ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಕೋಟೆ ಭೇದಿಸಲು ಹರಸಾಹಸ

ವಿಧಾನ ಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ
Last Updated 5 ಜೂನ್ 2018, 19:30 IST
ಅಕ್ಷರ ಗಾತ್ರ

ಮೈಸೂರು: ವಿಧಾನ ಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಪ್ರತಿ ಬಾರಿಯೂ ಪ್ರಬಲ ಪೈಪೋಟಿ, ತ್ರಿಕೋನ ಸ್ಪರ್ಧೆ. ಆದರೆ, ಸತತ 18 ವರ್ಷಗಳಿಂದ ಏಕ ವ್ಯಕ್ತಿಯದ್ದೇ ಹಿಡಿತ.

ವಿಧಾನ ಪರಿಷತ್‌ ಉಪಸಭಾಪತಿಯೂ ಆಗಿರುವ ಮರಿತಿಬ್ಬೇಗೌಡ ಕಳೆದ ಮೂರು ಚುನಾವಣೆಗಳಲ್ಲಿ ಬೇರೆ ಬೇರೆ ಚಿಹ್ನೆಯಡಿ ಸ್ಪರ್ಧಿಸಿ ಶಿಕ್ಷಕ ಮತದಾರರ ಮನ ಗೆಲ್ಲುವಲ್ಲಿ ಯಶಸ್ವಿಯಾದವರು. 2000ದಲ್ಲಿ ಕಾಂಗ್ರೆಸ್‌ನಿಂದ, 2006ರಲ್ಲಿ ಪಕ್ಷೇತರರಾಗಿ, 2012ರಲ್ಲಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು.

ಈಗ ಪುನರ್‌ ಆಯ್ಕೆ ಬಯಸಿದ್ದಾರೆ. ಅವರು ಕಟ್ಟಿಕೊಂಡಿರುವ ಕೋಟೆ ಭೇದಿಸಲು ಕಾಂಗ್ರೆಸ್‌ನ ಎಂ.ಲಕ್ಷ್ಮಣ್‌, ಬಿಜೆಪಿಯ ಬಿ.ನಿರಂಜನಮೂರ್ತಿ ಪ್ರಯತ್ನ ನಡೆಸುತ್ತಿದ್ದಾರೆ. ಕ್ಷೇತ್ರವು ಚಾಮರಾಜನಗರದ ಗಡಿ ಭಾಗದಿಂದ ಹಿಡಿದು ಮೈಸೂರು, ಮಂಡ್ಯ, ಹಾಸನ ಜಿಲ್ಲೆಯವರೆಗೆ ವ್ಯಾಪಿಸಿಕೊಂಡಿದ್ದು, ಮೂರೂ ಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿವೆ. ಈ ಭಾಗದ ಮತದಾರರನ್ನು ತಲುಪಲು ಹರಸಾಹಸ ಪಡುತ್ತಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು, ಚಾಮರಾಜನಗರ ಜಿಲ್ಲೆಯಲ್ಲಿ ಅತಿ ಕಡಿಮೆ ಮತದಾರರು ಇದ್ದಾರೆ.

29 ವಿಧಾನಸಭಾ ಕ್ಷೇತ್ರಗಳು, ನಾಲ್ಕು ಲೋಕಸಭಾ ಕ್ಷೇತ್ರಗಳು, 26 ತಾಲ್ಲೂಕುಗಳು ಹಾಗೂ 2,365 ಶಿಕ್ಷಣ ಸಂಸ್ಥೆಗಳನ್ನು ಈ ಕ್ಷೇತ್ರ ಒಳಗೊಂಡಿದೆ.‌

ಜೆಡಿಎಸ್‌ ಹಾಗೂ ಕಾಂಗ್ರೆಸ್‌ ದೋಸ್ತಿಯಾದ ಬೆನ್ನಲೇ ನಡೆಯುತ್ತಿರುವ ಚುನಾವಣೆ ಇದಾಗಿದ್ದು, ಈ ಎರಡೂ ಪಕ್ಷಗಳ ಅಭ್ಯರ್ಥಿಗಳು ಪೈಪೋಟಿಗಿಳಿದಿರುವುದು ಕುತೂಹಲ ಮೂಡಿಸಿದೆ. ‘ಅಲ್ಲಿ ಅಧಿಕಾರಕ್ಕಾಗಿ ಜೋಡಿ; ಇಲ್ಲಿ ಗೆಲುವಿಗಾಗಿ ಪೈಪೋಟಿ’ ಎಂಬ ಮಾತು ಚಾಲ್ತಿಯಲ್ಲಿದೆ.

ಒಂದೂವರೆ ವರ್ಷದಿಂದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆ ಖಾಲಿ ಬಿದ್ದಿರುವುದಕ್ಕೆ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಶಿಕ್ಷಕರ ವೇತನ ತಾರತಮ್ಯ, ವೇತನ ವಿಳಂಬ, ಕಾಲ್ಪನಿಕ ವೇತನ, ಕಾಲಮಿತಿ ಬಡ್ತಿ, ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ಬಳಸುತ್ತಿರುವುದು, ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಸಮಸ್ಯೆ, ಉಪನ್ಯಾಸಕರ ಕೊರತೆ, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ನ್ಯೂನತೆ ವಿಚಾರ ಇಟ್ಟುಕೊಂಡು ಮತಯಾಚಿಸುತ್ತಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ, ಹಾಸನ, ಭಾಗಶಃ ಮೈಸೂರು ಜಿಲ್ಲೆಯಲ್ಲಿ ಪಾರಮ್ಯ ಮೆರೆದಿರುವ ಜೆಡಿಎಸ್‌ ಈಗ ವಿಶ್ವಾಸದ ಚಿಲುಮೆ. ಕಾಂಗ್ರೆಸ್‌ ಸಹ ಮೈಕೊಡವಿಕೊಂಡು ಎದ್ದು ನಿಲ್ಲುವ ಪ್ರಯತ್ನದಲ್ಲಿದೆ. ವಿಧಾನಸಭೆ ಚುನಾವಣೆಯಲ್ಲಿ ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಖಾತೆ ತೆರೆದಿರುವುದು ಬಿಜೆಪಿ ಪಾಲಿಗೆ ಭರವಸೆ ಚಿಗುರೊಡೆಯುವಂತೆ ಮಾಡಿದೆ.

ಜಾತಿ ಲೆಕ್ಕಾಚಾರ: ಜೆಡಿಎಸ್‌, ಕಾಂಗ್ರೆಸ್‌ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದರೆ, ಬಿಜೆಪಿ ವೀರಶೈವ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಶಿಕ್ಷಕರ ಕ್ಷೇತ್ರದಲ್ಲಿ ಜಾತಿವಾರು ಲೆಕ್ಕಚಾರ ಫಲ ನೀಡುವುದಿಲ್ಲ ಎಂಬುದು ಕೆಲವರ ಲೆಕ್ಕಾಚಾರ. ಆದರೆ, ಮಠಗಳ ಭೇಟಿ ನಿರಂತರವಾಗಿ ಮುಂದುವರೆದಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳ ಮೂಲಕ ಒತ್ತಡ ಹೇರುವ ಕೆಲಸ ನಡೆಯುತ್ತಿದೆ.

ಎಂಜಿನಿಯರ್‌ ಪದವೀಧರ ಎಂ.ಲಕ್ಷ್ಮಣ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಶಿಕ್ಷಕರ ಸಮಸ್ಯೆ ಎತ್ತಿಕೊಂಡು ಪದೇಪದೇ ಹೋರಾಟ, ಪ್ರತಿಭಟನೆ ನಡೆಸುತ್ತಾ ಬಂದಿದ್ದು, 2010ರಲ್ಲಿ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. 2012ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶಿಕ್ಷಕರ ಕ್ಷೇತ್ರದಿಂದ ಕೇವಲ 700 ಮತಗಳಿಂದ ಪರಾಭವಗೊಂಡಿದ್ದರು. ‘ಸೋತಾಗಲೂ ಶಿಕ್ಷಕರ ಹಿತಕ್ಕಾಗಿ ಹೋರಾಟ ನಡೆಸಿದ್ದೇನೆ. ಒಂದು ಅವಕಾಶ ಮಾಡಿಕೊಡಿ. ಈ ಬಾರಿಯೂ ಸೋಲಿಸಿ ಬೀದಿಪಾಲು ಮಾಡಬೇಡಿ’ ಎಂದು ಹೇಳುತ್ತಲೇ ಪ್ರಚಾರದಲ್ಲಿ ತೊಡಗಿದ್ದಾರೆ. ಎರಡು ಬಾರಿ ಸೋತಿದ್ದು, ಮೂರನೇ ಸಲವಾದರೂ ಕೈ ಹಿಡಿಯುವಂತೆ ಮನವಿ ಮಾಡುತ್ತಿದ್ದಾರೆ.

ನಿರಂಜನಮೂರ್ತಿ ಇದೇ ಮೊದಲ ಬಾರಿ ಕಣಕ್ಕಿಳಿದಿದ್ದಾರೆ. ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಂಗ್ಲಿಷ್ ಉಪನ್ಯಾಸಕರು. ‘ಆಡಳಿತಗಾರನಾಗಿ, ಶಿಕ್ಷಕನಾಗಿ ಶಿಕ್ಷಕರ ಸಮಸ್ಯೆಗಳ ಅರಿವು ನನಗಿದೆ’ ಎನ್ನುತ್ತಾ ಮತಯಾಚಿಸುತ್ತಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಪಕ್ಷದ ಪ್ರಮುಖರು ಕ್ಷೇತ್ರ ಪ್ರವಾಸ ಕೈಗೊಂಡು ಗೆಲುವಿಗಾಗಿ ತಂತ್ರ ರೂಪಿಸಿದ್ದಾರೆ.

ಇನ್ನು ಮರಿತಿಬ್ಬೇಗೌಡರು, ತಮ್ಮ ಮೂರು ಅವಧಿಗಳ ಸಾಧನೆ ಹೇಳುತ್ತಾ ‘ಜೆಡಿಎಸ್‌ ಪಕ್ಷದ ಕುಮಾರಸ್ವಾಮಿ ಈಗ ರಾಜ್ಯದ ಮುಖ್ಯಮಂತ್ರಿ. ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಶತಸಿದ್ಧ’ ಎಂಬ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಮ ಳವಳ್ಳಿ ತಾಲ್ಲೂಕಿನ ಅಂಚೆದೊಡ್ಡಿ ಗ್ರಾಮದ ಮರಿತಿಬ್ಬೇಗೌಡ, ಎರಡು ಬಾರಿ ಮೈಸೂರು ವಿ.ವಿ ಸಿಂಡಿಕೇಟ್‌ ಸದಸ್ಯರಾಗಿದ್ದವರು.

ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿರುವ ಸರ್ಕಾರಿ, ಅನುದಾನ, ಅನುದಾನರಹಿತ ಪ್ರೌಢಶಾಲೆ, ಕಾಲೇಜು, ವೃತ್ತಿಪರ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತದಾನ ಮಾಡಬಹುದು. ಪ್ರಾಶಸ್ತ್ಯದ ಮತದಾನ ನಡೆಯುವುದರಿಂದ ಮತಪತ್ರ ಬಳಕೆ ಮಾಡುತ್ತಿದ್ದು, ಈ ಬಾರಿ ‘ನೋಟಾ’ಗೂ ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT