ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಕೊರತೆ ಪಾವತಿ ಯೋಜನೆ ವ್ಯಾಪ್ತಿಗೆ ಟೊಮೆಟೊ, ತೊಗರಿ?

ಹೊಸ ಯೋಜನೆಯಿಂದ ಈರುಳ್ಳಿ ಬೆಲೆಯಲ್ಲಿ ಸ್ಥಿರತೆ
Last Updated 25 ಡಿಸೆಂಬರ್ 2018, 19:56 IST
ಅಕ್ಷರ ಗಾತ್ರ

ಬೆಂಗಳೂರು: ಈರುಳ್ಳಿ ಬೆಲೆ ಕುಸಿತ ತಡೆದು ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ಜಾರಿಗೆ ತಂದ ‘ಬೆಲೆ ಕೊರತೆ ಪಾವತಿ ಯೋಜನೆ’ ನಿರೀಕ್ಷಿತ ಫಲ ನೀಡಿದೆ. ಇದರಿಂದ ಉತ್ತೇಜಿತಗೊಂಡ ಸರ್ಕಾರ ಟೊಮೆಟೊ, ಮುಸುಕಿನ ಜೋಳ ಮತ್ತು ತೊಗರಿಗೂ ಅನ್ವಯಗೊಳಿಸುವ ಚಿಂತನೆ ನಡೆಸಿದೆ.

ಹೊಸ ಯೋಜನೆಯಿಂದಾಗಿ ನೂರಾರು ಕೋಟಿ ಖರ್ಚು ಮಾಡಿ ಕೃಷಿ ಉತ್ಪನ್ನ ಖರೀದಿಸಬೇಕು ಮತ್ತು ಕೂಡಿಡಬೇಕು ಎನ್ನುವ ತಲೆ ನೋವುಸರ್ಕಾರಕ್ಕೆ ಇಲ್ಲ. ಉತ್ಪನ್ನ ಹಾಳಾಗುತ್ತದೆ ಎಂಬ ಚಿಂತೆಯೂ ಇಲ್ಲ. ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ರೈತನ ಖಾತೆಗೆ ಪ್ರೋತ್ಸಾಹ ಧನವನ್ನು ನೇರವಾಗಿ ಪಾವತಿಸಲಾಗುತ್ತದೆ.

‘ಮೊದಲ ಬಾರಿಗೆ ಈರುಳ್ಳಿಗೆ ಈ ಯೋಜನೆಯನ್ನು ಅನ್ವಯಗೊಳಿಸಲಾಗಿದೆ. ಇದರ ಪ್ರಯೋಜನ ಪಡೆಯಲು ಹೆಚ್ಚು ಹೆಚ್ಚು ರೈತರು ಬರುತ್ತಿರುವುದರಿಂದ ಯೋಜನೆ ಅವಧಿಯನ್ನು ಜನವರಿ 1ರವರೆಗೆ ವಿಸ್ತರಿಸಲಾಗಿದೆ. ಇದರಿಂದ ಈರುಳ್ಳಿ ಹೆಚ್ಚಾಗಿ ಬೆಳೆಯುವ ಗದಗ, ಬಾಗಲಕೋಟೆ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ರೈತರಿಗೆ ಪ್ರಯೋಜನವಾಗಿದೆ’ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್‌ ಕಮ್ಮರಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದಲ್ಲಿ ಟೊಮೆಟೊ, ಮುಸುಕಿನ ಜೋಳ ಮತ್ತು ತೊಗರಿ ಬೆಳೆಗಾರರು ಆಗಾಗ್ಗೆ ತೊಂದರೆಗೆ ಸಿಲುಕುತ್ತಿರುವ ಕಾರಣ, ಬೆಂಬಲ ಬೆಲೆ ನೀಡಿ ಖರೀದಿಸುವುದಕ್ಕಿಂತ ಈ ಯೋಜನೆಯೇ ಹೆಚ್ಚು ಸೂಕ್ತ. ಕೇಂದ್ರ ಸರ್ಕಾರ ಇದಕ್ಕೆ ನೆರವು ನೀಡುತ್ತದೆ. ರಾಜ್ಯ ಸರ್ಕಾರ ಮನವಿ ಸಲ್ಲಿಸಬೇಕಾಗುತ್ತದೆ’ ಎಂದರು.

ಬೆಲೆ ಸ್ಥಿರತೆ ಕಂಡ ಈರುಳ್ಳಿ: ನೆರೆಯ ಮಹಾರಾಷ್ಟ್ರದಲ್ಲಿ ಈರುಳ್ಳಿ ಪ್ರತಿ ಕಿ.ಜಿಗೆ ₹ 1 ರಿಂದ ₹1.50 ರಂತೆ ಬಿಕರಿಯಾಗುತ್ತಿದೆ. ಆದರೆ, ರಾಜ್ಯದಲ್ಲಿ ರೈತರಿಗೆ ಪ್ರತಿ ಕಿ.ಜಿಗೆ ₹ 7 ಸಿಗುತ್ತಿದೆ. ಅಂದರೆ, ಒಂದು ಕಿ.ಜಿ ಈರುಳ್ಳಿ ಬೆಲೆ ₹ 5 ಇದ್ದರೆ ಸರ್ಕಾರ ಬೆಲೆ ಕೊರತೆ ಪಾವತಿ ಯೋಜನೆಯಡಿ ₹ 2 ವ್ಯತ್ಯಾಸದ ಮೊತ್ತವನ್ನು ರೈತರ ಖಾತೆಗೆ ವರ್ಗಾಯಿಸುತ್ತಿದೆ.

ಬೆಲೆ ಕೊರತೆ ಪಾವತಿ ಯೋಜನೆ ಜಾರಿಗೆ ತರಬೇಕು ಎಂಬ ಕರ್ನಾಟಕ ಕೃಷಿ ಬೆಲೆ ಆಯೋಗದ ಸಲಹೆಯನ್ನು ಒಪ್ಪಿ ರಾಜ್ಯ ಸರ್ಕಾರ ನವೆಂಬರ್‌ನಲ್ಲಿ ಆದೇಶ ಹೊರಡಿಸಿತು. ಈರುಳ್ಳಿಗೆ ಉತ್ಪಾದನಾ ವೆಚ್ಚವನ್ನು ಆಧರಿಸಿ ಪ್ರತಿ ಕ್ವಿಂಟಲ್‌ಗೆ ₹ 700 ಮೂಲ ಬೆಲೆಯಾಗಿ ಪರಿಗಣಿಸಿತು. ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಈರುಳ್ಳಿಗೆ ವ್ಯತ್ಯಾಸದ ಮೊತ್ತ ಪ್ರತಿ ಕ್ವಿಂಟಲ್‌ಗೆ ₹200 ಮಿತಿಗೊಳಿಸಿ ರೈತರ ಖಾತೆಗೆ ಜಮೆ ಮಾಡುತ್ತಿದೆ.

‘ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹550 ರಂತೆ ಮಾರಾಟವಾದರೆ ವ್ಯತ್ಯಾಸದ ಮೊತ್ತ ₹ 150, ಒಂದು ವೇಳೆ ಕ್ವಿಂಟಲ್‌ಗೆ ₹650 ಇದ್ದರೆ, ವ್ಯತ್ಯಾಸದ ಮೊತ್ತವನ್ನು ₹50 ಸರ್ಕಾರ ಪಾವತಿಸುವುದಾಗಿ ಆದೇಶದಲ್ಲಿ ಭರವಸೆ ನೀಡಿತ್ತು. ಇದಕ್ಕಾಗಿ ₹ 50 ಕೋಟಿಯನ್ನು ಸರ್ಕಾರ ನಿಗದಿ ಮಾಡಿತ್ತು’ ಎಂದು ಪ್ರಕಾಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT