ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಅಂಚೆ ಕಚೇರಿ ಹಾಗೂ ಬ್ಯಾಂಕ್‌ ಠೇವಣಿಗಳಲ್ಲಿ ವ್ಯತ್ಯಾಸವೇನು?

Last Updated 22 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಮಹಾಲಕ್ಷ್ಮಿ, ರಾಣೆಬೆನ್ನೂರು
ಪ್ರಶ್ನೆ: ನಾನು ಒಂದು ಮನೆಯನ್ನು ಎರಡು ತಿಂಗಳ ಹಿಂದೆ ಖರೀದಿಸಿದ್ದೇನೆ. ನನ್ನೊಡನಿರುವ ನಿವೇಶನವನ್ನು ಈಗ ಮಾರಬೇಕೆಂದಿದ್ದೇನೆ. ಸುಮಾರು ₹ 60 ಲಕ್ಷ ಹಣಬರಲಿದೆ. ನಾನು ಕೊಂಡ ಮನೆಯ ಮೌಲ್ಯ ₹ 75 ಲಕ್ಷ.ಒಂದು ಆಸ್ತಿ ಮಾರಾಟ ಮಾಡಿ ಇನ್ನೊಂದು ಆಸ್ತಿ ಕೊಳ್ಳುವಾಗ ಬಂಡವಾಳ ವೃದ್ಧಿ ತೆರಿಗೆ ಬರುವುದಿಲ್ಲ ಎಂಬುದಾಗಿ ಹಲವರ ಪ್ರಶ್ನೆಗಳಿಗೆ ಉತ್ತರಿಸಿದ್ದೀರಿ. ಬಂಡವಾಳ ವೃದ್ಧಿ ತೆರಿಗೆ ವಿಚಾರದಲ್ಲಿ ವಿವರವಾಗಿ ತಿಳಿಸಿ.

ಉತ್ತರ: ಬಂಡವಾಳ ವೃದ್ಧಿ ತೆರಿಗೆ ವಿಚಾರದಲ್ಲಿ ಬಹಳಷ್ಟು ಜನರಲ್ಲಿ ಗೊಂದಲವಿದೆ. ಜೀವನದಲ್ಲಿ ಒಮ್ಮೆ ಅಥವಾ ಒಂದೆರಡು ಬಾರಿ ಬರುವ ಬಂಡವಾಳ ವೃದ್ಧಿ ತೆರಿಗೆ ವಿಚಾರದಲ್ಲಿ ಗೊಂದಲ ಸಹಜ. ಬಂಡವಾಳ ವೃದ್ಧಿ ತೆರಿಗೆ ಲೆಕ್ಕಾಚಾರ ಕ್ರಮವು ಆದಾಯ ತೆರಿಗೆಗಿಂತಲೂ ಸರಳ. ಇಲ್ಲಿ, ಆಸ್ತಿ ಮಾರಿದಾಗ ಬರುವ ಲಾಭಾಂಶದಲ್ಲಿ ಶೇಕಡ 20ರಷ್ಟನ್ನು ತೆರಿಗೆಯಾಗಿ ಕೊಡಬೇಕಾಗುತ್ತದೆ.

ತೆರಿಗೆ ವಿನಾಯಿತಿ ಪಡೆಯಲು ಎನ್‌ಎಚ್‌ಎಐ ಅಥವಾ ಆರ್‌ಇಸಿ ಬಾಂಡ್‌ಗಳಲ್ಲಿ ಗರಿಷ್ಠ ಐದು ವರ್ಷಗಳ ಅವಧಿಗೆ ಶೇ 5ರ ಬಡ್ಡಿದರದಲ್ಲಿ ಠೇವಣಿ ಇರಿಸಬಹುದು. ಆಸ್ತಿ ಮಾರಾಟ ಮಾಡಿ ಬೇರೊಂದು ಮನೆ ಕೂಡಾ ಕೊಳ್ಳಬಹುದು. ಖರೀದಿಸಿದ ವರ್ಷದಿಂದ ಮಾರಾಟ ಮಾಡಿದ ವರ್ಷದ ಅಂತರದಲ್ಲಿ ಹಣದುಬ್ಬರದ ಅಂಶ (Cost of inflation index) ಲೆಕ್ಕ ಹಾಕಿ, ಬಂದ ಲಾಭ ಕಳೆಯುವ ಅವಕಾಶ ಕೂಡಾ ಇದೆ. ಹೀಗೆ ಬಂದ ಹಣಕ್ಕೆ ಬಂಡವಾಳ ವೃದ್ಧಿ ತೆರಿಗೆ ಇಲ್ಲ. ಈ ಹಣ ಸ್ವಂತ ಉಪಯೋಗಕ್ಕೆ ಬಳಸಬಹುದು.

ಬಹುಮುಖ್ಯವಾದ ವಿಚಾರವೆಂದರೆ, ಓರ್ವ ವ್ಯಕ್ತಿ ತನ್ನೊಡನಿರುವ ಹಣದಿಂದ ಅಥವಾ ಸಾಲ ಮಾಡಿ ಮನೆ ಕಟ್ಟಿಸಿದ ನಂತರ ತನ್ನೊಡನಿರುವ ಆಸ್ತಿ ಮಾರಾಟ ಮಾಡಿದಾಗ, ಬಂಡವಾಳ ವೃದ್ಧಿ ತೆರಿಗೆ ವಿನಾಯಿತಿ ಪಡೆಯಲು ಕೆಲವು ಷರತ್ತುಗಳಿವೆ. ಸೆಕ್ಷನ್‌ 54ರ ಅನ್ವಯ ಇಂತಹ ವ್ಯವಹಾರ ಅಂದರೆ ಮನೆ ಕಟ್ಟಿಸಿರುವುದು, ಆಸ್ತಿ ಮಾರಾಟ ಮಾಡಿದ ಒಂದು ವರ್ಷದೊಳಗಿರಬೇಕು. ಮಹಾಲಕ್ಷ್ಮಿ ಅವರು ಎರಡು ತಿಂಗಳ ಹಿಂದೆ ಮನೆ ಕೊಂಡುಕೊಂಡಿದ್ದು, ಈಗ ಆಸ್ತಿ ಮಾರಾಟ ಮಾಡುತ್ತಿರುವುದರಿಂದ ಇವರಿಗೆ ಬಂಡವಾಳ ವೃದ್ಧಿ ತೆರಿಗೆ ಬರುವುದಿಲ್ಲ. ಓದುಗರಲ್ಲಿ ಬಂಡವಾಳ ವೃದ್ಧಿ ತೆರಿಗೆ ವಿಚಾರದಲ್ಲಿ ಗೊಂದಲ ಉಂಟಾದರೆ ನನ್ನ ದೂರವಾಣಿ ಸಂಖ್ಯೆ 9448015300ಗೆ ಕರೆ ಮಾಡಬಹುದು.

ಬಿ.ವಿ. ಪಟ್ಟಣಶೆಟ್ಟಿ, ಗದಗ
ಪ್ರಶ್ನೆ: ನಾನು ಕರ್ನಾಟಕ ವಿಕಾಸ ಬ್ಯಾಂಕ್‌ ಉದ್ಯೋಗದಿಂದ 2018ರ ಫೆಬ್ರುವರಿ 21ರಂದು ನಿವೃತ್ತಿಯಾಗಿದ್ದೇನೆ. ನನಗೆ 2019ರ ನವೆಂಬರ್‌ 22ರಂದು ₹ 7,09,584 ಗ್ರ್ಯಾಚುಟಿ ಹಾಗೂ ರಜಾ ಸಂಬಳ ₹ 15,42,264 ಬಂದಿದೆ. ಈ ಎರಡೂ ಆದಾಯಗಳು ತೆರಿಗೆಯಿಂದ ಮುಕ್ತವಾಗಿವೆಯೇ? ನಾನು 2000ನೆ ಇಸವಿಯ ಫೆಬ್ರುವರಿಯಿಂದ 2014ರ ಫೆಬ್ರುವರಿವರೆಗೆ ಪಾರಸ್ಪರಿಕ ನಿಧಿ ಮಾಸಿಕ ವ್ಯವಸ್ಥಿತ ಯೋಜನೆಯಲ್ಲಿ ₹ 2,48,000 ಹೂಡಿಕೆ ಮಾಡಿ ದಿನಾಂಕ 2020ರ ಮೇ ತಿಂಗಳಲ್ಲಿ ₹ 6,60,661 ಪಡೆದಿದ್ದೇನೆ. ಇದರ ಬಗ್ಗೆ ಕೂಡಾ ತಿಳಿಸಿ.

ಉತ್ತರ: ನಿವೃತ್ತಿಯಿಂದ ಬರುವ ಎಲ್ಲ ಆದಾಯಗಳಿಗೂ ಆದಾಯ ತೆರಿಗೆ ವಿನಾಯಿತಿ ಇದೆ. ಆದರೆ ಸಂಬಳ ನಗದೀಕರಿಸಿದಾಗ ಸೆಕ್ಷನ್‌ 10(ಎಎ) ಆಧಾರದ ಮೇಲೆ ಗರಿಷ್ಠ ₹ 3 ಲಕ್ಷ ವಿನಾಯಿತಿ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೌಕರರಿಗೆ ಈ ಸೆಕ್ಷನ್‌ ಅನ್ವಯವಾಗುವುದಿಲ್ಲ. ಅವರಿಗೆ ರಜಾ ಸಂಬಳ ಸಂಪೂರ್ಣ ವಿನಾಯಿತಿ ಇದೆ. ಗ್ರ್ಯಾಚುಟಿ ಗರಿಷ್ಠ ₹ 20 ಲಕ್ಷ ಸೆಕ್ಷನ್‌ 10(10)(ii)ರಂತೆ ವಿನಾಯಿತಿ ಇದೆ. ಪಾರಸ್ಪರಿಕ ನಿಧಿ ಅಂದರೆ ಏನು ಎಂದು ತಿಳಿಯುತ್ತಿಲ್ಲ. ಪಿಎಫ್‌ ಆದಲ್ಲಿ ಸೆಕ್ಷನ್‌ 10(II) ಆಧಾರದ ಮೇಲೆ ಸಂಪೂರ್ಣ ವಿನಾಯಿತಿ ಇದೆ.

ರಾಮಕೃಷ್ಣ ಭಟ್ಟ, ಶಿರಸಿ
ಪ್ರಶ್ನೆ: ಅಂಚೆ ಕಚೇರಿ ಹಾಗೂ ಬ್ಯಾಂಕ್‌ ಠೇವಣಿಗಳಲ್ಲಿ ವ್ಯತ್ಯಾಸವೇನು? ಹೂಡಿಕೆಯಲ್ಲಿ ನನ್ನಂತಹ ಜನಸಾಮಾನ್ಯರಿಗೆ ಯಾವುದು ಅನುಕೂಲ? ಸುರಕ್ಷತೆ ವಿಚಾರದಲ್ಲಿ ಯಾವುದು ಉತ್ತಮ?

ಉತ್ತರ: ಹೂಡಿಕೆಯಲ್ಲಿ ಭದ್ರತೆ, ದ್ರವ್ಯತೆ ಹಾಗೂ ಉತ್ತಮ ವರಮಾನವಿದ್ದರೆ ಮಾತ್ರ ಅದೊಂದು ಉತ್ತಮ ಹೂಡಿಕೆ ಎಂದು ಪರಿಗಣಿಸಬೇಕಾಗುತ್ತದೆ. ಅಂಚೆ ಕಚೇರಿ ಠೇವಣಿ ಕೇಂದ್ರ ಸರ್ಕಾರದ ನೇರ ಸ್ವಾಮ್ಯತ್ವದಲ್ಲಿ ಇರುವುದರಿಂದ ಭದ್ರತೆಯ ವಿಚಾರವಾಗಿ ಸಂಶಯವೇ ಬೇಡ. ಬ್ಯಾಂಕ್‌ಗಳಲ್ಲಿ ನಾಲ್ಕು ವಿಧಗಳಿವೆ. ಸರ್ಕಾರಿ ಸ್ವಾಮ್ಯ, ಸಹಕಾರಿ, ಖಾಸಗಿ ಹಾಗೂ ವಿದೇಶಿ ಬ್ಯಾಂಕ್‌ಗಳು. ಗರಿಷ್ಠ ₹ 5 ಲಕ್ಷದವರೆಗಿನಬ್ಯಾಂಕ್‌ ಠೇವಣಿಗೆ ವಿಮೆ ಖಾತರಿ ಇರುತ್ತದೆ. ನಾಲ್ಕೂ ವಿಧದ ಬ್ಯಾಂಕ್‌ಗಳಲ್ಲಿ ಈ ಸೌಲಭ್ಯ ಇದೆ.

ದೇಶದ ಶೇಕಡ 90ಕ್ಕೂ ಹೆಚ್ಚಿನ ಬ್ಯಾಂಕ್‌ಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ದಿವಾಳಿಯಾಗುವ ಸಾಧ್ಯತೆ ಬಹಳ ಕಡಿಮೆ. ದ್ರವ್ಯತೆ ದೃಷ್ಟಿಯಿಂದ ಅಂಚೆ ಕಚೇರಿ ಠೇವಣಿಗಳಿಗಿಂತಲೂ ಬ್ಯಾಂಕ್‌ಗಳು ಉತ್ತಮ. ದ್ರವ್ಯತೆ ಎಂದರೆ ಠೇವಣಿದಾರ ಇಚ್ಛಿಸಿದಾಗ ಅವಧಿ ಠೇವಣಿಯನ್ನು ಅವಧಿಗೆ ಮುನ್ನ ಪಡೆಯುವ ಅವಕಾಶ. ಇದು ಬ್ಯಾಂಕ್‌ಗಳಲ್ಲಿ ಮಾತ್ರ ಲಭ್ಯ. ಉತ್ತಮ ವರಮಾನದ ವಿಚಾರ: ಬ್ಯಾಂಕ್‌ ಮತ್ತು ಅಂಚೆ ಕಚೇರಿ ಠೇವಣಿಗಳ ಬಡ್ಡಿಯಲ್ಲಿ ಅಲ್ಪ ವ್ಯತ್ಯಾಸವಿರಬಹುದು. ‘ಎಲ್ಲಾ ಮೊಟ್ಟೆಗಳನ್ನೂ ಒಂದೇ ಬುಟ್ಟಿಯಲ್ಲಿ ಇಡಬೇಡಿ’ ಎನ್ನುವ ಗಾದೆಯಂತೆ ಅವರವರ ಅನುಕೂಲಕ್ಕೆ ಸರಿಯಾಗಿ ಅಂಚೆ ಕಚೇರಿ, ಬ್ಯಾಂಕ್‌ಗಳನ್ನು ಆರಿಸಿಕೊಳ್ಳಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT