ಪೆಟ್ರೋಲ್‌ ಇನ್ನಷ್ಟು ತುಟ್ಟಿ?

7
ರೂಪಾಯಿ ಕುಸಿತ, ತೈಲ ಆಮದು ವೆಚ್ಚ ಹೆಚ್ಚಳ ನಿರೀಕ್ಷೆ

ಪೆಟ್ರೋಲ್‌ ಇನ್ನಷ್ಟು ತುಟ್ಟಿ?

Published:
Updated:
Deccan Herald

ಬೆಂಗಳೂರು: ಇಂಧನಗಳ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಈಗಿರುವ ಪರಿಸ್ಥಿತಿಯೇ ಮುಂದುವರಿದಲ್ಲಿ, ಈ ವರ್ಷದಲ್ಲಿ ಬೆಂಗಳೂರಿನಲ್ಲಿ ಒಂದು ಲೀಟರ್‌ ಪೆಟ್ರೋಲ್‌ ದರ ₹ 90ಕ್ಕೆ, ಡೀಸೆಲ್‌ ₹ 80ಕ್ಕೆ ಏರಿಕೆಯಾಗುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ.

ಬೆಂಗಳೂರಿನಲ್ಲಿ ಈಗಾಗಲೇ ಪೆಟ್ರೋಲ್‌ ದರ ₹ 80ರ ಸಮೀಪದಲ್ಲಿದ್ದು, ಡೀಸೆಲ್‌ ಬೆಲೆ ₹ 71.07 ಇದೆ. ಗುರುವಾರ ಪೆಟ್ರೋಲ್‌  ₹ 79.80 ಮತ್ತು ಡೀಸೆಲ್‌ ₹ 71.07 ದರದಲ್ಲಿ ಮಾರಾಟವಾಗಿವೆ. ಆಗಸ್ಟ್‌ 15ರ ದರಗಳಿಗೆ ಹೋಲಿಸಿದರೆ, ಆಗಸ್ಟ್‌ 16 ರಂದು ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಕ್ರಮವಾಗಿ 5 ಪೈಸೆ ಮತ್ತು 6 ಪೈಸೆಯಷ್ಟು ಹೆಚ್ಚಾಗಿವೆ.

ಆಗಸ್ಟ್‌ 5 ರಿಂದ ಆಗಸ್ಟ್‌ 12ರವರೆಗಿನ ಇಂಧನ ದರಗಳ ಏರಿಳಿತ ಗಮನಿಸಿದರೆ, ಪೆಟ್ರೋಲ್‌ ಪ್ರತಿ ಲೀಟರಿಗೆ 39 ಪೈಸೆಯಷ್ಟು ಮತ್ತು ಡೀಸೆಲ್‌ ಪ್ರತಿ ಲೀಟರ್‌ಗೆ 46 ಪೈಸೆಯಷ್ಟು ಏರಿಕೆಯಾಗಿದೆ.

ದೆಹಲಿ ದರ: ನವದೆಹಲಿಯಲ್ಲಿ ಗುರುವಾರ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರ 6 ಪೈಸೆಯಷ್ಟು ಹೆಚ್ಚಾಗಿದೆ. ಇದರಿಂದ  ಪೆಟ್ರೋಲ್‌ ಬೆಲೆ ₹ 77.20 ಮತ್ತು ಡೀಸೆಲ್‌ ₹ 68.78ಕ್ಕೆ ತಲುಪಿದೆ.

ಏರಿಕೆಗೆ ಕಾರಣಗಳೇನು?: ಭಾರತವು ಶೇ 80ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇದೀಗ ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ತೈಲ ಆಮದಿಗೆ ಮಾಡುವ ವೆಚ್ಚವೂ ಹೆಚ್ಚಾಗಲಿದೆ. ಇದರಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಹೆಚ್ಚಾಗಲಿವೆ.

ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ರೂಪಾಯಿ ಮೌಲ್ಯ ಕುಸಿತದಿಂದ 2018–19ರಲ್ಲಿ ಕಚ್ಚಾ ತೈಲ ಆಮದು ವೆಚ್ಚವು ₹ 1.82 ಲಕ್ಷ ಕೋಟಿಯಷ್ಟು ಹೆಚ್ಚಾಗಲಿದೆ.

ಹಣಕಾಸು ವರ್ಷದ ಆರಂಭದಲ್ಲಿ, ಈ ಬಾರಿ ಕಚ್ಚಾ ತೈಲ ಆಮದಿಗೆ ₹ 7.02 ಲಕ್ಷ ಕೋಟಿ ತಗಲುವ ಅಂದಾಜು ಮಾಡಲಾಗಿತ್ತು. ಒಂದು ಬ್ಯಾರೆಲ್‌ಗೆ 65 ಡಾಲರ್‌ನಂತೆ ಮತ್ತು ಡಾಲರ್ ಎದುರು ರೂಪಾಯಿ ವಿನಿಮಯ ದರ ₹ 65ರಂತೆ ಪರಿಗಣಿಸಿ ಈ ವೆಚ್ಚ ಲೆಕ್ಕ ಹಾಕಲಾಗಿತ್ತು. ಆಗಸ್ಟ್‌ 14ರವರೆಗೆ ರೂಪಾಯಿ ವಿನಿಮಯ ದರವು ಸರಾಸರಿ ₹ 67.6 ರಷ್ಟಿತ್ತು. ಹಣಕಾಸು ವರ್ಷದ ಇನ್ನುಳಿದ ಅವಧಿಯವರೆಗೆ ರೂಪಾಯಿ ₹ 70ರ ಆಸುಪಾಸಿನಲ್ಲಿ ಇದ್ದರೆ, ತೈಲ ಆಮದು ವೆಚ್ಚ ₹ 7.98 ಲಕ್ಷ ಕೋಟಿಗೆ ತಲುಪಲಿದೆ ಎಂದು ಅವರು ಸುದ್ದಿಸಂಸ್ಥೆ ‘ಪಿಟಿಐ’ಗೆ ತಿಳಿಸಿದ್ದಾರೆ.

ರೂಪಾಯಿ ಕುಸಿತದಿಂದ ರಫ್ತುದಾರರಿಗೆ, ಒಎನ್‌ಜಿಸಿಯಂತಹ ದೇಶಿ ತೈಲ ತಯಾರಕರಿಗೆ ಹೆಚ್ಚಿನ ಲಾಭವಾಗಲಿದೆ. ಆದರೆ, ಇದರಿಂದ ಪೆಟ್ರೋಲ್‌ ಮತ್ತು ಡೀಸೆಲ್ ದರಗಳಲ್ಲಿ ಏರಿಕೆಯಾಗಲಿದೆ. ಇದರ ಪೂರ್ಣ ಪ್ರಮಾಣದ ಪರಿಣಾಮ ಸೆಪ್ಟೆಂಬರ್‌ನಿಂದ ಅನುಭವಕ್ಕೆ ಬರಲಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 15 ದಿನಗಳ ಹಿಂದಿನ ಸರಾಸರಿ ದರಗಳ ಆಧಾರದ ಮೇಲೆ ನಿತ್ಯವೂ ಚಿಲ್ಲರೆ ಮಾರಾಟ ದರ ನಿಗದಿ ಮಾಡುತ್ತವೆ. ಅಂದರೆ, ಗುರುವಾರದ ದರವು (ಆ 16) ಆಗಸ್ಟ್‌ 1 ರಿಂದ 15ರವರೆಗಿನ ಅಂತರರಾಷ್ಟ್ರೀಯ ಕಚ್ಚಾ ತೈಲ ದರ ಮತ್ತು ವಿನಿಮಯ ದರದ ಸರಾಸರಿ ಮೇಲೆ ನಿರ್ಧಾರವಾಗಿರುತ್ತದೆ. ಈ ತಿಂಗಳಲ್ಲಿ ವಿನಿಮಯ ದರವು 68.3 ರಿಂದ 68.6 ರ ಆಸುಪಾಸಿನಲ್ಲಿದೆ. ಆದರೆ, ಗುರುವಾರ ರೂಪಾಯಿ ಮೌಲ್ಯದಲ್ಲಿ ಆಗುವ ಇಳಿಕೆಯ ಪರಿಣಾಮವು ತಕ್ಷಣಕ್ಕೆ ಅನುಭವಕ್ಕೆ ಬರುವುದಿಲ್ಲ.

*
ಇದೇ ಸ್ಥಿತಿ ಮುಂದುವರಿದಲ್ಲಿ, ಈ ವರ್ಷ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಪ್ರತಿ ಲೀಟರಿಗೆ ಒಟ್ಟಾರೆ ₹ 10 ರಂತೆ ತುಟ್ಟಿಯಾಗುವ ಸಾಧ್ಯತೆ ಇದೆ.
-ಅರುಣ ಹುಂಡೇಕಾರ, ರಾಜ್ಯ ಪೆಟ್ರೋಲಿಯಂ ವಿತರಕರ ಸಂಘ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !