ಶನಿವಾರ, ನವೆಂಬರ್ 16, 2019
24 °C

ಪ್ರಶ್ನೋತ್ತರ | ಎಷ್ಟು ಠೇವಣಿ ತನಕ ತೆರಿಗೆ ಬರುವುದಿಲ್ಲ?

Published:
Updated:
Prajavani

ವಯಸ್ಸು 85. ನನಗೆ 15 ಎಕರೆ ಜಮೀನಿದೆ. ಈಗ ಒಕ್ಕಲುತನ ಮಾಡುವುದು ಬಹಳ ಕಷ್ಟ. 8 ಎಕರೆ ಮಾರಾಟ ಮಾಡಿ ಬರುವ ₹ 25 ಲಕ್ಷದಲ್ಲಿ, 4 ಜನ ಗಂಡುಮಕ್ಕಳು ಹಾಗೂ ಒಬ್ಬ ಮೊಮ್ಮಗಳಿಗೆ ಹಂಚಬೇಕೆಂದಿದ್ದೇನೆ. ಯಾವ ಬ್ಯಾಂಕಿನಲ್ಲಿ ಯಾವ ರೀತಿ ಇರಿಸಲಿ?
-ಹೆಸರು, ಊರು ಬೇಡ

ಉತ್ತರ: ನೀವು ಆಸ್ತಿ ಮಾರಾಟ ಮಾಡುವುದರಿಂದ ಸ್ಥಿರ ಆಸ್ತಿ, ಚರ ಆಸ್ತಿಯಾಗುತ್ತದೆ. ಹಳ್ಳಿಗಳಲ್ಲಿ ವ್ಯವಸಾಯ ಮಾಡಲು ಜನ ಸಿಗದಿರುವುದು ಸಹಜ. ಮಾರಾಟ ಮಾಡಲೇ ಬೇಕೆಂದಿದ್ದರೆ, ₹ 25 ಲಕ್ಷದಲ್ಲಿ ಗಂಡು ಮಕ್ಕಳಿಗೆ ಸಮಾನವಾಗಿ ₹ 6 ಲಕ್ಷ ಹಾಗೂ ಮೊಮ್ಮಗಳಿಗೆ ₹ 1 ಲಕ್ಷ ಹಂಚಿರಿ. ಹೀಗೆ ಮಾಡಿದಲ್ಲಿ ಮಕ್ಕಳಲ್ಲಿ ತಕರಾರು ಬಾರದಿರಬಹುದು. ಠೇವಣಿಯನ್ನು ನಿಮ್ಮ ಮನೆಗೆ  ಸಮೀಪದ ಬ್ಯಾಂಕಿನಲ್ಲಿ ಇರಿಸಿರಿ. ನಿಮ್ಮ ಮಗ ಸೊಸೆ ಈ ರೀತಿ ಜಂಟಿಯಾಗಿ ಠೇವಣಿ ಮಾಡಿರಿ. ಇದರಿಂದ ನಿಮ್ಮ ಮನೆಯ ಸೊಸೆಯಂದಿರಿಗೂ ನಿಮ್ಮ ಮೇಲೆ ಹೆಚ್ಚಿನ ಗೌರವ ಬರುತ್ತದೆ. ನೀವೂ ನೆಮ್ಮದಿಯಿಂದ ಬಾಳಬಹುದು.

ನಾನು ನಿವೃತ್ತ ಸರ್ಕಾರಿ ನೌಕರ. ನನ್ನ ಪಿಂಚಣಿ 2,58,556. ಬ್ಯಾಂಕ್ ಠೇವಣಿ ಬಡ್ಡಿ ₹ 90,056. ಒಟ್ಟು ಆದಾಯ ₹ 3,48,612.  ತೆರಿಗೆ ಪಾವತಿಸಬೇಕೇ ತಿಳಿಸಿರಿ.
-ಎಚ್.ಎಸ್. ಸತ್ಯನಾರಾಯಣ

ಉತ್ತರ: ನಿಮ್ಮ ಒಟ್ಟು ಆದಾಯದಲ್ಲಿ ಸೆಕ್ಷನ್ 16 (Standard Deduction) ₹ 40,000, ಸೆಕ್ಷನ್ 80TTB, ಬಡ್ಡಿ ಆದಾಯದಲ್ಲಿ ₹ 50,000 ಕಳೆದಾಗ ಬರುವ ಮೊತ್ತ ₹ 2,58,612. ನೀವು ತೆರಿಗೆಗೆ ಒಳಗಾಗುವುದಿಲ್ಲ. 1–4–2019 ರಿಂದ, ಆದಾಯದ ಮಿತಿ 5 ಲಕ್ಷ  ಸ್ಟ್ಯಾಂಡರ್ಡ್ ಡಿಡಕ್ಷನ್‌ ₹ 50,000 ಹಾಗೂ ಬಡ್ಡಿ ₹ 50,000 ಹೀಗೆ ₹ 6 ಲಕ್ಷಗಳ ಆದಾಯ ಬಂದರೂ ತೆರಿಗೆ ಇಲ್ಲ. ನಿಮ್ಮ ಇಳಿ ವಯಸ್ಸಿನಲ್ಲಿ ತೆರಿಗೆ ಭಯ ಮರೆತು ಸುಖವಾಗಿ ಜೀವಿಸಿರಿ.

ನನ್ನ ತಿಂಗಳ ಪಿಂಚಣಿ ₹ 50,749. ತಿಂಗಳಿಗೆ ₹ 2,920ರಂತೆ ಮೂಲದಲ್ಲಿಯೇ ತೆರಿಗೆ (ಟಿಡಿಎಸ್‌) ಮುರಿದುಕೊಳ್ಳುತ್ತಾರೆ. ನನ್ನ ಪಿತ್ರಾರ್ಜಿತ ಆಸ್ತಿ 11 ಎಕರೆ ಹೊಲವನ್ನು ಸೋಲಾರ್ ಕಂಪನಿಗೆ ಮಾರಿ ಬರುವ ₹ 50 ಲಕ್ಷ ನನ್ನ 3 ಜನ ಹೆಣ್ಣುಮಕ್ಕಳಿಗೆ ಕೊಡಲು ಬಯಸಿದ್ದೇವೆ. ತೆರಿಗೆ ಉಳಿಸಬೇಕಾದರೆ ಏನು ಮಾಡಬೇಕು.
-ಪಿ. ರುದ್ರಗೌಡ, ರಾಯಚೂರು

ಉತ್ತರ: ನಿಮ್ಮ 11 ಎಕರೆ ಹೊಲ ರಾಯಚೂರು ಸಮೀಪದಲ್ಲಿರುವಲ್ಲಿ ಮಾರಿ ಬರುವ ಹಣಕ್ಕೆ Capital Gain Tax ಕೊಡಬೇಕಾಗುತ್ತದೆ. ಇದೇ ವೇಳೆ ಹೀಗೆ ಬರುವ ಪಿತ್ರಾರ್ಜಿತ ಜಮೀನಿನಿಂದಾಗಿ ಬರುವ ಹಣ, ಮೂರು ಜನ ಹೆಣ್ಣು ಮಕ್ಕಳ ಹೆಸರಿನಲ್ಲಿ ಸರ್ಕಾರಿ ಬಾಂಡ್‌ಗಳಲ್ಲಿ (NHIA-REC) 5 ವರ್ಷ ಜಮಾ ಇರಿಸಿ. ತೆರಿಗೆ ವಿನಾಯಿತಿ ಪಡೆಯಬಹುದು. ಇಲ್ಲಿ ಬಡ್ಡಿದರ ಶೇ 5.75. ಬಡ್ಡಿ ವಾರ್ಷಿಕವಾಗಿ ಪಡೆಯಬಹುದು. 

ನಾನು ನಿವೃತ್ತ ನೌಕರ. ವಯಸ್ಸು 70. ಪಿಂಚಣಿ ₹ 10,000. ಕರ್ಣಾಟಕ ಬ್ಯಾಂಕಿನಲ್ಲಿ ₹ 8 ಲಕ್ಷ, 2 ವರ್ಷಕ್ಕೆ ಇರಿಸಿ ಬರುವ ಬಡ್ಡಿ ಅಲ್ಲಿಯೇ ಆರ್‌.ಡಿ. ಮಾಡುತ್ತಿದ್ದೇನೆ. 15H ಕೊಟ್ಟಿದ್ದೇನೆ. ಎಷ್ಟು ಠೇವಣಿ ತನಕ ತೆರಿಗೆ ಬರುವುದಿಲ್ಲ ತಿಳಿಸಿರಿ.
-ವಿಜಯ್‌, ದಾವಣಗೆರೆ

ಉತ್ತರ: ಬಹಳಷ್ಟು ಜನರು ಠೇವಣಿ ಇರಿಸುವಾಗ ತೆರಿಗೆ ಭಯದಲ್ಲಿ ಇರುವುದು ಕಂಡು ಬರುತ್ತದೆ. ನಿಮ್ಮ ವಾರ್ಷಿಕ ಒಟ್ಟು ಆದಾಯ ಪಿಂಚಣಿ ಬಡ್ಡಿ ಸೇರಿಸಿ ₹ 6 ಲಕ್ಷ ಬಂದರೂ ನಿಮಗೆ ತೆರಿಗೆ ಬರುವುದಿಲ್ಲ. (ಆದಾಯದ ಮಿತಿ ₹ 5 ಲಕ್ಷ + ಸ್ಟ್ಯಾಂಡರ್ಡ್ ಡಿಡಕ್ಷನ್ ₹ 50,000 + ಬಡ್ಡಿ ಆದಾಯ ₹ 50,000 = ₹ 6 ಲಕ್ಷ) ನೀವು 2 ಲಕ್ಷ ಠೇವಣಿ ಇರಿಸಿ, ಬರುವ ಬಡ್ಡಿ ಆರ್.ಡಿ. ಮಾಡುವ ಬದಲಾಗಿ, ಅದೇ ಮೊತ್ತ ಒಮ್ಮೆಲೇ ಬರುವ ಕರ್ಣಾಟಕ ಬ್ಯಾಂಕಿನ ‘ಅಭ್ಯುದಯ ಕ್ಯಾಷ್ ಸರ್ಟಿಫಿಕೇಟ್‌ನಲ್ಲಿ ಇರಿಸಿರಿ. 

ಪ್ರತಿಕ್ರಿಯಿಸಿ (+)