ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚಾ ತೈಲೆ ಬೆಲೆ ಕುಸಿತ, ಸೌದಿ ಅರೇಬಿಯಾ, ರಷ್ಯಾ ಒಪ್ಪಂದ ಅನುಮಾನ

Last Updated 6 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಸಿಂಗಪುರ: ಉತ್ಪಾದನೆ ಕಡಿತಗೊಳಿಸುವ ಕುರಿತ ಮಾತುಕತೆ ವಿಳಂಬವಾಗಿರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸೋಮವಾರ ಗಣನೀಯ ಕುಸಿತ ದಾಖಲಿಸಿತು.

ಕೊರೊನಾ ವೈರಸ್‌ ಬಾಧಿತ ಇಂಧನ ಮಾರುಕಟ್ಟೆಗೆ ಬೆಂಬಲ ನೀಡಲು ಕ್ಷಿಪ್ರ ಕ್ರಮ ಕೈಗೊಳ್ಳುವ ಸಾಧ್ಯತೆ ಕ್ಷೀಣಿಸಿರುವುದರಿಂದ ಬೆಲೆ ಇಳಿಕೆ ಕಂಡಿತು.

ಅಮೆರಿಕದ ವೆಸ್ಟ್ ಟೆಕ್ಸಾಸ್‌ ಇಂಟರ್‌ಮೀಡಿಯೇಟ್‌ ತೈಲ ಬೆಲೆಯು ಏಷ್ಯಾದ ಮಾರುಕಟ್ಟೆಯ ಆರಂಭದ ವಹಿವಾಟಿನಲ್ಲಿ ಶೇ 8ರಷ್ಟು ಕುಸಿತ ಕಂಡಿತು. ಆನಂತರ ಶೇ 5.7ರಷ್ಟು ಕಡಿಮೆಯಾಗಿ ಪ್ರತಿ ಬ್ಯಾರಲ್‌ಗೆ 26.72 ಡಾಲರ್‌ನಂತೆ ಮಾರಾಟವಾಯಿತು. ಅದೇ ರೀತಿ ಬ್ರೆಂಟ್‌ ಕಚ್ಚಾ ತೈಲ ಬೆಲೆ ಶೇ 4.3ರಷ್ಟು ಕಡಿಮೆಯಾಗಿ ಪ್ರತಿ ಬ್ಯಾರಲ್‌ಗೆ 32.64 ಡಾಲರ್‌ನಂತೆ ಮಾರಾಟವಾಯಿತು.

ಕೊರೊನಾ ವೈರಸ್‌ ಪಿಡುಗು, ಸೌದಿ ಅರೇಬಿಯಾ ಹಾಗೂ ರಷ್ಯಾ ನಡುವಣ ಬೆಲೆ ಸಮರದ ಕಾರಣಕ್ಕೆ ಕಚ್ಚಾ ತೈಲ ಬೆಲೆಯು ಇತ್ತೀಚಿನ ವರ್ಷಗಳಲ್ಲಿಯೇ ಕಂಡರಿಯದ ಮಟ್ಟಕ್ಕೆ ಕುಸಿದಿದೆ.

ಬೇಡಿಕೆ ಕುಸಿತ: ಕೊರೊನಾ ವೈರಸ್‌ ಹರಡುವಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಉದ್ದಿಮೆ ವಹಿವಾಟು ಸ್ಥಗಿತ, ಪ್ರವಾಸ ನಿರ್ಬಂಧ ಮತ್ತಿತರ ಕ್ರಮಗಳಿಂದಾಗಿ ವಿಶ್ವದಾದ್ಯಂತ ತೈಲ ಬೇಡಿಕೆಯು ಕುಸಿದಿದೆ. ಹೀಗಾಗಿ ಬೆಲೆಯು 18 ವರ್ಷಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ಇಳಿದಿತ್ತು.

ತೈಲ ಉತ್ಪಾದನೆಗೆ ಸಂಬಂಧಿಸಿದಂತೆ ತಮ್ಮ ನಡುವಣ ವಿವಾದ ಬಗೆಹರಿಸಿಕೊಳ್ಳಲು ಸೌದಿ ಅರೇಬಿಯಾ ಮತ್ತು ರಷ್ಯಾ ಮುಂದಾಗಲಿದ್ದು, ಉತ್ಪಾದನೆ ಕಡಿತಗೊಳಿಸಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ ಹೇಳಿಕೆಯಿಂದ ಕಳೆದ ವಾರ ತೈಲ ಬೆಲೆ ಚೇತರಿಕೆ ಕಂಡಿತ್ತು.

ಈ ಬಿಕ್ಕಟ್ಟಿಗೆ ತ್ವರಿತ ಪರಿಹಾರ ಸಿಗುವ ಬಗ್ಗೆ ವಿಶ್ಲೇಷಕರು ಸಂದೇಹಪಟ್ಟಿದ್ದರು. ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ (ಒಪೆಕ್‌) ಮತ್ತು ರಷ್ಯಾ ಮಧ್ಯೆ ನಡೆಯಬೇಕಾಗಿದ್ದ ವಿಡಿಯೊ ಕಾನ್‌ಫೆರೆನ್ಸ್‌ ಸಭೆಯನ್ನು ಸಕಾರಣ ನೀಡದೇ ಮುಂದೂಡಲಾಗಿದೆ. ಇದು ಮಾತುಕತೆ ನಡೆಯಲಿರುವ ಬಗೆಗಿನ ಅನುಮಾನವನ್ನು ಹೆಚ್ಚಿಸಿದೆ.

‘ಉತ್ಪಾದನೆ ಕಡಿತಗೊಳಿಸಲು ಒಪ್ಪಂದ ಏರ್ಪಡುವ ಬಗ್ಗೆ ತೈಲ ವ್ಯಾಪಾರಿಗಳು ಅನುಮಾನ ಹೊಂದಿದ್ದಾರೆ. ಒಂದು ವೇಳೆ ಒಪ್ಪಂದ ಏರ್ಪಟ್ಟರೂ ಅದರಿಂದ ತೈಲ ಪೂರೈಕೆಯ ರಭಸಕ್ಕೆ ಕಡಿವಾಣ ಹಾಕಲು ಸಾಕಾಗುವುದಿಲ್ಲ’ ಎಂದು ಆ್ಯಕ್ಸಿಕಾರ್ಪ್‌ನ ಜಾಗತಿಕ ಮಾರುಕಟ್ಟೆ ತಂತ್ರಜ್ಞ ಸ್ಟೀಫನ್‌ ಇನ್ನೆಸ್‌ ವಿಶ್ಲೇಷಿಸಿದ್ದಾರೆ.

ಬಳಕೆದಾರರಿಗೆ ಲಾಭ ವರ್ಗಾಯಿಸಿ: ಕಾಂಗ್ರೆಸ್‌ ಒತ್ತಾಯ

ತೈಲ ಬೆಲೆ ಕುಸಿತದ ಪ್ರಯೋಜನವನ್ನು ಬಳಕೆದಾರರಿಗೆ ಸೂಕ್ತ ರೀತಿಯಲ್ಲಿ ವರ್ಗಾಯಿಸಬೇಕು ಎಂದು ಕಾಂಗ್ರೆಸ್‌, ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

‘ಅಗ್ಗದ ತೈಲದಿಂದಾಗಿ ಕಳೆದ 6 ವರ್ಷಗಳಲ್ಲಿ ಸರ್ಕಾರ ₹ 20 ಲಕ್ಷ ಕೋಟಿಗಳಷ್ಟು ಭಾರಿ ಮೊತ್ತದ ಲಾಭ ಮಾಡಿಕೊಂಡಿದೆ. ಅದರ ಕೆಲ ಭಾಗವನ್ನು ಸಾರ್ವಜನಿಕರಿಗೆ ವರ್ಗಾಯಿಸುವುದು ಸದ್ಯದ ಅಗತ್ಯವಾಗಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ತೆರಿಗೆ ತಗ್ಗಿಸಬೇಕು ಅಥವಾ ಲಾಭದ ಕೆಲ ಭಾಗವನ್ನು ರೈತರು, ಕಾರ್ಮಿಕರು ಮತ್ತು ಜನ ಸಾಮಾನ್ಯರಿಗೆ ವರ್ಗಾಯಿಸಬೇಕು. ಲಾಭ ಬಾಚಿಕೊಳ್ಳಲು ಇದು ಸೂಕ್ತ ಸಮಯವಲ್ಲ. ಲಾಭ ಹಂಚಿಕೊಳ್ಳುವ, ಜನರ ಬಗ್ಗೆ ಕಾಳಜಿ ತೋರುವ ವಿಶೇಷ ಸಂದರ್ಭ ಇದಾಗಿದೆ’ ಎಂದು ಪಕ್ಷದ ವಕ್ತಾರ ಅಭಿಷೇಕ್‌ ಸಿಂಘ್ವಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT