ಗುರುವಾರ , ಅಕ್ಟೋಬರ್ 1, 2020
27 °C

ಕೋವಿಡ್ ಸಂಕಷ್ಟ | ಚಿನ್ನ ಅಡವಿಟ್ಟು, ಸಾಲ ಪಡೆದು ಬದುಕುತ್ತಿದ್ದಾರೆ ಗ್ರಾಮೀಣ ಜನರು

ಅನ್ನಪೂರ್ಣಾ ಸಿಂಗ್ Updated:

ಅಕ್ಷರ ಗಾತ್ರ : | |

Rural india

ನವದೆಹಲಿ: ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಮಸ್ಯೆಗೊಳಗಾಗಿರುವ ಗ್ರಾಮೀಣ ಭಾರತದ ಜನರು ಚಿನ್ನ, ಜಮೀನು ಅಡವಿಟ್ಟು ಇಲ್ಲವೇ ತಮ್ಮಲ್ಲಿರುವ ವಸ್ತುಗಳನ್ನು ಮಾರಿ ಜೀವನ ನಡೆಸುತ್ತಿದ್ದಾರೆ.

ಸಿಎಸ್‌ಡಿಎಸ್‌ (ಸೆಂಟರ್‌ ಫಾರ್‌ ಸ್ಟಡಿ ಆಫ್‌ ಡೆವಲಪಿಂಗ್‌ ಸೊಸೈಟೀಸ್‌) ಅಧ್ಯಯನ ಯೋಜನೆಯ ಅಂಗವಾಗಿ ಗ್ರಾಮೀಣ ಮಾಧ್ಯಮ ವೇದಿಕೆಯಾಗಿರುವ ಗಾಂವ್‌ ಕನೆಕ್ಷನ್‌ ಮತ್ತು ಲೋಕನೀತಿ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಈ ರೀತಿ ಹೇಳಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ನಾಲ್ಕು ಮಂದಿಯಲ್ಲಿ ಒಬ್ಬರು ತಮ್ಮ ಖರ್ಚು ನಿರ್ವಹಣೆಗಾಗಿ ಸಾಲ ಪಡೆಯುತ್ತಾರೆ. ಶೇ.8ರಷ್ಟು ಮಂದಿ ತಮ್ಮ ಕೈಯಲ್ಲಿರುವ ದುಬಾರಿ  ವಸ್ತುಗಳು ಅಂದರೆ ವಾಚು,ಫೋನ್‌ಗಳನ್ನು ಮಾರಿದ್ದಾರೆ. ಶೇ.7ರಷ್ಟು ಮಂದಿ ಚಿನ್ನಾಭರಣಗಳನ್ನು ಅಡವಿರಿಸುತ್ತಾರೆ ಮತ್ತು ಶೇ.5ರಷ್ಟು ಜನ ಜಮೀನು ಮಾರಿ ಅಥವಾ ಅಡವಿಟ್ಟು ಹಣ ಹೊಂದಿಸಿಕೊಳ್ಳುತ್ತಾರೆ. ಐದು ಮಂದಿಯಲ್ಲಿ ಒಬ್ಬರಿಗೆ ಮಾತ್ರ ಮನೆರೇಗಾ ಯೋಜನೆಯಡಿಯಲ್ಲಿ ಕೆಲಸ ಸಿಗುತ್ತದೆ ಎಂದು  ಸಮೀಕ್ಷೆ ಹೇಳಿದೆ.

ದೇಶದಾದ್ಯಂತವಿರುವ 20 ರಾಜ್ಯಗಳ 179 ಜಿಲ್ಲೆಗಳಲ್ಲಿರುವ 25,300 ಮಂದಿ ಮತ್ತು ಮೂರು ಕೇಂದ್ರಾಡಳಿತ ಪ್ರದೇಶದ ಜನರು ಈ ಸಮೀಕ್ಷೆಯಲ್ಲಿ  ಭಾಗಿಯಾಗಿದ್ದರು.

ಲಾಕ್‌ಡೌನ್ ಹೊತ್ತಲ್ಲಿ ಶೇ.78ರಷ್ಟು ಮಂದಿಯ ಕೆಲಸ ನಿಂತುಹೋಗಿದೆ. ಕುಶಲ ಕಾರ್ಮಿಕರು ಮತ್ತು ಇತರ ಕೆಲಸದ ಕಾರ್ಮಿಕರ ಬದುಕಿನ ಮೇಲೆ ಭಾರೀ ಹೊಡೆತ ಬಿದ್ದಿದೆ. ಶೇ.60ರಷ್ಟು ಕುಶಲ ಕಾರ್ಮಿಕರ ಕೆಲಸ ಮತ್ತು ಶೇ. 64ರಷ್ಟು ಇತರ ಕಾರ್ಮಿಕರ ಕೆಲಸ ಸಂಪೂರ್ಣವಾಗಿ ನಿಂತುಹೋಗಿದೆ.

ಶೇ.20ರಷ್ಟು ಜನರಿಗೆ ಮಾತ್ರ ಮನರೇಗಾ ಯೋಜನೆಯಡಿಯಲ್ಲಿ ಕೆಲಸ ಸಿಕ್ಕಿದೆ. ಛತ್ತೀಸಗಢದಲ್ಲಿ  ಶೇ.70, ಉತ್ತರಾಖಂಡ ಶೇ.65, ರಾಜಸ್ಥಾನ ಶೇ.59, ಗುಜರಾತ್ ಮತ್ತು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ, ಲಡಾಕ್‌ನಲ್ಲಿ ಕ್ರಮವಾಗಿ ಶೇ.3 ಮತ್ತು ಶೇ.4 ಜನರಿಗೆ ಮನರೇಗಾ ಯೋಜನೆಯಡಿ ಕೆಲಸ ಸಿಕ್ಕಿದೆ.

ಲಾಕ್‍ಡೌನ್  ಘೋಷಿಸಿದಾಗ ಶೇ.23ರಷ್ಟು ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲೇ ಮನೆ ಸೇರಿದ್ದಾರೆ. ಮತ್ತೆ ಮರಳಿ ನಗರಕ್ಕೆ ಹೋಗಬೇಕು ಎಂದು ಹೇಳಿದ ವಲಸೆ ಕಾರ್ಮಿಕರ ಸಂಖ್ಯೆ ಶೇ.33.

ಗರ್ಭಿಣಿಯರು ಇರುವ ಶೇ. 42ರಷ್ಟು ಮನೆಮಂದಿಯ ಪ್ರಕಾರ ಲಾಕ್‍‌ಡೌನ್ ವೇಳೆ ಗರ್ಭಿಣಿಯರಿಗೆ ಯಾವುದೇ ತಪಾಸಣೆ, ಲಸಿಕೆ ಸಿಕ್ಕಿಲ್ಲ. ಪಶ್ಚಿಮ ಬಂಗಾಳದಲ್ಲಿ  ಶೇ. 29 ಮತ್ತು ಒಡಿಶಾದಲ್ಲಿ ಶೇ.33 ಮಂದಿಗೆ ಈ ರೀತಿ ಸೌಲಭ್ಯ ಸಿಕ್ಕಿಲ್ಲ.

ತಮ್ಮ ಉತ್ಪನ್ನಗಳನ್ನು ಗ್ರಾಹರಿಗೆ ತಲುಪಿಸಲು  ಕಷ್ಟವಾಗಿದೆ ಎಂದು ಶೇ.56ರಷ್ಟು ಹೈನುಗಾರಿಕೆ ಮತ್ತು ಕೋಳಿಸಾಕಣೆ ರೈತರು ಹೇಳಿದ್ದಾರೆ. ಅದೇ ವೇಳೆ ನಮ್ಮ ಉತ್ಪನ್ನಕ್ಕೆ ತಕ್ಕುದಾದ ಬೆಲೆ ಸಿಗುವುದಿಲ್ಲ ಎಂದು ಶೇ.35ರಷ್ಟು ಮಂದಿ ಹೇಳಿದ್ದಾರೆ.

ದೇಶದಾದ್ಯಂತ ಸುದೀರ್ಘ ಲಾಕ್‍ಡೌನ್ ವೇಳೆ  ಗ್ರಾಮೀಣ ಜನರು ಮತ್ತು ವಲಸೆ ಕಾರ್ಮಿಕರು ಯಾವ ರೀತಿ ಜೀವನ ನಡೆಸುತ್ತಿದ್ದಾರೆ ಎಂದು ಈ ಸಮೀಕ್ಷೆ ಬೆಳಕು ಚೆಲ್ಲಿದೆ. ರೈತರ ಪೈಕಿ ಸುಮಾರು ಅರ್ಧದಷ್ಟು ಮಂದಿ ಲಾಕ್‍ಡೌನ್ ವೇಳೆ ಕೃಷಿ ಉತ್ಪನ್ನಗಳನ್ನು ಬೆಳೆಸಿದ್ದರೂ ನಾಲ್ಕನೇ ಒಂದರಷ್ಟು ಮಂದಿಗೆ ಮಾತ್ರ ಸರಿಯಾದ ಸಮಯದಲ್ಲಿ ಅದನ್ನು ಮಾರಾಟ ಮಾಡಲು ಸಾಧ್ಯವಾಗಿದ್ದು.

ರೇಷನ್ ಕಾರ್ಡ್ ಹೊಂದಿರುವ ಶೇ.71 ಕುಟುಂಬಗಳು ಮಾತ್ರ ಲಾಕ್‍ಡೌನ್ ಹೊತ್ತಲ್ಲಿ ಸರ್ಕಾರದಿಂದ ಗೋಧಿ ಅಥವಾ ಅಕ್ಕಿ ಪಡೆದಿದ್ದೇವೆ ಎಂದಿದ್ದಾರೆ. ಶೇ.17 ಜನರಿಗೆ ರೇಷನ್ ಕಾರ್ಡ್ ಇಲ್ಲ. ಈ ಪೈಕಿ ಶೇ.27ರಷ್ಟು ಜನ ಅಕ್ಕಿ ಅಥವಾ ಗೋಧಿ ಪಡೆದಿರುವುದಾಗಿ ಹೇಳಿದ್ದಾರೆ.
ಶೇ.38 ಕುಟುಂಬಗಳಿಗೆ ಸರಿಯಾದ ಔಷಧಿ ಅಥವಾ ಸೂಕ್ತ ವೈದ್ಯಕೀಯ ಚಿಕಿತ್ಸೆ ಲಭಿಸಿಲ್ಲ.  ಅಸ್ಸಾಂನಲ್ಲಿನ ಶೇ.87 ಕುಟುಂಬಗಳಿಗೆ ಮತ್ತು ಅರುಣಾಚಲ ಪ್ರದೇಶದ ಶೇ.66 ಕುಟುಂಬಗಳು ತಮಗೆ ಲಾಕ್‍ಡೌನ್ ಅವಧಿಯಲ್ಲಿ ಚಿಕಿತ್ಸೆ ಲಭಿಸಿಲ್ಲ ಎಂದು ಹೇಳಿವೆ.

ಈ ಎಲ್ಲ ಸಂಕಷ್ಟಗಳ ನಡುವೆ ಕೋವಿಡ್-19 ನಿಯಂತ್ರಣಕ್ಕಾಗಿ ಸರ್ಕಾರ ಕೈಗೊಂಡಿರುವ ಕೆಲಸ ತೃಪ್ತಿದಾಯಕ ಎಂದು ಶೇ.74ರಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು