ಗುರುವಾರ , ಅಕ್ಟೋಬರ್ 24, 2019
21 °C
ಕುಸಿಯುತ್ತಿರುವ ಧಾರಣೆ

ಕೇಂದ್ರದಿಂದ ಈರುಳ್ಳಿ ರಫ್ತು ನಿಷೇಧ: ಈಗ ಅಳುವ ಸರದಿ ರೈತರದ್ದು

Published:
Updated:
Prajavani

ಹುಬ್ಬಳ್ಳಿ: ಈರುಳ್ಳಿ ಬೆಲೆ ಏರಿಕೆಯ ಪರಿಣಾಮ ಇದುವರೆಗೂ ಅಳುವ ಸರದಿ ಗ್ರಾಹಕರದ್ದಾಗಿತ್ತು. ಆದರೆ, ಕೇಂದ್ರ ಸರ್ಕಾರವು ರಫ್ತು ನಿಷೇಧ ಮಾಡಿದ ಬಳಿಕ ಇದೀಗ ಅಳುವ ಸರದಿ ರೈತರದ್ದಾಗಿದೆ.

ರಾಜ್ಯದ ಪ್ರಮುಖ ಈರುಳ್ಳಿ ಮಾರುಕಟ್ಟೆಯಾದ ಹುಬ್ಬಳ್ಳಿ ಎಪಿಎಂಸಿಯಲ್ಲಿ ಸೆಪ್ಟೆಂಬರ್‌ 19ರಂದು ಈರುಳ್ಳಿ ಕ್ವಿಂಟಲ್‌ಗೆ ಗರಿಷ್ಠ ₹ 5,000 ತಲುಪಿತ್ತು. ಸೆಪ್ಟೆಂಬರ್‌ ತಿಂಗಳ ಪೂರ್ತಿ ₹ 4,500ರ ಆಸುಪಾಸು ಇತ್ತು. ಭಾರಿ ಮಳೆ, ಪ್ರವಾಹದ ನಡುವೆಯೂ ಕೈಗೆ ಬಂದಿದ್ದ ಅತ್ಯಲ್ಪ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕ ಪರಿಣಾಮ ರೈತ ಸಮುದಾಯ ಖುಷಿಯಲ್ಲಿ ಇತ್ತು. ಆದರೆ, ಕೇಂದ್ರ ಸರ್ಕಾರವು ಸೆಪ್ಟೆಂಬರ್‌ 29ರಂದು ಈರುಳ್ಳಿ ರಫ್ತು ನಿಷೇಧ ಮಾಡಿದ ಬಳಿಕ ಒಂದೇ ವಾರದಲ್ಲಿ ಕ್ವಿಂಟಲ್‌ ಮೇಲೆ ₹ 1 ಸಾವಿರದಿಂದ ₹ 2 ಸಾವಿರದ ವರೆಗೂ ಕುಸಿತ ಕಂಡಿದ್ದು, ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ರೈತರಿಗೆ ನಷ್ಟ: ‘ಹುಬ್ಬಳ್ಳಿ, ಗದಗ, ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯಗಳ ವ್ಯಾಪ್ತಿಯಲ್ಲಿ ಈ ಬಾರಿ ಮಳೆ ಹೆಚ್ಚಾದ ಕಾರಣ ಈರುಳ್ಳಿ ಗುಣಮಟ್ಟ ಮತ್ತು ಇಳುವರಿ ಕಡಿಮೆಯಾಗಿದೆ. ಈ ಭಾಗದ ಈರುಳ್ಳಿಗೆ (ಎ3 ಗುಣಮಟ್ಟ) ಮಾರುಕಟ್ಟೆಯಲ್ಲಿ ಕೇವಲ ₹ 300ರಿಂದ ₹ 1,000 ಬೆಲೆ ಇದೆ. ಇದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ’ ಎಂದು ಹುಬ್ಬಳ್ಳಿ ಎಪಿಎಂಸಿ ವರ್ತಕ ವೆಂಕಟೇಶ ಹಬೀಬ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾರದ ಹಿಂದೆ ಗುಣಮಟ್ಟದ ಈರುಳ್ಳಿ (ಎ1) ಕ್ವಿಂಟಲ್‌ಗೆ ಗರಿಷ್ಠ ₹ 4,500ಕ್ಕೆ ಖರೀದಿಯಾಗಿತ್ತು. ಆದರೆ, ಈಗ ₹ 3,300ಕ್ಕೆ ಕುಸಿದಿದೆ‘ ಎಂದರು.

ಕೇಂದ್ರದಿಂದ ಅನ್ಯಾಯ: ’ಮಳೆ, ಪ್ರವಾಹದ ನಡುವೆ ಕೈಗೆ ಬಂದಿರುವ ಅತ್ಯಲ್ಪ ಬೆಳೆಗೆ ಉತ್ತಮ ಬೆಲೆ ಸಿಕ್ಕಿದ್ದರೆ ನಮ್ಮ ಸಂಕಷ್ಟ ಪರಿಹಾರವಾಗುತ್ತಿತ್ತು. ಆದರೆ, ಕೇಂದ್ರ ಸರ್ಕಾರವು ಏಕಾಏಕಿ ಈರುಳ್ಳಿ ರಫ್ತು ನಿಷೇಧ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡಿದೆ‘ ಎಂದು ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿಯ ರೈತ ರವಿ ಕಳಸೂರು ಅಸಮಾ
ಧಾನ ವ್ಯಕ್ತಪಡಿಸಿದರು. ’ಈರುಳ್ಳಿ ಕೊಯ್ಲು ಮಾಡಿ ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಆಳು ಕೂಲಿ, ಬಾಡಿಗೆ, ಹಮಾಲಿ ವೆಚ್ಚ ಸೇರಿದಂತೆ ಒಂದು ಚೀಲಕ್ಕೆ ₹ 300 ಖರ್ಚಾಗುತ್ತದೆ. ನಾಲ್ಕು ತಿಂಗಳು ಹೊಲದಲ್ಲಿನ ನಮ್ಮ ಶ್ರಮಕ್ಕೆ ಏನೂ ಉಳಿಯದಂತಾಗಿದೆ‘ ಎಂದು ರಾಮದುರ್ಗ ತಾಲ್ಲೂಕಿನ ಹಲಗತ್ತಿಯ ರೈತ ಗೋವಿಂದರಡ್ಡಿ ನಡಮನಿ ಬೇಸರ ವ್ಯಕ್ತಪಡಿಸಿದರು.

ಕ್ವಿಂಟಲ್‌ಗೆ ಕನಿಷ್ಠ–ಗರಿಷ್ಠ ದರ

ದೊಡ್ಡ ಗಾತ್ರ (ಎ1) ₹ 2500;₹3000

ಮಧ್ಯಮ ಗಾತ್ರ(ಎ2) ₹2000;₹2200

ಚಿಕ್ಕಗಾತ್ರ(ಎ3) ₹ 300;₹1000

* ಈರುಳ್ಳಿ ರಫ್ತು ನಿಷೇಧಕ್ಕೂ ಮೊದಲು ಮಾರುಕಟ್ಟೆಗೆ ಬರುತ್ತಿದ್ದ ರೈತರು ನಗುತ್ತಾ ಹೋಗುತ್ತಿದ್ದರು. ಆದರೆ, ಈಗ ರೈತರಿಗೆ ಈಗ ಅಳುವ ಪರಿಸ್ಥಿತಿ ಬಂದಿದೆ

- ವೆಂಕಟೇಶ ಹಬೀಬ, ಈರುಳ್ಳಿ ವರ್ತಕ, ಎಪಿಎಂಸಿ, ಹುಬ್ಬಳ್ಳಿ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)