿರುವುದು ತರ್ಕರಹಿತ ಸಮೃದ್ಧಿಯ ಲಕ್ಷಣವಾಗಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

‘ಷೇರುಪೇಟೆಯಲ್ಲಿನ ಖರೀದಿ ಉತ್ಸಾಹ ಮತ್ತು ಆರ್ಥಿಕ ಚೇತರಿಕೆ ಮಧ್ಯೆ ದುರ್ಬಲ ಸಂಪರ್ಕ ಕೊಂಡಿ ಇದೆ. ಷೇರುಪೇಟೆಯಲ್ಲಿನ ಉತ್ಸಾಹವು ಸದ್ಯದ ಸಂದರ್ಭದಲ್ಲಿ ಸದೃಢ ಆರ್ಥಿಕತೆಯ ಲಕ್ಷಣವಲ್ಲ’ ಎಂದು ಅವರು ಹೇಳಿದ್ದಾರೆ.

ಒಟ್ಟಾರೆ ‘ಜಿಡಿಪಿ’ ಬೆಳವಣಿಗೆಯಲ್ಲಿ ಕೃಷಿ ವಲಯವನ್ನು ಅತಿಯಾಗಿ ನೆಚ್ಚಿಕೊಳ್ಳಬಾರದು. ಸಂಕಷ್ಟಕ್ಕೆ ಗುರಿಯಾಗಿರುವ ವಲಯಗಳಿಗೆ ಎರಡನೇ ಸುತ್ತಿನ ಹಣಕಾಸು ಕೊಡುಗೆ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಆರ್ಥಿಕ ತಜ್ಞರು ಪ್ರತಿಪಾದಿಸಿದ್ದಾರೆ.

ಕೇಂದ್ರ ಸರ್ಕಾರವು ಈಗಾಗಲೇ ₹ 20.97 ಲಕ್ಷ ಕೋಟಿ ಮೊತ್ತದ ಕೊಡುಗೆ ಪ್ರಕಟಿಸಿದೆ. ಆದರೆ, ವಾಸ್ತವದಲ್ಲಿ ಕೊಡುಗೆಯ ಶೇ 10ರಷ್ಟನ್ನು ಮಾತ್ರ ಸರ್ಕಾರ ವೆಚ್ಚ ಮಾಡಲಿದೆ. 

ಸದ್ಯಕ್ಕೆ ಬ್ಯಾಂಕ್‌ ಠೇವಣಿಗಳ ಮೊತ್ತವು, ಬ್ಯಾಂಕ್‌ಗಳು ನೀಡಿರುವ ಸಾಲಕ್ಕಿಂತ ಹೆಚ್ಚಿದೆ. ಸಾಮಾಜಿಕ ಸುರಕ್ಷತೆಯ ಕೊರತೆಯ ಕಾರಣಕ್ಕೆ ಠೇವಣಿಗಳ ಮೇಲಿನ ಬಡ್ಡಿ ಆದಾಯ ನೆಚ್ಚಿಕೊಂಡವರ ಸಂಖ್ಯೆಯು ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದೆ.

ಲಾಕ್‌ಡೌನ್‌ನಿಂದಾಗಿ ಗ್ರಾಹಕರ ವರ್ತನೆಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಪ್ರತಿ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ನ ವಹಿವಾಟಿನ ಪ್ರಮಾಣ ತಗ್ಗಿದೆ. ಗ್ರಾಹಕರ ಖರೀದಿ ಪ್ರವೃತ್ತಿಯು ವಿಲಾಸಿ ಸರಕುಗಳಿಂದ ದಿನನಿತ್ಯದ ಅಗತ್ಯಗಳತ್ತ ಕೇಂದ್ರೀಕೃತಗೊಂಡಿದೆ. ಗ್ರಾಹಕರು ಮಾಡುವ ವೆಚ್ಚದಲ್ಲಿ ಈಗ ಶಿಸ್ತು ಕಂಡು ಬಂದಿದೆ. ಅನೇಕ ಕುಟುಂಬಗಳು ಚಿನ್ನ ಅಡಮಾನ ಇರಿಸಿ ಸಾಲ ಪಡೆಯುತ್ತಿವೆ.  ಜಾಮೀನು ಆಧರಿಸಿದ ಬ್ಯಾಂಕ್‌ ಸಾಲದ ಪ್ರಮಾಣ ಏರಿಕೆಯಾಗಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

* ಷೇರುಪೇಟೆ ಚೇತರಿಕೆ ಕಾಣುತ್ತಿರುವುದು ತರ್ಕರಹಿತ ಸಮೃದ್ಧಿಯ ಲಕ್ಷಣ

* ‘ಜಿಡಿಪಿ’ ಪ್ರಗತಿಗೆ ಕೃಷಿಯ ಹೆಚ್ಚಿನ ಅವಲಂಬನೆ ಸರಿಯಲ್ಲ

* ಲಾಕ್‌ಡೌನ್‌ನಿಂದಾಗಿ ಗ್ರಾಹಕರ ವೆಚ್ಚ ಪ್ರವೃತ್ತಿಯಲ್ಲಿ ಶಿಸ್ತು

ಅಂಕಿ ಅಂಶ

₹ 12 ಸಾವಿರದಿಂದ ₹ 3,600

ಪ್ರತಿ ಕ್ರೆಡಿಟ್‌ ವಹಿವಾಟು ಮೊತ್ತದಲ್ಲಿನ ಇಳಿಕೆ

₹ 1,000 ದಿಂದ ₹ 350

ಪ್ರತಿ ಡೆಬಿಟ್‌ ಕಾರ್ಡ್‌ ವಹಿವಾಟು ಇಳಿಕೆ ಪ್ರಮಾಣ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು