ಮಂಗಳವಾರ, ಜುಲೈ 27, 2021
24 °C

ಗ್ರಾಹಕರಿಂದ ದುಬಾರಿ ತೆರಿಗೆ ಪಾವತಿ: ಎರಡನೇ ದಿನವೂ ಪೆಟ್ರೋಲ್‌ ತುಟ್ಟಿ

ಅನ್ನಪೂರ್ಣ ಸಿಂಗ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ‌: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸತತ ಎರಡನೇ ದಿನವೂ ಪೆಟ್ರೋಲ್‌ ಮತ್ತು ಡೀಸೆಲ್‌ ಪ್ರತಿ ಲೀಟರ್‌ ಮಾರಾಟ ಬೆಲೆಯನ್ನು 60 ಪೈಸೆಯಂತೆ ಹೆಚ್ಚಿಸಿವೆ.

83 ದಿನಗಳ ನಂತರ ಪ್ರತಿ ದಿನ ಇಂಧನ ಬೆಲೆ ಪರಿಷ್ಕರಿಸುವ ನೀತಿ ಜಾರಿಗೆ ಬಂದಂತಾಗಿದೆ. ಎರಡು ದಿನಗಳಲ್ಲಿ ಇಂಧನಗಳ ಬೆಲೆ ಈಗ ಪ್ರತಿ ಲೀಟರ್‌ಗೆ ₹ 1.20ರಂತೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ₹ 74.75 ಮತ್ತು ಡೀಸೆಲ್‌ ಬೆಲೆ ₹ 67.16ಕ್ಕೆ ತಲುಪಿದೆ.

ಪ್ರತಿ ಲೀಟರ್‌ ಪೆಟ್ರೋಲ್‌ನ ಮೂಲ ಬೆಲೆ  ₹ 18ರಷ್ಟಿದೆ. ತೆರಿಗೆ ಪ್ರಮಾಣವು ₹ 50ರಷ್ಟಿದೆ. ಬಂಕ್‌ಗಳಲ್ಲಿ ಮಾರಾಟ ಮಾಡುವ ಬೆಲೆ ₹ 74ರ  ಆಸುಪಾಸಿನಲ್ಲಿ ಇದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಕ್ಸೈಸ್‌ ಡ್ಯೂಟಿ ಮತ್ತು ಮೌ್ಲ್ಯವರ್ಧಿತ ತೆರಿಗೆ (ವ್ಯಾಟ್‌) ರೂಪದಲ್ಲಿ ಗ್ರಾಹಕರು ಪ್ರತಿ ಲೀಟರ್‌ ಪೆಟ್ರೋಲ್‌ಗೆ ಶೇ 275ರಷ್ಟು ತೆರಿಗೆ ಪಾವತಿಸುತ್ತಾರೆ. ಫೆಬ್ರುವರಿಯಲ್ಲಿ ಈ ಹೊರೆ ಶೇ 107ರಷ್ಟಿತ್ತು. ಡೀಸೆಲ್‌ ಮೇಲಿನ ತೆರಿಗೆ ಪಾವತಿಯ ಹೊರೆ ಶೇ 255ರಷ್ಟಿದೆ. ಡೀಸೆಲ್‌ನ ಮೂಲ ಬೆಲೆ ಪ್ರತಿ ಲೀಟರ್‌ಗೆ ₹ 18.50ರಷ್ಟಿದೆ. ಮಾರಾಟ ಬೆಲೆಯು ಪ್ರತಿ ಲೀಟರ್‌ಗೆ ಈಗ ₹ 67ರ ಆಸುಪಾಸಿನಲ್ಲಿಇದೆ.

ಪೆಟ್ರೋಲ್‌ ಪಂಪ್‌ಗಳಲ್ಲಿನ ಮಾರಾಟ ಬೆಲೆ ಮೇಲಿನ ಒಟ್ಟಾರೆ ತೆರಿಗೆ ಹೊರೆಯು ಶೇ 69ರಷ್ಟಿದೆ. ಇದು ವಿಶ್ವದಲ್ಲಿಯೇ ಗರಿಷ್ಠ ಮಟ್ಟದ್ದಾಗಿದೆ. ಅಮೆರಿಕ (ಶೇ 19), ಜಪಾನ್‌ (ಶೇ 47), ಇಂಗ್ಲೆಂಡ್‌ (ಶೇ 62) ಮತ್ತು ಫ್ರಾನ್ಸ್‌ನಲ್ಲಿ ಶೇ 63ರಷ್ಟಿದೆ.

ಮಾರ್ಚ್‌ ಮತ್ತು ಮೇನಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ್ದ ಎಕ್ಸೈಸ್‌ ಡ್ಯೂಟಿಯಿಂದಾಗಿ   ಗ್ರಾಹಕರು ಗರಿಷ್ಠ ಪ್ರಮಾಣದಲ್ಲಿ ತೆರಿಗೆ ಪಾವತಿಸಬೇಕಾಗಿದೆ.

ತೈಲ ಮಾರಾಟ ಕಂಪನಿಗಳು ಅಡುಗೆ ಅನಿಲ (ಎಲ್‌ಪಿಜಿ) ಮತ್ತು ವಿಮಾನ ಇಂಧನ (ಎಟಿಎಫ್‌) ಬೆಲೆಯನ್ನು ನಿಯಮಿತವಾಗಿ ಪರಿಷ್ಕರಿಸುತ್ತ ಬಂದಿದ್ದರೂ, ಮಾರ್ಚ್‌ 16 ರಿಂದ  ಇಂಧನ ಬೆಲೆ ಪರಿಷ್ಕರಿಸಿರಲಿಲ್ಲ. ಈ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತೀವ್ರ ಏರಿಳಿತ ದಾಖಲಿಸಿತ್ತು.

ತೈಲ ಬೆಲೆ ಕುಸಿತದ ಲಾಭ ಪಡೆಯಲು ಸರ್ಕಾರ ಮಾರ್ಚ್‌ನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಡ್ಯೂಟಿಯನ್ನು ಪ್ರತಿ ಲೀಟರ್‌ಗೆ ₹ 3ರಂತೆ ಹೆಚ್ಚಿಸಿತ್ತು. ಮೇ 6 ರಂದು ಮತ್ತೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಕ್ರಮವಾಗಿ ₹ 10 ಮತ್ತು ₹ 13ರಂತೆ ಎಕ್ಸೈಸ್‌ ಡ್ಯೂಟಿ ವಿಧಿಸಿತ್ತು.

ಇಂಧನಗಳ ಬೆಲೆ ಏರಿಕೆಯನ್ನು ಕಾಂಗ್ರೆಸ್‌ ಕಟುವಾಗಿ ಟೀಕಿಸಿದೆ. ಬಡವಾಗಿರುವ ಸರ್ಕಾರಕ್ಕೆ ಹೆಚ್ಚು ತೆರಿಗೆ ಬೇಕಾಗಿದೆ. ತೈಲ ಮಾರಾಟ ಕಂಪನಿಗಳೂ ಬಡವಾಗಿವೆ. ಹೀಗಾಗಿ ಅವುಗಳು ಬೆಲೆ ಏರಿಸುತ್ತಿವೆ. ಬಡವರು ಮತ್ತು ಮಧ್ಯಮ ವರ್ಗದವರು ಮಾತ್ರ ಬಡವರಾಗಿಲ್ಲ. ಹೀಗಾಗಿ ಅವರು ಹೆಚ್ಚು ಬೆಲೆ ತೆರುತ್ತಿದ್ದಾರೆ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು