ಪಿಎನ್‌ಬಿ ಮಾಜಿ ಎಂ.ಡಿ ಉಷಾ ವಜಾ

7
₹ 14 ಸಾವಿರ ಕೋಟಿಗಳ ನೀರವ್‌ ಮೋದಿ ವಂಚನೆ ಹಗರಣ

ಪಿಎನ್‌ಬಿ ಮಾಜಿ ಎಂ.ಡಿ ಉಷಾ ವಜಾ

Published:
Updated:
Deccan Herald

ನವದೆಹಲಿ: ನೀರವ್‌ ಮೋದಿ ವಂಚನೆಯ ಹಗರಣದಲ್ಲಿ ಸಿಲುಕಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ (ಪಿಎನ್‌ಬಿ) ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಉಷಾ ಅನಂತಸುಬ್ರಮಣಿಯನ್‌ ಅವರನ್ನು ಕೇಂದ್ರ ಸರ್ಕಾರ ಸೇವೆಯಿಂದ ವಜಾಗೊಳಿಸಿದೆ.

ಅಲಹಾಬಾದ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಉಷಾ ಅವರ ಬಳಿ ಇದ್ದ ಅಧಿಕಾರವನ್ನು ಮೂರು ತಿಂಗಳ ಹಿಂದೆಯೇ ಮೊಟಕುಗೊಳಿಸಲಾಗಿತ್ತು. ಬ್ಯಾಂಕ್‌ನ ನಿರ್ದೇಶಕ ಮಂಡಳಿಯು ಅವರ ಬಳಿ ಇದ್ದ ಎಲ್ಲ ಕಾರ್ಯನಿರ್ವಹಣಾ ಅಧಿಕಾರವನ್ನು ಹಿಂದಕ್ಕೆ ಪಡೆದಿತ್ತು.

₹ 14 ಸಾವಿರ ಕೋಟಿಗಳ ವಂಚನೆ ಪ್ರಕರಣದಲ್ಲಿ ದಾಖಲಿಸಿದ್ದ ಆರೋಪ ಪಟ್ಟಿಯಲ್ಲಿ ಸಿಬಿಐ, ಉಷಾ ಅವರ ಹೆಸರು ಉಲ್ಲೇಖಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿತ್ತು. ಅಧಿಕಾರ ಮೊಟಕುಗೊಳಿಸಿದ ನಂತರವೂ ಅವರು ಬ್ಯಾಂಕ್‌ನ ಉದ್ಯೋಗಿಯಾಗಿ ಮುಂದುವರೆದಿದ್ದರು.

ಉಷಾ ಅವರು ಅಲಹಾಬಾದ್‌ ಬ್ಯಾಂಕ್‌ನ ಎಂ.ಡಿ ಆಗಿ ನೇಮಕಗೊಳ್ಳುವ ಮೊದಲು, 2015 ಮತ್ತು 2017ರಲ್ಲಿ ‘ಪಿಎನ್‌ಬಿ’ಯ ಮುಖ್ಯಸ್ಥೆಯಾಗಿದ್ದರು. 2011 ರಿಂದ 2013ರ ಅವಧಿಯಲ್ಲಿ ಇವರು ‘ಪಿಎನ್‌ಬಿ’ಯ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ಕಾನೂನು ಕ್ರಮಕ್ಕೆ ಅನುಮತಿ: ಉಷಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಸಿಬಿಐಗೆ ಅನುಮತಿಯನ್ನೂ ನೀಡಿದೆ.

ವಜ್ರದ ವ್ಯಾಪಾರಿ ನೀರವ್ ಮೋದಿ ಅವರು, ಸಾಲ ಮರುಪಾವತಿ ಖಾತರಿಯ ನಕಲಿ ಪತ್ರಗಳನ್ನು ಬಳಸಿಕೊಂಡು ಬ್ಯಾಂಕ್‌ಗೆ ₹ 14 ಸಾವಿರ ಕೋಟಿ ವಂಚನೆ ಎಸಗಿದ್ದಾರೆ. ಈ ಪ್ರಕರಣದಲ್ಲಿ ಉಷಾ ಅವರಲ್ಲದೇ ಬ್ಯಾಂಕ್‌ನ ಇಬ್ಬರು ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಇತರ ಸಿಬ್ಬಂದಿ ವಿರುದ್ಧ ಆರೋಪ ಪಟ್ಟಿ ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !