ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ತೈಲ ಬೆಲೆ ಕುಸಿತ: ಷೇರುಪೇಟೆ ತಲ್ಲಣ

ಅಮೆರಿಕದಲ್ಲಿ ಶೂನ್ಯ ಡಾಲರ್‌ಗೆ ಇಳಿದ ಕಚ್ಚಾ ತೈಲ ಮಾರಾಟ ದರ l ಕರೆನ್ಸಿ ಮೌಲ್ಯ ಏರುಪೇರು
Last Updated 21 ಏಪ್ರಿಲ್ 2020, 20:15 IST
ಅಕ್ಷರ ಗಾತ್ರ

ಲಂಡನ್‌ / ನವದೆಹಲಿ: ಅಮೆರಿಕದಲ್ಲಿ ಕಚ್ಚಾ ತೈಲದ ಬೆಲೆಯು ಪ್ರಪಾತಕ್ಕೆ ಕುಸಿದ ಕಾರಣ ಜಾಗತಿಕ ತೈಲ, ಕರೆನ್ಸಿ ಮತ್ತು ಷೇರುಮಾರುಕಟ್ಟೆಗಳಲ್ಲಿ ಮಂಗಳವಾರ ಭಾರಿ ತಲ್ಲಣ ಕಂಡುಬಂದಿತು.

ಭಾರತ ಸೇರಿದಂತೆ ಏಷ್ಯಾ ಮತ್ತು ಯುರೋಪ್‌ನ ಷೇರುಪೇಟೆಗಳಲ್ಲಿ ಹೂಡಿಕೆದಾರರು ದಿಗಿಲುಗೊಂಡು ಮಾರಾಟಕ್ಕೆ ಮುಗಿ ಬಿದ್ದರು. ಇದರಿಂದಾಗಿ ಜರ್ಮನಿ, ಫ್ರಾನ್ಸ್‌ ಮತ್ತು ನ್ಯೂಯಾರ್ಕ್‌ ಸೇರಿದಂತೆ ವಿಶ್ವದ ಪ್ರಮುಖ ಷೇರುಪೇಟೆಗಳ ಸೂಚ್ಯಂಕಗಳು ಗರಿಷ್ಠ ಕುಸಿತ ಕಂಡವು. ಅಮೆರಿಕದ ಡಾಲರ್‌ ಎದುರು ಭಾರತದ ರೂಪಾಯಿ, ರಷ್ಯಾದ ರೂಬಲ್‌, ದಕ್ಷಿಣ ಆಫ್ರಿಕಾದ ರ್‍ಯಾಂಡ್‌ ಕರೆನ್ಸಿಗಳ ವಿನಿಮಯ ದರ ಕುಸಿತ ಕಂಡಿತು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರಲ್‌ಗೆ ಶೂನ್ಯ ಡಾಲರ್‌ಗೆ ಕುಸಿದ ಅಪರೂಪದ ವಿದ್ಯಮಾನವು ಅಮೆರಿಕದಲ್ಲಿ ಘಟಿಸಿದ್ದೇ ಇದಕ್ಕೆಲ್ಲ ಕಾರಣ.

ಅಮೆರಿಕದ ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೇಟ್‌ (ಡಬ್ಲ್ಯುಟಿಐ) ಕಚ್ಚಾ ತೈಲ ಉತ್ಪಾದಕರೇ ಖರೀದಿದಾರರಿಗೆ ಪ್ರತಿ ಬ್ಯಾರಲ್‌ಗೆ 40.32 ಡಾಲರ್‌ ನೀಡಲು ಮುಂದಾದ ಅಪರೂಪದ ವಿದ್ಯಮಾನ ಘಟಿಸಿತ್ತು.

ಬೇಡಿಕೆ ಕುಸಿತ ಮತ್ತು ದಾಸ್ತಾನಿಗೆ ಅವಕಾಶ ಇಲ್ಲದ ಕಾರಣಕ್ಕೆ ಖರೀದಿಗೆ ಹಿಂದೇಟು ಹಾಕುವವರಿಗೆ ತೈಲ ಮಾರಾಟಗಾರರೇ ಹಣ ಪಾವತಿಸಲು ಮುಂದಾಗಿದ್ದರು. ಉತ್ಪಾದಕರು ದಾಸ್ತಾನು ವೆಚ್ಚ ಭರಿಸುವುದನ್ನು ತಪ್ಪಿಸಿಕೊಳ್ಳಲು ಈ ಕ್ರಮ ಕೈಗೊಂಡಿದ್ದರು. ಈ ಕಾರಣಕ್ಕೆ ಮೇ ತಿಂಗಳ ವಾಯಿದಾ ವಹಿವಾಟಿನ ಗುತ್ತಿಗೆ ದರವು ಸೋಮವಾರ ಶೂನ್ಯಕ್ಕಿಂತ ಕೆಳಗೆ ಕುಸಿದಿತ್ತು. ಈ ವಿದ್ಯಮಾನ ತಾತ್ಕಾಲಿಕವಾಗಿತ್ತು. ಮಂಗಳವಾರದ ವಹಿವಾಟಿನಲ್ಲಿ 1.10 ಡಾಲರ್‌ಗೆ ಚೇತರಿಕೆ ಕಂಡಿತ್ತು.

ಸೋಮವಾರ ತೈಲ ಮಾರುಕಟ್ಟೆಯಲ್ಲಿ ಕಂಡು ಬಂದಿದ್ದ ಆತಂಕವನ್ನು ಮೇ ವಾಯಿದಾ ವಹಿವಾಟು ಉಲ್ಬಣಗೊಳಿಸಿತ್ತು. ವಾಯಿದಾ ವಹಿವಾಟಿನ ಗುತ್ತಿಗೆ ಕೊನೆಗೊಂಡ ಕಾರಣಕ್ಕೆ ‘ಡಬ್ಲ್ಯುಟಿಐ’ ಬೆಲೆ ಪ್ರಪಾತಕ್ಕೆ ಕುಸಿದಿತ್ತು. ಜೂನ್‌ ವಾಯಿದಾ ವಹಿವಾಟಿನ ಗುತ್ತಿಗೆಯ ಬೆಲೆಯು ಆನಂತರ ಪ್ರತಿ ಬ್ಯಾರಲ್‌ಗೆ 20 ಡಾಲರ್‌ಗೆ ನಿಗದಿಯಾಗಿದೆ.

ಬ್ರೆಂಟ್‌ ತೈಲ: ಒಂದೆಡೆ ಅಮೆರಿಕದ ಕಚ್ಚಾ ತೈಲದ ಬೆಲೆ ಪಾತಾಳಕ್ಕೆ ಕುಸಿದಿದ್ದರೆ, ಅಂತರರಾಷ್ಟ್ರೀಯ ಮಾನದಂಡವಾಗಿರುವ ಬ್ರೆಂಟ್‌ ತೈಲದ ಬೆಲೆಯೂ ಕಡಿಮೆಯಾಗಿ ಪ್ರತಿ ಬ್ಯಾರಲ್‌ಗೆ 19.85 ಡಾಲರ್‌ಗೆ ಕುಸಿದಿದೆ.

ಅಸಮತೋಲನ: ಪೂರೈಕೆಯಲ್ಲಿನ ಹೆಚ್ಚಳ ಮತ್ತು ಬೇಡಿಕೆ ಕುಸಿತದಿಂದ ಮಾರುಕಟ್ಟೆಯಲ್ಲಿ ಅಸಮತೋಲನ ಉಂಟಾಗಿದೆ. ವಿಶ್ವದ ಶೇ 90ರಷ್ಟು ದೇಶಗಳಲ್ಲಿ ದಿಗ್ಬಂಧನ ಜಾರಿಯಲ್ಲಿ ಇದೆ. ಹೀಗಾಗಿ ತೈಲೋತ್ಪನ್ನಗಳಿಗೆ ಬೇಡಿಕೆಯೇ ಇಲ್ಲದಂತಾಗಿದೆ. ಸಂಗ್ರಹಾಗಾರಗಳೂ ಭರ್ತಿಯಾಗಿವೆ. ಇದೇ ಕಾರಣಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯು ನಿರಂತರವಾಗಿ ಕುಸಿತ ಕಾಣುತ್ತಿದೆ. ದೀರ್ಘಾವಧಿಯಲ್ಲಿ ಇದು ತೈಲ ಆರ್ಥಿಕತೆಗೆ ಭಾರಿ ನಷ್ಟ ಉಂಟು ಮಾಡಲಿದೆ.

ಏನಿದು ವಾಯಿದಾ ಗುತ್ತಿಗೆ

ಭವಿಷ್ಯದ ನಿರ್ದಿಷ್ಟ ದಿನ ಪೂರ್ವನಿರ್ಧರಿತ ಬೆಲೆಗೆ ಸರಕು ಅಥವಾ ಉತ್ಪನ್ನ ಖರೀದಿಸಲು ನಿರ್ದಿಷ್ಟ ಸರಕಿನ ಪೂರೈಕೆದಾರ ಮತ್ತು ಖರೀದಿದಾರರು ಒಪ್ಪಂದ ಮಾಡಿಕೊಂಡಿರುವುದಕ್ಕೆ ವಾಯಿದಾ ಗುತ್ತಿಗೆ ಅಥವಾ ವಹಿವಾಟು ಎನ್ನುತ್ತಾರೆ. ವಾಯಿದಾ ಗುತ್ತಿಗೆಯು, ವಾಯಿದಾ ವಿನಿಮಯ ಕೇಂದ್ರಗಳಲ್ಲಿನ ವಹಿವಾಟಿನ ಗುಣಮಟ್ಟ ಮತ್ತು ಪ್ರಮಾಣದ ಮಾನದಂಡವಾಗಿರುತ್ತದೆ.

ಬೇಡಿಕೆ ಭಾರಿ ಕುಸಿತ

ವಿಶ್ವದಾದ್ಯಂತ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿರುವಾಗ ತೈಲಕ್ಕೆ ಬೇಡಿಕೆಯೇ ಇಲ್ಲದಂತಾಗಿದೆ. ಉತ್ಪಾದನೆ ಕಡಿತಗೊಳಿಸಲು ‘ಒಪೆಕ್‌’ ನಿರ್ಧರಿಸಿದ್ದರೂ ಬೇಡಿಕೆಗಿಂತ ಪೂರೈಕೆ ಪ್ರಮಾಣ ಹೆಚ್ಚಿಗೇ ಇರಲಿದೆ. ಹೆಚ್ಚುವರಿ ತೈಲ ದಾಸ್ತಾನು ಮಾಡಲು ವಿಶ್ವದಾದ್ಯಂತ ಸಂಗ್ರಹಾಗಾರಗಳು ದೊರೆಯುತ್ತಿಲ್ಲ

ಭಾರತದಲ್ಲಿನ ಭೂಗತ ಸಂಗ್ರಹಾಗಾರಗಳಲ್ಲಿ 3.70 ಕೋಟಿ ಬ್ಯಾರಲ್‌ ತೈಲ ಸಂಗ್ರಹಿಸಿ ಇಡಬಹುದು. ಇದು ದೇಶದ 16 ದಿನಗಳ ಬೇಡಿಕೆ ಪೂರೈಸಲಿದೆ.

ಭಾರತದ ಮೇಲೆ ಪರಿಣಾಮ

ಈ ವಿದ್ಯಮಾನವು ಭಾರತದಲ್ಲಿನ ತೈಲ ಬೆಲೆ ಮೇಲೆ ತಕ್ಷಣಕ್ಕೆ ಯಾವುದೇ ಪರಿಣಾಮ ಬೀರಿಲ್ಲ. ಭಾರತ ಆಮದು ಮಾಡಿಕೊಳ್ಳುವ ಜಾಗತಿಕ ಮಾನದಂಡದ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರಲ್‌ಗೆ 19.85 ಡಾಲರ್‌ಗೆ ಮಾರಾಟವಾಗುತ್ತಿದೆ. ಹೀಗಾಗಿ ಇಂಧನಗಳ ಚಿಲ್ಲರೆ ಮಾರಾಟ ದರ ಸದ್ಯಕ್ಕೆ ಕಡಿಮೆಯಾಗುವುದಿಲ್ಲ.

ಭಾರತವು ತನ್ನ ಅಗತ್ಯಗಳಿಗಾಗಿ ಒಮಾನ್‌, ದುಬೈ ಮತ್ತು ಬ್ರೆಂಟ್‌ ಕಚ್ಚಾ ತೈಲವನ್ನು ನೆಚ್ಚಿಕೊಂಡಿದೆ. ಬ್ರೆಂಟ್‌ ತೈಲದ ಬೆಲೆಯನ್ನು ಸೌದಿ ಅರೇಬಿಯಾ ನೇತೃತ್ವದಲ್ಲಿನ ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆಯು (ಒಪೆಕ್‌) ನಿರ್ಧರಿಸುತ್ತದೆ.

ಷೇರುಪೇಟೆಯಲ್ಲಿ ಕರಡಿ ಕುಣಿತ

ಕೊರೊನಾ ಸೃಷ್ಟಿಸಿರುವ ಆತಂಕದ ಜತೆಗೆ ಕಚ್ಚಾ ತೈಲ ದರ ಐತಿಹಾಸಿಕ ಮಟ್ಟಕ್ಕೆ ಕುಸಿತ ಕಂಡಿರುವುದು ಷೇರುಪೇಟೆಗಳಲ್ಲಿ ಕರಡಿ ಕುಣಿತಕ್ಕೆ ಕಾರಣವಾಯಿತು. ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕವು 1,011 ಅಂಶ ಕುಸಿತ ಕಂಡು 30,637 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ಕರಗಿದ ₹3.30 ಲಕ್ಷ ಕೋಟಿ ಸಂಪತ್ತು:ದಿನದ ವಹಿವಾಟಿನಲ್ಲಿ, ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 3.30 ಲಕ್ಷ ಕೋಟಿ ಕರಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹ 120 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ಪ್ರತಿಕ್ರಿಯೆ

ಅಮೆರಿಕದ ತೈಲ ಮತ್ತು ಅನಿಲ ಉದ್ದಿಮೆಯು ಪತನಗೊಳ್ಳಲು ನಾವು ಯಾವತ್ತೂ ಅವಕಾಶ ನೀಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ತೈಲ ಮಾರುಕಟ್ಟೆಯಲ್ಲಿನ ವಿದ್ಯಮಾನವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಅಗತ್ಯಬಿದ್ದರೆ ಹೆಚ್ಚುವರಿ ಕ್ರಮ ಕೈಗೊಳ್ಳಲಾಗುವುದು ಎಂದು ಸೌದಿ ಅರೇಬಿಯಾ ಪ್ರತಿಕ್ರಿಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT