ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಕಚೇರಿ ಹೂಡಿಕೆ: ಹೊಸ ಬಡ್ಡಿದರ

Last Updated 7 ಜುಲೈ 2019, 20:18 IST
ಅಕ್ಷರ ಗಾತ್ರ

ಜುಲೈ- ಸೆಪ್ಟೆಂಬರ್ ತ್ರೈಮಾಸಿಕ ಅವಧಿಗೆ ಸಾರ್ವಜನಿಕ ಭವಿಷ್ಯ ನಿಧಿ ( ಪಿಪಿಎಫ್), ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ, ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ) ಸೇರಿ ಹಲವು ಅಂಚೆ ಕಚೇರಿ ಯೋಜನೆಗಳ ಬಡ್ಡಿ ದರಗಳನ್ನು ತಗ್ಗಿಸಲಾಗಿದೆ.

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್): ಪಿಪಿಎಫ್ ಗೆ ಶೇ 8 ರಷ್ಟು ಬಡ್ಡಿದರವಿತ್ತು. ಆದರೆ ಜುಲೈನಿಂದ ಸೆಪ್ಟೆಂಬರ್ ಅವಧಿಗೆ ಈ ಬಡ್ಡಿಯನ್ನು ಶೇ 7.9 ಕ್ಕೆ ಇಳಿಸಲಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆ: ಈ ಯೋಜನೆಯ ಬಡ್ಡಿ ದರವನ್ನು ಶೇ 8.4 ಕ್ಕೆ ಇಳಿಸಲಾಗಿದೆ. ಈ ಮೊದಲು ಬಡ್ಡಿ ದರ ಶೇ 8.5 ರಷ್ಟಿತ್ತು. 10 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಯಾವುದೇ ಅಂಚೆ ಕಚೇರಿಯಲ್ಲಿ ಈ ಖಾತೆ ಆರಂಭಿಸಬಹುದು.

ಹಿರಿಯ ನಾಗರಿಕರ ಉಳಿತಾಯ ಯೋಜನೆ: ಈ ಯೋಜನೆಯ ಬಡ್ಡಿ ದರವನ್ನು ಈಗ ಶೇ 8.6 ಕ್ಕೆ ನಿಗದಿ ಮಾಡಲಾಗಿದೆ. ಈ ಮೊದಲು ಬಡ್ಡಿದರ ಶೇ 8.6 ರಷ್ಟಿತ್ತು. 5 ವರ್ಷಗಳ ಅವಧಿಯ ಈ ಯೋಜನೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಇದು ಅನ್ವಯಿಸಲಿದೆ.

ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ): ಎನ್ಎಸ್‌ಸಿಯಲ್ಲಿ ಬಡ್ಡಿ ದರ ಶೇ 8 ರಿಂದ ಶೇ 7.9 ಕ್ಕೆ ಇಳಿಸಲಾಗಿದೆ. ಈ ಹೂಡಿಕೆಯ ಅವಧಿ 5 ವರ್ಷಗಳಾಗಿದ್ದು ಸೆಕ್ಷನ್ 80 ಸಿ ಅಡಿ ತೆರಿಗೆ ವಿನಾಯಿತಿ ಲಭ್ಯ.

ಅಂಚೆ ಕಚೇರಿ ಅವಧಿ ಠೇವಣಿ ಯೋಜನೆ: ಪರಿಷ್ಕೃತ ದರದಂತೆ ಅಂಚೆ ಕಚೇರಿ ಅವಧಿ ಠೇವಣಿ ಯೋಜನೆಯಲ್ಲಿ ಒಂದು, ಎರಡು ಹಾಗೂ ಮೂರು ವರ್ಷಗಳ ಅವಧಿಗೆ ಹಣ ಹೂಡಿಕೆ ಮಾಡಿದರೆ ಶೇ 6.9 ರಷ್ಟು ಬಡ್ಡಿ ಸಿಗಲಿದೆ.

ಐದು ವರ್ಷಗಳ ಅವಧಿ ಠೇವಣಿ ಯೋಜನೆಯಲ್ಲಿ ಶೇ 7.7 ರಷ್ಟು ಬಡ್ಡಿ ವರಮಾನ ಸಿಗಲಿದೆ. ಐದು ವರ್ಷಗಳ ಆರ್‌ಡಿ ಉಳಿತಾಯಕ್ಕೆ ಶೇ 7.2 ರ ಬಡ್ಡಿ ದರ ನಿಗದಿ ಮಾಡಲಾಗಿದೆ. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯ ಬಡ್ಡಿ ದರವನ್ನು ಶೇ 7.7 ರಿಂದ ಶೇ 7.6 ಕ್ಕೆ ಇಳಿಸಲಾಗಿದೆ. ಕಿಸಾನ್ ವಿಕಾಸ್ ಪತ್ರದ ಬಡ್ಡಿದರವನ್ನು ಶೇ 7.7 ರಿಂದ ಶೇ 7.6 ಕ್ಕೆ ಇಳಿಸಲಾಗಿದೆ.

ಬಜೆಟ್ ಘೋಷಣೆಗೆ ಪುಟಿದೇಳದ ಪೇಟೆ
ಬಜೆಟ್ ಘೋಷಣೆಗಳ ನಿರೀಕ್ಷೆಯಲ್ಲಿ ವಾರದ ನಾಲ್ಕು ದಿನಗಳ ಕಾಲ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಷೇರುಪೇಟೆಯು, ಬಜೆಟ್ ಮಂಡನೆಯ ಬಳಿಕ ಶೇ 1 ರಷ್ಟು ಕುಸಿತ ದಾಖಲಿಸಿತು.

ಮಾಹಿತಿ ತಂತ್ರಜ್ಞಾನ, ರಿಯಲ್ ಎಸ್ಟೇಟ್, ಲೋಹ ಮತ್ತು ವಾಹನ ತಯಾರಿಕಾ ವಲಯದ ಷೇರುಗಳಿಗೆ ಹಿನ್ನಡೆಯಾಯಿತು. ಹೀಗಿದ್ದರೂ ಸಹಿತ ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಕ್ರಮವಾಗಿ ಶೇ 0.3 (39,513 ಅಂಶಗಳು) ಮತ್ತು ಶೇ 0.2 (11,811 ಅಂಶಗಳು) ರಷ್ಟು ಏರಿಕೆ ಕಂಡಿವೆ. ಆದರೆ, ಮಧ್ಯಮ ಶ್ರೇಣಿಯ ಷೇರುಗಳು ಶೇ 0.7 ರಷ್ಟು ಕುಸಿದಿವೆ.

ವಲಯವಾರು: ಕಳೆದ ವಾರ ವಲಯವಾರು ಮಿಶ್ರ ಫಲ ಕಂಡು ಬಂದಿತು. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಶೇ 3 ರಷ್ಟು ಏರಿಕೆ ದಾಖಲಿಸಿದರೆ, ಹಣಕಾಸು ಸೇವಾ ವಲಯ, ಎಫ್ಎಂಸಿಜಿ, ಮತ್ತು ನಿಫ್ಟಿ ಬ್ಯಾಂಕ್ ಸೂಚ್ಯಂಕಗಳಲ್ಲಿ ಕ್ರಮವಾಗಿ ಶೇ 1.8, ಶೇ 1.4 ಮತ್ತು ಶೇ 1.3 ರಷ್ಟು ಸುಧಾರಣೆ ಗೋಚರಿಸಿತು. ಉಳಿದಂತೆ ಲೋಹ ವಲಯ ಶೇ 4.3 ರಷ್ಟು ಗರಿಷ್ಠ ಕುಸಿತ ದಾಖಲಿಸಿತು. ಮಾಹಿತಿ ತಂತ್ರಜ್ಞಾನ, ಫಾರ್ಮಾ, ವಿದ್ಯುತ್ ಉತ್ಪಾದನೆ ಮತ್ತು ವಾಹನ ಉತ್ಪಾದನಾ ವಲಯಗಳಲ್ಲಿ ಕ್ರಮವಾಗಿ ಶೇ 2.4, ಶೇ 1.7, ಶೇ 1.4 ಮತ್ತು ಶೇ 1 ರಷ್ಟು ಹಿನ್ನಡೆಯಾಯಿತು.

ಏರಿಕೆ: ನಿಫ್ಟಿಯಲ್ಲಿ ಇಂಡಿಯಾ ಬುಲ್ಸ್ ಹೌಸಿಂಗ್ ಶೇ 19.7 ರಷ್ಟು ಹೆಚ್ಚಳ ಕಂಡು ಅಗ್ರ ಸ್ಥಾನದಲ್ಲಿದೆ. ಬಜಾಜ್ ಫೈನಾನ್ಶಿಯಲ್ ಇನ್ಶೂರೆನ್ಸ್‌ ಸಂಸ್ಥೆಯು ಇಂಡಸ್ ಇಂಡ್ ಬ್ಯಾಂಕ್‌ಗೆ157 ಲಕ್ಷ ಷೇರುಗಳನ್ನು ಮಂಜೂರು ಮಾಡಲು ಒಪ್ಪಿದ ಕಾರಣ ಇಂಡಸ್ ಇಂಡ್ ಬ್ಯಾಂಕ್‌ನ ಷೇರುಗಳು ಶೇ 8.6 ರಷ್ಟು ಹೆಚ್ಚಳವಾಗಿವೆ. ಭಾರ್ತಿ ಎಂಟರ್ ಪ್ರೈಸಸ್ ₹ 325 ಕೋಟಿಗಳನ್ನು ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ತೊಡಗಿಸಿರುವ ಪರಿಣಾಮ ಭಾರ್ತಿ ಏರ್‌ಟೆಲ್ ಷೇರುಗಳು ಶೇ 5.2 ರಷ್ಟು ಏರಿಕೆಯಾಗಿವೆ.

ಯುಪಿಎಲ್ ಶೇ 6.7, ಎಚ್‌ಡಿಎಫ್‌ಸಿ ಶೇ 4, ಬ್ರಿಟಾನಿಯಾ ಶೇ 3 ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಶೇ 2.7 ರಷ್ಟು ಜಿಗಿದಿವೆ.

ಇಳಿಕೆ: ಎವರೆಡಿ ಬ್ಯಾಟರಿ ಕಂಪನಿಯಲ್ಲಿ ಶೇ 9 ರಷ್ಟು ಷೇರುಗಳನ್ನು ಪಡೆದುಕೊಂಡ ಹಿನ್ನೆಯಲ್ಲಿ ಯೆಸ್ ಬ್ಯಾಂಕ್‌ನ ಷೇರುಗಳು ಶೇ 19 ರಷ್ಟು ಕುಸಿತ ದಾಖಲಿಸಿವೆ. ಬಜೆಟ್‌ನಲ್ಲಿ ತೈಲದ ಮೇಲೆ ಸುಂಕ ಹೆಚ್ಚಳ ಮಾಡಿರುವ ಪರಿಣಾಮ ಬಿಪಿಸಿಎಲ್‌ನ ಷೇರುಗಳು ಶೇ 5.7 ಕುಸಿದಿವೆ. ಷೇರು ವಿಕ್ರಯದ ಬಗ್ಗೆ ಸರ್ಕಾರ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಕೋಲ್ ಇಂಡಿಯಾ ಷೇರುಗಳು ಶೇ 4.7 ರಷ್ಟು ಹಿನ್ನಡೆ ಕಂಡಿವೆ. ಸನ್ ಫಾರ್ಮಾ ಶೇ 6.4 , ಟಾಟಾ ಸ್ಟೀಲ್ ಶೇ 5.3 ಮತ್ತು ಎಚ್‌ಸಿಎಲ್ ಟೆಕ್ ಶೇ 4.5 ರಷ್ಟು ಕುಸಿದಿವೆ.

ಮುನ್ನೋಟ: ಪೆಟ್ರೋಲ್, ಡೀಸೆಲ್ ಮೇಲೆ ಸುಂಕ ಹೆಚ್ಚಳ ಸೇರಿ ಪ್ರಮುಖ ಬಜೆಟ್ ಘೋಷಣೆಗಳು ಷೇರುಪೇಟೆ ಸೂಚ್ಯಂಕಗಳ ಮೇಲೆ ಪ್ರಭಾವ ಬೀರಲಿವೆ.

ಇನ್ಫೊಸಿಸ್, ಕರ್ನಾಟಕ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರಿಯಲ್ ಇನ್ಫ್ರಾಸ್ಟ್ರಕ್ಚರ್ ಲಿ., ಹ್ಯಾತ್ ವೇ, ಯುನಿಟೆಕ್ ಸೇರಿ ಪ್ರಮುಖ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ಪೇಟೆಯ ವಹಿವಾಟು ಸಾಗುವ ದಿಕ್ಕನ್ನು ನಿರ್ಧರಿಸಲಿವೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT