ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನಡೆಯ ಭೀತಿಯಲ್ಲಿ ನ್ಯೂಜಿಲೆಂಡ್‌

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕ್ರೈಸ್ಟ್‌ಚರ್ಚ್‌: ಸ್ಟುವರ್ಟ್‌ ಬ್ರಾಡ್‌ (38ಕ್ಕೆ4) ಮತ್ತು ಜೇಮ್ಸ್‌ ಆ್ಯಂಡರ್ಸನ್‌ (43ಕ್ಕೆ2) ಅವರ ಪರಿಣಾಮಕಾರಿ  ದಾಳಿಗೆ ಬೆದರಿದ ನ್ಯೂಜಿಲೆಂಡ್‌ ತಂಡದವರು ಇಂಗ್ಲೆಂಡ್‌ ಎದುರಿನ ಎರಡನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಹಿನ್ನಡೆಯಭೀತಿಯಲ್ಲಿದ್ದಾರೆ.

ಹೇಗ್ಲೆ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ತಂಡ 96.5 ಓವರ್‌ಗಳಲ್ಲಿ 307ರನ್‌ ಕಲೆಹಾಕಿದೆ. ಪ್ರಥಮ ಇನಿಂಗ್ಸ್‌ ಶುರು ಮಾಡಿರುವ ಕೇನ್‌ ವಿಲಿಯಮ್ಸನ್‌ ಪಡೆ ದಿನದಾಟದ ಅಂತ್ಯಕ್ಕೆ 74.5 ಓವರ್‌ಗಳಲ್ಲಿ 6 ವಿಕೆಟ್‌ಗೆ 192ರನ್‌ ಗಳಿಸಿದೆ. ಆತಿಥೇಯ ತಂಡ ಇನ್ನು 115ರನ್‌ ಗಳಿಸಬೇಕಿದೆ.

ಇನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್‌ ತಂಡ ಖಾತೆ ತೆರೆಯುವ ಮುನ್ನವೇ ವಿಕೆಟ್‌ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಎರಡನೇ ಓವರ್‌ನಲ್ಲಿ ವೇಗದ ಬೌಲರ್‌ ಸ್ಟುವರ್ಟ್‌ ಬ್ರಾಡ್‌ ಆತಿಥೇಯರಿಗೆ ಮೊದಲ ಆಘಾತ ನೀಡಿದರು. ತಾವು ಹಾಕಿದ ಮೂರನೇ ಎಸೆತದಲ್ಲಿ ಆರಂಭಿಕ ಆಟಗಾರ ಟಾಮ್‌ ಲಥಾಮ್‌ (0) ವಿಕೆಟ್‌ ಉರುಳಿಸಿದರು.

ಇದರ ಬೆನ್ನಲ್ಲೇ ಜೀತ್‌ ರಾವಲ್‌ (5) ಜೇಮ್ಸ್‌ ಆ್ಯಂಡರ್ಸನ್‌ಗೆ ವಿಕೆಟ್‌ ಕೊಟ್ಟು ಪೆವಿಲಿಯನ್‌ ಸೇರಿಕೊಂಡರು. ಅನುಭವಿ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ (3) ಮತ್ತು ಹೆನ್ರಿ ನಿಕೊಲ್ಸ್‌ (0) ಅವರ ವಿಕೆಟ್‌ಗಳನ್ನೂ ಕಬಳಿಸಿದ ಬ್ರಾಡ್‌,  ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸಲು ಕಾರಣರಾದರು.

ನಂತರ ನಾಯಕ ಕೇನ್ ವಿಲಿಯಮ್ಸನ್‌ (22; 48ಎ, 1ಬೌಂ) ಮತ್ತು ವಿಕೆಟ್‌ ಕೀಪರ್‌ ಬಿ.ಜೆ.ವಾಟ್ಲಿಂಗ್‌ (ಬ್ಯಾಟಿಂಗ್‌ 77; 196ಎ, 10ಬೌಂ, 1ಸಿ) ಇಂಗ್ಲೆಂಡ್‌ ಬೌಲರ್‌ಗಳಿಗೆ ಕೊಂಚ ಪ್ರತಿರೋಧ ಒಡ್ಡಿದರು. 20ನೇ ಓವರ್‌ನಲ್ಲಿ ವಿಲಿಯಮ್ಸನ್‌, ಆ್ಯಂಡರ್ಸನ್‌ಗೆ ವಿಕೆಟ್‌ ಒಪ್ಪಿಸಿದರು. ಇದರೊಂದಿಗೆ ಆತಿಥೇಯರ ಸಂಕಷ್ಟ ಹೆಚ್ಚಿತ್ತು.

ಬಳಿಕ ವಾಟ್ಲಿಂಗ್‌ ಮತ್ತು ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ (72; 151ಎ, 7ಬೌಂ) ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದರು. ಪ್ರವಾಸಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಆರನೇ ವಿಕೆಟ್‌ಗೆ 142ರನ್‌ ಸೇರಿಸಿ ನ್ಯೂಜಿಲೆಂಡ್‌ ಇನಿಂಗ್ಸ್‌ಗೆ ಜೀವ ತುಂಬಿತು. ವಾಟ್ಲಿಂಗ್‌ ಅವರು ಟೆಸ್ಟ್‌ ಮಾದರಿಯಲ್ಲಿ 14ನೇ ಅರ್ಧಶತಕ ದಾಖಲಿಸಿದರು.

ಬೇಸ್ಟೋ ಶತಕ: ಇದಕ್ಕೂ ಮುನ್ನ ಇಂಗ್ಲೆಂಡ್‌ ತಂಡದ ಜಾನಿ ಬೇಸ್ಟೋ (101;170ಎ, 11ಬೌಂ, 1ಸಿ) ಶತಕದ ಸಂಭ್ರಮ ಆಚರಿಸಿದರು. ಶುಕ್ರವಾರ 97ರನ್‌ ಗಳಿಸಿದ್ದ ಅವರು ಈ ಮೊತ್ತಕ್ಕೆ ನಾಲ್ಕು ರನ್‌ ಸೇರಿಸಿ ಔಟಾದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ, ಮೊದಲ ಇನಿಂಗ್ಸ್‌, 96.5 ಓವರ್‌ಗಳಲ್ಲಿ 307 (ಜಾನಿ ಬೇಸ್ಟೋ 101, ಜ್ಯಾಕ್‌ ಲೀಚ್‌ 16; ಟ್ರೆಂಟ್‌ ಬೌಲ್ಟ್‌ 87ಕ್ಕೆ4, ಟಿಮ್‌ ಸೌಥಿ 62ಕ್ಕೆ6).

ನ್ಯೂಜಿಲೆಂಡ್‌: ಪ್ರಥಮ ಇನಿಂಗ್ಸ್‌, 74.5 ಓವರ್‌ಗಳಲ್ಲಿ 6 ವಿಕೆಟ್‌ಗೆ 192 (ಜೀತ್‌ ರಾವಲ್‌ 5, ಕೇನ್‌ ವಿಲಿಯಮ್ಸನ್‌ 22, ಬಿ.ಜೆ.ವಾಟ್ಲಿಂಗ್‌ ಬ್ಯಾಟಿಂಗ್‌ 77, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 72, ಟಿಮ್‌ ಸೌಥಿ ಬ್ಯಾಟಿಂಗ್‌ 13; ಜೇಮ್ಸ್‌ ಆ್ಯಂಡರ್ಸನ್‌ 43ಕ್ಕೆ2, ಸ್ಟುವರ್ಟ್‌ ಬ್ರಾಡ್‌ 38ಕ್ಕೆ4).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT