ಷೇರುವಿಕ್ರಯ: ₹ 77,417 ಕೋಟಿ ಸಂಗ್ರಹ

7

ಷೇರುವಿಕ್ರಯ: ₹ 77,417 ಕೋಟಿ ಸಂಗ್ರಹ

Published:
Updated:

ನವದೆಹಲಿ (ಪಿಟಿಐ): ಕೇಂದ್ರೋದ್ಯಮಗಳ ಷೇರುಗಳ ಮಾರಾಟದಿಂದ 2018ರಲ್ಲಿ ಸರ್ಕಾರದ ಬೊಕ್ಕಸಕ್ಕೆ
₹ 77,417 ಕೋಟಿ ವರಮಾನ ಹರಿದು ಬಂದಿದೆ.

ಕೋಲ್‌ ಇಂಡಿಯಾದಲ್ಲಿನ ಸರ್ಕಾರದ ಪಾಲು ಬಂಡವಾಳ ಮಾರಾಟ, ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್‌ಜಿಸಿ) ಎಚ್‌ಪಿಸಿಎಲ್‌ನಲ್ಲಿನ ಸರ್ಕಾರದ ಶೇ 51ರಷ್ಟು ಪಾಲು ಖರೀದಿ, ಕೇಂದ್ರೋದ್ಯಮಗಳ (ಸಿಪಿಎಸ್‌ಇ) ಇಟಿಎಫ್‌, ‘ಭಾರತ್‌–22’ ಇಟಿಎಫ್‌, 6 ಆರಂಭಿಕ ಸಾರ್ವಜನಿಕ ನೀಡಿಕೆ (ಐಪಿಒ) ಮೂಲಕ 2018ರಲ್ಲಿ ಈ ಮೊತ್ತ ಸಂಗ್ರಹವಾಗಿದೆ.

ಹೊಸ ಯೋಜನೆ: ಸರ್ಕಾರಿ ಸ್ವಾಮ್ಯದ ನಾಗರಿಕ ವಿಮಾನಯಾನ ಸಂಸ್ಥೆ  ಏರ್‌ ಇಂಡಿಯಾದಲ್ಲಿನ ಪಾಲು ಬಂಡವಾಳವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಹೊಸ ಯೋಜನೆ ಹಮ್ಮಿಕೊಂಡಿದೆ.

ಏರ್‌ ಇಂಡಿಯಾದ ಅಂಗಸಂಸ್ಥೆ ಮತ್ತು ಸಂಸ್ಥೆಗೆ ಸೇರಿದ ಭೂಮಿ ಹಾಗೂ ಕಟ್ಟಡಗಳನ್ನು ಮಾರಾಟ ಮಾಡಲು ಉದ್ದೇಶಿಸಿದೆ.

ಈ ಮೂಲಕ ₹ 9 ಸಾವಿರ ಕೋಟಿ ಸಂಗ್ರಹಗೊಳ್ಳುವ ನಿರೀಕ್ಷೆ ಇದೆ. ಈ ಕ್ರಮಗಳ ಮೂಲಕ ಸಂಸ್ಥೆಯ ಸಾಲದ ಹೊರೆ ತಗ್ಗಿಸಲು ಸರ್ಕಾರ ಮುಂದಾಗಿದೆ. ಸಂಸ್ಥೆಯ ಹಣಕಾಸು ಪರಿಸ್ಥಿತಿ ಬಲಪಡಿಸಿ ಉತ್ತಮ ಮಾರಾಟ ಮೌಲ್ಯ ದೊರೆಯುವಂತಹ ಕಾರ್ಯತಂತ್ರ ರೂಪಿಸಿದೆ.

ಪವನ್ ಹಂಸ್‌: ಹೆಲಿಕಾಪ್ಟರ್‌ ಸೇವೆ ಒದಗಿಸುವ ಪವನ್ ಹಂಸ್‌ನ ಮಾರಾಟ ಪ್ರಕ್ರಿಯೆಯನ್ನು ಮಾರ್ಚ್‌ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಪವನ್‌ ಹಂಸ್‌ನಲ್ಲಿ ಸರ್ಕಾರದ ಪಾಲು ಬಂಡವಾಳ ಶೇ 51ರಷ್ಟಿದೆ. ಉಳಿದ ಪಾಲು ಬಂಡವಾಳ ‘ಒಎನ್‌ಜಿಸಿ’ಗೆ ಸೇರಿದೆ.

ಹತ್ತು ಕೇಂದ್ರೋದ್ಯಮಗಳ ಷೇರು ಮರುಖರೀದಿಯಿಂದ ಬೊಕ್ಕಸಕ್ಕೆ ₹ 12 ಸಾವಿರ ಕೋಟಿ ಸಂಗ್ರಹಗೊಳ್ಳುವ ನಿರೀಕ್ಷೆ ಇದೆ.

ಕೇಂದ್ರೋದ್ಯಮಗಳ ವಿಲೀನ ಮತ್ತು ಸ್ವಾಧೀನಕ್ಕೂ ಸರ್ಕಾರ ಹೆಚ್ಚು ಗಮನ ನೀಡಲಿದೆ. ಪವರ್‌ ಫೈನಾನ್ಸ್‌ ಕಾರ್ಪೊರೇಷನ್‌ (ಪಿಎಫ್‌ಸಿ), ಗ್ರಾಮೀಣ ವಿದ್ಯುದ್ದೀಕರಣ ನಿಗಮದಲ್ಲಿನ (ಆರ್‌ಇಸಿ) ಸರ್ಕಾರದ ಪಾಲು ಬಂಡವಾಳವನ್ನು ₹ 15 ಸಾವಿರ ಕೋಟಿಗೆ ಖರೀದಿಸಲು ಮುಂದಾಗಿದೆ.

ಹಣಕಾಸು ವರ್ಷದಲ್ಲಿ ಷೇರು ವಿಕ್ರಯಕ್ಕೆ ಏಪ್ರಿಲ್‌ನಿಂದ ಮಾರ್ಚ್‌ವರೆಗಿನ ಅವಧಿ ನಿಗದಿಪಡಿಸಲಾಗಿರುತ್ತದೆ. 2019ರ ಮಾರ್ಚ್‌ ಅಂತ್ಯದ ವೇಳೆಗೆ ₹ 80 ಸಾವಿರ ಕೋಟಿ ಸಂಗ್ರಹಿಸಲು ಬಜೆಟ್‌ನಲ್ಲಿ ಗುರಿ ನಿಗದಿಪಡಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !