ನವದೆಹಲಿ: ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ರೆಪೊ ದರ ಆಧರಿಸಿದ ಸಾಲದ ಬಡ್ಡಿದರವನ್ನು ಶೇ 0.40ರಷ್ಟು ಹೆಚ್ಚಳ ಮಾಡಿದೆ.
ಗ್ರಾಹಕರಿಗೆ ನೀಡಿಕೆ ದರವು ಶೇ 6.50 ರಿಂದ ಶೇ 6.90ಕ್ಕೆ ಏರಿಕೆ ಆಗಲಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ. ಪರಿಷ್ಕೃತ ಬಡ್ಡಿದರವು ಹೊಸ ಗ್ರಾಹಕರಿಗೆ ಶನಿವಾರದಿಂದಲೇ ಅನ್ವಯಿಸಲಿದೆ. ಹಾಲಿ ಗ್ರಾಹಕರಿಗೆ ಜೂನ್ 1ರಿಂದ ಅನ್ವಯ ಆಗಲಿದೆ ಎಂದು ಹೇಳಿದೆ.
ಉಳಿತಾಯ ಠೇವಣಿ ಬಡ್ಡಿದರ ಏರಿಕೆ: ವಿವಿಧ ಅವಧಿಗಳ ಉಳಿತಾಯ ಠೇವಣಿ ದರಗಳನ್ನೂ ಸಹ ಬ್ಯಾಂಕ್ ಹೆಚ್ಚಿಸಿದೆ. ₹ 2 ಕೋಟಿಗೂ ಕಡಿಮೆ ಮೊತ್ತದ ಅವಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 5.10 ರಿಂದ ಶೇ 5.15ಕ್ಕೆ ಹೆಚ್ಚಿಸಲಾಗಿದೆ.
₹ 2 ಕೋಟಿಯಿಂದ ₹ 10 ಕೋಟಿ ಮೊತ್ತದ ಒಳಗಿನ ಅವಧಿ ಠೇವಣಿಗೆ ಶೇ 3.50 ರಿಂದ ಶೇ 4.05ರವರೆಗೆ ಬಡ್ಡಿದರ ಸಿಗಲಿದೆ. ಆರ್‌ಬಿಐ ರೆಪೊ ದರದಲ್ಲಿ ಹೆಚ್ಚಳ ಮಾಡಿರುವುದಕ್ಕೆ ಅನುಗುಣವಾಗಿ ಪಿಎನ್‌ಬಿ ಈ ನಿರ್ಧಾರ ತೆಗೆದುಕೊಂಡಿದೆ.