ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್‌ ದರ ಗರಿಷ್ಠ ಮಟ್ಟಕ್ಕೆ

Last Updated 13 ಜನವರಿ 2021, 12:11 IST
ಅಕ್ಷರ ಗಾತ್ರ

ನವದೆಹಲಿ: ದೇಶದ ರಾಜಧಾನಿ ನವದೆಹಲಿಯಲ್ಲಿ ಬುಧವಾರ ಪೆಟ್ರೋಲ್‌ ದರ ಪ್ರತಿ ಲೀಟರಿಗೆ ₹ 84.45ಕ್ಕೆ ತಲುಪುವ ಮೂಲಕ ಗರಿಷ್ಠ ಮಟ್ಟವನ್ನು ತಲುಪಿತು. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಐದು ದಿನಗಳ ಬಳಿಕ ಮತ್ತೆ ಇಂಧನ ದರ ಏರಿಕೆ ಮಾಡಿವೆ.

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ ಮತ್ತು ಡೀಸೆಲ್‌ ದರ ತಲಾ 25 ಪೈಸೆ ಹೆಚ್ಚಾಗಿದೆ. ಇದರಿಂದಾಗಿ ಪೆಟ್ರೋಲ್‌ ದರ ₹ 84.45 ಮತ್ತು ಡೀಸೆಲ್‌ ದರ ₹ 74.63ಕ್ಕೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್‌ ದರ ₹ 91.07 ಹಾಗೂ ಡೀಸೆಲ್‌ ದರ ₹ 81.34ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ ದರದಲ್ಲಿ 26 ಪೈಸೆ ಹಾಗೂ ಡೀಸೆಲ್‌ ದರದಲ್ಲಿ 27 ಪೈಸೆ ಹೆಚ್ಚಳವಾಗಿದೆ. ಇದರಿಂದ ಮಾರಾಟ ದರವು ಕ್ರಮವಾಗಿ ₹ 87.30 ಹಾಗೂ ₹ 79.14ಕ್ಕೆ ಏರಿಕೆಯಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಸತತ ಏಳನೇ ದಿನವೂ ಏರಿಕೆ ಕಂಡಿದೆ. ಹೀಗಾಗಿ ತೈಲ ಮಾರಾಟ ಕಂಪನಿಗಳು ದೇಶಿ ಮಾರುಕಟ್ಟೆಯಲ್ಲಿ ಮತ್ತೆ ಇಂಧನ ದರ ಏರಿಕೆ ಮಾಡಿವೆ. ಅಮೆರಿಕದ ವೆಸ್ಟ್‌ ಟೆಕ್ಸಸ್‌ ಇಂಡರ್‌ಮಿಡಿಯಟ್‌ (ಡಬ್ಲ್ಯುಟಿಐ) ದರ್ಜೆಯ ಕಚ್ಚಾ ತೈಲ ದರ ಶೇ 1.3ರಷ್ಟು ಹೆಚ್ಚಾಗಿ ಪ್ರತಿ ಬ್ಯಾರಲ್‌ಗೆ 53.88 ಡಾಲರ್‌ಗಳಿಗೆ ಹಾಗೂ ಬ್ರೆಂಟ್ ತೈಲ ದರ 79 ಸೆಂ‌ಟ್‌ಗಳಷ್ಟು ಹೆಚ್ಚಾಗಿ ಪ್ರತಿ ಬ್ಯಾರಲ್‌ಗೆ 57.37 ಡಾಲರ್‌ಗೆ ಏರಿಕೆಯಾಗಿದೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕ ಪ್ರತಿ ಲೀಟರಿಗೆ ಕ್ರಮವಾಗಿ ₹ 32.98 ಹಾಗೂ ₹ 19.32 ಇದೆ. ದೆಹಲಿಯಲ್ಲಿ ವ್ಯಾಟ್‌ ಪೆಟ್ರೋಲ್‌ಗೆ ₹ 19.32 ಹಾಗೂ ಡೀಸೆಲ್‌ಗೆ ₹ 10.85 ಇದೆ.

2020ರ ಮೇ ತಿಂಗಳ ಬಳಿಕ ಇಲ್ಲಿಯವರೆಗೆ ಒಂದು ಲೀಟರ್‌ ಪೆಟ್ರೋಲ್ ದರ ₹ 14.79ರಷ್ಟು ಹಾಗೂ ಡೀಸೆಲ್‌ ದರ ₹ 12.34ರಷ್ಟು ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT