ಬರಗಾಲದಲ್ಲೂ ಆಸ್ತಿ ನೋಂದಣಿ ಶುಲ್ಕ ತಗ್ಗಿಲ್ಲ

7
ಸ್ಥಿರಾಸ್ತಿಗಳ ಮಾರುಕಟ್ಟೆ ದರ ಪರಿಷ್ಕರಣೆಗೆ ಸಿದ್ಧತೆ ಮಾಡಿದ ನೋಂದಣಿ ಇಲಾಖೆ

ಬರಗಾಲದಲ್ಲೂ ಆಸ್ತಿ ನೋಂದಣಿ ಶುಲ್ಕ ತಗ್ಗಿಲ್ಲ

Published:
Updated:

ರಾಯಚೂರು: ಜಿಲ್ಲೆಯಲ್ಲಿ ಸತತ ಮೂರು ವರ್ಷಗಳಿಂದ ಬರಗಾಲ ಆವರಿಸಿದ್ದರೂ ಜಮೀನು, ಮನೆ ಹಾಗೂ ಇತರೆ ಆಸ್ತಿ ಪಾಸ್ತಿಗಳ ನೋಂದಣಿ ಪ್ರಕ್ರಿಯೆಗಳ ಮೇಲೆ ಯಾವುದೇ ಹೊಡೆತ ಬಿದ್ದಿಲ್ಲ!

ಜಿಲ್ಲಾ ನೋಂದಣಿ ಇಲಾಖೆಗೆ ಸರ್ಕಾರವು ಪ್ರತಿವರ್ಷ ನಿಗದಿ ಪಡಿಸುವ ಶುಲ್ಕ ಸಂಗ್ರಹ ಗುರಿಯು ಸಾಧನೆ ಆಗುತ್ತಾ ಬಂದಿದೆ. ನೋಟ ರದ್ದುಗೊಂಡಿದ್ದ 2016–17 ರಲ್ಲಿ ಮಾತ್ರ ನಿಗದಿತ ಗುರಿ ತಲುಪುವುದಕ್ಕೆ ಸಾಧ್ಯವಾಗಿರಲಿಲ್ಲ. ಆ ಒಂದು ವರ್ಷ ಮಾತ್ರ ಜನರ ಹತ್ತಿರ ಹೊಸ ನೋಟುಗಳ ಚಲಾವಣೆ ನಿಂತುಹೋಗಿತ್ತು. ನೋಟು ರದ್ದತಿಯಿಂದ ಆಸ್ತಿಗಳ ನೋಂದಣಿಯು ಮುಂದಿನ ಹಲವು ವರ್ಷಗಳವರೆಗೆ ಗಣನೀಯವಾಗಿ ತಗ್ಗುತ್ತದೆ ಎನ್ನುವ ನಿರೀಕ್ಷೆಯು ಸುಳ್ಳಾಗಿದೆ. 2017–18 ನೇ ಸಾಲಿನಲ್ಲಿ ನಿಗದಿತ ಶುಲ್ಕ ಸಂಗ್ರಹ ಗುರಿಯಿಂದ ಶೇ 5.14 ರಷ್ಟು ಮಾತ್ರ ಕಡಿಮೆಯಾಗಿದೆ. ಪ್ರಸಕ್ತ ಹಣಕಾಸು ಸಾಲಿನಲ್ಲೂ ಆಸ್ತಿ ಪಾಸ್ತಿಗಳ ನೋಂದಣಿಗಾಗಿ ಜನರು ಮುಗಿಬೀಳುತ್ತಿದ್ದಾರೆ.

ದತ್ತಿ ದಾನ ಪತ್ರ ಶುಲ್ಕ, ಅಫಿಡವಿಟ್‌ ಶುಲ್ಕ, ಮಾರಾಟ ಪ್ರಮಾಣಪತ್ರ ಶುಲ್ಕ, ಬಂಡವಾಳ ಪ್ರಮಾಣಪತ್ರ ಶುಲ್ಕ, ಲೀಸ್‌ ಶುಲ್ಕ, ಸ್ಥಿರಾಸ್ತಿ ನೋಂದಣಿ ಶುಲ್ಕಗಳು, ಅಡಮಾನು ಶುಲ್ಕ, ಲೀಸ್‌ ಶುಲ್ಕ, ಪವರ್‌ ಆಫ್‌ ಅಟಾರ್ನಿ, ಸೆಕ್ಯುರಿಟಿ ಬಾಂಡ್‌, ಲೀಸ್‌ ಬಿಟ್ಟು ಕೊಡುವುದು ಸೇರಿದಂತೆ 29 ಕ್ಕಿಂತ ಹೆಚ್ಚು ನಮೂನೆಯ ಶುಲ್ಕಗಳನ್ನು ನೋಂದಣಿ ಇಲಾಖೆಯಲ್ಲಿ ಸಂಗ್ರಹಿಸಲಾಗುತ್ತದೆ.

ಪ್ರಮುಖವಾಗಿ ತಾಲ್ಲೂಕು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿಗಳ ನೋಂದಣಿ ನಡೆಯುತ್ತದೆ. ತಾಲ್ಲೂಕು ಕಚೇರಿಗಳಲ್ಲಿ ಸಂಗ್ರಹವಾಗುವ ಶುಲ್ಕದ ಮೇಲ್ವಿಚಾರಣೆಯನ್ನು ಜಿಲ್ಲಾ ನೋಂದಣಾಧಿಕಾರಿ ಮಾಡುತ್ತಾರೆ. ಅಂಕಿ–ಅಂಶಗಳನ್ನು ಸರ್ಕಾರಕ್ಕೆ ರವಾನಿಸುತ್ತಾರೆ.

ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಹೋಲಿಕೆ ಮಾಡಿದರೆ ರಾಯಚೂರು ತಾಲ್ಲೂಕಿನಲ್ಲ ಅತಿಹೆಚ್ಚು ಆಸ್ತಿಗಳ ನೋಂದಣಿಗಳಾಗುತ್ತವೆ. ಎರಡನೇ ಸ್ಥಾನದಲ್ಲಿ ಸಿಂಧನೂರು, ಮಾನ್ವಿ, ಲಿಂಗಸುಗೂರು ತಾಲ್ಲೂಕುಗಳು ಪೈಪೋಟಿಯಲ್ಲಿವೆ. ಆಸ್ತಿಗಳ ಮೌಲ್ಯ ಆಧರಿಸಿ ಶುಲ್ಕ ಕಟ್ಟಬೇಕಾಗುತ್ತದೆ. ತಾಲ್ಲೂಕಿನ ವಿವಿಧ ಕಡೆಗಳಲ್ಲಿರುವ ಆಸ್ತಿಗಳ ಮೌಲ್ಯ ಎಷ್ಟು ಎಂಬುದನ್ನು ಕಾಲಕಾಲಕ್ಕೆ ತಾಲ್ಲೂಕು ಸಮಿತಿಯು ನೋಂದಣಿ ಆಸ್ತಿ ಶುಲ್ಕವು ನಿರ್ಧರಿಸುತ್ತದೆ. ಆಯಾ ತಾಲ್ಲೂಕುಗಳ ತಹಶೀಲ್ದಾರರು ಸಮಿತಿಯ ಅಧ್ಯಕ್ಷರು.

ಸರ್ಕಾರವು ಆದಾಯ ಸಂಗ್ರಹಿಸುವ ಮೂರನೇ ಅತಿದೊಡ್ಡ ಮೂಲಕ ನೋಂದಣಿ ಮತ್ತು ಮುದ್ರಾಂಕ ಶುಲ್ಕವಾಗಿದೆ. ಸ್ಥಿರಾಸ್ತಿ ಮೌಲ್ಯದ ಮೇಲೆ ಎಷ್ಟು ಶುಲ್ಕ ವಿಧಿಸುವ ದರಗಳನ್ನು ಸರ್ಕಾರವು ನಿರ್ಧರಿಸುತ್ತದೆ. ಸ್ತಿರಾಸ್ತಿ ಮೌಲ್ಯಗಳನ್ನು ಮಾತ್ರ ತಹಸೀಲ್ದಾರ್‌ ನೇತೃತ್ವದ ಸಮಿತಿ ಪ್ರಕಟಿಸುತ್ತದೆ. ಸದ್ಯ ರಾಯಚೂರು ತಾಲ್ಲೂಕಿನಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆಯ ಮಾರುಕಟ್ಟೆ ದರಗಳನ್ನು ಪ್ರಕಟಿಸುವ ಮತ್ತು ಪರಿಷ್ಕರಿಸುವ ನಿಯಮಗಳ ಪ್ರಕಾರ ತಾಲ್ಲೂಕಿನ 2018-19ನೇ ಸಾಲಿನ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಲಾಗಿದೆ. ಹೊಸ ದರಗಳ ಪಟ್ಟಿಯನ್ನು ಹಿರಿಯ ಉಪನೋಂದಣಿ ಅಧಿಕಾರಿ ಕಚೇರಿ, ತಹಶೀಲ್ದಾರ್‌ ಕಚೇರಿ, ನಗರಸಭೆ ಕಚೇರಿಗಳ ಫಲಕದಲ್ಲಿ ಅಳವಡಿಸಿದೆ.

ಈ ಬಗ್ಗೆ ಸಾರ್ವಜನಿಕರು ಸಲಹೆ, ಸೂಚನೆ ಹಾಗೂ ಆಕ್ಷೇಪಣೆ ಲಿಖಿತ ರೂಪದಲ್ಲಿ ಹಿರಿಯ ಉಪ ನೋಂದಣಾಧಿಕಾರಿ ಮತ್ತು ಮಾರುಕಟ್ಟೆ ಮೌಲ್ಯ ನಿರ್ಧರಣಾ ಉಪ ಸಮಿತಿ ಸದಸ್ಯ ಕಾರ್ಯದರ್ಶಿಗೆ ಸಲ್ಲಿಸಬಹುದು. ಇದಕ್ಕಾಗಿ 15 ದಿನಗಳ ಸಮಯಾವಕಾಶವನ್ನು ನೀಡಲಾಗಿದೆ. ಇನ್ನುಳಿದ ತಾಲ್ಲೂಕುಗಳ ಮಾರುಕಟ್ಟೆ ದರಗಳ ಪರಿಷ್ಕರಣೆ ಪ್ರಕ್ರಿಯೆ ನಡೆಯಲಿದೆ.

‘ಸ್ತಿರಾಸ್ಥಿ ದರಗಳನ್ನು ಸರಾಸರಿ ಲೆಕ್ಕದಲ್ಲಿ ನಿಗದಿ ಮಾಡಲಾಗುತ್ತದೆ. ಸರ್ಕಾರದ ದರ ₨2 ಲಕ್ಷ ಎಂದು ನಿಗದಿ ಮಾಡಿದ್ದರೂ, ಹೊರಗಡೆ ₨5 ಲಕ್ಷಕ್ಕೆ ಮಾರಾಟವಾಗಿರುವ ಸಾಧ್ಯತೆ ಇರುತ್ತದೆ. ಒಂದು ನಿವೇಶನಕ್ಕೆ ಇರುವ ಬೇಡಿಕೆ ಇನ್ನೊಂದು ನಿವೇಶನಕ್ಕೆ ಇರುವುದಿಲ್ಲ. ಹೀಗಾಗಿ ಸರ್ಕಾರಿ ದರಗಳು ತುಂಬಾ ಹೆಚ್ಚು ಅಥವಾ ಕಡಿಮೆ ಇರುವುದಿಲ್ಲ. ಶುಲ್ಕ ಸಂಗ್ರಹ ಉದ್ದೇಶಕ್ಕಾಗಿ ಆಸ್ತಿ ದರ ಹೆಚ್ಚಳ ಮಾಡಿದರೆ, ಸರ್ಕಾರವು ಪರಿಹಾರ ಕೊಡುವ ಸಂದರ್ಭಗಳಿದ್ದಾಗ ಹೆಚ್ಚಿಗೆ ಪರಿಹಾರ ಕೊಡುವ ಅನಿವಾರ್ಯತೆ ಎದುರಾಗುತ್ತದೆ. ಎಲ್ಲವನ್ನು ಗಣನೆಗೆ ತೆಗೆದುಕೊಂಡ ಬಳಿಕ ದರಗಳನ್ನು ಪರಿಷ್ಕರಣೆ ಮಾಡಲಾಗುತ್ತದೆ’ ಎಂದು ಪ್ರಭಾರಿ ಜಿಲ್ಲಾ ನೋಂದಣಾಧಿಕಾರಿ ಮಲ್ಲಿಕಾರ್ಜುನ ತಿಳಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !