ಗುರುವಾರ , ಮಾರ್ಚ್ 4, 2021
29 °C
ಪುರವಣಿ

ಪ್ರಶ್ನೋತ್ತರ

ಯು ಪಿ ಪುರಾಣಿಕ್ Updated:

ಅಕ್ಷರ ಗಾತ್ರ : | |

Prajavani

ಚೈತ್ರಾ, ಬೆಂಗಳೂರು

ಗೃಹಿಣಿ. ಕೆಲವು ವರ್ಷಗಳಿಂದ ನನ್ನ ಇಬ್ಬರು ಹೆಣ್ಣು ಮಕ್ಕಳ ಸಲುವಾಗಿ ಬಂಗಾರದ ನಾಣ್ಯ ಕೊಂಡುಕೊಳ್ಳುತ್ತಿದ್ದೇನೆ. ಈಗ ನನ್ನೊಡನೆ ₹ 1.50 ಲಕ್ಷ ಬ್ಯಾಂಕ್ ಠೇವಣಿ ಇದೆ. ಈ ಮಾರ್ಗ ಸರಿಯೇ ಹಾಗೂ 22–24 ಕ್ಯಾರೆಟ್‌, ಇವುಗಳಲ್ಲಿ ಯಾವುದು ಉತ್ತಮ?

ಉತ್ತರ: ನೀವು ಗೃಹಿಣಿಯಾಗಿದ್ದು, ಯಜಮಾನರು ಕೊಡುವ ಹಣದಲ್ಲಿ ನಿಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ಬಂಗಾರದ ನಾಣ್ಯ ಕೊಳ್ಳುತ್ತಿರುವುದು ಶ್ಲಾಘನೀಯ. 22–24 ಕ್ಯಾರೆಟ್ ಕೊಳ್ಳುವಾಗ 22 ಕೊಳ್ಳಿರಿ. ಮುಂದೆ ಚಿನ್ನದ ಒಡವೆ ಮಾಡಿಸುವಾಗ 24 ಕ್ಯಾರೆಟ್‌ ಚಿನ್ನವನ್ನು 22ಕ್ಕೆ ಇಳಿಸಿಯೇ ಮಾಡಬೇಕಾಗುತ್ತದೆ. 24ರ ಮೃದುತ್ವ(Softness) ದಿಂದಾಗಿ ಬಂಗಾರ ಸವಕಳಿ ಬೇಗ ಆಗುತ್ತದೆ.

***

ಜ್ಯೋತಿಪ್ರಕಾಶ್, ಊರುಬೇಡ

ನಾನು ವಿವಾಹಿತೆ, ಸರ್ಕಾರಿ ನೌಕರಳು. ಸಂಬಳ ₹ 13,700. ನನಗೆ ಕೃಷಿಯಲ್ಲಿ ಆಸಕ್ತಿ. ಕೃಷಿ ಜಮೀನು ಕೊಳ್ಳಲು ₹ 8 ಲಕ್ಷ ಬೇಕು. ಬ್ಯಾಂಕಿನಲ್ಲಿ ₹ 3 ಲಕ್ಷಕ್ಕಿಂತ ಹೆಚ್ಚಿನ ಸಾಲ ಕೊಡುವುದಿಲ್ಲ. ಸಲಹೆ ನೀಡಿ.

ಉತ್ತರ: ನೀವು ಸರ್ಕಾರಿ ನೌಕರಿಯಲ್ಲಿದ್ದು, ನಿಮ್ಮ ಉದ್ಯೋಗದಲ್ಲಿ ವರ್ಗಾವಣೆ ಅನಿವಾರ್ಯ.ನೀವು ಎಲ್ಲಿಯೋ ಸೇವೆ ಸಲ್ಲಿಸುತ್ತಿದ್ದು, ಕೃಷಿ ಜಮೀನು ಹಾಗೂ ಸಾಗುವಳಿ ಮಾಡಲು ಕಷ್ಟವಾದೀತು. ಬ್ಯಾಂಕುಗಳಲ್ಲಿ ಸಾಲ ಕೊಡುವಾಗ ಸಾಲ ಮರುಪಾವತಿಸುವ ಸಾಮರ್ಥ್ಯ ನೋಡುತ್ತಾರೆ. ನೀವು ₹ 8 ಲಕ್ಷ ಸಾಲ ಪಡೆದರೆ, ಮಾಸಿಕ ಕಂತು ಬಡ್ಡಿ ತುಂಬಲು ನಿಮ್ಮ ಸಂಬಳ ಸಾಕಾಗಲಾರದು. ನಿಮ್ಮ ಆಸೆ ಆಕಾಂಕ್ಷೆ ಮೆಚ್ಚತಕ್ಕದ್ದು. ಆದರೆ, ನಿಮ್ಮ ಆದಾಯ ನೋಡುವಾಗ, ಈ ಮಾರ್ಗ ಸದ್ಯಕ್ಕೆ ಮುಂದೂಡುವುದೇ ಲೇಸು. ನಿಮ್ಮ ನಿವೃತ್ತಿಗೆ ಒಂದೆರಡು ವರ್ಷವಿರುವಾಗ, ಉತ್ತಮ ಉಳಿತಾಯ ಮಾಡಿ ಹಾಗೂ ಸ್ವಲ್ಪ ಬ್ಯಾಂಕ್ ಸಾಲ ಪಡೆದು ಜಮೀನು ಕೊಳ್ಳಿರಿ.

***

ಶಿವಾಜಿ, ಚಾಮರಾಜನಗರ

ನಾನು ಸ್ಥಿರ ಆಸ್ತಿ ₹ 20 ಲಕ್ಷಕ್ಕೆ ಮಾರಾಟ ಮಾಡಬೇಕೆಂದಿದ್ದೇನೆ. 1988 A/c ಎಂದರೇನು? ತೆರಿಗೆ ಹೇಗೆ ಎಲ್ಲಿ ತುಂಬಬೇಕು. ತುಂಬದಿರುವಲ್ಲಿ ಆಗುವ ಪರಿಣಾಮವೇನು? 

ಉತ್ತರ: Capital Gains 1988 Account ಅಂದರೆ, ಸ್ಥಿರ ಆಸ್ತಿ ಮಾರಾಟ ಮಾಡಿ ಬರುವ ಹಣದಿಂದ ಇನ್ನೊಂದು ಖರೀದಿಸುವುದು ಅಥವಾ ನಿವೇಶನ ಕೊಂಡು ಕಟ್ಟಿಸುವುದು. ಈ ವಿಚಾರಕ್ಕೆ ಹಣ ಬಳಸಲು ಉಪಯುಕ್ತವಾಗಲು ಮಾಡುವ ಬ್ಯಾಂಕ್ ಖಾತೆ. ಇಲ್ಲಿ ಹೂಡಿದ ಹಣ ಇನ್ನೊಂದು ಮನೆ ಕಟ್ಟಲು ಅಥವಾ ಖರೀದಿಸಲು ಮಾತ್ರ ಉಪಯೋಗಿಸತಕ್ಕದ್ದು. ತೆರಿಗೆ ಚಲನ್ ಮುಖಾಂತರ ಆಯ್ದ ರಾಷ್ಟ್ರೀಕೃತ ಅಥವಾ ಎಸ್.ಬಿ.ಐ. ಶಾಖೆಯಲ್ಲಿ ತುಂಬಬಹುದು. ಹಣ ತುಂಬದಿರುವಲ್ಲಿ ನೋಟಿಸ್ ಕಳಿಸಿ ಬಡ್ಡಿ ದಂಡ ಸಮೇತ ವಸೂಲಾತಿ ಮಾಡುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.