ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನು ನೋವಿನಲ್ಲೂ ಎಡಬಿಡದೆ ಅರವಿಂದ ಬೆಲ್ಲದ ಪ್ರಚಾರ

ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಅಕ್ಷರ ಗಾತ್ರ

ಧಾರವಾಡ: ಸೂರ್ಯ ಉದಯಿಸುವ ಹೊತ್ತಿಗೆ ಹಳೇ ಡಿಎಸ್‌ಪಿ ವೃತ್ತದ ಬಳಿ ಅರವಿಂದ ಬೆಲ್ಲದ ಅವರ ಮೂಲ ಮನೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದರು. ಕೈಯಲ್ಲೊಂದು ಕಿರು ಪುಸ್ತಕ, ಮತದಾರರ ಪಟ್ಟಿ ಹಿಡಿದು ಪರಸ್ಪರ ಸಮಾಲೋಚನೆ ನಡೆಸುತ್ತಿದ್ದರು. ಹಿಂದಿನ ದಿನ ತಡರಾತ್ರಿಯವರೆಗೂ ಕಾರ್ಯಕರ್ತರ ಸಭೆ ನಡೆಸಿದ್ದ ಬೆಲ್ಲದ, ತೀವ್ರ ಬೆನ್ನುನೋವಿನ ನಡುವೆಯೂ ಬೆಳಿಗ್ಗೆ 8ಕ್ಕೆ ಸಿದ್ಧಗೊಂಡರು. ಸೊಂಟಕ್ಕೆ ಪಟ್ಟಿ ಕಟ್ಟಿಕೊಂಡು ಮತಬೇಟೆಗೆ ಸಿದ್ಧಗೊಂಡರು.

ತಮ್ಮ ಪತ್ನಿ ಸ್ಮೃತಿ ಬೆಲ್ಲದ, ಅಕ್ಕನ ಜತೆ ಸ್ವಲ್ಪಹೊತ್ತು ಮಾತನಾಡಿದ ಅರವಿಂದ, ಮತಯಾಚನೆಗೆ ಅವರು ಹೋಗ
ಬೇಕಾದ ಸ್ಥಳ, ತಾನು ಹೋಗುತ್ತಿರುವ ಸ್ಥಳಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡರು. ಹೊರಗೆ ಬರು
ತ್ತಿದ್ದಂತೆ ಗೊರಪ್ಪ ಹಾಗೂ ದಿಂಡಿಗೆ ಹೊರಟಿದ್ದ ಮಂದಿಯನ್ನು ಭೇಟಿ ಮಾಡಿದರು. ಅವರ ಪಾದಕ್ಕೆರಗಿ ಆಶೀರ್ವಾದ ಪಡೆದರು. ಕಾರ್ಯಕರ್ತರು, ವಿವಿಧ ಸಮಾಜಗಳ ಮುಖಂಡರು ಅರವಿಂದ ಅವರೊಂದಿಗೆ ಸಮಾಲೋಚನೆ ನಡೆಸಿದರು. ಕೆಲವರು ಕಾರ್ಯಯೋಜನೆ ಕುರಿತು ಪ್ರತ್ಯೇಕ ಮಾತುಕತೆ ನಡೆಸಿದರು.

ಚಾಲಕ ರವಿ ಕಾರಿಗೆ ಬಿಜೆಪಿಯ ಹೊಸ ಬಾವುಟ ಕಟ್ಟಿ, ಹತ್ತಾರು ನೀರಿನ ಬಾಟಲಿಗಳನ್ನು ಹಾಕಿದರು. ಆಪ್ತ ಸಹಾಯಕ ಮಂಜುನಾಥ ದಿನದ ಪತ್ರಿಕೆಗಳನ್ನು ಬೆಲ್ಲದ ಅವರಿಗೆ ನೀಡಿದರು. ನವಲೂರು ಗ್ರಾಮದ ಕಡೆ ಕಾರು ಹೊರಟಿತು. ಕಿವಿಗೆ ಇಯರ್‌ಫೊನ್ ಸಿಕ್ಕಿಸಿಕೊಂಡು ಪಕ್ಷದ ಹಿರಿಯರೊಂದಿಗೆ ಹಾಗೂ ಕೆಲ ಮುಖಂಡರೊಂದಿಗೆ ಸಮಾಲೋಚನೆ ನಡೆಸುತ್ತಲೇ ಪತ್ರಿಕೆಗಳ ಮೇಲೆ ಕಣ್ಣಾಸಿದರು. ‘ಪ್ರಜಾವಾಣಿ’ ಮುಕ್ತಛಂದದಲ್ಲಿ ಪ್ರಕಟವಾಗಿದ್ದ ‘ವಿಧಾನಸಭೆಯ ರಸಗಳಿಗೆಗಳು’ ಲೇಖನವನ್ನು ಓದಿದರು. ನಂತರ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ಮೇಲೆ ಕಣ್ಣಾಡಿಸಿದರು.

‘ನಿತ್ಯ ವ್ಯಾಯಾಮ, ಯೋಗ ಮಾಡುವ ಅಭ್ಯಾಸವಿದೆ. ಆದರೆ ಚುನಾವಣೆ ಮುಗಿಯುವವರೆಗೂ ಸಾಧ್ಯವಿಲ್ಲ. ರಾತ್ರಿ ಸಭೆ ಮುಗಿಸುವುದೇ ತಡವಾಗುತ್ತದೆ. ಬೆಳಿಗ್ಗೆಯಿಂದ ಸತತ ನಡಿಗೆ ದೇಹವನ್ನು ಬಾಧಿಸುತ್ತದೆ. ಆದರೆ ಕಾರ್ಯಕರ್ತರ ಉತ್ಸಾಹ ದೇಹ ದಣಿವನ್ನು ಮರೆಸುತ್ತದೆ. ಈಗಾಗಲೇ ಒಂದು ಸುತ್ತಿನ ಮತಯಾಚನೆ ಮುಗಿಸಿದ್ದೇನೆ’ ಎಂದರು ಅರವಿಂದ ಬೆಲ್ಲದ.

ಕಾರಿನಿಂದ ಇಳಿಯುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಭೇಟಿ ಮಾಡಿ, ತಡಮಾಡದೆ ಮನೆಮನೆ ಪ್ರಚಾರಕ್ಕೆ ಮುಂದಾದರು. ‘ವೇಗದ ನಡಿಗೆ ನನ್ನ ಶಕ್ತಿ’ ಎಂದಿದ್ದ ಬೆಲ್ಲದ, ಅವರು ಕೆಲವೇ ನಿಮಿಷಗಳಲ್ಲಿ ಊರಿನ ಪ್ರಮುಖ ಬೀದಿಗಳ ಪ್ರತಿಯೊಂದು ಮನೆಗೂ ಭೇಟಿ ನೀಡಿದರು. ‘ನನಗೆ ಈ ಬಾರಿ ಆಶೀರ್ವಾದ ಮಾಡಿ’ ಎಂದು ಕೈಮುಗಿದು ಕೇಳಿಕೊಂಡರು.

ಬೆಲ್ಲದ ಕೇಳುವುದಕ್ಕೂ ಮೊದಲೇ ಕೆಲವರು, ‘ಮತ ಹಾಕುತ್ತೇವೆ’ ಎಂದು ಹೇಳುತ್ತಿದ್ದ ದೃಶ್ಯಗಳೂ ಕಣ್ಣಿಗೆ ಬಿದ್ದವು. ‘ಊರಿನ ಕೊಳಚೆ ನೀರು ನಲವೂರು ಕೆರೆ ನಂತರ ಕೋಳಿ ಕೆರೆಗೆ ಹೋಗುತ್ತಿತ್ತು. ಈಗ ನವಲೂರು ಕೆರೆಯಲ್ಲೇ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸಿದ್ದರಿಂದ ಕೆರೆಯೂ ಶುಚಿಯಾಗಿದೆ’ ಎಂದು ಹೇಳಿ ಗ್ರಾಮದ ಪ್ರಮುಖರೊಬ್ಬರು ಬೆಲ್ಲದ ಕೈಕುಲುಕಿದರು. ಮತ್ತೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ, ಬೀದಿಯಿಂದ ಬೀದಿಗೆ, ಮನೆಯಿಂದ ಮನೆಗೆ ತೆರಳಿ ಮತಯಾಚಿಸಿದರು.

ಅಲ್ಲಿಂದ ನವನಗರಕ್ಕೆ ತೆರಳಿದ ಬೆಲ್ಲದ ಅವರಿಗೆ ಅಲ್ಲಿನ ಕೆಲವರು ಉದ್ಯಾನದ ಬೇಡಿಕೆ ಮುಂದಿಟ್ಟರು. ತಮ್ಮ ಸಂಸ್ಥೆಯಿಂದ ಒಂದಷ್ಟು ಹಣ ನೀಡಿದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದರು. ಸರ್ಕಾರ ಅಥವಾ ಖಾಸಗಿ ಸಹಭಾಗಿತ್ವದ ಅನುದಾನದಲ್ಲಿ ನಿರೀಕ್ಷೆಗೂ ಮೀರಿ ಉದ್ಯಾನ ನಿರ್ಮಿಸಬಹುದು. ಆದರೆ ಯೋಜನೆ ಇಲ್ಲದೆ ಹಣ ನೀಡಿದಲ್ಲಿ ಅದು ಸಾರ್ಥಕವಾಗುವುದಿಲ್ಲ ಎಂದರು. ಇದಕ್ಕೆ ಜತೆಗಿದ್ದವರು ಮಾತ್ರವಲ್ಲ; ಹಣ ಕೇಳಿದವರೂ ಒಪ್ಪಿ ತಲೆಯಾಡಿಸಿದರು.

ಕೆಲವು ವಿದ್ಯಾರ್ಥಿಗಳು ಬೆಲ್ಲದ ಅವರನ್ನು ಭೇಟಿ ಮಾಡಿ ಕೈಕುಲುಕಿದರು. ಮತಬೇಟೆಯ ನಡುವೆಯೂ ವಿದ್ಯಾರ್ಥಿಗಳೊಂದಿಗೆ ಕೆಲಹೊತ್ತು ಮಾತನಾಡಿ, ಅವರ ಶೈಕ್ಷಣಿಕ ಸಾಧನೆ ಕುರಿತು ಚರ್ಚಿಸಿದರು.

ಜಗದಾಳೆ ಓಣಿ, ನೇಕಾರ ಓಣಿ, ದೇಸಾಯಿ ಓಣಿ, ಕುರುಬರ ಓಣಿ, ಮ್ಯಾಗೇರಿ ಓಣಿ ಹಾಗೂ ಬೆಂಗೇರಿ ಓಣಿಯಲ್ಲೂ ಬೆಲ್ಲದ ಪಾದಯಾತ್ರೆ ನಡೆಸಿ ಮತಯಾಚಿಸಿದರು.

ಏರು ಬಿಸಿಲು ಒಂದೆಡೆಯಾದರೆ, ಮತ್ತೊಂದೆಡೆ ಬಾಧಿಸುತ್ತಿದ್ದ ಬೆನ್ನು ನೋವನ್ನೂ ಲೆಕ್ಕಿಸದೆ ಬೆಲ್ಲದ ಪಾದಯಾತ್ರೆ ಮುಂದುವರೆದಿತ್ತು. ಸುಡುಬಿಸಿಲಿನಲ್ಲೂ ಬೆಲ್ಲದ ಮುಖ ಬಾಡಿರಲಿಲ್ಲ. ತಂದೆ (ಚಂದ್ರಕಾಂತ ಬೆಲ್ಲದ)ಯವರಿಗಾಗಿ ಚುನಾವಣೆಯಲ್ಲಿ ಓಡಾಡಿದ ಅನುಭವವಿದೆ. ಹೀಗಾಗಿ ಕ್ಷೇತ್ರದ ಬಹುತೇಕರು ತೀರಾ ಪರಿಚಿತರು ಎಂದೆನ್ನುತ್ತಲೇ, ಪ್ರಧಾನಿ ನರೇಂದ್ರ ಮೋದಿ ಅವರ ಹುಬ್ಬಳ್ಳಿ ಕಾರ್ಯಕ್ರಮಕ್ಕೆ ಹೊರಡಲು ಅಣಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT