ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಮಳೆ: ಎಳ್ಳು ಬಿತ್ತನೆ ಶೂನ್ಯ

ಹೊಸದುರ್ಗ: ರಾಜ್ಯದಲ್ಲಿಯೇ ಹೆಚ್ಚು ಬೆಳೆಯುತ್ತಿದ್ದ ಪ್ರದೇಶ
Last Updated 21 ಮೇ 2019, 19:43 IST
ಅಕ್ಷರ ಗಾತ್ರ

ಹೊಸದುರ್ಗ: ಒಂದು ಕಾಲದಲ್ಲಿ ರಾಜ್ಯದಲ್ಲಿಯೇ ಹೆಚ್ಚು ಎಳ್ಳು ಬೆಳೆಯುತ್ತಿದ್ದ ತಾಲ್ಲೂಕಿನಲ್ಲಿ ಈ ಬಾರಿ ಬಿತ್ತನೆ ಶೂನ್ಯವಾಗಿದೆ.

ದಶಕದ ಹಿಂದೆಯಷ್ಟೇ ತಾಲ್ಲೂಕಿನ ರೈತರು 2,000 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಎಳ್ಳು ಬೆಳೆಯುತ್ತಿದ್ದರು. ಇದೊಂದು ಪೂರ್ವ ಮುಂಗಾರಿನ ವಾಣಿಜ್ಯ ಬೆಳೆಯಾಗಿದ್ದು, ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಕೊಡುತ್ತಿತ್ತು.

ಎಳ್ಳು ಬಿತ್ತನೆ ಮಾಡಿದ ಮೂರು ತಿಂಗಳಿಗೆ ಬೆಳೆ ಕೈಸೇರುತ್ತಿತ್ತು. ಬೆಳೆ ಕಟಾವು ಮಾಡಿದ ನಂತರ ಅದೇ ಜಮೀನು ಹಸನು ಮಾಡಿ ರಾಗಿ, ಸಾವೆ, ಹುರುಳಿ ಬಿತ್ತನೆ ಮಾಡುತ್ತಿದ್ದರು. ಒಂದೇ ಜಮೀನಿನಲ್ಲಿ ವರ್ಷಕ್ಕೆ ಎರಡು ಬೆಳೆ ಬೆಳೆಯಲು ಅನುಕೂಲವಾಗುತ್ತಿತ್ತು. ಹೀಗಾಗಿ ಎಳ್ಳನ್ನುರೈತರು ಖುಷಿಯಿಂದಲೇಬೆಳೆಯುತ್ತಿದ್ದರು.

ತಾಲ್ಲೂಕಿನಲ್ಲಿ ಉತ್ಪಾದನೆಯಾದ ಎಳ್ಳು ಕೊಲ್ಲಿ ದೇಶಗಳಿಗೆ ರಫ್ತು ಆಗುತ್ತಿತ್ತು. ಆಯುರ್ವೇದ ಉತ್ಪನ್ನ, ದೀಪದ ಎಣ್ಣೆ, ಡಾಬಾ ಮತ್ತು ರೆಸ್ಟೋರೆಂಟ್‌ಗಳಲ್ಲಿ ತಯಾರಿಸುವ ಬಟರ್‌ನಾನ್‌ ರೋಟಿ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ಚಿಗಣಿ ತಯಾರಿಕೆ ಸೇರಿ ಇನ್ನಿತರ ಆಹಾರ ಪದಾರ್ಥಗಳ ತಯಾರಿಕೆಗೂ ಎಳ್ಳು ಬಳಕೆಯಾಗುತ್ತಿತ್ತು.

ಏಳೆಂಟು ವರ್ಷಗಳಿಂದ ಪೂರ್ವ ಮುಂಗಾರು ಮಳೆ ಕೈಕೊಡುತ್ತಿರುವುದರಿಂದ ಎಳ್ಳು ಬಿತ್ತನೆ ಪ್ರದೇಶ ಕಡಿಮೆಯಾಗುತ್ತಿದೆ. ಕೃಷಿ ಇಲಾಖೆ ಮೂಲಗಳ ಪ್ರಕಾರ, ತಾಲ್ಲೂಕಿನಲ್ಲಿ ಪ್ರಸ್ತುತ 1,000 ಹೆಕ್ಟೇರ್‌ ಎಳ್ಳು ಬಿತ್ತನೆಯ ಗುರಿ ಇದೆ. ಆದರೆ, ಈ ಬಾರಿ ರೇವತಿ, ಅಶ್ವಿನಿ ಹಾಗೂ ಭರಣಿ ಮಳೆ ಕೈಕೊಟ್ಟಿದೆ. ಇದರಿಂದ ಬಿತ್ತನೆ ವಿಫಲವಾಗಿದೆ.

ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಎಳ್ಳು ₹ 200ಕ್ಕಿಂತ ಅಧಿಕ ಬೆಲೆಗೆ ಮಾರಾಟವಾಗುತ್ತಿದೆ. ಮಳೆ ಕೈಕೊಟ್ಟಿದ್ದರಿಂದ ಈ ಬಾರಿ ತಾಲ್ಲೂಕಿನ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಾವಯವ ಎಳ್ಳು ಬಿತ್ತನೆಗೆ ಕ್ರಮ

‘ಸೆಸ್‌ ಅಗ್ರಿಕಲ್ಚರ್‌ ಪ್ರೈವೇಟ್‌ ಲಿ. ನವದೆಹಲಿ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ತಾಲ್ಲೂಕು ಕೃಷಿ ಇಲಾಖೆಯು 200 ಹೆಕ್ಟೇರ್‌ ಪ್ರದೇಶದಲ್ಲಿ ಸಾವಯವ ಎಳ್ಳನ್ನು ಮೂರು ವರ್ಷ ಬೆಳೆಯಲು ನಿರ್ಧರಿಸಿದೆ. ಉತ್ಪಾದನೆ ಮಾಡಿದ ಎಳ್ಳನ್ನು ರಫ್ತು ಮಾಡಲಾಗುವುದು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎ.ಸಿ.ಮಂಜು ‘ಪ್ರಜಾವಾಣಿ’ಗೆಪ್ರತಿಕ್ರಿಯಿಸಿದರು.

ರಾಜ್ಯದಲ್ಲಿನ ಬಿತ್ತನೆ ಪ್ರದೇಶ

‘2018ರ ಮುಂಗಾರಿನಲ್ಲಿ ರಾಜ್ಯದಲ್ಲಿ ಒಟ್ಟು 29,634 ಹೆಕ್ಟೇರ್‌ ಎಳ್ಳು ಬಿತ್ತನೆಯಾಗಿತ್ತು. ಅದರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 9,611 ಹಾಗೂ ಮೈಸೂರು ಜಿಲ್ಲೆಯಲ್ಲಿ 4,612 ಹೆಕ್ಟೇರ್‌ ಬಿತ್ತನೆಯಾಗಿತ್ತು. ಆದರೆ, 1,000 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿದ್ದ ಹೊಸದುರ್ಗ ತಾಲ್ಲೂಕಿನಲ್ಲಿ ಮಳೆ ಅಭಾವದಿಂದ ಕೇವಲ 130 ಹೆಕ್ಟೇರ್‌ ಬಿತ್ತನೆಯಾಗಿತ್ತು’ ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎ.ಸಿ.ಮಂಜು ತಿಳಿಸಿದರು.

***

ಅಂಕಿ–ಅಂಶ

ಹೋಬಳಿವಾರು ಬಿತ್ತನೆ ಗುರಿ ಪ್ರದೇಶ; (ಹೆಕ್ಟೇರ್‌ಗಳಲ್ಲಿ)

ಕಸಬಾ 550
ಮತ್ತೋಡು 200
ಶ್ರೀರಾಂಪುರ 200
ಮಾಡದಕೆರೆ 50

(ಆಧಾರ: ಕೃಷಿ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT