ಗುರುವಾರ , ಅಕ್ಟೋಬರ್ 24, 2019
21 °C
ಪುರವಣಿ

ಪ್ರಶ್ನೋತ್ತರ: ಸೆಕ್ಷನ್ 88 TTB ಬಗ್ಗೆ ಸಲಹೆ ನೀಡಿ

Published:
Updated:

ವಿಜಯಲಕ್ಷ್ಮಿ ಬಿರದಾರ್, ಧಾರವಾಡ

ನನಗೆ 50 X 50  ನಿವೇಶನ ಇದೆ. ಇದನ್ನು ಮಾರಾಟ ಮಾಡಿ ಬಂದ ಹಣ ಮಗನ ವಿದ್ಯಾಭ್ಯಾಸಕ್ಕೆ ಬ್ಯಾಂಕ್ ಠೇವಣಿ ಮಾಡಿ, ಬಡ್ಡಿ ಮಾತ್ರ ಉಪಯೋಗಿಸಲು ನಿಮ್ಮ ಸಲಹೆ ಬೇಕಾಗಿದೆ.

ಉತ್ತರ: ನಿವೇಶನ ಮಾರಾಟ ಮಾಡಿ ಬರುವ ಹಣದಿಂದ ಇನ್ನೊಂದು ಮನೆ ಕೊಂಡರೆ Capital Gain Tax ಬರುವುದಿಲ್ಲ. ಹೀಗೆ ಮಾಡದಿರುವಲ್ಲಿ, ನಿವೇಶನ ಮಾರಾಟ ಮಾಡಿ ಬರುವ ಮೊತ್ತದಲ್ಲಿ, ಕೊಳ್ಳುವಾಗ ಕೊಟ್ಟ ಹಣ ಕಳೆದು ಬರುವ ಹಣಕ್ಕೆ ಶೇ 20 ತೆರಿಗೆ ತುಂಬಿ, ಉಳಿದ ಹಣ ಬ್ಯಾಂಕಿನಲ್ಲಿ ಇರಿಸಿ. ಮಗನ ವಿದ್ಯಾಭ್ಯಾಸಕ್ಕೆ ಅದರಿಂದ ಬರುವ ಬಡ್ಡಿ ಉಪಯೋಗಿಸಬಹುದು.

***

ಕೆ. ಲಿಂಗಪ್ಪ, ತುಮಕೂರು

ನನ್ನ ವಯಸ್ಸು 84. ಸೆಕ್ಷನ್ 88 TTB ಆಧಾರದ ಮೇಲೆ ಎಲ್ಲಾ ಹಿರಿಯ ನಾಗರಿಕರು ಗರಿಷ್ಠ ₹ 50,000 ವಿನಾಯಿತಿ ಪಡೆಯಬಹುದು ಎಂಬುದಾಗಿ ಪದೇ ಪದೇ ನೀವು ತಿಳಿಸುತ್ತಿದ್ದೀರಿ. ನಾನು ಕೆಇಬಿಯಲ್ಲಿ ನಿವೃತ್ತ ನೌಕರ. ನನ್ನ ಪಿಂಚಣಿ ತಿಂಗಳಿಗೆ ₹ 42,084. ಕೆಇಬಿನಲ್ಲಿ ಠೇವಣಿ ಮೇಲಿನ ಬಡ್ಡಿಗೆ ವಿನಾಯಿತಿ ಪಡೆಯುವಂತಿಲ್ಲ ಎನ್ನುತ್ತಾರೆ ಹಾಗೂ ತೆರಿಗೆ ಮುರಿಯುತ್ತಾರೆ. ದಯವಿಟ್ಟು ಸೂಕ್ತ ಸಲಹೆ ನೀಡಿರಿ.

ಉತ್ತರ: ಬ್ಯಾಂಕ್ ಹಾಗೂ ಅಂಚೆ ಕಚೇರಿ ಠೇವಣಿಗಳಿಂದ ಬರುವ ಬಡ್ಡಿಯಲ್ಲಿ ಎಲ್ಲಾ ಹಿರಿಯ ನಾಗರಿಕರು ಸೆಕ್ಷನ್ 80TTB ಆಧಾರದ ಮೇಲೆ ಗರಿಷ್ಠ ₹ 50,000 ವಾರ್ಷಿಕವಾಗಿ ವಿನಾಯಿತಿ ಪಡೆಯಬಹುದು. ಇದೇ ವೇಳೆ ಈ ಎರಡು ಸಂಸ್ಥೆ ಹೊರತಾಗಿ ಬೇರಾವ ಕಡೆ ಠೇವಣಿ ಇರಿಸಿದರೆ ಅಲ್ಲಿ ಬರುವ ಬಡ್ಡಿಗೆ ಈ ವಿನಾಯಿತಿ ಇರುವುದಿಲ್ಲ. ಕೆಇಬಿಯವರು ಠೇವಣಿ ಮೇಲಿನ ಬಡ್ಡಿಗೆ ತೆರಿಗೆ ಮುರಿದಿರುವುದು ಸರಿಯಾಗಿದೆ.

***

ಹೆಸರು, ಊರು ಬೇಡ

ನನ್ನ ವಯಸ್ಸು 45, ಹೆಂಡತಿ ವಯಸ್ಸು 35, ಮಗನಿಗೆ 15 ವರ್ಷ. ನಾನು ನನ್ನ ಹೆಂಡತಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು ಕ್ರಮವಾಗಿ ₹ 15,000 ಹಾಗೂ 8,000 ಸಂಬಳ ಪಡೆಯುತ್ತಿದ್ದೇವೆ. ನನ್ನ  ಹೆಂಡತಿಗೆ ಅಂಗವಿಕಲತೆ ಇದೆ. (ಶೇ 80). ನನ್ನ ಹೆಂಡತಿ ಹೆಸರಿನಲ್ಲಿ 15X46 ಅಳತೆ ಸಣ್ಣ ನಿವೇಶನ ಇದೆ. ನಾವು ಎಸ್‌ಬಿಐನಲ್ಲಿ ಗೃಹ ಸಾಲ ಪಡೆಯಬಹುದಾ ತಿಳಿಸಿರಿ. ನಮಗೆ ತುಮಕೂರಿನ ಬಳಿ 14 ಗುಂಟೆ ಅಡಿಕೆ ತೋಟ ಇದೆ. ನನ್ನ ಹೆಂಡತಿ ಅಂಗವಿಲಕೆಯಾದ್ದರಿಂದ, ಬಡ್ಡಿ ದರದಲ್ಲಿ ವಿನಾಯಿತಿ ಸಿಗಬಹುದೇ ತಿಳಿಸಿರಿ.

ಉತ್ತರ: ಬ್ಯಾಂಕುಗಳು ಹಾಗೂ ಗೃಹಸಾಲ ನೀಡುವ ಯಾವುದೇ ಆರ್ಥಿಕ ಸಂಸ್ಥೆಯಾದರೂ, ಗೃಹ ಸಾಲ ನೀಡುವ ಮುನ್ನ, ವ್ಯಕ್ತಿಯ ಸಾಲ ಮರು ಪಾವತಿಸುವ ಸಾಮರ್ಥ್ಯವನ್ನು ಮೊದಲು ಪರಿಗಣಿಸುತ್ತಾರೆ. ನಿಮ್ಮ ಮತ್ತು ನಿಮ್ಮ ಹೆಂಡತಿಯ ಒಟ್ಟು ತಿಂಗಳ ಆದಾಯ ₹ 23000. ನಿಮಗೆ ಕನಿಷ್ಠ ಒಂದು ಬೆಡ್ ರೂಂಗೆ ಮನೆ ಕಟ್ಟಲು ₹ 10 ಲಕ್ಷವಾದರೂ ಬೇಕಾದೀತು.

ನಿಮ್ಮ ವಯಸ್ಸು 46 ಇರುವುದರಿಂದ ಗರಿಷ್ಠ 14  ವರ್ಷಗಳ ಅವಧಿ ಸಾಲ ತೀರಿಸಲು ಸಿಗುತ್ತದೆ ಹಾಗೂ ಪ್ರತೀ ಲಕ್ಷಕ್ಕೆ ₹ 1500 ತಿಂಗಳ ಕಂತು ಕಟ್ಟಬೇಕಾಗುತ್ತದೆ. ₹ 10 ಲಕ್ಷ ಸಾಲಕ್ಕೆ ₹ 15000 ಮಾಸಿಕ ಕಂತು ಕಟ್ಟುವ ಆರ್ಥಿಕ ಸಾಮರ್ಥ್ಯ ನಿಮಗಿರುವುದಿಲ್ಲವಾದ್ದರಿಂದ, ಗೃಹ ಸಾಲ ಸಿಗಲಾರದು. ಅಂಗವಿಕಲರಿಗೆ ಬಡ್ಡಿ ದರದಲ್ಲಿ ರಿಯಾಯತಿ ಕೂಡಾ ಇಲ್ಲ. ನೀವು ನಿಮ್ಮ ಮಗನ ಸಲುವಾಗಿ ಕನಿಷ್ಠ ₹ 5,000 ತಿಂಗಳಿಗೆ ಆರ್.ಡಿ. ಮಾಡಿರಿ. ಅವಧಿ 10 ವರ್ಷಗಳಿರಲಿ, ಅವಧಿ ಮುಗಿಯುತ್ತಲೇ ₹ 9 ಲಕ್ಷ ಪಡೆಯಿರಿ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)