ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಗೂಳಿ: ಶೆಡ್‌ನಲ್ಲಿ 8 ವಿ.ವಿ.ಪ್ಯಾಟ್ ಪತ್ತೆ

ಜಿಲ್ಲಾಧಿಕಾರಿಗೆ ಘೇರಾವ್
Last Updated 20 ಮೇ 2018, 17:57 IST
ಅಕ್ಷರ ಗಾತ್ರ

ವಿಜಯಪುರ: ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿ ಪಟ್ಟಣದ ಹೊರ ವಲಯದಲ್ಲಿರುವ ಶೆಡ್‌ವೊಂದರಲ್ಲಿ ಭಾನುವಾರ ಎಂಟು ವಿ.ವಿ.ಪ್ಯಾಟ್‌ಗಳು (ಮತ ಖಾತ್ರಿ ಯಂತ್ರ) ಖಾಲಿ ಇರುವ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಮನಗೂಳಿ ಬಳಿ ರಾಷ್ಟ್ರೀಯ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿ ಆರು ತಿಂಗಳಿಂದ ನಡೆದಿದೆ. ಬಿಹಾರದ ಕಾರ್ಮಿಕರು ಇಲ್ಲಿಯೇ ಶೆಡ್‌ ನಿರ್ಮಿಸಿಕೊಂಡು ವಾಸವಿದ್ದು, ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ವಿ.ವಿ. ಪ್ಯಾಟ್‌ಗಳು ಪತ್ತೆಯಾಗಿರುವುದು, ಅವರು ವಾಸವಿರುವ ಈ ಶೆಡ್‌ನ‌ಲ್ಲಿಯೇ.

ಸುದ್ದಿ ತಿಳಿಯುತ್ತಿದ್ದಂತೆಯೇ, ಜಿಲ್ಲಾಧಿಕಾರಿ ಎಸ್‌.ಬಿ.ಶೆಟ್ಟೆಣ್ಣವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಗೆ ಮುಂದಾದರು. ಆದರೆ ಈ  ವೇಳೆಗಾಗಲೇ ಅಲ್ಲಿ ಜಮಾಯಿಸಿದ್ದ ಬಸವನಬಾಗೇವಾಡಿ, ವಿಜಯಪುರ ನಗರ, ಬಬಲೇಶ್ವರ, ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದ ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿಯ ಪರಾಜಿತ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಘೇರಾವ್‌ ಹಾಕಿದರು.

‘ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ಮರು ಚುನಾವಣೆ ನಡೆಸಬೇಕು’ ಎಂದು ಆಗ್ರಹಿಸಿದರು.

ಈ ಕುರಿತಂತೆ ಸಿಬಿಐ ತನಿಖೆ ನಡೆಸುವಂತೆ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕಾಂಗ್ರೆಸ್‌ನ ಅಬ್ದುಲ್‌ ಹಮೀದ್ ಮುಶ್ರೀಫ್‌ ಆಗ್ರಹಿಸಿದರೆ, ‘ಶಾಸಕ ಶಿವಾನಂದ ಪಾಟೀಲ ಚುನಾವಣಾ ಅಕ್ರಮ ಎಸಗಿದ್ದಾರೆ. ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸಬೇಕು’ ಎಂದು ಆ ಕ್ಷೇತ್ರದ ಮತದಾರ ಉಮೇಶ್‌ ಹಂಜಗಿ ಒತ್ತಾಯಿಸಿದರು.

ಪ್ರತಿಭಟನಾಕಾರರ ನಡುವೆ ಸಿಕ್ಕಿ ಹಾಕಿಕೊಂಡಿದ್ದ ಜಿಲ್ಲಾಧಿಕಾರಿಯನ್ನು, ಪೊಲೀಸ್‌ ಬಿಗಿ ಭದ್ರತೆಯೊಂದಿಗೆ ಹೊರ ಕರೆದುಕೊಂಡು ಬರಲಾಯಿತು.

‘ಎಂಟು ವಿ.ವಿ.ಪ್ಯಾಟ್‌ಗಳ ಖಾಲಿ ಪೆಟ್ಟಿಗೆಗಳು ಮನಗೂಳಿ ಬಳಿ ಪತ್ತೆಯಾಗಿವೆ. ಯಾವುದರಲ್ಲೂ ಬ್ಯಾಟರಿ ಇಲ್ಲ. ಇವು ಕಾರ್ಯ ನಿರ್ವಹಿಸುವ ಸ್ಥಿತಿಯಲ್ಲಿಲ್ಲ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇವೆ. ತನಿಖೆ ನಡೆದಿದೆ. ಪೂರ್ಣಗೊಂಡ ಬಳಿಕ ನಿಖರ ಮಾಹಿತಿ ನೀಡುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್‌ ಅಮೃತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

* ಮನಗೂಳಿಯಲ್ಲಿ ಪತ್ತೆಯಾದ ವಿ.ವಿ.ಪ್ಯಾಟ್‌ಗಳ  ಕುರಿತು ತನಿಖೆ ನಡೆಸಲಾಗುವುದು. ಅಕ್ರಮ ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.

– ಎಸ್‌.ಬಿ.ಶೆಟ್ಟೆಣ್ಣವರ, ವಿಜಯಪುರ ಜಿಲ್ಲಾಧಿಕಾರಿ

* ಎಂಟರಿಂದ ಹತ್ತು ದಿನಗಳ ಹಿಂದೆ ಹೆದ್ದಾರಿ ಬದಿ ಈ ಪೆಟ್ಟಿಗೆಗಳು ಬಿದ್ದಿದ್ದವು. ಇವು ಏನು ಎಂಬುದು ನಮಗೆ ಗೊತ್ತಿಲ್ಲ. ರಸ್ತೆ ಬದಿ ಬಿದ್ದಿದ್ದವನ್ನು ಶೆಡ್‌ಗೆ ತಂದಿಟ್ಟುಕೊಂಡಿದ್ದೇವೆ ಅಷ್ಟೆ.

– ನರೇಂದ್ರ ಸಾನಿ, ಬಿಹಾರದ ಕಾರ್ಮಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT