ಶುಕ್ರವಾರ, ಅಕ್ಟೋಬರ್ 18, 2019
23 °C
ಪೆಟ್ರೋಲ್‌–ಡೀಸೆಲ್‌ ದರ ಗಗನಕ್ಕೆ: ಲೀಟರ್‌ಗೆ ₹2 ಎಕ್ಸೈಸ್‌ ಸುಂಕ ಹೆಚ್ಚಳ ಚಿಂತನೆ

ದರ ಇಳಿದರೆ ಸುಂಕದ ಬರೆ?

Published:
Updated:

ನವದೆಹಲಿ: ಪೆಟ್ರೋಲ್‌, ಡೀಸೆಲ್‌ ದರವು ಇನ್ನಷ್ಟು ಹೆಚ್ಚುವ ಆತಂಕ ಎದುರಾಗಿದೆ. ಪೆಟ್ರೋಲ್‌ ದರವು 2018ರ ನವೆಂಬರ್‌ 28ರ ಬಳಿಕ ಈಗ ಗರಿಷ್ಠ ಮಟ್ಟಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹76.44ಕ್ಕೆ ಏರಿಕೆಯಾಗಿದೆ. ಡೀಸೆಲ್‌ ದರವೂ ಭಾರಿ ಏರಿಕೆ ಕಂಡಿದೆ.

ಇದರ ನಡುವೆಯೇ, ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕ ಏರಿಸುವ ಸುಳಿವನ್ನು ಕೇಂದ್ರ ಸರ್ಕಾರ ನೀಡಿದೆ. ಸರ್ಕಾರದ ತೆರಿಗೆ ಮತ್ತು ತೆರಿಗೆಯೇತರ ವರಮಾನ ಸಂಗ್ರಹ ಕಡಿಮೆಯಾಗಿದೆ. ಈ ಕೊರತೆಯನ್ನು ತುಂಬಿಕೊಳ್ಳಲು ತೈಲ ಉತ್ಪನ್ನಗಳ ಮೇಲೆ ಸುಂಕ ಏರಿಸುವ ಚಿಂತನೆ ನಡೆದಿದೆ ಎನ್ನಲಾಗಿದೆ. 

ಸುಂಕ ಏರಿಕೆ ನಿರ್ಧಾರವನ್ನು ತಕ್ಷಣವೇ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ. ಕಚ್ಚಾ ತೈಲ ದರ ಇಳಿಕೆಯಾಗಿ ಪೆಟ್ರೋಲ್‌–ಡೀಸೆಲ್‌ ದರ ಕಡಿಮೆಯಾದ ಸಂದರ್ಭದಲ್ಲಿ ಸುಂಕ ಹೇರಬಹುದು ಎಂದು ಹೇಳಲಾಗಿದೆ. 

ಪ್ರತಿ ಲೀಟರ್‌ ಮೇಲೆ ₹2ರಷ್ಟು ಸುಂಕ ಹೇರುವ ಯೋಚನೆ ಇದೆ. ವರಮಾನ ಹೆಚ್ಚಿಸಿಕೊಳ್ಳಲು ಸರ್ಕಾರದ ಮುಂದೆ ಇರುವ ಮುಖ್ಯ ಮಾರ್ಗ ಇದು ಎಂದು ಮೂಲಗಳು ಹೇಳಿವೆ. ಜುಲೈಯಲ್ಲಿ ಕೂಡ ಎಕ್ಸೈಸ್‌ ಮತ್ತು ರಸ್ತೆ ಮೂಲಸೌಕರ್ಯ ಸೆಸ್‌ಅನ್ನು ₹2ರಷ್ಟು ಕೇಂದ್ರ ಸರ್ಕಾರವು ಏರಿಸಿತ್ತು. 

ಪೆಟ್ರೋಲ್‌–ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕವನ್ನು ₹1ರಷ್ಟು ಏರಿಕೆ ಮಾಡಿದರೆ ಸರ್ಕಾರಕ್ಕೆ ₹14,000 ಕೋಟಿಯಿಂದ ₹15,000 ಕೋಟಿಯಷ್ಟು ದೊರೆಯಲಿದೆ. 

ಇದೇ 16ರ ಬಳಿಕ ಪ್ರತಿ ದಿನವೂ ಪೆಟ್ರೋಲ್‌ ಬೆಲೆ ಏರುತ್ತಲೇ ಇದೆ. ಸೌದಿ ಅರೇಬಿಯಾದ ಅತಿ ದೊಡ್ಡ ತೈಲ ಸಂಸ್ಕರಣ ಘಟಕದ ಮೇಲೆ ಡ್ರೋನ್‌ ದಾಳಿಯಾದ ನಂತರ ಬ್ರೆಂಟ್‌ ಕಚ್ಚಾ ತೈಲದ ದರ ಶೇ 19ರಷ್ಟು ಏರಿಕೆಯಾಗಿತ್ತು. 1991ರ ಬಳಿಕ ಶೇಕಡಾವಾರು ಪ್ರಮಾಣದಲ್ಲಿ ಇದು ಅತಿ ದೊಡ್ಡ ಏರಿಕೆ. ಬ್ಯಾರೆಲ್‌ಗೆ 71 ಡಾಲರ್‌ ಆಗಿತ್ತು (₹5,028). ಈಗ, ದರವು ಬ್ಯಾರೆಲ್‌ಗೆ 63.80 ಡಾಲರ್‌ಗೆ (₹4,518) ಇಳಿದಿದೆ. ಸೌದಿಯ ಅರಾಮ್ಕೊ ಕಂಪನಿಯ ತೈಲ ಘಟಕಗಳು ಮುಂದಿನ ವಾರದ ಹೊತ್ತಿಗೆ ಉತ್ಪಾದನೆ ಆರಂಭಿಸುವ ನಿರೀಕ್ಷೆ ಇದೆ. ಹಾಗಾಗಿ, ಪೆಟ್ರೋಲ್‌ ದರ ಇಳಿಕೆಯ ಆಶಾಭಾವ ಮೂಡಿದೆ. 

ಆದರೆ, ಸೋಮವಾರವೂ ತೈಲ ಉತ್ಪನ್ನಗಳ ದರ ಏರಿಕೆಯಾಯಿತು. ಕೊಲ್ಲಿ ಪ್ರದೇಶದಲ್ಲಿ ಅಮೆರಿಕದ ಪಡೆಗಳ ಇರುವಿಕೆಯು ಇಡೀ ಪ್ರದೇಶದ ಸ್ಥಿರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಇರಾನ್‌ ಎಚ್ಚರಿಕೆ ನೀಡಿದ್ದು ಈ ಏರಿಕೆಗೆ ಕಾರಣ. 

ಏರಿಕೆಯ ಹೊರೆ

ಪ್ರತಿ ಬ್ಯಾರಲ್‌ ಕಚ್ಚಾ ತೈಲದ ದರವು ಒಂದು ಡಾಲರ್‌ ಏರಿಕೆಯಾದರೆ ಭಾರತದ ಮೇಲೆ ಆಗುವ ಹೆಚ್ಚುವರಿ ಹೊರೆ 150 ಕೋಟಿ ಡಾಲರ್‌
(₹ 10,650 ಕೋಟಿ)

ಕಚ್ಚಾ ತೈಲ ದರವು ಬ್ಯಾರಲ್‌ಗೆ 10 ಡಾಲರ್‌ ಏರಿಕೆಯಾದರೆ ಪೆಟ್ರೋಲ್‌ ದರವು ಲೀಟರ್‌ಗೆ ₹6ರಷ್ಟು ಏರಿಕೆಯಾಗುತ್ತದೆ

ಭಾರತದಲ್ಲಿ ಬಳಕೆಯಾಗುವ ತೈಲದ ಶೇ 80ರಷ್ಟಕ್ಕೆ ಆಮದಿನ ಮೇಲೆ ಅವಲಂಬನೆ

ಕಚ್ಚಾ ತೈಲದ ಬೆಲೆ ಏರಿಕೆಯಿಂದ ಡಾಲರ್‌ ಎದುರು ರೂಪಾಯಿ ಮೌಲ್ಯವೂ ಕುಸಿಯುತ್ತದೆ.

Post Comments (+)