ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಣ್ತಮ್ಮನ’ ಕಣ್ತುಂಬಿಕೊಂಡ ಜನತೆ

ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಪ್ರಚಾರ ನಡೆಸಿದ ನಟ ಯಶ್‌
Last Updated 6 ಮೇ 2018, 10:22 IST
ಅಕ್ಷರ ಗಾತ್ರ

ಧಾರವಾಡ: ನೆಚ್ಚಿನ ನಟ ಯಶ್‌ ಹಾದಿಯನ್ನು ಕಾದಿದ್ದ ಧಾರವಾಡ ವಿಧಾನಸಭಾ ಕ್ಷೇತ್ರದ ಜನರಿಗೆ ಬರೋಬ್ಬರಿ ಎರಡೂವರೆ ತಾಸಿನ ಕಾತರ ತಣಿಸುವ ಹೊತ್ತಿಗೆ ಸೂರ್ಯ ಅಸ್ತಂಗತನಾಗುತ್ತಿದ್ದ. ಆ ಹೊತ್ತಿಗೆ ಬಂದು ‘ರಾಜಾಹುಲಿ’ ಸಂಭಾಷಣೆಗೆ ಯುವಕರ ಚಪ್ಪಾಳೆ ಗಿಟ್ಟಿಸಿದರು.

ಧಾರವಾಡ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಜತೆ ತೆರೆದ ವಾಹನದಲ್ಲಿ ಬಂದ ಯಶ್‌, ಹೆಬ್ಬಳ್ಳಿ, ಅಮ್ಮಿನಭಾವಿ, ಉಪ್ಪಿನಬೆಟಗೇರಿ ಮಾರ್ಗವಾಗಿ ನಗರ ಪ್ರದೇಶದ ಹೊಸಯಲ್ಲಾಪುರ ಇತ್ಯಾದಿ ಕಡೆ ರೋಡ್ ಷೋದಲ್ಲಿ ಪಾಲ್ಗೊಂಡರು.

ಅಭಿಮಾನಿಗಳ ಕಂಡು ಪುಳಕಿತ ರಾದ ಯಶ್‌, ‘ಅಣ್ತಮ್ಮಾ’ ಎಂದೇ ಮಾತು ಆರಂಭಿಸಿ, ‘ಜಿ.ಬಿ. ಜೋಶಿ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನಿಮಿತ್ತ ಆಯೋಜಿಸಿದ್ದ ನಾಟಕದಲ್ಲಿ ಪಾಲ್ಗೊಳ್ಳಲು ಧಾರವಾಡಕ್ಕೆ ಬಂದಿದ್ದೆ. ನಂತರ ಬಂದಿರಲಿಲ್ಲ. ಈಗ ವಿನಯ ಕುಲಕರ್ಣಿ ಕರೆದುಕೊಂಡು ಬಂದಿದ್ದಾರೆ. ಜನರನ್ನು ಭೇಟಿ ಮಾಡಲು ಸಿಗುವ ಯಾವ ಅವಕಾಶವನ್ನೂ ಕಳೆದುಕೊಳ್ಳುವುದಿಲ್ಲ. ನೀವು ಖರೀದಿಸುವ ಒಂದೊಂದು ಟಿಕೆಟ್‌ನಿಂದ ಬೆಳೆದಿದ್ದೇನೆ’ ಎಂಬ ಮಾತಿಗೆ ಅಭಿಮಾನಿಗಳು ಕೇಕೆ, ಶಿಳ್ಳೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.

‘ರೈತರ ಸಮಸ್ಯೆಗಳಿಗೆ ಸಿನಿಮಾ ಮಂದಿ ಸ್ಪಂದಿಸುವುದಿಲ್ಲ ಎಂಬ ಆಪಾದನೆ ಇತ್ತು. ಜನರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಣ್ಣ ಪ್ರಯತ್ನ ಆರಂಭಿಸಿದೆ. ಅದರಲ್ಲಿ ಸಿಕ್ಕ ಯಶಸ್ಸಿನ ನಂತರ ಕೆರೆ ಅಭಿವೃದ್ಧಿಗೆ ಕೈಹಾಕಿದೆ. ಸಾಕಷ್ಟು ಜನಮನ್ನಣೆ ಸಿಕ್ಕಿತು. ಆದರೆ ಅಷ್ಟಕ್ಕೇ ತೃಪ್ತಿಪಡುವ ಜೀವ ನನ್ನದಲ್ಲ. ಒಂದೇ ಕೆರೆ ಅಭಿವೃದ್ಧಿಪಡಿಸಿ ಮನೆಯಲ್ಲಿ ಕೂರುವವನು ನಾನಲ್ಲ. ಕರ್ನಾಟಕ ಎಲ್ಲಾ ಭಾಗಗಳಲ್ಲೂ ನನ್ನ ಅಭಿಯಾನ ಆರಂಭಿಸುತ್ತಿದ್ದೇನೆ’ ಎಂದರು.

ಅಭ್ಯರ್ಥಿ ವಿನಯ ಕುಲಕರ್ಣಿ ಮಾತನಾಡಿ, ಕ್ಷೇತ್ರಕ್ಕೆ ತಾವು ಮಾಡಿರುವ ಕೆಲಸ ಹಾಗೂ ಸರ್ಕಾರದ ಭಾಗ್ಯಗಳ ಕುರಿತು ವಿವರಿಸಿ, ಮತಯಾಚಿಸಿದರು.

ಕಾಂಗ್ರೆಸ್‌ ಲಾಭ ಪಡೆದ ಜೆಡಿಎಸ್‌, ಎಎಪಿ!

ನಟ ಯಶ್‌ ದಾರಿಗಾಗಿ ಹೆಬ್ಬಳ್ಳಿಯಲ್ಲಿ ರಸ್ತೆ ಬದಿ ಕಾದು ನಿಂತಿದ್ದ ಜನರ ಬಳಿ ಜೆಡಿಎಸ್ ಹಾಗೂ ಎಎಪಿ ಅಭ್ಯರ್ಥಿಗಳು ರೋಡ್‌ ಷೋ ಮೂಲಕ ಪ್ರಚಾರ ನಡೆಸಿದರು.

ಜೆಡಿಎಸ್‌ನ ಅಭ್ಯರ್ಥಿ ತಿರುಕಪ್ಪ ಜಮನಾಳ ಜೂನಿಯರ್‌ ವಿಷ್ಣುವರ್ಧನ್‌ ಅವರನ್ನು ತೆರೆದ ವಾಹನದಲ್ಲಿ ಕರೆದುಕೊಂಡು ಪ್ರಚಾರ ನಡೆಸಿದರೆ, ಎಎಪಿಯ ಅಭರ್ಥಿ ಶಿವನಗೌಡ ಪಾಟೀಲ ತಮ್ಮ ಕಾರಿಗೆ ಪಕ್ಷದ ಚಿಹ್ನೆ ಪೊರಕೆ ಕಟ್ಟಿಕೊಂಡು ಪ್ರಚಾರ ನಡೆಸಿದರು. ಇವರಿಗೂ ಸೇರಿದ್ದ ಜನರು ಅಷ್ಟೇ ಅಭಿಮಾನದಿಂದ ಕೈಬೀಸಿ ಪ್ರೋತ್ಸಾಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT