ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

ಪುರವಣಿ
Last Updated 16 ಅಕ್ಟೋಬರ್ 2018, 19:32 IST
ಅಕ್ಷರ ಗಾತ್ರ

ಪವನ್. ಪಿ., ಬೆಂಗಳೂರು
* ನಾನು ವಿದ್ಯಾರ್ಥಿ. ನನ್ನ ಬಿಳಿ ₹ 5,000 ಇದೆ. ಅದನ್ನು 2 ವರ್ಷ ಉಳಿಸಬೇಕು. ನಾನು ಕರ್ಣಾಟಕ ಬ್ಯಾಂಕಿನಲ್ಲಿ ವಿದ್ಯಾರ್ಥಿ ಉಳಿತಾಯ ಖಾತೆ ಹೊಂದಿದ್ದೇನೆ. FD-RD ಮಾಡಬಹುದೆ. ಈ ಬಗ್ಗೆ ಮಾಹಿತಿ ಕೊಡಿ. ₹ 5,000 ಎರಡು ವರ್ಷಗಳಲ್ಲಿ ಎಷ್ಟು ಮೊತ್ತವಾಗಬಹುದು ತಿಳಿಸಿರಿ.

ಉತ್ತರ: ನೀವು ವಿದ್ಯಾರ್ಥಿಯಾಗಿರುವಾಗಲೇ ಉಳಿತಾಯದ ಮನೋಭಾವನೆ ಹೊಂದಿದ್ದು ನನಗೆ ಖುಷಿ ತಂದಿದೆ. ಮುಂದೆಯೂ ಈ ಉತ್ತಮ ಅಭ್ಯಾಸ ಜೀವನದಲ್ಲಿ ಅಳವಡಿಸಿಕೊಳ್ಳಿ. FD-RD ಎರಡೂ ಅವಧಿ ಠೇವಣಿಗಳಾದರೂ, RD ಪ್ರತಿ ತಿಂಗಳೂ ತುಂಬುವ ಠೇವಣಿ. ನೀವು ₹ 5,000 ಎರಡು ವರ್ಷಗಳ ಅವಧಿಗೆ ಕರ್ಣಾಟಕ ಬ್ಯಾಂಕಿನ ಅಭ್ಯುದಯ ಕ್ಯಾಷ್ ಸರ್ಟಿಪಿಕೇಟ್ (ACC) ಇರಿಸಿರಿ. ಇದರಲ್ಲಿ ಬಡ್ಡಿಗೆ ಬಡ್ಡಿ ಸೇರಿಸಿ ಅವಧಿ ಮುಗಿಯುತ್ತಲೇ ಹಣ ಕೊಡುತ್ತಾರೆ. ಶೇ 7.5 ಬಡ್ಡಿ ದರದಲ್ಲಿ ₹ 5,000 ಎರಡು ವರ್ಷದಲ್ಲಿ ₹ 5801 ಆಗಿ ಕೈಸೇರುತ್ತದೆ. ನಿಮಗೆ ಶುಭ ಹಾರೈಸುತ್ತೇನೆ.

ಕನಸು, ಚಿತ್ರದುರ್ಗ
* ನಾನು ಪ್ರಾಥಮಿಕ ಶಾಲಾ ಶಿಕ್ಷಕ. ನನ್ನ ಒಟ್ಟು ಸಂಬಳ ₹ 39,802 ಕಡಿತ. KGID ₹ 3000, GPF ₹ 15,000, LIC 368, GIS ₹ 120. (ಒಟ್ಟು ₹ 18,988) ಬೇರೆ ಆದಾಯ ಆಸ್ತಿ ಠೇವಣಿ ಇಲ್ಲ. ನನ್ನ ಉಳಿತಾಯ ಸರಿ ಇದೆಯೇ

ಉತ್ತರ: ನಿಮ್ಮ ಎಲ್ಲಾ ಉಳಿತಾಯ ತುಂಬಾ ಚೆನ್ನಾಗಿದೆ. ಅವೆಲ್ಲವನ್ನೂ ಮಧ್ಯದಲ್ಲಿ ನಿಲ್ಲಿಸದೇ ಹಾಗೆಯೇ ಮುಂದುವರಿಸಿರಿ. ನಿಮ್ಮ ಉಳಿತಾಯದ ಸಿಂಹಪಾಲು GPF ನಲ್ಲಿ ತೊಡಗಿಸಿದ್ದೀರಿ. ಇದು ದೀರ್ಘಾವಧಿ ಹೂಡಿಕೆಯಾಗಿದ್ದು ಇಲ್ಲಿ ಬರುವ ಹಣದಿಂದ ನಿಮ್ಮ ಜೀವನದ ಸಂಜೆ ಸುಖಮಯವಾಗಿರುತ್ತದೆ. ನಿಜವಾಗಿ ಹಣ ಉಳಿಸುವ ಜಾಣ್ಮೆಯನ್ನು ನಿಮ್ಮಿಂದ ಹಲವರು ಕಲಿಯಬೇಕಾಗಿದೆ. “Income minus savings must be expenditure’ ಈ ತತ್ವ ನಿಮ್ಮ GPFನಲ್ಲಿ ಶೇ 100 ರಷ್ಟು ಹಾಸುಹೊಕ್ಕಾಗಿದೆ. ಜೊತೆಗೆ ಹೀಗೆ ಮಾಡಿರುವುದರಿಂದ, ಬೇಡವಾದ ಖರ್ಚಿಗೆ ಕಡಿವಾಣವಾಗುತ್ತದೆ. ಆರ್ಥಿಕ ಶಿಸ್ತು ಓದಿ ಅಥವಾ ‍‍ಪಾಠಗಳಿಂದ ಕಲಿಯುವಂಥದ್ದಲ್ಲ. ಪ್ರತಿಯೊಬ್ಬ ವ್ಯಕ್ತಿ ತಾನೇ ತಿಳಿದು ಮಾಡತಕ್ಕದ್ದಾಗಿದೆ. GPF ನಿಂದ ಇನ್ನೊಂದು ಅನುಕೂಲ, ತೆರಿಗೆ ಉಳಿತಾಯ. ಸೆಕ್ಷನ್ 80C ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ಹಾಗೂ ಸೆಕ್ಷನ್ 10 (11) ಆಧಾರದ ಮೇಲೆ ಬರುವ ಬಡ್ಡಿ ಕೂಡಾ ಆದಾಯ ತೆರಿಗೆಯಿಂದ ಸಂಪೂರ್ಣ ವಿನಾಯ್ತಿಗೆ ಅರ್ಹವಾಗಿರುತ್ತದೆ. ವಾರ್ಷಿಕ ಇನ್‌ಕ್ರೀಮೆಂಟ್ ಅರ್ಧ ವಾರ್ಷಿಕ D.A. ಬಂದಾಗ ಕನಿಷ್ಠ ಶೇ 50 ಉಳಿಸಿರಿ.

ಜೆ. ದೇವಯ್ಯ, ಕೆ.ಆರ್. ನಗರ
*ನನ್ನ ವಯಸ್ಸು 81. 1995ರಲ್ಲಿ ಸರ್ಕಾರಿ ನೌಕರಿಯಿಂದ ನಿವೃತ್ತನಾದೆ. ನನ್ನ ತಿಂಗಳ ಪಿಂಚಣಿ 18,995. ನನ್ನ ಹೆಂಡತಿ ಹೆಸರಿನಲ್ಲಿ₹ 6,000 ಮನೆ ಬಾಡಿಗೆ ಬರುತ್ತದೆ. ನನ್ನ ಹೆಸರಿನಲ್ಲಿ 4 ಎಕರೆ 3 ಗುಂಟೆ ಜಮೀನಿದೆ. ಹೆಂಡತಿ ಹೆಸರಿನಲ್ಲಿ 3 ಎಕರೆ 12 ಗುಂಟೆ ಜಮೀನಿದೆ. ನನ್ನ ಮತ್ತು ನನ್ನ ಹೆಂಡತಿ ವೈದ್ಯಕೀಯ ವೆಚ್ಚ ತಿಂಗಳಿಗೆ₹ 2500. ನಾನು I.T. Return ಇದುವರೆಗೆ ತುಂಬಿಲ್ಲ. ಸಲ್ಲಿಸಬೇಕೇ, ತೆರಿಗೆ ಬಂದರೆ ಎಷ್ಟು ಬರಬಹುದು. ದಯಮಾಡಿ ತಿಳಿಸಿರಿ.

ಉತ್ತರ: ನಿಮ್ಮ ವಯಸ್ಸು 80 ಆಗಿರುವುದರಿಂದ ನೀವು Super Senior Citizen ಆಗಿದ್ದ್ದೀರಿ. ನಿಮ್ಮ ವಾರ್ಷಿಕ ಒಟ್ಟು ಆದಾಯ ಕೃಷಿ ಆದಾಯ ಹೊರತುಪಡಿಸಿ₹ 5 ಲಕ್ಷ ಹಾಗೂ ಸ್ಟ್ಯಾಂಡರ್ಡ್ ಡಿಡಕ್ಷನ್₹ 40,000. ಅಂದರೆ₹ 5.40 ಲಕ್ಷಗಳ ತನಕ ತೆರಿಗೆ ಬರುವುದಿಲ್ಲ. ನಿಮ್ಮ ಹೆಂಡತಿ ಪಡೆಯುವ ಬಾಡಿಗೆ ಆದಾಯಕ್ಕೂ ತೆರಿಗೆ ಅನ್ವಯಿಸುವುದಿಲ್ಲ. ನೀವು ನಿಶ್ಚಿಂತೆಯಿಂದ ತೆರಿಗೆ ಭಯದಿಂದ ಹೊರ
ಬಂದು, ಜೀವದ ಸಂಜೆಯಲ್ಲಿ ಸುಖವಾಗಿ ಬಾಳಿ.

ಹೆಸರು, ಊರು ಬೇಡ
ನಾನು ಪಿಂಚಣಿದಾರ. ನಾನು₹ 2500 HDFC SIP ನಲ್ಲಿ ಹಾಕುತ್ತಿದ್ದೇನೆ. ಅದು ಈಗ ₹ 2.40 ಲಕ್ಷ ಆಗಿದೆ. ಲಾಭ₹ 2 ಲಕ್ಷ. ಒಟ್ಟಿನಲ್ಲಿ₹ 4.40 ಲಕ್ಷ. ತೆರಿಗೆ ಬರುತ್ತಿದೆಯೇ ತಿಳಿಸಿರಿ.

ಉತ್ತರ: 2018–19 ಸಾಲಿನ ಬಜೆಟ್‌ನಲ್ಲಿ ನಮೂದಿಸಿದಂತೆ, ಏಪ್ರಿಲ್ 1 2018 ನಂತರ ಮಾರಾಟ ಮಾಡುವ ಷೇರುಗಳ ಅಥವಾ ಮ್ಯೂಚುವಲ್‌ ಫಂಡ್‌ಗಳಿಂದ ಬರುವ ಲಾಭ₹ 1 ಲಕ್ಷಕ್ಕೂ ಹೆಚ್ಚಿಗೆ ಇದ್ದರೆ ಶೇ 10 ರಷ್ಟು ತೆರಿಗೆ ಸಲ್ಲಿಸಬೇಕಾಗುತ್ತದೆ. ನೀವು ಆದಾಯ ತೆರಿಗೆ ರಿಟರ್ನ್ ತುಂಬುವವರಾದ್ದರಿಂದ ನಿಮ್ಮ ಮನೆ ಸಮೀಪದ ಚಾರ್ಟ್‌ರ್ಡ್ ಅಕೌಂಟೆಂಟ್ ಬಳಿ ವಿಚಾರಿಸಿ, ಬೇಕಾದ ವಿವರ ಸಲ್ಲಿಸಿ. 2019 ಜುಲೈನಲ್ಲಿ IT Return ತುಂಬಿರಿ.

ಸುರೇಶ್ ದೊಡ್ಡಪ್ಪನವರ್, ವಿಜಾಪುರ
ನಾನು ಒಂದು ಸಹಕಾರಿ ಬ್ಯಾಂಕಿನಲ್ಲಿ SB, R.D. Loan ಖಾತೆ ಹೊಂದಿದ್ದೇನೆ. ನಾನು ಸಾಲ ಸರಿಯಾಗಿ ತುಂಬಲಿಲ್ಲ. ನನ್ನ ಸಾಲದ ಖಾತೆಗೆ ಕಾನೂನು ವೆಚ್ಚ ಹಾಗೂ ಮಿಸಲೇನಿಯಸ್ ಚಾರ್ಜಸ್, ನಗದಾಗಿ ಖರ್ಚು ಹಾಕಿದ್ದಾರೆ. ಹೀಗೆ ಹಣ ಖರ್ಚು ಹಾಕುವಾಗ ನನ್ನ ಸಹಿ ತೆಗೆದು ಕೊಳ್ಳಲಿಲ್ಲ. ಬ್ಯಾಂಕಿಂಗ್‌ನಲ್ಲಿ ಇದು ಸರಿಯಾದ ಕ್ರಮವೇ ತಿಳಿಸಿರಿ. ನನಗೆ ತಿಳಿದಂತೆ ಇಂತಹ ಖರ್ಚು ಒಂದು ಖಾತೆಯಿಂದ ಇನ್ನೊಂದಕ್ಕೆ ಟ್ರಾನ್ಸ್‌ಫರ್ ಮಾಡಬಹುದೇ ವಿನಾ, ನಗದು ಖರ್ಚು ಹಾಕುವಂತಿಲ್ಲ.

ಉತ್ತರ: ಬ್ಯಾಂಕುಗಳಲ್ಲಿ Inspection charges Legal expenses miscellaneous expenses, ಸಾಲದ ಖಾತೆಗೆ ಅಂತಹ ಸಾಲ ವಸೂಲಾಗದೇ ಉಳಿದಲ್ಲಿ, ಖರ್ಚು ಹಾಕುವುದು ಸಹಜ. ಆದರೆ, ಸಾಲ ಅಥವಾ ಠೇವಣಿ ಖಾತೆಗಳಲ್ಲಿ ಖಾತೆದಾರನ ಅನುಮತಿ ಹಾಗೂ ಸಹಿ ಇಲ್ಲದೆ, ಯಾವುದೇ ಖರ್ಚು ಹಾಕುವುದು ಅಪರಾಧವಾಗುತ್ತದೆ. ಈ ವಿಚಾರದಲ್ಲಿ, ಸಹಕಾರ, ರಾಷ್ಟ್ರೀಕೃತ, ಖಾಸಗಿ, ವಿದೇಶಿ ಬ್ಯಾಂಕುಗಳ ತತ್ವ ಒಂದೇ ಇರುತ್ತದೆ. ಬ್ಯಾಂಕಿನ ಮುಖ್ಯ ಕಚೇರಿಗೆ ದೂರು ಕೊಡಿ ಎಲ್ಲಿಯೂ ಆಗದಿರುವಲ್ಲಿ Banking Ombudsman RBI Building Nrupatunga Road Bangalore. ಇವರಿಗೆ ದೂರು ಕೊಡಿ. ನಿಮಗೊಂದು ಕಿವಿ ಮಾತು. ಸಾಲ ಪಡೆದ ನಂತರ ಕಂತು ಬಡ್ಡಿ ಸಮಯದಲ್ಲಿ ಕಟ್ಟುವುದು ನಿಮ್ಮ ಜವಾಬ್ದಾರಿ ಕೂಡಾ ನೆನಪಿರಲಿ.

ಸತ್ಯನಾರಾಯಣ. ಎಚ್., ಬೆಂಗಳೂರು
* ನಾನು ನಿವೃತ್ತ ಬ್ಯಾಂಕ್ ಅಧಿಕಾರಿ. ₹ 40,000 Standard Deduction ಆರೋಗ್ಯ ವಿಮೆ ಪ್ರೀಮಿಯಂ₹ 30,000 ಹೊರತುಪಡಿಸಿದೆಯೇ.

ಉತ್ತರ: ನಿವೃತ್ತರಾಗಿ ಪಿಂಚಣಿ ಪಡೆಯುವವರಿಗೆ ಮಾತ್ರ ಸ್ಟ್ಯಾಂಡರ್ಡ್ ಡಿಡಕ್ಷನ್₹ 40,000 ವಿನಾಯಿತಿ ಪ್ರತ್ಯೇಕವಾಗಿ ಈ ಸಾಲಿನ ಬಜೆಟ್ಟಿನಲ್ಲಿ ಕೊಟ್ಟಿರುತ್ತಾರೆ. ನೀವು ಇದಕ್ಕೆ ಅರ್ಹರು. ಇದು ಆರೋಗ್ಯ ವಿಮೆ ಸೆಕ್ಷನ್ 80D ಹೊರತಾಗಿದೆ. ಈ ವರ್ಷದಿಂದ ಆರೋಗ್ಯ ವಿಮಾ ಕಂತಿನ ಗರಿಷ್ಠ₹ 50,000 ತನಕ ವಿನಾಯ್ತಿ ಇದೆ. ನೀವು ಹಿರಿಯ ನಾಗರಿಕರಾದ್ದರಿಂದ ಈ ವರ್ಷದಿಂದ, ಬ್ಯಾಂಕಿನಿಂದ ಪಡೆಯುವ ಬಡ್ಡಿಯಲ್ಲಿಯೂ, ಸೆಕ್ಷನ್ 80TTB ಆಧಾರದ ಮೇಲೆ ಗರಿಷ್ಠ₹ 50,000 ವಿನಾಯ್ತಿ ಪಡೆಯಬಹುದು.

ಪಂಪಾ, ಶಿರಿಗೆರೆ
ನಾನು ಸರ್ಕಾರಿ ನೌಕರ. ನನ್ನ ವಾರ್ಷಿಕ ಲೆಕ್ಕಾಚಾರ ಪಟ್ಟಿಯಲ್ಲಿ ಕೃಷಿ ಆದಾಯ ತೋರಿಸುತ್ತಿದ್ದೇನೆ. ನನ್ನ ಹೆಸರಿನಲ್ಲಿ ಕೃಷಿ ಜಮೀನಿದೆ. ಇದಕ್ಕೆ ಪುರಾವೆಯ ಅಗತ್ಯವಿದೆಯೇ, ಹೇಗೆ. ಕೃಷಿ ಆದಾಯದ ಪುರಾವೆ ಕೇಳುತ್ತಾರೆ.

ಉತ್ತರ: ಆದಾಯ ತೆರಿಗೆ ರಿಟರ್ನ್ ತುಂಬುವಾಗ ಕೃಷಿ ಆದಾಯವನ್ನು ಸೋರಿಸುವುದು ಸೂಕ್ತ. ಈ ಆದಾಯಕ್ಕೆ ಸೆಕ್ಷನ್ 10 (1) ಆಧಾರದ ಮೇಲೆ ಸಂಪೂರ್ಣ ವಿನಾಯ್ತಿ ಇದೆ. ನಿಮ್ಮ ಹೆಸರಿನಲ್ಲಿ ಎಷ್ಟು ಜಮೀನು ಇದೆ ಹಾಗೂ ಕೃಷಿ ಆದಾಯ ಎಷ್ಟು ಎನ್ನುವುದನ್ನು ಪ್ರಶ್ನೆಯಲ್ಲಿ ತಿಳಿಸಿಲ್ಲ. ನಿಮ್ಮ ಕೃಷಿ ಆದಾಯದ ಮೊತ್ತ ಬಹಳ ದೊಡ್ಡದಿರುವಲ್ಲಿ, ಅಂತಹ ಆದಾಯ ಜಮೀನಿಗೆ ಹೋಲಿಸಿದರೆ ಸರಿ ಇದೆಯೇ ಎನ್ನುವುದನ್ನು ಪರಿಗಣಿಸಲು ಪುರಾವೆ ಕೇಳಿರಬಹುದು. ಸಾಮಾನ್ಯವಾಗಿ ಜನಸಾಮಾನ್ಯರ ಕೃಷಿ ಆದಾಯ ಹಾಗೂ ಪುರಾವೆಯನ್ನು ಆದಾಯ ತೆರಿಗೆ ಅಧಿಕಾರಿಗಳೇ ಕೇಳುವುದಿಲ್ಲ. ನಿಮ್ಮ ನೌಕರಿಯಲ್ಲಿ ವಾರ್ಷಿಕ ಲೆಕ್ಕಚಾರ ಪಟ್ಟಿ ಸಲ್ಲಿಸುವಾಗ ಜಮೀನಿನ ವಿವರಣೆ ಹಾಗೂ ಅದರಲ್ಲಿ ಬಂದಿರುವ ಆದಾಯ ತಿಳಿಸಿದರೆ ಸಾಕು.

ಅರುಣ್, ಬೆಂಗಳೂರು
ನಾನು UPSC ಪರೀಕ್ಷೆಗೆ ಪ್ರಯತ್ನಿಸುತ್ತಿದ್ದೇನೆ. ನಿಮ್ಮ ಅಂಕಣ ಓದಿ ಓದಿ ನಾನು ಕೂಡಾ ಉಳಿತಾಯ ಮಾಡಬೇಕು ಎಂಬ ಆಸೆ ಹೊಂದಿದ್ದೇನೆ. ಮನೆಯವರು ನನ್ನ ಖರ್ಚಿಗೆ ಹಣ ಕೊಡುತ್ತಾರೆ. ನಾನು SBI-SB ಯಲ್ಲಿ₹ 1.50 ಲಕ್ಷ ಇಟ್ಟಿದ್ದೇನೆ. ನನಗೆ ತಿಂಗಳಿಗೆ ಏನಾದರೂ ಆದಾಯ ಬರುವಂತೆ ಈ ಮೊತ್ತ ಹೂಡಲು ಮಾರ್ಗದರ್ಶನ ಮಾಡಿರಿ.

ಉತ್ತರ: ನೀವು ನನ್ನ ಅಂಕಣ ಓದಿ ಉಳಿತಾಯದ ಮಾರ್ಗ ಅನುಸರಿಸುತ್ತಿರುವುದಕ್ಕೆ ಅಭಿನಂದನೆಗಳು. ನಿಮ್ಮೊಡನಿರುವ₹ 1.50 ಲಕ್ಷ SBI ನಲ್ಲಿ FD ಮಾಡಿರಿ. ಬಡ್ಡಿ ಮೂರು ತಿಂಗಳಿಗೊಮ್ಮೆ ಪಡೆಯಿರಿ. ಪ್ರತೀ ತಿಂಗಳೂ ಬಡ್ಡಿ ಪಡೆಯಬಹುದಾಗಿದ್ದರೂ, ಈ ಮಾರ್ಗದಲ್ಲಿ ನಿಗದಿತ ಬಡ್ಡಿಗಿಂತ ಸ್ವಲ್ಪ ಕಡಿತ ಮಾಡಿ ಕೊಡುತ್ತಾರೆ. ಪ್ರಥಮ ಮೂರು ತಿಂಗಳು ಬಡ್ಡಿ ಸಿಗದಿದ್ದರೂ, ಒಮ್ಮೆ ಮೂರು ತಿಂಗಳಾದ ನಂತರ ಮೂರೂ ತಿಂಗಳ ಬಡ್ಡಿ ಜಮಾ ಆಗುವುದರಿಂದ, ಈ ಹಣದ 1/3ನೇ ಒಂದು ಭಾಗ ತೆಗೆದು ಉಪಯೋಗಿಸಿರಿ. ಹೀಗೆ ಮೂರು ತಿಂಗಳಾಗುತ್ತಿರುವಾಗ ಪುನಃ ಮೂರು ತಿಂಗಳ ಬಡ್ಡಿ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಈ ಪ್ರಕ್ರಿಯೆಯಿಂದ ನೀವು ನಿಗದಿತ ಬಡ್ಡಿಯಲ್ಲಿ ಏನೂ ಕಡಿತವಿಲ್ಲದೇ ಪ್ರತೀ ತಿಂಗಳೂ ಬಡ್ಡಿ ಪಡೆದಂತಾಗುತ್ತದೆ. UPSC ಪರೀಕ್ಷೆಗೆ ಹೆಚ್ಚಿನ ಗಮನ ಕೊಡಿ, ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT