ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 23 ಏಪ್ರಿಲ್ 2019, 16:08 IST
ಅಕ್ಷರ ಗಾತ್ರ

ವಿರೂಪಾಕ್ಷಿ ಬಿ.ಎಂ.,ಬೆಂಗಳೂರು

ರಾಜ್ಯ ಸರ್ಕಾರದ ನಿವೃತ್ತ ನೌಕರ. ಪ್ರತೀ ಬುಧವಾರ ತಪ್ಪದೇ ನಿಮ್ಮ ಅಂಕಣ ‍ಓದುತ್ತೇನೆ. ಹಿರಿಯ ನಾಗರಿಕನಾದ ನಾನು ಸೆಕ್ಷನ್ 80TTA ಹಾಗೂ TTB ಎರಡರಲ್ಲಿಯೂ ತೆರಿಗೆ ವಿನಾಯ್ತಿ ಪಡೆಯಬಹುದೇ?

ಉತ್ತರ: ಸೆಕ್ಷನ್80TTA ಆಧಾರದ ಮೇಲೆ ಉಳಿತಾಯ ಖಾತೆಯಲ್ಲಿ ಬರುವ ಗರಿಷ್ಠ ₹ 10,000 ಬಡ್ಡಿತನಕ ಎಲ್ಲಾ ವರ್ಗದ ಎಲ್ಲಾ ವಯಸ್ಸಿನವರು ವಿನಾಯಿತಿ ಪಡೆಯಬಹುದು. ಸೆಕ್ಷನ್ 80TTB , ಆರ್ಥಿಕ ವರ್ಷ 1–4–2018 ರಿಂದ 31–3–2019ಕ್ಕೆ ಅನ್ವಯವಾಗಿದ್ದು, ಈ ಸೆಕ್ಷನ್ ಎಲ್ಲಾ ಹಿರಿಯ ನಾಗರಿಕರಿಗೆ ಅನ್ವಯವಾಗುತ್ತದೆ. ಇಲ್ಲಿ ಪಿಂಚಣಿ ಪಡೆಯುವವರು ಅಥವಾ ಪಡೆಯದವರು ಎನ್ನುವ ಭೇದವಿಲ್ಲ. ಜನಸಾಮಾನ್ಯರು ಮುಖ್ಯವಾಗಿ ಗಮನಿಸಬೇಕಾದ ವಿಚಾರವೆಂದರೆ, ಓರ್ವ ಹಿರಿಯ ನಾಗರಿಕನು ಸೆಕ್ಷನ್80TTA ಹಾಗೂ 80TTB ಸೇರಿಸಿ ಗರಿಷ್ಠ ₹ 50,000 ಬಡ್ಡಿ ಆದಾಯದಲ್ಲಿ ವಿನಾಯ್ತಿ ಪಡೆಯಬಹುದು. ಸೆಕ್ಷನ್80TTA ಆಧಾರದ ಮೇಲೆ ₹ 10,000 ಹಾಗೂ ಸೆಕ್ಷನ್80TTB ಆಧಾರದ ಮೇಲೆ ₹ 50,000 ಹೀಗೆ ವಿನಾಯ್ತಿ ಪಡೆಯುವಂತಿಲ್ಲ. ಒಟ್ಟಾರೆ ಗರಿಷ್ಠ ಮಿತಿ ₹ 50,000 ಮಾತ್ರ.

ಪ್ರಭಾಕರ,ಬೆಂಗಳೂರು

ವಯಸ್ಸು 57. ಕಂಪನಿಯೊಂದರಲ್ಲಿ 1981ರಿಂದ ಕೆಲಸ ಮಾಡುತ್ತಿದ್ದೇನೆ. ಸಂಬಳ ಬಹಳ ಕಡಿಮೆ. ಹೆಚ್ಚಿನ ಹಣ ಸಂಪಾದಿಸಲು ಮಾರ್ಗದರ್ಶನ ಮಾಡಿ.

ಉತ್ತರ: ಬಿಡುವಿನ ಸಮಯದಲ್ಲಿ ಬೇರೆಯವ ರಿಗೆ ಜೀವವಿಮೆ ಮಾಡಿಸಬಹುದು. ಈ ಉದ್ಯೋಗದಲ್ಲಿ ಸಮಯದ ಪ್ರಶ್ನೆ ಬರುವುದಿಲ್ಲ. ಯಾವಾಗ ಬೇಕಾದರೂ ಯಾರನ್ನಾದರೂ ಸಂಪರ್ಕಿಸಬಹುದು. ಇದನ್ನು ನಿಮ್ಮ ಕೆಲಸದ ಜೊತೆಗೆ ಮಾಡಲು ಬಹಳ ಅನುಕೂಲ. ಮಕ್ಕಳಿಂದ ದೊಡ್ಡವರವರೆಗೆ ವಿವಿಧ ರೀತಿಯ ಹಾಗೂ ಅನುಕೂಲಕರ ಪಾಲಿಸಿಗಳಿವೆ. ಗೆಳೆಯರು ಹಾಗೂ ಸಂಬಂಧಿಗಳಲ್ಲಿ ವಿಮೆ ಇಳಿಸಲು ಪ್ರಯತ್ನಿಸಿರಿ. ವಿಮೆ ಏಜೆನ್ಸಿ ಪಡೆಯಲು ನೀವು ಅರ್ಹರಾಗಲು Insurance Institute of India ಇವರು ನಡೆಸುವ On Line ಪರೀಕ್ಷೆಗೆ ಕುಳಿತು ಉತ್ತೀರ್ಣರಾಗಬೇಕು. ಪರೀಕ್ಷೆಗೆ ಮೊದಲು ಮಾಹಿತಿ ಪಡೆಯಬಹುದು. ಪರೀಕ್ಷೆ ಬರೆಯಲು ಸುಲಭ. ನಿಮ್ಮ ಹತ್ತಿರದ LIC ಆಫೀಸಿಗೆ ಹೋಗಿ ಹೆಚ್ಚಿನ ಮಾಹಿತಿ ಪಡೆಯಿರಿ. ನೀವು ಹೆಚ್ಚಿನ ಪಾಲಿಸಿ ಮಾಡಿಸಲು ಸಾಧ್ಯವಾದರೆ ನೀವು ಪಡೆಯುವ ಸಂಬಳಕ್ಕಿಂತಲೂ ಹೆಚ್ಚಿನ ವರಮಾನ ಕಮಿಷನ್ ರೂಪದಲ್ಲಿ ಇಲ್ಲಿ ಪಡೆಯಬಹುದು. ಪ್ರಾರಂಭದಲ್ಲಿ ಸ್ಪಲ್ಪ ಕಷ್ಟಪಡಬೇಕಾದೀತು. ಆದರೆ ಮುಂದೆ ವಿಪುಲ ಆದಾಯ ಪಡೆಯಬಹುದು.

ಆನಂದ ರೆಡ್ಡಿ, ಊರು ಬೇಡ

ಬಾಡಿಗೆ ಆದಾಯ ತೆರಿಗೆಗೆ ಒಳಗಾಗುತ್ತದೆಯೇ. ತೆರಿಗೆ ಬರುವಲ್ಲಿ ಇದಕ್ಕೆ ಮಿತಿ ಇದೆಯೇ. ಕನಿಷ್ಠ ತೆರಿಗೆ ಎಷ್ಟು ಬರುತ್ತದೆ?

ಉತ್ತರ: ಕೃಷಿ ಆದಾಯ ಸೆಕ್ಷನ್ 10 (i), ಪಿ.ಪಿ.ಎಫ್. ಬಡ್ಡಿ ಸೆಕ್ಷನ್ 10 (ii) ಹಾಗೂ ಶಿಕ್ಷಣ ಸಾಲದ ಬಡ್ಡಿ ಸೆಕ್ಷನ್ 80E , ಇಲ್ಲಿ ಸಂಪೂರ್ಣ ತೆರಿಗೆ ವಿನಾಯ್ತಿ ಇದೆ. ಉಳಿದ ಎಲ್ಲಾ ಆದಾಯಗಳಿಗೂ ಆದಾಯ ತೆರಿಗೆ ಕೊಡಬೇಕಾಗುತ್ತದೆ. ಬಾಡಿಗೆ ಆದಾಯಕ್ಕೆ ಆದಾಯ ತೆರಿಗೆ ಇರುತ್ತದೆ. ಇಲ್ಲಿ ಕನಿಷ್ಠ ಗರಿಷ್ಠ ಎನ್ನುವ ಮಾತಿಲ್ಲ. ಬರುವ ಬಾಡಿಗೆಯಲ್ಲಿ ಕಟ್ಟಡಗಳ ಮೇಲಿನ ತೆರಿಗೆ ಕಳೆದು ಬರುವ ಬಾಡಿಗೆಯಲ್ಲಿ ಶೇ 30 ರಷ್ಟು ಸೆಕ್ಷನ್ 24 (a) ಆಧಾರದ ಮೇಲೆ ಪುನಃ ಕಳೆದು, ಬರುವ ಮೊತ್ತ ನಿಮ್ಮ ಉಳಿದ ಆದಾಯಕ್ಕೆ ಸೇರಿಸಿ ಆದಾಯ ತೆರಿಗೆ ಸಲ್ಲಿಸಬೇಕು. ಬಾಡಿಗೆಯಲ್ಲಿ ರಿಪೇರಿ, ಬಾಡಿಗೆ ವಸೂಲಾತಿ ವೆಚ್ಚ, ವಿಮೆ, ವಾರ್ಷಿಕ ನಿರ್ವಹಣೆ ವೆಚ್ಚ ಕಳೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT