ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ವಾಣಿಜ್ಯ, ಉಳಿತಾಯಕ್ಕೆ ಸಂಬಂಧಿಸಿದ ಪ್ರಶ್ನೆಗಳು

Last Updated 22 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಸುಮ. ಎಚ್‌.ಎನ್., ಹಾಸನ

ನಾನು ಅನುಕಂಪದ ಆಧಾರದ ಮೇಲೆ ಪ್ರಥಮ ದರ್ಜೆ ಸಹಾಯಕಳಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಒಟ್ಟು ಸಂಬಳ₹ 30,000. ಕಡಿತದ ನಂತರ₹ 25,400 ಬರುತ್ತದೆ. ನನ್ನ ಪತಿ ಅಪಘಾತದಿಂದ ಮರಣ ಹೊಂದಿದ್ದರಿಂದ 12 ಲಕ್ಷ ಬಂದಿದ್ದು ಅದನ್ನು ಠೇವಣಿ ಇರಿಸಿದ್ದೇನೆ. ಪ್ರತೀ ತಿಂಗಳು
₹ 6,980 ಬಡ್ಡಿ ಪಡೆಯುತ್ತಿದ್ದೇನೆ. ನನ್ನ ಆದಾಯಕ್ಕೆ ತೆರಿಗೆ ಬರುತ್ತದೆಯೇ, ಉಳಿತಾಯದ ವಿಚಾರ
ತಿಳಿಸಿರಿ.

ಉತ್ತರ: ತಾ. 1–4–2019 ರಿಂದ ಎಲ್ಲಾ ವರ್ಗದ ವ್ಯಕ್ತಿಗಳ ಆದಾಯ ತೆರಿಗೆಗೆ ಒಳಪಡುವ ವಾರ್ಷಿಕ ಆದಾಯದ ಮಿತಿಯು ₹ 5 ಲಕ್ಷಕ್ಕೆ ಆಗಿದೆ. ನೀವು ಸರ್ಕಾರಿ ನೌಕರರಾಗಿದ್ದೀರಿ. ₹ 50,000 ಸ್ಟ್ಯಾಂಡರ್ಡ್ ಡಿಡಕ್ಷನ್ ಪಡೆಯಬಹುದಾಗಿದೆ. ಹೀಗಾಗಿ ನಿಮ್ಮ ವಾರ್ಷಿಕ ಆದಾಯ₹ 5.5 ಲಕ್ಷ ದಾಟುವ ತನಕ ನಿಮಗೆ ಆದಾಯ ತೆರಿಗೆ ಬರುವುದಿಲ್ಲ. ಸಂಬಳದಲ್ಲಿ ಕಡಿತ ಗಮನಿಸಿದಾಗ, ನೀವು ಏನೂ ಉಳಿತಾಯದ ಪ್ಲ್ಯಾನ್ ಮಾಡಿರುವಂತೆ ಕಾಣುವುದಿಲ್ಲ. ನೀವು ಕನಿಷ್ಠ₹ 3,000 ಎಲ್‌.ಐ.ಸಿ.ಯ ಜೀವನ ಆನಂದ ಪಾಲಿಸಿ ಮಾಡಿ ಪ್ರತೀ ತಿಂಗಳೂ ತುಂಬಿ ಹಾಗೂ ಕನಿಷ್ಠ₹ 10,000ಗಳನ್ನು ಹತ್ತು ವರ್ಷಗಳ ಆರ್‌.ಡಿ. ಮಾಡಿರಿ. ಅಪಘಾತ ವಿಮೆಯಿಂದ ಬಂದ ಹಣದಿಂದ ಪ್ರತೀ ತಿಂಗಳೂ ಬಡ್ಡಿ ಪಡೆಯುವ ಬದಲಾಗಿ, ಆ ಮೊತ್ತ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ 5 ವರ್ಷಗಳ ಅವಧಿಗೆ ಇರಿಸಿರಿ. ಇದರಿಂದ ನಿಮ್ಮ ಹಣ ಚಕ್ರಬಡ್ಡಿಯಲ್ಲಿ ಬೆಳೆಯುತ್ತದೆ. ನಿಮ್ಮ ಅಭಿಮಾನಕ್ಕೆ ವಂದನೆಗಳು.

***

ಎಂ. ಕೃಷ್ಣಮೂರ್ತಿ, ಬೆಂಗಳೂರು

ನಾನು ನಿವೃತ್ತಿ ಸರ್ಕಾರಿ ನೌಕರ. ವಯಸ್ಸು 85. ನನಗೆ ಪಿಂಚಣಿ ಬರುತ್ತದೆ. ಸ್ಟ್ಯಾಂಡರ್ಡ್ ಡಿಡಕ್ಷನ್, ಬಡ್ಡಿ ಮೇಲಿನ ವಿನಾಯಿತಿಯು 80 ವರ್ಷ ದಾಟಿದ Super Senior citizen ಗಳಿಗೂ ಅನ್ವಯಿಸುತ್ತದೆಯೇ ತಿಳಿಸಿರಿ.

ಉತ್ತರ: ಬಹಳಷ್ಟು ಜನರು, ಓರ್ವವ್ಯಕ್ತಿ 80 ವರ್ಷ ವಯಸ್ಸು ದಾಟಿದ ನಂತರ ಪಿಂಚಣಿ ಹಾಗೂ ಉಳಿದ ವಿನಾಯಿತಿಗಳಿಗೆ ಅರ್ಹರಾಗುವುದಿಲ್ಲ ಎಂಬುದಾಗಿ ತಿಳಿದುಕೊಂಡಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಚಾರ. ಪಿಂಚಣಿ ಹಾಗೂ ವಿನಾಯಿತಿ 80 ವರ್ಷ ದಾಟಿದ ಅರ್ಹರಿಗೆ ಸಿಕ್ಕಿಯೇ ಸಿಗುತ್ತದೆ. ನೀವು₹ 5 ಲಕ್ಷ ಪಿಂಚಣಿ ಹಾಗೂ ಬಡ್ಡಿ ಪಡೆಯುವ ತನಕ ನಿಮಗೆ ತೆರಿಗೆ ಬರುವುದಿಲ್ಲ. ಇದೇ ವೇಳೆ ಸ್ಟ್ಯಾಂಡರ್ಡ್ ಡಿಡಕ್ಷನ್₹ 50,000 ಹಾಗೂ ಬಡ್ಡಿಯಲ್ಲಿ ಗರಿಷ್ಠ₹ 50,000ಗಳನ್ನು ₹ 5 ಲಕ್ಷಕ್ಕೆ ಸೇರಿಸಿದ ಮೊತ್ತವಾದ ₹ 6 ಲಕ್ಷಗಳ ತನಕ ತೆರಿಗೆ ಕೊಡುವ ಅವಶ್ಯಕತೆ ಇಲ್ಲ.

***

ಮಹೇಂದ್ರ, ಮೈಸೂರು

ನಾನು ಲೇಖನ, ಕತೆ, ಕವನ ಬರೆಯುವುದರಿಂದ ಬರುವ ಆದಾಯದಲ್ಲಿ ಶೇಕಡ 20 TDS ಮಾಡುತ್ತಾರೆ. ನಾನು ಸರ್ಕಾರಿ ನೌಕರ. ಈ ಆದಾಯ ವಾರ್ಷಿಕ ಆದಾಯದಲ್ಲಿ ತೋರಿಸುವ ಅವಶ್ಯವಿದೆಯೇ? ತೆರಿಗೆ ಸಲ್ಲಿಸಬೇಕೇ ತಿಳಿಸಿರಿ.

ಉತ್ತರ: ಬರಹದಿಂದ ಬರುವ ಸಂಭಾವನೆಗೆ ತೆರಿಗೆ ಇದೆ. ಈ ಆದಾಯ ನಿಮ್ಮ ಆದಾಯಕ್ಕೆ ಸೇರಿಸಿ, ವಾರ್ಷಿಕ ಆದಾಯ 5 ಲಕ್ಷ ದಾಟಿದಲ್ಲಿ ಮಾತ್ರ ತೆರಿಗೆ ಕೊಡಬೇಕಾಗುತ್ತದೆ. ನೀವು ಪಡೆಯುವ ಸಂಭಾವನೆಯಲ್ಲಿ ಪತ್ರಿಕೆಯವರು ಮುರಿಯುವ TDS ಅನ್ನು ಅರ್ಹತೆ ಇರುವಲ್ಲಿ IT Return ತುಂಬಿ ವಾಪಸು ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT