ನವದೆಹಲಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಇಲ್ಲಿಯವರೆಗೆ 369.05 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಮಂಗಳವಾರ ತಿಳಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 349.49 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ನಾಟಿ ಮಾಡಲಾಗಿತ್ತು. ಜೂನ್‌ನಲ್ಲಿ ಮುಂಗಾರು ಮಳೆ ಉತ್ತಮ ಆರಂಭ ಕಂಡಿತು. ಹಾಗಾಗಿ, ಹೆಚ್ಚಿನ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ. ಸೆಪ್ಟೆಂಬರ್‌ನಿಂದ ಭತ್ತ ಕಟಾವು ಶುರುವಾಗಲಿದೆ ಎಂದು ತಿಳಿಸಿದೆ.
120.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, ಉದ್ದು ಸೇರಿ ವಿವಿಧ ಕಾಳುಗಳ ಬಿತ್ತನೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 113.69 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು ಎಂದು ತಿಳಿಸಿದೆ.
45.78 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ, 28.33 ಲಕ್ಷ ಹೆಕ್ಟೇರ್‌ನಲ್ಲಿ ಉದ್ದು ಬಿತ್ತನೆಯಾಗಿದೆ.
181.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಒರಟು ಧಾನ್ಯಗಳ ಬಿತ್ತನೆಯಾಗಿದೆ. ಈ ಪೈಕಿ 87.23 ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಎಣ್ಣೆಕಾಳುಗಳ ಬಿತ್ತನೆ ಪ್ರದೇಶದಲ್ಲಿ ಏರಿಕೆಯಾಗಿದೆ. ಒಟ್ಟು 186.77 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ.
57.68 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ನಾಟಿ ಮಾಡಲಾಗಿದೆ. ಹತ್ತಿ ಬಿತ್ತನೆ ಪ್ರದೇಶದಲ್ಲಿ ಇಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 122.15 ಲಕ್ಷ ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆಯಾಗಿತ್ತು. ಈ ಬಾರಿ 111 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.
ಒಟ್ಟಾರೆ ಮುಂಗಾರು ಹಂಗಾಮಿನಲ್ಲಿ 1,031.56 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಿತ್ತನೆ ಪ್ರಮಾಣದಲ್ಲಿ ಶೇ 2ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.