ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಪಾವತಿ ಇನ್ನಷ್ಟು ಸುರಕ್ಷಿತ: ಡಿಜಿಟಲ್ ರೂಪಾಯಿ ಕುರಿತು ಪ್ರಧಾನಿ ಮಾತು

Last Updated 2 ಫೆಬ್ರುವರಿ 2022, 20:49 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಬ್ಲಾಕ್‌ಚೈನ್‌ ತಂತ್ರಜ್ಞಾನವನ್ನು ಆಧರಿಸಿದ ಡಿಜಿಟಲ್ ರೂಪಾಯಿಯನ್ನು ಚಲಾವಣೆಗೆ ತರವಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಿದ ಮಾರನೆಯ ದಿನ, ಡಿಜಿಟಲ್ ಕರೆನ್ಸಿಯು ಹೇಗಿರುತ್ತದೆ ಎಂಬ ವಿವರವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದರು. ಈ ಕರೆನ್ಸಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಪೂರ್ಣ ಬೆಂಬಲ ಇರುತ್ತದೆ, ಇದು ಕಾನೂನುಬದ್ಧ ಕರೆನ್ಸಿ ಆಗಿರುತ್ತದೆ.

ಕೇಂದ್ರೀಯ ಬ್ಯಾಂಕ್‌ ಚಲಾವಣೆಗೆ ತರಲಿರುವ ಡಿಜಿಟಲ್ ಕರೆನ್ಸಿಯು ಆನ್‌ಲೈನ್‌ ಪಾವತಿಗಳನ್ನು ಇನ್ನಷ್ಟು ಸುರಕ್ಷಿತ ಆಗಿಸಲಿದೆ. ಮುಂಬರುವ ವರ್ಷಗಳಲ್ಲಿ ದೇಶದ ಡಿಜಿಟಲ್ ಅರ್ಥ ವ್ಯವಸ್ಥೆಗೆ ಇದು ಶಕ್ತಿ ನೀಡಲಿದೆ ಎಂದೂ ಮೋದಿ ಅವರು ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗಿನ ವರ್ಚುವಲ್ ಸಭೆಯಲ್ಲಿ ತಿಳಿಸಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್‌ನ ರೂಪುರೇಷೆಗಳ ಬಗ್ಗೆ ಮಾತನಾಡಿದ ಮೋದಿ, ‘ಡಿಜಿಟಲ್ ರೂಪಾಯಿಯು ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ, ನೋಟುಗಳ ಮುದ್ರಣ, ಸಾಗಾಟ, ನಿರ್ವಹಣೆಯಲ್ಲಿನ ಹೊರೆಯನ್ನು ತಗ್ಗಿಸಲಿದೆ’ ಎಂದು ಹೇಳಿದರು. ಡಿಜಿಟಲ್ ರೂಪಾಯಿಯು ಹಣಕಾಸು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ ಉಂಟುಮಾಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

‘ಭೌತಿಕ ಸ್ವರೂಪದಲ್ಲಿ ಇರುವ ರೂಪಾಯಿಯ ಡಿಜಿಟಲ್ ಅವತಾರ, ಡಿಜಿಟಲ್ ರೂಪಾಯಿ. ಇದನ್ನು ಆರ್‌ಬಿಐ ನಿಯಂತ್ರಿಸಲಿದೆ. ಭೌತಿಕ ಸ್ವರೂಪದಲ್ಲಿ ಇರುವ ಕರೆನ್ಸಿಗಳನ್ನು ಡಿಜಿಟಲ್ ಕರೆನ್ಸಿ ಜೊತೆ ವಿನಿಮಯ ಮಾಡಿಕೊಳ್ಳಬಹುದು’ ಎಂದು ಹೇಳಿದರು.

ಆರ್‌ಬಿಐ 2022–23ನೆಯ ಹಣಕಾಸು ವರ್ಷದಲ್ಲಿ ಡಿಜಿಟಲ್ ಕರೆನ್ಸಿಯನ್ನು ಚಲಾವಣೆಗೆ ತರುವ ನಿರೀಕ್ಷೆ ಇದೆ. ಕೇಂದ್ರ ಬಜೆಟ್‌ನಲ್ಲಿ ಉಲ್ಲೇಖಿಸಿರುವಂತೆ, ಈ ಕರೆನ್ಸಿಯು ಬ್ಲಾಕ್‌ಚೈನ್‌ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಿದೆ.

ಈ ಬಾರಿಯ ಬಜೆಟ್‌, ಬಡವರ ಅಭಿವೃದ್ಧಿಗೆ ಕಾರಣವಾಗುವಂತೆ ಇದೆ ಎಂದರು. ‘ಪ್ರತಿ ಬಡವನೂ ಪಕ್ಕಾ ಮನೆಯನ್ನು ಹೊಂದಿರಬೇಕು, ನಲ್ಲಿ ನೀರಿನ ಸಂಪರ್ಕ ಹೊಂದಿರಬೇಕು, ಅಡುಗೆ ಅನಿಲ ಸಂಪರ್ಕ ಪಡೆದಿರಬೇಕು. ಇಂಥವುಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಇವುಗಳ ಜೊತೆಯಲ್ಲಿಯೇ, ದೇಶವನ್ನು ಆಧುನಿಕಗೊಳಿಸಲು ಸಮಾನ ಆದ್ಯತೆ ನೀಡಲಾಗಿದೆ’ ಎಂದು ಪ್ರತಿಪಾದಿಸಿದರು.

‘ಬ್ಯಾಂಕ್ ಖಾತೆ ಬೇಡ, ಜನರಿಗೆ ಅನುಕೂಲ’

-ವೀಣಾ ಮಣಿ

ಬೆಂಗಳೂರು: ಆರ್‌ಬಿಐ ಮೂಲಕ ಚಲಾವಣೆಗೆ ಬರಲಿರುವ ಡಿಜಿಟಲ್ ರೂಪಾಯಿಯು ಜನಸಾಮಾನ್ಯರಿಗೆ ಅನುಕೂಲಕರ ಆಗಲಿದೆ ಎಂದು ಲೆ‌ಕ್ಕ ಪರಿಶೋಧಕರು, ವರ್ಚುವಲ್ ಕರೆನ್ಸಿ ವಿನಿಮಯ ಕೇಂದ್ರಗಳು ಮತ್ತು ಕ್ರಿಪ್ಟೊಕರೆನ್ಸಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಇದು ಡಿಜಿಟಲ್ ಕರೆನ್ಸಿ ಬಳಕೆಯ ವಿಚಾರವಾಗಿ ಹೆಚ್ಚಿನ ವಿಶ್ವಾಸ ಮೂಡಲು ಕಾರಣವಾಗಲಿದೆ. ಕಾಗದದ ನೋಟುಗಳ ಬಳಕೆಗೆ ಬದಲಾಗಿ, ಕಡಿಮೆ ವೆಚ್ಚದ ಪರ್ಯಾಯ ಕರೆನ್ಸಿಯ ಬಳಕೆಗೆ ಇದು ಅವಕಾಶ ಕಲ್ಪಿಸಲಿದೆ. ಅರ್ಥ ವ್ಯವಸ್ಥೆಯಲ್ಲಿ ನಗದಿನ ಮೇಲಿನ ಅವಲಂಬನೆಯನ್ನು ತಗ್ಗಿಸುವ ನಿರೀಕ್ಷೆ ಇದೆ’ ಎಂದು ಸಿರಿಲ್ ಅಮರ್‌ಚಂದ್‌ ಮಂಗಲದಾಸ್ ಕಾನೂನು ಸಂಸ್ಥೆಯ ಹಿರಿಯ ಸಲಹೆಗಾರ್ತಿ ಆಗಿರುವ ಲಿಲಿ ವಡೇರಾ ತಿಳಿಸಿದರು.

‘ಡಿಜಿಟಲ್ ಕರೆನ್ಸಿ ಮೂಲಕ ನಡೆಯುವ ವಹಿವಾಟುಗಳು ಒಂದಕ್ಕಿಂತ ಹೆಚ್ಚಿನ ಬ್ಯಾಂಕ್‌ ಖಾತೆಗಳ ಮೂಲಕ ನಡೆಯುವುದಿಲ್ಲ. ಇದನ್ನು ಬಳಸಲು ಬ್ಯಾಂಕ್‌ ಖಾತೆ ಬೇಕು ಎಂಬುದೂ ಇಲ್ಲ’ ಎಂದು ಕ್ರಿಪ್ಟೊಕರೆನ್ಸಿ ವಿನಿಮಯ ಸೇವೆಗಳನ್ನು ಒದಗಿಸುವ ಡಿಫೈ ಕಂಪನಿಯ ಸಿಇಒ ಭಾಗಬನ್ ಬೆಹೆರಾ ಹೇಳಿದರು. ಯುಪಿಐ ಹಾಗೂ ಎನ್‌ಇಎಫ್‌ಟಿ ವ್ಯವಸ್ಥೆಗಳಲ್ಲಿ ಎದುರಾಗುವ ನೆಟ್‌ವರ್ಕ್‌ ಸಮಸ್ಯೆಯು ಇದರಲ್ಲಿ ಇರುವುದಿಲ್ಲ. ಇಲ್ಲಿ ಬ್ಲಾಕ್‌ಚೈನ್‌ ತಂತ್ರಜ್ಞಾನವನ್ನು ಬಳಕೆ ಮಾಡುವ ಕಾರಣದಿಂದ ಅಂತರರಾಷ್ಟ್ರೀಯ ವಹಿವಾಟುಗಳು ಕೂಡ ಸರಳವಾಗಲಿವೆ ಎಂದು ಜಿಯೊಟಸ್ ಕ್ರಿಪ್ಟೊ ವಿನಿಮಯ ಕಂಪನಿಯ ಸಿಇಒ ವಿಕ್ರಮ್ ಸುಬ್ಬುರಾಜ್ ಹೇಳಿದರು.

***
ಕಾನೂನು ಮಾನ್ಯತೆ ನೀಡುವ ನಡೆ ಅಲ್ಲ..

ನವದೆಹಲಿ (ಪಿಟಿಐ): ವರ್ಚುವಲ್ ಡಿಜಿಟಲ್ ಆಸ್ತಿಗಳು ಅಥವಾ ಕ್ರಿಪ್ಟೊಕರೆನ್ಸಿಗಳಿಗೆ ತೆರಿಗೆ ವಿಧಿಸುವ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಇರುವ ಪ್ರಸ್ತಾವನೆಯು, ದೇಶದಲ್ಲಿ ಕ್ರಿಪ್ಟೊಕರೆನ್ಸಿಗಳಲ್ಲಿ ನಡೆದಿರುವ ವಹಿವಾಟು ಎಷ್ಟು ದೊಡ್ಡದಿದೆ ಎಂಬುದನ್ನು ಗೊತ್ತುಮಾಡಲಿದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ಜೆ.ಬಿ. ಮೊಹಾಪಾತ್ರ ಹೇಳಿದ್ದಾರೆ.

ಕ್ರಿಪ್ಟೊಕರೆನ್ಸಿಗಳಲ್ಲಿ ಹೂಡಿಕೆ ಮಾಡುತ್ತಿರುವವರು ಯಾರು ಎಂಬುದು ಸಹ ಇದರಿಂದಾಗಿ ಗೊತ್ತಾಗಲಿದೆ. ಆದರೆ, ಕ್ರಿಪ್ಟೊಕರೆನ್ಸಿಗಳಲ್ಲಿನ ವಹಿವಾಟಿಗೆ ‘ಯಾವುದೇ ಕಾನೂನು ಮಾನ್ಯತೆಯನ್ನು ಇದು ತಂದುಕೊಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ವರ್ಚುವಲ್ ಡಿಜಿಟಲ್ ಆಸ್ತಿಗಳು, ಕ್ರಿಪ್ಟೊಕರೆನ್ಸಿಗಳ ವರ್ಗಾವಣೆಯಿಂದ ಬರುವ ಆದಾಯಕ್ಕೆ ಶೇಕಡ 30ರಷ್ಟು ತೆರಿಗೆ ವಿಧಿಸಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಪ್ರಕಟಿಸಿದ್ದಾರೆ. ‘ಯಾವುದೇ ವಹಿವಾಟು ಎಷ್ಟರಮಟ್ಟಿಗೆ ನ್ಯಾಯೋಚಿತ ಎಂಬುದನ್ನು ತೀರ್ಮಾನಿಸುವ ಸ್ಥಾನದಲ್ಲಿ ಇಲಾಖೆ ಇಲ್ಲ. ವ್ಯಕ್ತಿ ನಡೆಸುವ ಯಾವುದೇ ವಹಿವಾಟಿನಿಂದ ಆದಾಯ ಬರುತ್ತದೆಯೇ ಎಂಬುದನ್ನು ಮಾತ್ರ ಆದಾಯ ತೆರಿಗೆ ಇಲಾಖೆ ಮತ್ತು ಆದಾಯ ತೆರಿಗೆ ಕಾಯ್ದೆ ಗಮನಿಸುತ್ತವೆ. ಯಾವುದೇ ಆದಾಯ ಎಷ್ಟರಮಟ್ಟಿಗೆ ಕಾನೂನುಬದ್ಧ ಎಂಬುದನ್ನು ನಾವು ತೀರ್ಮಾನಿಸುವುದಿಲ್ಲ. ಬದಲಿಗೆ, ಆದಾಯದ ಮೇಲೆ ತೆರಿಗೆ ವಿಧಿಸುವ ಕೆಲಸವನ್ನು ನಾವು ಮಾಡುತ್ತೇವೆ’ ಎಂದು ಅವರು ತಿಳಿಸಿದ್ದಾರೆ.

‘ಈ ಕಾರಣದಿಂದಾಗಿ, ಕ್ರಿಪ್ಟೊ ಕರೆನ್ಸಿಗಳಿಗೆ ತೆರಿಗೆ ವಿಧಿಸಿದ ಮಾತ್ರಕ್ಕೆ, ಅವುಗಳಲ್ಲಿನ ವಹಿವಾಟು ಕಾನೂನುಬದ್ಧ ಎಂದಂತೆ ಆಗದು’ ಎಂದು ಮೊಹಾಪಾತ್ರ ಅವರು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ‘ನೀವು ತೆರಿಗೆ ಪಾವತಿಸಿದ್ದೀರಿ ಎಂಬ ಒಂದೇ ಕಾರಣಕ್ಕೆ ಕ್ರಿಪ್ಟೊಕರೆನ್ಸಿಗಳಲ್ಲಿನ ವಹಿವಾಟು ಕಾನೂನು ಮಾನ್ಯತೆ ಪಡೆಯುವುದಿಲ್ಲ’ ಎಂದು ಅವರು
ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT