ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ವಾಹನಗಳ ಸಂಖ್ಯೆಯಲ್ಲಿ ಕರ್ನಾಟಕವೇ ಮುಂದು!

Last Updated 28 ಮಾರ್ಚ್ 2021, 19:26 IST
ಅಕ್ಷರ ಗಾತ್ರ

ನವದೆಹಲಿ: 15 ವರ್ಷಗಳಿಗಿಂತ ಹಳೆಯದಾದ ನಾಲ್ಕು ಕೋಟಿಗೂ ಹೆಚ್ಚು ವಾಹನಗಳು ದೇಶದಲ್ಲಿ ಇವೆ. ಇವುಗಳಲ್ಲಿ 70 ಲಕ್ಷಕ್ಕೂ ಹೆಚ್ಚಿನ ವಾಹನಗಳು ಕರ್ನಾಟಕದಲ್ಲೇ ಇವೆ. ಈ ವಾಹನಗಳು ‘ಹಸಿರು ತೆರಿಗೆ’ ವ್ಯಾಪ್ತಿಗೆ ಬರುತ್ತವೆ.

ಹಳೆಯ ವಾಹನಗಳ ಅಂಕಿ–ಅಂಶಗಳನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕಲೆಹಾಕಿ, ಡಿಜಿಟಲ್ ರೂಪಕ್ಕೆ ತಂದಿದೆ. ಆಂಧ್ರಪ್ರದೇಶ, ಮಧ್ಯಪ್ರದೇಶ, ತೆಲಂಗಾಣ ಮತ್ತು ಲಕ್ಷದ್ವೀಪದಲ್ಲಿ ಇರುವ ಇಂತಹ ವಾಹನಗಳ ಮಾಹಿತಿ ಲಭ್ಯವಿಲ್ಲ.

ಹದಿನೈದು ವರ್ಷಗಳಿಗಿಂತ ಹಳೆಯದಾದ ವಾಹನಗಳ ಮೇಲೆ ‘ಹಸಿರು ತೆರಿಗೆ’ ವಿಧಿಸುವ ಪ್ರಸ್ತಾವ ಇದೆ. ನಾಲ್ಕು ಕೋಟಿ ವಾಹನಗಳ ಪೈಕಿ ಎರಡು ಕೋಟಿ ವಾಹನಗಳು 20 ವರ್ಷಕ್ಕಿಂತ ಹಳೆಯವು. ಉತ್ತರ ಪ್ರದೇಶದಲ್ಲಿ ಇರುವ 56.54 ಲಕ್ಷ ವಾಹನಗಳು 15 ವರ್ಷಕ್ಕಿಂತ ಹಳೆಯವು. ಇವುಗಳಲ್ಲಿ 24.55 ಲಕ್ಷ ವಾಹನಗಳು 20 ವರ್ಷಕ್ಕೂ ಹಳೆಯವು.

ಹಳೆಯ ವಾಹನಗಳು ಹೆಚ್ಚಿರುವ ಪಟ್ಟಿಯಲ್ಲಿ ದೆಹಲಿಯು ಮೂರನೆಯ ಸ್ಥಾನದಲ್ಲಿ ಇದೆ. ಇಲ್ಲಿ 49.93 ಲಕ್ಷ ವಾಹನಗಳು 15 ವರ್ಷಗಳಿಗಿಂತ ಹಳೆಯವು, ಇವುಗಳಲ್ಲಿ 35.11 ಲಕ್ಷ ವಾಹನಗಳು 20 ವರ್ಷಗಳಿಗಿಂತ ಹಳೆಯವು.

ಹೈಬ್ರಿಡ್‌ ವಾಹನಗಳು, ವಿದ್ಯುತ್ ಚಾಲಿತ ವಾಹನಗಳು, ಸಿಎನ್‌ಜಿ, ಎಥೆನಾಲ್, ಎಲ್‌ಪಿಜಿ ಬಳಸುವ ವಾಹನಗಳಿಗೆ ‘ಹಸಿರು ತೆರಿಗೆ’ಯಿಂದ ವಿನಾಯಿತಿ ಇರುತ್ತದೆ. ಹಸಿರು ತೆರಿಗೆ ಮೂಲಕ ಸಂಗ್ರಹ ಆಗುವ ಹಣವನ್ನು ಪರಿಸರ ಮಾಲಿನ್ಯ ಕಡಿಮೆ ಮಾಡಲು ಬಳಸಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.

ಕೃಷಿ ಚಟುವಟಿಕೆಗಳಲ್ಲಿ ಬಳಕೆಯಾಗುವ ಟ್ರ್ಯಾಕ್ಟರ್‌ಗಳು, ಬೆಳೆ ಕೊಯ್ಲಿನ ಯಂತ್ರಗಳು, ಟಿಲ್ಲರ್‌ಗಳಿಗೆ ಹಸಿರು ತೆರಿಗೆ ಅನ್ವಯ ಆಗುವುದಿಲ್ಲ. ಹಸಿರು ತೆರಿಗೆ ವಿಧಿಸುವುದರಿಂದ, ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ವಾಹನಗಳನ್ನು ಜನ ಬಳಸುವುದು ಕಡಿಮೆ ಆಗಬಹುದು. ಅಲ್ಲದೆ, ಅವರು ಕಡಿಮೆ ಮಾಲಿನ್ಯ ಉಂಟುಮಾಡುವ ವಾಹನಗಳ ಬಳಸುವಂತೆ ಆಗುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಹಿಂದೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT