ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತಕರ ನೆರವಿಗೆ ಪೇಪಾಲ್ ಬಿಸಿನೆಸ್ ಆ್ಯಪ್: ಚಾಲಕಗೆ ಸ್ಮಾರ್‌ಟ್ರಕಿಂಗ್‌ ಸೇವೆ

Last Updated 23 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಜಾಗತಿಕ ತಂತ್ರಜ್ಞಾನ ಮತ್ತು ಡಿಜಿಟಲ್‌ ಪಾವತಿಯಲ್ಲಿ ಮುಂಚೂಣಿಯಲ್ಲಿರುವ ಪೇಪಾಲ್‌ ಕಂಪನಿಯು ಭಾರತದ ವರ್ತಕರಿಗೆ ನೆರವಾಗುವ ಆ್ಯಪ್‌ ಅಭಿವೃದ್ಧಿಪಡಿಸಿದೆ.

ಈ ಆ್ಯಪ್‌ ಮೂಲಕ ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರಿಗಳು ತಮ್ಮ ದೇಶಿ ಮತ್ತು ವಿದೇಶಿ ಉದ್ದಿಮೆಯನ್ನು ಅತ್ಯಂತ ಸುಗಮವಾಗಿ ನಿರ್ವಹಿಸಬಹುದಾಗಿದೆ. ವೃತ್ತಿಪರವಾಗಿ ಇನ್‌ವಾಯ್ಸ್‌, ಕಂಪ್ಯೂಟೆಡ್‌ ಸೇಲ್ಸ್‌ ಇನ್‌ಸೈಟ್‌ಗಳನ್ನು ನೀಡುವುದರ ಜತೆಗೆ ಎಲ್ಲಾ ಬಗೆಯ ಕರೆನ್ಸಿಗಳ ಪಾವತಿಗೂ ಅನುಕೂಲ ಮಾಡಿಕೊಡುತ್ತದೆ.

‘ಹಣ ಪಾವತಿಯನ್ನು ಸುಲಭ, ಸರಳ ಮತ್ತು ಹೆಚ್ಚು ಸುರಕ್ಷಿತಗೊಳಿಸಲಿದೆ. ಇದರಿಂದ ಉದ್ದಿಮೆಗಳಿಗೆ ವಹಿವಾಟು ವೃದ್ಧಿಸಿಕೊಳ್ಳಲು ನೆರವಾಗುವುದು ಈ ಆ್ಯಪ್‌ನ ಮೂಲ ಉದ್ದೇಶವಾಗಿದೆ’ ಎಂದು ಪೇಪಾಲ್‌ ಇಂಡಿಯಾದ ನಿರ್ದೇಶಕ ಎನ್‌.ಸುಬ್ರಮಣಿಯನ್‌ ಹೇಳುತ್ತಾರೆ.

‘ಎಸ್‌ಎಂಇಗಳು ಎದುರಿಸುವ ಕೆಲವು ಸಹಜವಾದಂತಹ ಸಮಸ್ಯೆಗಳಿಗೆ ಈ ಆ್ಯಪ್‌ ಪರಿಹಾರ ಒದಗಿಸಲಿದೆ.ಇದೊಂದೇ ಆ್ಯಪ್‌ನಿಂದ ದೇಶಿ ಮತ್ತು ವಿದೇಶಿ ವಹಿವಾಟು ನಿರ್ವಹಿಸಬಹುದು.

‘ಭಾರತದಲ್ಲಿಉದ್ಯಮಶೀಲತೆಯ ಪ್ರವೃತ್ತಿ ಹೆಚ್ಚಾಗುತ್ತಿರುವುದರಿಂದ ಎಸ್‌ಎಂಇ ವಲಯವು ಉತ್ತಮ ಪ್ರಗತಿ ಸಾಧಿಸುತ್ತಿದೆ. ಸ್ಮಾರ್ಟ್‌ಫೋನ್‌ ಮತ್ತು ಅಂತರ್ಜಾಲ ಸಂಪರ್ಕದಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ನಮ್ಮ ವರ್ತಕರು ಮೊಬೈಲ್‌ ಮೂಲಕವೇ ಮಾರುಕಟ್ಟೆ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ತಂತ್ರಜ್ಞಾನವನ್ನು ಬಳಸಿಕೊಂಡು ‘ಎಸ್‌ಎಂಇ’ ವಲಯದ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸುವ ಪ್ರಯತ್ನ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.

ಪೇಪಾಲ್ ಫರ್ ಬಿಸಿನೆಸ್‌ ಆಂಡ್ರಾಯ್ಡ್ ಮತ್ತು ಐಒಎಸ್‍ಗಳಲ್ಲಿ ಡೌನ್‍ಲೋಡ್‍ಗೆ ಲಭ್ಯವಿದೆ.

ಆ್ಯಪ್‌ನ ಪ್ರಮುಖ ವೈಶಿಷ್ಟ್ಯಗಳು

ಮಾರಾಟದ ಒಳನೋಟ: ಡ್ಯಾಷ್ ಬೋರ್ಡ್‍ನಿಂದಾಗಿ ವ್ಯಾಪಾರಿಗಳು ತಮ್ಮ ಉದ್ದಿಮೆಯ ಸಂಪೂರ್ಣ ಸಾಧನೆಯನ್ನು ಟ್ರ್ಯಾಕ್ ಮಾಡಬಹುದು. ವರ್ಷದಿಂದ ವರ್ಷಕ್ಕೆ ತಮ್ಮ ಸಾಧನೆಯನ್ನು ಹೋಲಿಕೆ ಮಾಡಿಕೊಳ್ಳಬಹುದು, ವಹಿವಾಟುಗಳ ಒಟ್ಟು ಸಂಖ್ಯೆ ಮತ್ತು ಸರಾಸರಿ ಆರ್ಡರ್ ಮೌಲ್ಯ ಮತ್ತಿತರ ಮಾಹಿತಿಗಳು ದೊರೆಯುತ್ತವೆ.

ಇನ್‌ವಾಯ್ಸ್‌: ಸುಗಮ ಮತ್ತು ಸರಾಗವಾಗಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸಲು, ಪೂರ್ವಭಾವಿಯಾಗಿ ವೀಕ್ಷಿಸಲು ಮತ್ತು ಕಳುಹಿಸಲು ವ್ಯಾಪಾರಿಗಳಿಗೆ ಸಾಧ್ಯವಾಗುತ್ತದೆ. ಪಾವತಿಗಳನ್ನು ನಿಯಮಿತವಾಗಿ, ಯಾವುದೇ ವಿಳಂಬವಿಲ್ಲದೇ ಪಡೆಯಲೂ ನೆರವಾಗುತ್ತದೆ.

ಬಹು-ಕರೆನ್ಸಿ ಬ್ಯಾಲೆನ್ಸ್ ವೀಕ್ಷಣೆ: ಇಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಪಾವತಿಗಳಿಗೆ ಒಂದೇ ಇಂಟೆಗ್ರೇಷನ್ ಕಲ್ಪಿಸುವ ಕಾರಣ, ವ್ಯಾಪಾರಿಗಳು ಎಲ್ಲ ದೇಶಗಳ ಕರೆನ್ಸಿಗಳಲ್ಲೂ ತಮ್ಮ ಬ್ಯಾಲೆನ್ಸ್ ಪರಿಶೀಲಿಸಬಹುದಾಗಿದೆ.

ಮರುಪಾವತಿ: ಮರುಪಾವತಿ ಸಂದರ್ಭದಲ್ಲಿಯೂ ವ್ಯಾಪಾರಿಗಳಿಗೆ ಈ ಆ್ಯಪ್ ನೆರವಾಗುತ್ತದೆ. ಆ ಮೂಲಕ ಗ್ರಾಹಕರಿಗೆ ಉತ್ತಮ ಅನುಭವ ಹೊಂದುವಂತೆ ಮಾಡುತ್ತದೆ.

**

ಚಾಲಕರ ನೆರವಿಗೆ ಡಿಎಚ್‌ಎಲ್‌ ಸ್ಮಾರ್‌ಟ್ರಕಿಂಗ್‌ ಸೇವೆ

ಡಿಎಚ್‌ಎಲ್‌ ಕಂಪನಿಯು ಚಾಲಕ ಕೇಂದ್ರಿತ ಪರಿಸರ ನಿರ್ಮಿಸಲು ಹಲವು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಟ್ರಕ್‌ ಚಾಲಕರಿಗಾಗಿ ಸ್ಮಾರ್‌ಟ್ರಕಿಂಗ್‌ (SmarTrucking) ಸೇವೆಗೆ ಚಾಲನೆ ನೀಡಿದೆ.

ದೇಶದಲ್ಲಿ ಟ್ರಕ್‌ ಚಾಲಕರುಆರೋಗ್ಯ ಸಮಸ್ಯೆಗಳು, ಏಕಾಂತ, ಕಡಿಮೆ ಆತ್ಮ ವಿಶ್ವಾಸ, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯದಿರುವುದು, ಶಿಕ್ಷಣದ ಕೊರತೆ ಸೇರಿದಂತೆ ಇನ್ನೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವುಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ಈ ಸೇವೆಗೆ ಚಾಲನೆ ನೀಡಲಾಗಿದೆ ಎನ್ನುತ್ತಾರೆಡಿಎಚ್‍ಎಲ್ ಸ್ಮಾರ್‌ಟ್ರಕಿಂಗ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ನೀರಜ್ ಬನ್ಸಾಲ್.

‘ಒಂದು ಕಂಪನಿಯ ಸರಕು ಸಾಗಣೆ (ಲಾಜಿಸ್ಟಿಕ್‌) ಯಶಸ್ವಿಯಾಗಲು ಟ್ರಕ್ ಚಾಲಕರು ಬೆನ್ನೆಲೆಬು ಆಗಿರುತ್ತಾರೆ. ದೇಶದಾದ್ಯಂತ ವಿವಿಧ ಭಾಗಗಳಿಗೆ ಸೂಕ್ತ ಸಮಯದಲ್ಲಿ ಸರಕು-ಸರಂಜಾಮುಗಳನ್ನು ತಲುಪಿಸುವಲ್ಲಿ ಚಾಲಕರು ಪ್ರಮುಖ ಪಾತ್ರ ವಹಿಸುತ್ತಾರೆ. ಭಾರತೀಯ ಟ್ರಕ್ ಚಾಲಕರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕಾರಣಕ್ಕೆ ನಾವು ಚಾಲಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಅವರಿಗೆ ಕೆಲಸ ಮಾಡುವ ಸೂಕ್ತ ವಾತಾವರಣ ಸೃಷ್ಟಿಸುವುದು, ವೈಯಕ್ತಿಕ ಜೀವನ ಸುಧಾರಣೆಗೆ ಅಗತ್ಯ ಕ್ರಮಗಳು ಸೇರಿದಂತೆ ಇನ್ನೂ ಹಲವಾರು ಯೋಜನೆಗಳನ್ನು ರೂಪಿಸಿದ್ದೇವೆ’ ಎಂದು ಅವರು ಹೇಳುತ್ತಾರೆ.

‘ಸರ್ಕಾರಿ ಯೋಜನೆಗಳು ಮತ್ತು ಅವುಗಳನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಮನವರಿಕೆ ಮಾಡಿಕೊಡಲು ಕಾರ್ಯಾಗಾರಗಳನ್ನೂ ಏರ್ಪಡಿಸಲಾಗುವುದು. ಚಾಲಕರ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ಜನ್-ಧನ್ ಯೋಜನೆ, ವೃತ್ತಿ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಇತರೆ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಭಾರತದ ಸರಕು ಸಾಗಣೆಯ ಚಿತ್ರಣವನ್ನೇ ಬದಲಾಯಿಸುವಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ಇದೆ.

‘ವಿವಿಧ ಬಗೆಯ ಕ್ರೀಡಾ ಚಟುವಟಿಕೆಗಳು ಮತ್ತು ಇನ್ನೂ ಹಲವು ಆಸಕ್ತಿದಾಯಕ ಚಟುವಟಿಕೆಗಳನ್ನೂ ಸಂಸ್ಥೆಯು ರೂಪಿಸುತ್ತಿದೆ. ಇದಲ್ಲದೇ, ಸಂಚಾರ ದಟ್ಟಣೆ ಕುರಿತಾಗಿ ಇರುವ ಕಾನೂನುಗಳು, ಸುರಕ್ಷತೆ, ಕೇಂದ್ರೀಯ ವಾಹನ ಕಾಯ್ದೆಗಳು ಸೇರಿದಂತೆ ಇನ್ನಿತರೆ ನೀತಿ ನಿಯಮಾವಳಿಗಳ ಬಗ್ಗೆ ಚಾಲಕರಿಗೆ ಸೂಕ್ತ ಅರಿವು ಮೂಡಿಸಲಾಗುತ್ತದೆ. ಅದೇ ರೀತಿ, ಚಕ್ರಗಳನ್ನು ಕ್ಷಿಪ್ರವಾಗಿ ಬದಲಾಯಿಸುವ ಕೌಶಲ್ಯಗಳ ಬಗ್ಗೆಯೂ ತರಬೇತಿ ನೀಡಲಾಗುತ್ತದೆ’ ಎಂದು ಹೇಳುತ್ತಾರೆ.

‘ಸ್ಮಾರ್‌ಟ್ರಕಿಂಗ್‌’ನಲ್ಲಿ ಸದ್ಯಕ್ಕೆ 500 ಚಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ. 2028ರ ವೇಳೆಗೆ ಚಾಲಕರ ಸಂಖ್ಯೆಯನ್ನು 20 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸಿಕೊಳ್ಳುವ ಗುರಿಯನ್ನು ಹೊಂದಿರುವುದಾಗಿ ಅವರು ಹೇಳುತ್ತಾರೆ.

‘ಸ್ಮಾರ್‌ಟ್ರಕಿಂಗ್‌ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಸಕಾಲದಲ್ಲಿ ಪ್ರತಿತಿಂಗಳೂ ಹಣ ಪಡೆಯುತ್ತಿದ್ದೇನೆ. ಕುಟುಂಬ ನಿರ್ವಹಣೆ ಮತ್ತು ಭವಿಷ್ಯಕ್ಕಾಗಿ ಹಣ ಕೂಡಿಡಲು ಸಾಧ್ಯವಾಗುತ್ತಿದೆ’ ಎಂದು ಡಿಎಚ್‌ಎಲ್‌ನ ಚಾಲಕ ಮಹೇಶ್ ತಮ್ಮ ಅನುಭವ ಹಂಚಿಕೊಂಡರು.

ಪ್ರಯೋಜನಗಳು

* ತಿಂಗಳ ಅಂತ್ಯದ ವೇಳೆಗೆ ವೇತನ. ಎಸ್‍ಎಂಎಸ್ ಮೂಲಕ ವೇತನದ ಮಾಹಿತಿ.

* ₹ 3 ಲಕ್ಷ ದವರೆಗೆ ಮೆಡಿಕ್ಲೇಮ್.

* ದೇಶದಾದ್ಯಂತ ಇರುವ 17 ಡಿಎಚ್‍ಎಲ್ ಸ್ಮಾರ್‌ಟ್ರಕಿಂಗ್‌ ಸ್ಮಾರ್ಟ್‍ಹಬ್‍ಗಳಲ್ಲಿ ವಿಶ್ರಾಂತಿ ಅವಧಿ ಮತ್ತು ನಿದ್ದೆ ಮಾಡಲು ಸೂಕ್ತ ಸೌಲಭ್ಯ.

* ನಿದ್ದೆ ಮಾಡಲು ಟ್ರಕ್‍ಗಳಲ್ಲಿ ಅಗತ್ಯವಾದ ಬೆಡ್‍ಶೀಟ್, ಫ್ಯಾನ್ ಮತ್ತು ಮೈಕೈನೋವು ಮತ್ತು ಆಯಾಸವಾಗುವುದನ್ನು ತಡೆಯಲು ಪೂರಕವಾದ ಸೀಟುಗಳ ಅಳವಡಿಕೆ.

* ದೇಶದಾದ್ಯಂತ ಇರುವ ಆಯ್ದ ಹೋಟೆಲ್‌ಗಳಲ್ಲಿ ಊಟದ ಕೂಪನ್‍ಗಳ ವಿತರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT