ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿ ಮಂತ್ರ 'ಹೊಸ ಕಾರ್ಯತಂತ್ರ'

Last Updated 15 ಏಪ್ರಿಲ್ 2020, 1:38 IST
ಅಕ್ಷರ ಗಾತ್ರ

ಕೋವಿಡ್‌ ಕಡಿವಾಣ ಉದ್ದೇಶದ ದಿಗ್ಬಂಧನ ಕೊನೆಗೊಂಡ ನಂತರದ ದಿನಗಳು ತುಂಬ ಸವಾಲಿನಿಂದ ಕೂಡಿರಲಿದ್ದು, ಪ್ರತಿಯೊಂದು ಉದ್ದಿಮೆ – ವಹಿವಾಟು ಹೊಸ ಕಾರ್ಯತಂತ್ರ ಅಳವಡಿಸಿಕೊಳ್ಳುವ ಅಗತ್ಯವನ್ನು ಇಲ್ಲಿ ವಿವರಿಸಲಾಗಿದೆ.

‘ಕೋವಿಡ್‌–19’ ವೈರಾಣು ಪಿಡುಗಿನಿಂದ ಎಲ್ಲೆಡೆ ಸೃಷ್ಟಿಯಾಗಿರುವ ದಿಗ್ಬಂಧನವು ಪ್ರತಿಯೊಬ್ಬರ ಜೀವನ ವಿಧಾನ, ಚಿಂತನಾ ಕ್ರಮವನ್ನೇ ಬದಲಿಸಿದೆ. ಮನುಕುಲಕ್ಕೆ ಅತಿದೊಡ್ಡ ಸವಾಲನ್ನೂ ಮುಂದೊಡ್ಡಿದೆ. ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿವೆ. ಅಸಂಖ್ಯ ಉದ್ಯೋಗಿಗಳು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ತಮಗೆ ಯಾವುದು ಮುಖ್ಯ ಎನ್ನುವುದರ ಬಗ್ಗೆ ಜನರು ಆತ್ಮಾವಲೋಕನ ಮಾಡಿಕೊಳ್ಳಲು ಈ ಲಾಕ್‌ಡೌನ್‌ ಅಪೂರ್ವ ಅವಕಾಶ ಕಲ್ಪಿಸಿದೆ. ಬದುಕಿನಲ್ಲಿ ಎದುರಾಗಿರುವ ಹೊಸ ಸವಾಲುಗಳ ವಿಷಯದಲ್ಲಿ ನಾವೆಲ್ಲ ಹೆಚ್ಚು ವಾಸ್ತವಿಕ ಧೋರಣೆ ತಳೆಯಬೇಕಾಗಿದೆ. ವಾಣಿಜ್ಯ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಲು ಕೆಲ ತಿಂಗಳುಗಳೇ ಬೇಕಾಗಬಹುದು. ಅದರಲ್ಲೂ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಮಾರಾಟ ಕುಸಿತ ಕಾಣುತ್ತಿರುವ ವಾಹನ ತಯಾರಿಕಾ ಉದ್ದಿಮೆಗೂ ಕೊರೊನಾ ಬಿಕ್ಕಟ್ಟು ಹೊಸ ಸವಾಲುಗಳನ್ನು ತಂದೊಡ್ಡಿದೆ. 2020ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಿಲಾಸಿ ಕಾರ್‌ಗಳ ಮಾರಾಟದಲ್ಲಿ ಹೆಚ್ಚಿನ ಏರಿಳಿತ ಕಂಡುಬರಲಿಕ್ಕಿಲ್ಲ ಎಂದು ಔಡಿ ಇಂಡಿಯಾ ಭಾವಿಸಿದೆ. ಮುಂಬರುವ ದಿನಗಳು ತುಂಬ ಸವಾಲಿನಿಂದ ಕೂಡಿರಲಿವೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹಲವಾರು ಪ್ರತಿಕೂಲ ಪರಿಸ್ಥಿತಿಗಳೂ ಎದುರಾಗಲಿವೆ. ಇಂತಹ ಸಂದರ್ಭದಲ್ಲಿ ವಹಿವಾಟಿನಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ತುಂಬ ಮುಖ್ಯವಾಗಿರುತ್ತದೆ. ಈ ಕಾರಣಕ್ಕೆ ಔಡಿ ಇಂಡಿಯಾ, ಸದ್ಯದ ಸವಾಲುಗಳನ್ನು ಎದುರಿಸುವುದರ ಜತೆಗೆ ‘2025ರ ಕಾರ್ಯತಂತ್ರ’ದ ಬಗ್ಗೆಯೂ ಗಮನ ಕೇಂದ್ರೀಕರಿಸಿದೆ.

ನಮ್ಮ ವಹಿವಾಟಿನ ಹೊಸ ಕಾರ್ಯತಂತ್ರವನ್ನು ಕಾರ್ಯಗತಗೊಳಿಸುವುದರ ಜತೆಗೆ ನಮ್ಮೆಲ್ಲ ಪಾಲುದಾರರ ಜತೆ ಡಿಜಿಟಲ್‌ ಮಾಧ್ಯಮದ ಮೂಲಕ ಸಂವಹನ, ಆನ್‌ಲೈನ್‌ ಮೂಲಕ ಮಾರಾಟ ತಂಡಗಳ ನಿರ್ವಹಣೆ, ಮನೆಯಲ್ಲಿ ಕುಳಿತುಕೊಂಡೇ ಸಮರ್ಪಕ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಈ ಎಲ್ಲ ಚಟುವಟಿಕೆಗಳು ಮತ್ತು ಗುರಿಗಳು ವಹಿವಾಟನ್ನು ಸುಸ್ಥಿರಗೊಳಿಸುವುದಕ್ಕೆ ಕೇಂದ್ರೀಕೃತಗೊಂಡಿವೆ.

ಇಂತಹ ಸಂದರ್ಭ ಗಳಲ್ಲಿ ವಹಿವಾಟಿನ ಯೋಜನೆ ರೂಪಿಸುವುದು ತುಂಬ ಮಹತ್ವದ ನಿರ್ಧಾರವಾಗಿರುತ್ತದೆ. ದಿಗ್ಬಂಧನವು ನಮ್ಮ ಗ್ರಾಹಕರು, ಪಾಲುದಾರರು ಮತ್ತು ತಂಡಗಳ ಮೇಲೆ ಬೀರಿರುವ ಪ್ರಭಾವ ಮಿತಿಗೊಳಿಸುವುದು ನಮ್ಮ ಮೊದಲ ಆದ್ಯತೆಯಾಗಿರಲಿದೆ. ಕಠಿಣ ಸಂದರ್ಭಗಳಲ್ಲಿ ಮತ್ತು ಚೇತರಿಕೆಯ ಹಂತಗಳಲ್ಲಿ ವಹಿವಾಟನ್ನು ಸುಸ್ಥಿರತೆಯಿಂದ ಮುನ್ನಡೆಸುವುದಕ್ಕೆ ಹಲವಾರು ವಿಧಾನಗಳಿವೆ. ಅವುಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಜನರ ಸುರಕ್ಷತೆಯೇ ನಮ್ಮೆಲ್ಲರ ಮೊದಲ ಆದ್ಯತೆಯಾಗಿರಬೇಕು. ನಮ್ಮ ಗ್ರಾಹಕರು, ಉದ್ಯೋಗಿಗಳು, ಪಾಲುದಾರರು, ನಮ್ಮ ಕಚೇರಿ ಮತ್ತು ವಿಶಾಲ ಅರ್ಥದಲ್ಲಿ ಒಟ್ಟಾರೆ ಸಮುದಾಯದ ಸುರಕ್ಷತೆ ಮುಖ್ಯವಾಗಿರಬೇಕು. ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುತ್ತಿದ್ದಂತೆ ನಾವು ಷೋರೂಂ ಮತ್ತು ವರ್ಕ್‌ಶಾಪ್‌ಗಳಲ್ಲಿ ಪರಸ್ಪರ ಅಂತರ ಮತ್ತು ಸುರಕ್ಷತೆಯ ಇತರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಗಮನ ಕೇಂದ್ರೀಕರಿಸಲಿದ್ದೇವೆ.

ಗ್ರಾಹಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರೆ ಮಾತ್ರ ವಹಿವಾಟು ಪ್ರಗತಿ ಹಾದಿಯಲ್ಲಿ ಮುನ್ನಡೆಯುತ್ತದೆ ಎನ್ನುವ ತತ್ವದಲ್ಲಿ ನಾನು ದೃಢ ನಂಬಿಕೆ ಹೊಂದಿರುವೆ. ಬಿಕ್ಕಟ್ಟಿನ ಸಂದರ್ಭಗಳಲ್ಲಿ ಉದ್ಯೋಗಿಗಳು ಉತ್ಸಾಹದಿಂದ ಇರುವಂತೆ ಅವರಿಗೆ ಪ್ರೇರಣೆ ನೀಡಬೇಕು. ಸವಾಲುಗಳನ್ನು ಎದುರಿಸುವ ಬಗ್ಗೆ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ವಿಡಿಯೊ ಕರೆಗಳ ಮೂಲಕ ಮಾತನಾಡುವುದರಿಂದ ಸಾಮಾನ್ಯ ದಿನಗಳಂತೆ ಕೆಲಸ ನಿರ್ವಹಿಸಿದಂತೆ ನನಗೆ ಭಾಸವಾಗುತ್ತದೆ.

ಯಾವುದೇ ವಹಿವಾಟು ಸವಾಲುಗಳನ್ನು ಎದುರಿಸುತ್ತಿರುವಾಗ ನಾವು ಅನಗತ್ಯವಾದ ವೆಚ್ಚಗಳಿಗೆ ಕಡಿವಾಣ ಹಾಕಬೇಕು. ವಾಸ್ತವದ ನೆಲೆಯಲ್ಲಿ ಜಾಣತನದ ನಿರ್ಧಾರ ಕೈಗೊಳ್ಳಬೇಕು. ಪ್ರತಿಯೊಂದು ಉದ್ದಿಮೆಯು ಉದ್ಯೋಗಿಗಳು, ಪೂರೈಕೆದಾರರು ಸೇರಿದಂತೆ ತನ್ನೆಲ್ಲ ಪಾಲುದಾರರ ಜತೆ ಆರೋಗ್ಯಕರ ಬಾಂಧವ್ಯ ಹೊಂದಲು ಮುಂದಾಗಬೇಕು. ಸಾಂಪ್ರದಾಯಿಕ ಸ್ವರೂಪದ ಕೆಲಸದ ಸ್ವರೂಪವನ್ನು ಬದಲಾಯಿಸಿಕೊಳ್ಳಬೇಕು. ಕೆಲಸ ಮಾಡುವ ಹೊಸ ವಿಧಾನಗಳನ್ನು ರೂಢಿಸಿಕೊಳ್ಳಬೇಕು. ಕೆಲಸದ ಅವಧಿ ಬಗ್ಗೆ ತಲೆಕೆಡಿಸಿಕೊಳ್ಳುವುದರ ಬದಲಿಗೆ ಉತ್ಪಾದನೆ ಹೆಚ್ಚಳದತ್ತ ಗಮನ ಹರಿಸಬೇಕು.

ಲಾಭ ಗಳಿಸುವುದೇ ಪ್ರತಿಯೊಂದು ಉದ್ದಿಮೆಯ ಅಂತಿಮ ಗುರಿಯಾಗಿರುತ್ತದೆ. ವಹಿವಾಟಿನ ಕಾರ್ಯತಂತ್ರದಲ್ಲಿ ಹೊಸತನ ಅಳವಡಿಸಿಕೊಳ್ಳುವ ಮತ್ತು ವಹಿವಾಟು ಹೆಚ್ಚಿಸಲು ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಬಿಕ್ಕಟ್ಟಿನ ಸಂದರ್ಭಗಳು ಅವಕಾಶ ಒದಗಿಸುತ್ತವೆ. ಇದಕ್ಕೆ ಔಡಿ ಕಂಪನಿಯ ಉದಾಹರಣೆಯನ್ನೆ ನೀಡುವುದಾದರೆ, ಹಳೆಯ ಕಾರ್‌ಗಳ ಮಾರಾಟವು 2019ರಲ್ಲಿ ಶೇ 11ರಷ್ಟು ಏರಿಕೆಯಾಗಿತ್ತು.

ಡಿಜಿಟಲ್‌ ಯುಗದಲ್ಲಿ ಆನ್‌ಲೈನ್‌ನಲ್ಲಿ ಸಕ್ರಿಯವಾಗಿರುವುದು ಯಾವುದೇ ಉದ್ದಿಮೆ – ವಹಿವಾಟಿಗೆ ಹೆಚ್ಚು ಪ್ರಯೋಜನಕಾರಿ ಆಗಿರಲಿದೆ. ನಮ್ಮ ‘ಕಾರ್ಯತಂತ್ರ 2025’ರಲ್ಲಿ ಡಿಜಿಟಲೀಕರಣಕ್ಕೆ ಅಗ್ರ ಸ್ಥಾನ ಇದೆ. ಹಾಲಿ ಗ್ರಾಹಕರ ಜತೆ ನಿರಂತರ ಸಂಪರ್ಕದಲ್ಲಿ ಇರುವುದು ಮುಖ್ಯವಾಗಿರುತ್ತದೆ. ಇದೇ ಕಾರಣಕ್ಕೆ ನಾವು ವಾರಂಟಿ ಮತ್ತು ಸರ್ವಿಸ್‌ಗಳನ್ನು ವಿಸ್ತರಿಸಿದ್ದೇವೆ. ವಹಿವಾಟು ಪ್ರಗತಿ ಕಾಣಲು ಬ್ರ್ಯಾಂಡ್‌ವೊಂದು ತನ್ನ ಗ್ರಾಹಕರ ಜತೆ ನಿರಂತರ ಸಂಪರ್ಕದಲ್ಲಿ ಇರಬೇಕಾಗುತ್ತದೆ. ಜಾಗತಿಕ ಸಮುದಾಯಕ್ಕೆ ಎದುರಾಗಿರುವ ಈ ಬಿಕ್ಕಟ್ಟು ಎಲ್ಲರ ಸಹನೆ ಪರೀಕ್ಷಿಸುತ್ತಿದೆ. ಜೋಸ್‌ ಮಾಯರ್‌ ಅವರ ಅಭಿಪ್ರಾಯದಂತೆ– ‘ತಾಳ್ಮೆ ಎನ್ನುವುದು ವ್ಯಕ್ತಿಯೊಬ್ಬನ ಕಾಯುವಿಕೆಯ ಸಾಮರ್ಥ್ಯವಲ್ಲ. ಕಾಯುವ ಸಂದರ್ಭದಲ್ಲಿ ಉತ್ತಮ ಮನೋಭಾವವನ್ನು ಉಳಿಸಿಕೊಳ್ಳುವ ಸಾಮರ್ಥ್ಯವೇ ನಿಜವಾದ ಸಹನೆ‘. ಈ ಮಾತನ್ನು ಪ್ರತಿಯೊಬ್ಬರೂ ಪಾಲಿಸಿಕೊಂಡು ಬರಬೇಕು ಎನ್ನುವುದು ನನ್ನ ಆಶಯವಾಗಿದೆ.

* ವಹಿವಾಟಿನಲ್ಲಿ ಸುರಕ್ಷತೆ ಪಾಲನೆ ಕಡ್ಡಾಯ

* ಉದ್ಯೋಗಿಗಳ ನೈತಿಕತೆ ವೃದ್ಧಿಗೆ ಕ್ರಮ

* ಸಾಂಪ್ರದಾಯಿಕ ಕೆಲಸದ ಸ್ವರೂಪ ಬದಲಾಗಲಿ

* ಅಸ್ತಿತ್ವ ಉಳಿಸಿಕೊಳ್ಳಲು ಡಿಜಿಟಲ್‌ ಬಳಕೆ ಅಗತ್ಯ

* ಗ್ರಾಹಕರ ಜತೆ ನಿರಂತರ ಸಂಪರ್ಕ ಇರಲಿ

(ಲೇಖಕ, ಔಡಿ ಇಂಡಿಯಾದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT